ತಿರಂಗ ಬಾನೆತ್ತರ ಹಾರಿದರೆ ನಾನು ಸ್ವತಂತ್ರನೇ?

✍🏻 ಎಮೆಸ್ಸೆ ಸವಣೂರು

ಬಾಪುವಿನ ಅಹಿಂಸೆಗೆ ಮಣಿದು ಸ್ವತಂತ್ರಗೊಂಡ ದೇಶದಲ್ಲೇ
ಗೋಡ್ಸೆಯ ಹಿಂಸೆಯ ಗುಂಡಿಗೆ
ಬಲಿಯಾದ ಗಾಂಧಿ ಇಲ್ಲಿ ಸ್ವತಂತ್ರನೇ?

ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹಕ್ಕೂ ನ್ಯಾಯ ಸಿಗುತ್ತಿದ್ದ ದೇಶದಲ್ಲಿಂದು
ಪ್ರಭುತ್ವದ ಎದುರು ಲಾಠಿ, ಪಿರಂಗಿಗೆ
ಎದೆಯೊಡ್ಡಿದರೂ ನ್ಯಾಯ ಸಿಗದಾಗಿದೆ.

ಪ್ರಭುತ್ವ ಪಕ್ಷದ ವಿರುದ್ದದ ಭಿನ್ನಾಭಿಪ್ರಾಯಕ್ಕೂ ದಾಖಲಾಗುವ ಯುಎಪಿಎ,
ಭಿನ್ನತೆಯ ಧ್ವನಿಯನ್ನು ಇಡಿ, ಸಿಬಿಐ ಮೂಲಕ ಮಣಿಸುವಾಗ ನಾನು ಸ್ವತಂತ್ರನೇ?

ಭೂಮಿ ಉಳುವ ರೈತನ ಬಸಿರು ಬರಿದಾಗಿ ನೆತ್ತರ ಕಣ್ಣೀರು ಹರಿವಾಗ,
ಪ್ರಭುತ್ವ ಪೋಷಕ ಕಾರ್ಪೋರೇಟ್ ಕುಳಗಳ
ಆಸ್ತಿ ಅಂತಸ್ತಿನ ಹಂತ ಮೇಲೆರುತ್ತಿದೆ.

ಆಕ್ಸಿಜನ್ ಸಿಗದೆ ಉಸಿರುಗಟ್ಟಿ ಸತ್ತು ಗಂಗೆಯಲ್ಲಿ ತೇಲಿ ಬರುವುದನ್ನು
ಸಾವಿರ ಕೋಟಿಯ ಪ್ರತಿಮೆಯೂ
ಸಹ ಬೆರಗಾಗಿ ನೋಡುತ್ತಿದೆ.

ಹೆಣ್ಣು ಮಧ್ಯರಾತ್ರಿ ಒಬ್ಬಂಟಿಯಾಗಿ ನಡೆದರೆ ಅದುವೇ ನಿಜವಾದ ಸ್ವಾತಂತ್ರ್ಯ
ಎಂದ ನಾಡಿನಲ್ಲಿ ಹಾಡುಹಗಲೇ ಅತ್ಯಾಚಾರಕ್ಕೆ ಬಲಿಯಾಗಿ ಚೀರಾಡುವ ಹೆಣ್ಣು ಇಲ್ಲಿ ಸ್ವತಂತ್ರಳೇ?

ಹತ್ಯೆಯಾಗಿ ಶಾಂತವಾಗಿ ಮಲಗಿದ ಹೆಣಗಳ ಮೊಗದಲ್ಲಿಯೂ ಧರ್ಮವ ಹುಡುಕುವ ಪ್ರಭುತ್ವವಿರುವಾಗ
ನಾನು ಇಲ್ಲಿ ಸ್ವತಂತ್ರನೇ?

ಅಪರಾಧದ ತೀರ್ವತೆ ಧರ್ಮದ ಮೇಲೆ ಅಳೆದು ನ್ಯಾಯ ತೀರ್ಮಾನ ಆಗುವಾಗ ಸುತ್ತಲೂ ಮೌನವಾಗಿ ನೋಡಿ ನಿಲ್ಲುವವರು ಇರುವಾಗ ನಾನು ಇಲ್ಲಿ ಸ್ವತಂತ್ರನೇ?

Leave a comment