ಮಲಿನ ಆಹಾರ ಮತ್ತು ಮೈಲಿಗೆಯ ಮನಸ್ಸು
✍️ ಯೋಗಿಶ್ ಮಾಸ್ಟರ್, ಬರಹಗಾರರು
ಭಾಷೆ, ಬಣ್ಣ, ಸಂಸ್ಕೃತಿ, ವರ್ಗವೇ ಮೊದಲಾದ ವಿಷಯಗಳಿಂದ ಒಬ್ಬ ಮತ್ತೊಬ್ಬನ ಮೇಲೆ, ಒಂದು ವರ್ಗ ಮತ್ತೊಂದು ವರ್ಗದ ಮೇಲೆ, ಒಂದು ಜಾತಿ ಮತ್ತೊಂದು ಜಾತಿಯ ಮೇಲೆ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡು ಮೆರೆಯುವ ಮೇಲರಿಮೆಯ ರೋಗ ನಮ್ಮ ದೇಶಕ್ಕೇನೂ ಹೊಸತಲ್ಲ. ಅಂತಹ ಆಹಾರವೂ ಕೂಡಾ ಒಂದು.
ಒಂದಂತೂ ಸ್ಪಷ್ಟ. ಆಹಾರದ ವಿಷಯದಲ್ಲಿ ಭಾರತದಲ್ಲಾಗಲಿ, ಈಗ ನಮ್ಮ ಕರ್ನಾಟಕದಲ್ಲಾಗಲಿ ನಡೆಯುತ್ತಿರುವ ಚರ್ಚೆಗಳು ಸಾಮಾನ್ಯ ತಿಳುವಳಿಕೆಯ ವ್ಯಾಪ್ತಿಯಲ್ಲಿ ನೋಡಲು ಹೋದರೆ ‘ಅದು ಬೇಡದ್ದು’. ಹಸಿವಿನಿಂದ ಮುಕ್ತವಾಗಿರದ ದೇಶದಲ್ಲಿ ಆಹಾರದ ವಿಷಯದಲ್ಲಿ ಆಟವಾಡುವುದು ಅಮಾನವೀಯವೂ ಹೌದು ಮತ್ತು ಹಿಂಸಾರತಿಯ (ಸ್ಯಾಡಿಸ್ಟ್) ಧೋರಣೆಯದ್ದು.

ಆಹಾರವೆಂಬುದು ಅಗತ್ಯ ಮತ್ತು ಅನಿವಾರ್ಯ. ಆದರೆ ಅದರಲ್ಲಿ ರೂಢಿ, ಆಯ್ಕೆ, ಒಲವು, ತಿರಸ್ಕಾರವೇ ಮೊದಲಾದವೆಲ್ಲಾ ಇರುತ್ತದೆ, ಅದು ಆಹಾರದ ಕೊರತೆ ಇರದವರಲ್ಲಿ. ಆದರೆ ಆಯ್ಕೆಗೆ ಆಸ್ಪದವೇ ಇಲ್ಲದಂತೆ ದೊರಕಿದ್ದನ್ನು ಜೀವ ಉಳಿಸಿಕೊಳ್ಳಲು ತಿನ್ನಬೇಕಾಗಿರುವಂತ ಅನಿವಾರ್ಯತೆಯಿಂದ ಈ ದೇಶ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಹಾಗಾಗಿ ಈ ದೇಶದ ಆದ್ಯತೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬತನ, ಅದು ಎಲ್ಲರಿಗೂ ಸಮರ್ಪಕವಾಗಿ ದೊರಕುವುದರ ಬಗ್ಗೆ ಹೊಂದುವ ಖಾತರಿಯ ಬಗ್ಗೆ ಚರ್ಚೆ ಮತ್ತು ಯೋಜನೆಗಳಾಗಬೇಕಿದೆ. ಆದರೆ ಯಾವುದು ಪವಿತ್ರ ಆಹಾರ, ಯಾವುದು ಅಪವಿತ್ರ ಆಹಾರ ಎಂಬ ಪ್ರಸ್ತುತ ಸಾಮಾಜಿಕ ಸ್ಥಿತಿಗೂ, ವೈಜ್ಞಾನಿಕ ಮತ್ತು ವೈಚಾರಿಕ ಪ್ರಗತಿಗೂ ಏನೇನೂ ಹೊಂದದ ಚರ್ಚೆಗಳು ಆಗುತ್ತವೆ ಎಂಬುದು ನಾಚಿಗೇಡಿನ ವಿಷಯ.
ಅದರಲ್ಲಿಯೂ ಮಾಂಸಾಹಾರ ಕನಿಷ್ಟ ಎಂಬ ಕೀಳರಿಮೆ ಮತ್ತು ಸಸ್ಯಾಹಾರ ಶ್ರೇಷ್ಟ ಎಂಬ ಮೇಲರಿಮೆ ಇರುವುದು ಈ ನಮ್ಮ ದೇಶದಲ್ಲಿ ನಗೆಪಾಟಲಿನ ವಿಷಯವಾದರೂ ಏನೇನೂ ಆಶ್ಚರ್ಯವಿಲ್ಲ.

ಶ್ರೇಷ್ಟತ್ವವನ್ನು ಸಾರಲು ಹಲವು ವಿಷಯಗಳನ್ನು ಸಮೂಹಗಳ ಸಂಕಲಿತ ಮನಸ್ಥಿತಿಗಳು ಎಲ್ಲೆಲ್ಲಿ ಸಾಧ್ಯವಾಗುವುದೋ ಅಲ್ಲೆಲ್ಲಾ ಆಯ್ದುಕೊಂಡು ಜಾರಿಗೆ ತಂದು ಮೆರೆದಾಡಿವೆ. ದೇವಸ್ಥಾನದೊಳಗೆ ಹೆಂಗಸರು ನೈಟಿ ಧರಿಸಿ, ಗಂಡಸರು ಬರ್ಮುಡಾದಲ್ಲಿ ಬರಬಾರದು ಎಂಬ ಫಲಕಗಳನ್ನು ನೋಡಿದ್ದೇವೆ. ಹಾಗೆಯೇ ಮುಟ್ಟಾದ ಹೆಂಗಸರಿಗೆ ದೇವಸ್ಥಾನದೊಳಕ್ಕೆ ಪ್ರವೇಶವಿಲ್ಲ ಎಂಬ ಫಲಕವನ್ನು ಎಲ್ಲಿಯೂ ಹಾಕಿರುವುದಿಲ್ಲ. ಆದರೆ ಸಾಮಾನ್ಯವಾಗಿ ಮುಟ್ಟಾದ ಹಿಂದೂ ಧರ್ಮೀಯ ಹೆಂಗಸರು ತಾವೇ ದೇವಸ್ಥಾನದೊಳಗೆ ಬರುವುದಿಲ್ಲ. ಈ ಮುಟ್ಟಾದ ದೇಹದ ಬಗ್ಗೆ ಇರುವ ಮೈಲಿಗೆಯ ಭಾವವನ್ನು ಆಕೆಗೆ ಪರಂಪರಾನುಗತವಾಗಿ ಆಕೆಯಲ್ಲಿ ರೂಢಿಸಲಾಗಿದೆ. ಈ ಹಿಂದೆ ಚಾಪೆಯ ಮೇಲೆ, ಮೂಲೆಯಲ್ಲೋ, ಮನೆಯ ಹೊರಗೆ ತಡಸಲಿನಲ್ಲೋ ಇರುವಷ್ಟರ ಮಟ್ಟಿಗೆ ಈಗಿಲ್ಲ. ಅವಳು ಮುಟ್ಟಿನ ಒಳದಟ್ಟಿಯನ್ನು ತೊಟ್ಟು ಆಫೀಸಿಗೆ, ಶಾಲೆಗೆ, ಮತ್ತೆಲ್ಲೋ ಅಂಗಡಿ, ಕೆಲಸಕ್ಕೆ ಹೋಗುವಳು. ಆದರೆ ದೇವಸ್ಥಾನದೊಳಗೆ ಹೋಗಳು. ತನ್ನ ಮನೆಯ ದೇವರ ಗೂಡಿನಲ್ಲಿ ತಾನೇ ದೀಪ ಹಚ್ಚಿ, ದೇವರಿಗೆ ಹೂ ಮುಡಿಸಳು. ಬಹುಪಾಲು ಹೆಂಗಸರು ಹೊರಗಿನ ತಾಂತ್ರಿಕ ಮತ್ತು ವ್ಯಾವಹಾರಿಕ ಜಗತ್ತಿಗೆ ಮೈಲಿಗೆ ಮತ್ತು ಮಡಿಯ ವಿಷಯದಲ್ಲಿ ತೆರೆದುಕೊಂಡಿದ್ದರೂ, ದೇವರು ಎಂಬ ಧಾರ್ಮಿಕ ಶ್ರದ್ಧೆಯ ವಿಷಯದಲ್ಲಿ ಅವಳು ಅದನ್ನು ಪಾಲಿಸಿಕೊಂಡು ಬರುತ್ತಾಳೆ. ಅವಳಲ್ಲಿ ಹುಟ್ಟಿಸಿರುವ ಅವ್ಯಕ್ತ ಭಯದ ಹಿಡಿತದಿಂದ ಆಂತರಿಕವಾಗಿ ಅವಳಿಗೆ ಹೊರಗೆ ಬರಲು ಆಗಿಲ್ಲ. ಒಂದು ವೇಳೆ ಅವಳು ಯಾವುದೇ ರೀತಿಯಲ್ಲಿ ಧಾರ್ಮಿಕಳೇ ಅಲ್ಲವಾಗಿದ್ದು, ಯಾವುದೇ ರೀತಿಯ ಭಯ ಭಕ್ತಿಯನ್ನು ದೈವಕೇಂದ್ರಿತ ವಿಚಾರಗಳಲ್ಲಿ ಹೊಂದಿಲ್ಲದೇ ಹೋಗಿದ್ದ ಪಕ್ಷದಲ್ಲಿ ಅವಳಿಗೆ ದೇವಸ್ಥಾನಗಳಿಗೆ ಹೋಗುವಂತಹ ಪ್ರಮೇಯವೇ ಬರುವುದಿಲ್ಲ. ಒಂದು ವೇಳೆ ಕಾರಣಾಂತರಗಳಿಂದ ಹೋದರೂ ಧಾರ್ಮಿಕ ಶ್ರದ್ಧೆ ಮತ್ತು ದೈವಭಯವಿಲ್ಲದ ಅವಳಿಗೆ ಇದೇನೂ ವಿಷಯವಾಗಿರುವುದಿಲ್ಲ. ಇಂತಹ ಹೊರತಾಗಿರುವ ವರ್ಗದ ಹೊರತಾಗಿ ಸಾಮಾನ್ಯ ಹಿಂದೂ ಮಹಿಳೆಯರ ಬಗ್ಗೆ ಇಲ್ಲಿ ಗಮನಿಸುತ್ತಿದ್ದೇನೆ.
ಇನ್ನು ಕ್ರೈಸ್ತ ಮತ್ತು ಮುಸ್ಲೀಂ ಮಹಿಳೆಯರಿಗೆ ಮುಟ್ಟಿನ ವಿಷಯ ಮಡಿ ಮೈಲಿಗೆಗಳ ತಲೆಬೇನೆಯಲ್ಲ. ಲಿಂಗಾಯತರಲ್ಲೂ ಮಹಿಳೆಯರ ಅಂಟು ಮುಟ್ಟು ಲೆಕ್ಕಕ್ಕಿರದಿದ್ದರೂ, ಮುಟ್ಟಾದಾಗ ಇಷ್ಟಲಿಂಗದ ಕರಡಿಗೆಯನ್ನು ತೆಗೆದು ಮುಟ್ಟಿನ ಸ್ರಾವ ನಿಲ್ಲುವವರೆಗೂ ದೇವರಗೂಡಿನಲ್ಲಿರಿಸುವುದು ಅಥವಾ ಪೂಜಿಸದೇ ಇರುವುದನ್ನು ನೋಡಿದ್ದೇನೆ. ಒಟ್ಟಾರೆ ಹೇಳಲು ಹೊರಟಿದ್ದೇನೆಂದರೆ, ಪ್ರಾಕೃತಿಕವಾಗಿರುವಂತಹ ವಿಷಯಗಳಲ್ಲಿಯೂ ಕೂಡಾ ಮಡಿ ಮೈಲಿಗೆ, ಅಂಟು ಮುಟ್ಟು, ಪವಿತ್ರ ಅಪವಿತ್ರ ಎಂಬಂತಹ ರೂಢಿಯನ್ನು ಮಾಡಿಸಿರುವ ಸಾಂಪ್ರಾದಾಯಿಕ ಧೋರಣೆಗಳು ಪ್ರಭಾವಶಾಲಿಯಾಗಿರುತ್ತವೆ ಎಂದು. ಈ ಧೋರಣೆಗಳು ಮತ್ತು ಭಾವಗಳು ಯಾವುದೇ ಪ್ರಭಾವದಿಂದಾಗಿದ್ದರೂ ಅದು ಆಳವಾಗಿ ಬೇರೂರಿರುವ ಮನಸ್ಸಿನ ವಿಷಯ ಎಂಬುದನ್ನು ನಾನಿಲ್ಲಿ ಹೇಳಬೇಕಾಗಿರುವುದು.
ಈಗ ಆಹಾರದ ವಿಷಯಕ್ಕೆ ಬರುವುದಾದರೆ, ಮುಟ್ಟಾದ ಹಿಂದೂ ಧರ್ಮೀಯ ಮಹಿಳೆಯ ಮನಸ್ಸಿನಲ್ಲಿ ಬೇರೂರಿಸಿರುವ ಮೈಲಿಗೆಯ ಭಾವನೆಯಂತೆಯೇ ಮಾಂಸಾಹಾರ ಸೇವನೆಯ ವಿಷಯದಲ್ಲಿಯೂ ಮಾಡಿರುವುದು. ಎಷ್ಟೋ ಮಾಂಸಾಹಾರಿಗಳ ಮನೆಯಲ್ಲಿ ಮಾಂಸ ಬೇಯಿಸಲೆಂದೇ ಪ್ರತ್ಯೇಕ ಸ್ಥಾನ, ಪಾತ್ರೆ ಮತ್ತು ಇತರ ಪರಿಕರಗಳನ್ನು ಮೀಸಲಿಟ್ಟಿರುತ್ತಾರೆ. ಮಾಂಸ ಮಾಡಿದ ದಿನ ಅಥವಾ ಅದನ್ನು ಸೇವಿಸಿದವರು ತಮ್ಮದೇ ದೇವರ ಮನೆಗೆ ಪ್ರವೇಶಿಸುವುದಿಲ್ಲ. ತಾವಾಗಿಯೇ ದೇವಸ್ಥಾನದೊಳಕ್ಕೆ ಹೋಗುವುದಿಲ್ಲ. ಸೋಮವಾರ, ಗುರುವಾರ, ಶನಿವಾರವೇ ಮೊದಲಾದ ನಿರ್ದಿಷ್ಟವಾರಗಳಲ್ಲಿ ಮಾಂಸ ತಿನ್ನುವುದಿಲ್ಲ. ವೈದಿಕರು ಮತ್ತು ಇತರ ಜ್ಯೋತಿಷ್ಯದವರು ತಮ್ಮ ಅರ್ಥಹೀನ ಅಥವಾ ಅಪ್ರಸ್ತುತವಾದ ರೂಢಿಗಳಿಗೆ ಹೊಸ ವೈಜ್ಞಾನಿಕ ಅರ್ಥಗಳನ್ನು ಕೊಡುವ ಹಾಗೆ, ಈ ಮಾಂಸಾಹಾರಿಗಳೂ ಕೂಡಾ ಇಂತಿಂತ ವಾರದಲ್ಲಿ ತಿನ್ನಬಾರದು ಅಂತ ಹೇಳಿರುವ ಕಾರಣವೇನೆಂದರೆ, ಮಿತಿಮೀರಿದ ಮಾಂಸಸೇವನೆಯಿಂದ ದೇಹಾಯಾಸವಾಗಬಾರದು, ಜೀರ್ಣಾಂಗಗಳಿಗೆ ಹೆಚ್ಚಿನ ಶ್ರಮಬಿದ್ದು ಸಮಸ್ಯೆಯಾಗಬಾರದು ಎಂದು ನಮ್ಮ ಹಿರಿಯರು ಹಾಗೆ ಕೆಲವೊಂದು ದಿನಗಳಲ್ಲಿ, ತಿಂಗಳುಗಳಲ್ಲಿ ತಿನ್ನಬಾರದು ಎಂದು ಹೇಳಿದ್ದಾರೆ ಎಂದು ವೈಜ್ಞಾನಿಕವಾಗಿ ಸಮಜಾಯಿಶಿ ಕೊಡಲು ಹೋಗುತ್ತಾರೆ. ಆದರೆ ಇದು ಸಂಪೂರ್ಣ ಮಿಥ್. ಬಾಳೇಹಣ್ಣನ್ನೂ ಅತಿಯಾಗಿ ತಿನ್ನಬಾರದು, ಅನ್ನವನ್ನೂ ಅತಿಯಾಗಿ ತಿನ್ನಬಾರದು. ಅತಿ ಎನ್ನುವುದು ಯಾವುದಕ್ಕೂ ಇರಬಾರದು. ಇದರಲ್ಲಿ ಮಾಂಸಕ್ಕೇನೂ ವಿಶೇಷತೆ ಇಲ್ಲ. ವೈಜ್ಞಾನಿಕವಾಗಿ ಅವರ ದೇಹದ ಅಗತ್ಯಕ್ಕೆ ತಕ್ಕಂತೆ ಪ್ರತಿದಿನವೂ ಮಾಂಸವನ್ನು ತಿನ್ನಬಹುದು. ವಿಶೇಷವಾದ ವೈದ್ಯಕೀಯ ಸಮಸ್ಯೆಗಳಿದ್ದರೆ ಕೆಲವು ಹಣ್ಣು ತರಕಾರಿಗಳನ್ನು ತಿನ್ನಬಾರದಂತೆ ಕೆಲವು ಮಾಂಸವನ್ನೂ ತಿನ್ನಬಾರದೆಂದು ವೈದ್ಯರು ಆಯಾ ವ್ಯಕ್ತಿಯ ವೈದ್ಯಕೀಯ ಸಮಸ್ಯೆಗಳಿಗನುಗುಣವಾಗಿ ಹೇಳುತ್ತಾರೆ.
ತಾವು ಕನಿಷ್ಟರು ಎಂಬ ಕೀಳರಿಮೆಯನ್ನು ಹುಟ್ಟಿಸಲು ಹೆಂಗಸರಲ್ಲಿ ಮುಟ್ಟಿನ ಅಂಟನ್ನು ಅಂಟಿಸಿದ ಗಂಡಸರ ಶ್ರೇಷ್ಟತೆಯ ವ್ಯಸನದಂತೆ, ಮಾಂಸಾಹಾರ ಸೇವಿಸುವವರಲ್ಲಿಯೂ ಮೈಲಿಗೆಯ ಮನೋಭಾವವನ್ನು ಸಸ್ಯಾಹಾರಿಗಳು ತಮ್ಮ ವ್ಯಸನವನ್ನು ತೃಪ್ತಿಪಡಿಸಿಕೊಳ್ಳಲು ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.
ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿಯು ತನ್ನ ಅಧೀನದಲ್ಲಿಟ್ಟುಕೊಳ್ಳಬೇಕೆಂದರೆ ಅವನಲ್ಲಿ ಯಾವುದಾದರೊಂದು ಕೀಳರಿಮೆಯ ಭಾವವನ್ನು ಉಂಟು ಮಾಡಲೇಬೇಕು. ಇದು ಸಾಮಾನ್ಯ ಮನುಷ್ಯನ ಮನೋಭಾವ. ದೌರ್ಜನ್ಯ ಮತ್ತು ದಬ್ಬಾಳಿಕೆಗಳ ಕುರಿತಾಗಿ ಮನೋವಿಜ್ಞಾನದಲ್ಲಿ ಒಂದಷ್ಟು ತಿಳುವಳಿಕೆಯ ವಿವರಣೆಗಳಿವೆ. ಅವುಗಳನ್ನು ಅರಿಯುತ್ತಾ ಹೋದಂತೆ ಮಾಂಸಾಹಾರ ಮತ್ತು ಸಸ್ಯಾಹಾರಗಳ ಬಗ್ಗೆ ಇರುವ ಅರಿವುಗೇಡಿತನಕ್ಕೆ ಬಹಳಷ್ಟು ಉತ್ತರಗಳು ಸಿಗುತ್ತವೆ. ಹಾಗೆಯೇ, ಯಜ್ಞ ಯಾಗಗಳಲ್ಲಿ ಪ್ರಾಣಿ ಬಲಿ ಇಲ್ಲದೆಯೇ ಪೂರ್ಣಾಹುತಿಯಾಗದಿದ್ದ ಅಶ್ವಮೇಧ, ವಾಜಪೇಯಿ, ಸೋಮಯಜ್ಞವೇ ಮೊದಲಾದ ಯಾಗಗಳನ್ನು ಮಾಡುತ್ತಿದ್ದರು ಬ್ರಾಹ್ಮಣರು. ಹಾಗೆಯೇ ಎಲ್ಲರ ಸಹಜ ಆಹಾರವಾಗಿದ್ದ ಮಾಂಸವೇ ಬ್ರಾಹ್ಮಣರ ಆಹಾರವೂ ಆಗಿದ್ದು, ಅವರೂ ಹಸುವನ್ನು ತಿನ್ನುವವರೇ ಆಗಿದ್ದರು. ಅಂತವರು ಸಸ್ಯಾಹಾರಿಗಳಾಗಲು ಕಾರಣವೇನು? ಯಾವ ಕಾಲಘಟ್ಟದಲ್ಲಿ ಬ್ರಾಹ್ಮಣರು ಸಹಜ ಮಾಂಸಾಹಾರವನ್ನು ಬಿಟ್ಟು ಶುದ್ಧಶಾಖಾಹಾರಿಗಳಾಗಿ ಸಾತ್ವಿಕ ಆಹಾರದ ಪಾವಿತ್ರ್ಯತೆಯನ್ನು ಕಾಪಾಡಲು ಮುಂದಾದರು? ಅದಕ್ಕಿರುವ ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳೇನು? ತಿಳಿಯೋಣ ಮುಂದಿನ ಸಂಚಿಕೆಯಲ್ಲಿ.
(ಮುಂದುವರಿಯುವುದು)