ಹತ್ಯಾಕಾಂಡಗಳಿಗೆ ಬಾಗಿಲು ತೆರೆದು ನೀಡುತ್ತಿರುವ ಬೊಮ್ಮಾಯಿ ಆಳ್ವಿಕೆಯ ಕರ್ನಾಟಕ

✍️ಅಶ್ವಾನ್ ಸಾಧಿಕ್.ಪಿ
ವಿದ್ಯಾರ್ಥಿ ಹೋರಾಟಗಾರರು

ಕರ್ನಾಟಕದಲ್ಲಿ ಹತ್ತು ದಿನಗಳಲ್ಲಿ ಮೂರು ಕೊಲೆಗಳು ನಡೆದಿದೆ. ಮೂರು ಕೊಲೆಗಳಿಗೆ ಸಂಘಪರಿವಾರವೇ ನೇರ ಕಾರಣವೆಂದರೆ ತಪ್ಪಿಲ್ಲ. ದೇಶದ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೇಶವ ಕೃಪದ ಕೈಗೊಂಬೆಯೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂರು ಕೊಲೆ ಪ್ರಕರಣಗಳಲ್ಲಿ ಸರಕಾರದ ತಾರತಮ್ಯ ಧೋರಣೆಯು ಕರ್ನಾಟಕವನ್ನೇ ನಾಚಿಸಿದೆ. ಜೊತೆಗೆ ಕನ್ನಡ ಮಾಧ್ಯಮಗಳ ಮುಸ್ಲಿಂ ವಿರೋಧಿ ನೀಚ ಮನಸ್ಥಿತಿಯೂ ಬಹಿರಂಗಗೊಂಡಿದೆ. ಈ ಹಿಂದೆಯೂ ಪ್ರಮುಖವಾಗಿ ಕರಾವಳಿ ಹಾಗು ಇತರೆ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದೈಹಿಕವಾಗಿ ಮಾನಸಿಕವಾಗಿ ಹಲವು ದಾಳಿಗಳಾಗಿವೆ, ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶ ಹಾಗು ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಮುಸ್ಲಿಂ ವಿರೋಧಿ ದೌರ್ಜನ್ಯ ಕೇವಲ ಸಾಂಧರ್ಬಿಕವೇ?


ದೇಶದಲ್ಲಿ ಅಧಿಕಾರದಲ್ಲಿರುವ ಆರೆಸ್ಸೆಸ್‌ ಬೆಂಬಲಿತ ಬಿಜೆಪಿ ಸರಕಾರದಲ್ಲಿ ಕೊಲೆ ರಾಜಕೀಯವು ನಿರಂತರವಾಗಿದೆ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಫ್ಯಾಸಿಸಂನ ಅಜೆಂಡಾವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅಕ್ಟೋಬರ್‌ 1 2019ರಂದು ದೆಹಲಿಯಲ್ಲಿ ಅರೆಸ್ಸೆಸ್‌ ಪ್ರಚಾರಕ ಬರೆದ “The RSS: Roadmaps for the 21st Century” ಎಂಬ ಪುಸ್ತಕ ಬಿಡುಗಡೆ ಸಮಾರಂಬದಲ್ಲಿ ಅರೆಸ್ಸೆಸ್‌ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಸಂಘದ ಪ್ರಮುಖ ಮೌಲ್ಯವೆಂದರೆ ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಈ ಕುರಿತು ಮಾತುಕತೆ ಅಥವಾ ಚರ್ಚೆ ಸಾಧ್ಯವಿಲ್ಲ ಎಂಬ ಮಾತುಗಳನ್ನಾಡುವ ಮೂಲಕ ಪರೋಕ್ಷವಾಗಿ ಹಿಂದೂ ರಾಷ್ಟ್ರದ ಸಂದೇಶ ನೀಡಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ತಯಾರಿಗಳು ನಡೆಯುತ್ತಿದೆ. ಮೋದಿ ಆಡಳಿತದಲ್ಲಿ ತ್ರಿವಳಿ ತಲಾಖ್‌ ಅಪರಾಧಿಕರಣ, ಯುಎಪಿಎ ತಿದ್ದುಪಡಿ ಕಾಯ್ದೆ, ಆರ್ಟಿಕಲ್‌ 370 ಮತ್ತು 35A ರದ್ದತಿ, ಸಿಎಎ-ಎನ್‌ಅರ್‌ಸಿ ಮುಂತಾದ ಕರಾಳ ಇಸ್ಲಾಮೋಫೋಬಿಕ್‌ ಕಾಯ್ದೆಗಳನ್ನು ಕೇವಲ ಮುಸ್ಲಿಮರನ್ನು ದಮನಿಸಲು ಮತ್ತು ಅವಮಾನೀಕರಿಸಲು ಜಾರಿಗೊಳಿಸಿದ್ದಾಗಿದೆ. ಜೂನ್‌ 11-17, 2022 7 ದಿನಗಳ ಕಾಲ ಗೋವಾದಲ್ಲಿ ನಡೆದ “ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ” ಆರೆಸ್ಸೆಸ್‌ ಒಳಗೊಂಡಂತೆ ಸುಮಾರು 350 ಹಿಂದುತ್ವ ಸಂಘಟೆನೆಗಳ 1000ಕ್ಕೂ ಅಧಿಕ ಪ್ರತಿನಿಧಿಗಳ ಸಮಾವೇಶದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಚರ್ಚೆಗಳು ನಡೆಯಿತು.


ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ? ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸಮುದಾಯಗಳ ನಿರ್ಮೂಲನೆಗಳು ಯಾವರೀತಿ ನಡೆದಿದೆ?
ನಾಝಿಗಳಿಂದ ನಡೆದ ಜೀವ್ಸ್‌ ನಿರ್ಮೂಲನೆ, ಚೀನಾದಲ್ಲಿ ನಡೆಯುತ್ತಿರುವ ಉಯಿಗಲ್‌ ಮುಸ್ಲಿಮರ ಮೇಲಿನ ದಾಳಿ, ಬರ್ಮಾದಲ್ಲಿ ನಡೆಯುತ್ತಿರುವ ರೋಹಿಂಗ್ಯಾಗಳ ಮೇಲಿನ ದೌರ್ಜನ್ಯ, ಹುತುಗಳಿಂದ ನಡೆದ ಥುತ್ಸಿ ನಿರ್ಮೂಲನೆ, ಮುಂತಾದ ಅಲ್ಪಸಂಖ್ಯಾತರ ನಿರ್ಮೂಲನೆಗಳಿಗೆ ಬಳಕೆಯಾದ ಅಸ್ತ್ರ “ನರಮೇಧ”. ನರಮೇಧದ ಕುರಿತಾಗಿ ಆಳವಾದ ಅಧ್ಯಯನ ಹೇಳುವಂತೆ ಹಂತಹಂತವಾಗಿ ಒಂದು ಸಮುದಾಯದ ಗುರುತನ್ನೇ ಇಲ್ಲವಾಗಿಸುವ ಪ್ರಕ್ರಿಯೆ ಅದು. ಡಾ. ಗ್ರಿಗರಿ ಎಚ್‌ ಸ್ಟಂಟನ್‌ ತನ್ನ ಸಂಶೋಧನೆಯಲ್ಲಿ ನರಮೇಧದ 10 ಹಂತಗಳನ್ನು ವಿವರಿಸುತ್ತಾರೆ. ವರ್ಗೀಕರಣ, ಸಾಂಕೇತಿಕತೆ, ತಾರತಮ್ಯ, ಅಮಾನವೀಕರಣ, ಸಂಘಟನೆ, ಧ್ರುವೀಕರಣ, ತಯಾರಿ, ಕಿರುಕುಳ, ನಿರ್ನಾಮ ಹಾಗು ನಿರಾಕರಣೆ ಇವು ನರಮೇಧದ ಹಂತಗಳಾಗಿವೆ.


ಭಾರತದಲ್ಲಿ ನರಮೇಧ ಜನವರಿ 2022ರಲ್ಲಿ ಬಹಿರಂಗಗೊಂಡ ಸಮೀಕ್ಷೆಯ ಪ್ರಕಾರ ಭಾರತವು ನರಮೇಧದ 8ನೇ ಹಂತದಲ್ಲಿದೆ. ಅದಕ್ಕೆ ಪೂರಕವೆಂಬಂತೆ ಮೋದಿ ಆಡಳಿತದಲ್ಲಿ ಭಾರತದಲ್ಲಿ ಮುಸ್ಲಿಮರ ಮೇಲೆ ದ್ವೇಷದ ಹಲ್ಲೆಗಳು, ಸಾಮಾಜಿಕ ಬಹಿಷ್ಕಾರಗಳು, ಬಲವಂತದ ಮತಾಂತರಗಳು ಉಲ್ಬಣಗೊಂಡಿದೆ ಎಂಬುದನ್ನು 2017ರಲ್ಲಿ ಯು.ಎಸ್.ಸಿ.ಇ.ಅರ್.ಎಫ್‌ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ. ದೇಶದಲ್ಲಿ ನಡೆಯುತ್ತಿರುವ ಆಝಾನ್‌, ಹಿಜಾಬ್‌, ಗ್ಯಾನ್‌ವಾಪಿ ಮಸೀದಿ, ಮಳಲಿ ಮಸೀದಿ, ಗೋ ಹತ್ಯೆ ನಿಷೇಧ, ಸುಲ್ಲಿ ಡೀಲ್ಸ್‌, ಬುಲ್ಲೀಬಾಯ್‌, ಗುಂಪು ಹತ್ಯೆಗಳು ಇವೆಲ್ಲವೂ ಮುಸ್ಲಿಮರ ಮೇಲೆ ತಾರತಮ್ಯ, ಹಕ್ಕು ನಿರಾಕರಣೆ ಮತ್ತು ಅಮಾನವೀಕರಣದ ಭಾಗವಾಗಿದೆ. ಜೀವ್‌ಗಳ ಮಾರಣಹೋಮಕ್ಕಿಂತ ಮುಂಚಿತವಾಗಿ ಶಿಕ್ಷಣದ ನಿರಾಕರಣೆ, ಸರಕಾರಿ ಉದ್ಯೋಗದ ನಿರಾಕರಣೆ, ಭೂಮಿ ಮತ್ತು ನಿವಾಸದ ನಿರಾಕರಣೆ, ಪೌರತ್ವದ ನಿರಾಕರಣೆ ಹೀಗೆ ಹಂತಹಂತವಾಗಿ ಜೀವ್ಸ್‌ ಸಮುದಾಯವನ್ನು ನಿರ್ವೀಯರನ್ನಾಗಿ ಮಾಡಿ ನಂತರ ನರಮೇಧಕ್ಕೆ ಗುರಿಪಡಿಸಲಾಯಿತು. ಬರ್ಮಾದಲ್ಲಿ ಅಮಾಯಕ ರೊಹೀಂಗ್ಯಾ ಮುಸ್ಲಿಮರ ಮೇಲೆ ಸಮಾಜಿಕ ಜಾಲತಾಣ ಹಾಗು ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಿಯಬಿಡುವ ಮೂಲಕ ಜನರಲ್ಲಿ ರೋಹೀಂಗ್ಯಾರ ಮೇಲೆ ಅಸಹ್ಯ ಹಾಗು ಕ್ರೋಧ ಮೂಡುವಂತೆ ಮಾಡಿ ಮಿಲಿಟರಿ ಪಡೆಗಳ ಮೂಲಕ ನಿಗ್ರಹಿಸಲಾಯಿತು. ರವಂಡ ನರಮೇಧದಲ್ಲಿ ಹುತು ನಾಯಕನ ಕೊಲೆಯನ್ನು ತುಥ್ಸಿಗಳ ಮೇಲೆ ಅಪಾದಿಸಿ, ರೇಡಿಯೋ ಮುಂತಾದವುಗಳ ಮೂಲಕ ಜನಸಾಮಾನ್ಯರನ್ನು ತುಥ್ಸಿಗಳ ಮೇಲೆ ಪ್ರಚೋದಿಸಿ ಕೇವಲ 100 ದಿನಗಳಲ್ಲಿ 8ಲಕ್ಷಕ್ಕೂ ಅಧಿಕ ತುಥ್ಸಿಗಳನ್ನು ಕೊಂದು ಇಡೀ ಸಮುದಾಯವನ್ನೇ ನಿರ್ಮೂಲನೆ ಮಾಡಲಾಯಿತು.
ದೇಶದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಪ್ರದೇಶವನ್ನು ಆರೆಸ್ಸೆಸ್ಸಿನ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಕೇವಲ ಮುಸ್ಲಿಮರ ಮೇಲೆ ದೌರ್ಜನ್ಯ ಮಾತ್ರವಲ್ಲದೆ, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ.

ಆಡಳಿತ ಪಕ್ಷದ ನಾಯಕರು ಕೇವಲ ಹಿಂದುತ್ವವನ್ನು ಅಬಿವೃದ್ಧಿಪಡಿಸುವ ಕೆಲಸದಲ್ಲಿ ನಿರಂತರವಾಗಿದ್ದರೆ, ವಿರೋಧ ಪಕ್ಷ ತನ್ನ ಅಸ್ಥಿತ್ವಕ್ಕಾಗಿ ಹೆಣಗಾಡುತ್ತಿದೆ, ಅಧಿಕಾರಿವರ್ಗ ಫ್ಯಾಶಿಷ್ಟರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕರ್ನಾಟಕದಲ್ಲಿ ನರಮೇಧದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಜನವರಿ 2022ರಲ್ಲಿ ನರಗುಂದದಲ್ಲಿ ನಡೆದ ಸಮೀರ್‌ನನ್ನು ಕೇವಲ ಮುಸ್ಲಿಮನೆಂಬ ಕಾರಣಕ್ಕೆ ಕೊಲ್ಲಲಾಯಿತು, ಈ ಪ್ರಕರಣದಲ್ಲಿ ಬಜರಂಗದಳದ ನಾಯಕರು ಹಾಗು ಕಾರ್ಯಕರ್ತರನ್ನು ಬಂಧಿಸಲಾಗಿತ್ತು, ಈ ಪ್ರಕರಣವು ರಾಜ್ಯದಲ್ಲಿ ವರ್ಗೀಕರಣ ಮತ್ತು ಸಾಂಕೇತಿಕತೆಗೆ ಸ್ಪಷ್ಟ ಉದಾಹರಣೆ. ಹಲಾಲ್‌ ಕಟ್‌, ಮಾವಿನ ವ್ಯಾಪಾರ ನಿಷೇಧ, ಆಝಾನ್‌, ಹಿಜಾಬ್‌, ಸುದ್ದಿ ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ತೇಜೋವಧೆ ಮುಂತಾದ ಪ್ರಕರಣಗಳು ಮುಸ್ಲಿಂ ಸಮುದಾಯದ ಅಮಾನವೀಕರಣೆಯ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದ ಪೊಲೀಸ್ ಇಲಾಖೆ, ಮಾಧ್ಯಮ, ಕೇಂದ್ರೀಯ ತನಿಖಾ ಸಂಸ್ಥೆಗಳು ಅದರಲ್ಲೂ ಎನ್ಐಎ ನರಮೇಧದ ಹಂತಗಳಲ್ಲಿ ಸಂಘಟನೆಯ ಪಾತ್ರವನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ಈಶ್ವರಪ್ಪ, ಸಿಟಿ ರವಿ, ಮುತಾಲಿಕ್ ರಂತ ಹಿಂದುತ್ವ ನಾಯಕರ ಅವಿವೇಕಿ, ಅಸಂಬದ್ಧ ಹಾಗು ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಕೋಮು ಧ್ರುವೀಕರಣ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಪ್ರಕರಣಗಳಲ್ಲಿ ಮುಸ್ಲಿಮರ ವಿರುದ್ಧ ಕಠಿಣ ಕಾನೂನು ಬಳಕೆ, ಯುಎಪಿಎ ಹೇರಿಕೆ, ಸುಳ್ಳು ಪ್ರಕರಣಗಳ ಹೇರಿಕೆ ಇವೆಲ್ಲವೂ ಕಿರುಕುಳದ ಭಾಗವಾಗಿದೆ. ಇತ್ತೀಚಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ನಡೆದಂತಹ ಕೊಲೆ ಪ್ರಕರಣಗಳಲ್ಲಿ ಪರಿಹಾರ ಹಾಗು ತನಿಖೆಯಲ್ಲಿ ಮುಖ್ಯಮಂತ್ರಿ ನಡೆಸುತ್ತಿರುವ ತಾರತಮ್ಯ ಸಾಂಧರ್ಭಿಕವಲ್ಲದೆ ನರಮೇಧದ ಭಾಗ ಎಂಬುವುದನ್ನು ಮನಗಾಣಬೇಕಿದೆ.


ರಾಜ್ಯದಲ್ಲಿ ನೆಡೆಯುತ್ತಿರುವ ಎಲ್ಲಾ ಮುಸ್ಲಿಂ ವಿರೋಧಿ ಘಟನೆಗಳು ಕೇವಲ ಎಂದಿನಂತೆ ಹಿಂದುತ್ವದ ಸಾಮಾನ್ಯ ಘಟನೆಗಳಂತೆ ಅಥವಾ ಚುನಾವಣಾ ಗಿಮಿಕ್‌ಗಳಂತೆ ಕಾಣದೆ ಸೂಕ್ಷ್ಮತೆಯಿಂದ ಗ್ರಹಿಸಿ ಅದರಲ್ಲಿರುವ ಒಳಮರ್ಮವನ್ನು ಅರಿಯಬೇಕು. ನರಮೇಧವನ್ನು ಸಮಾಜವು ಕೇವಲ ಹಗುರತೆಯಿಂದ ಕಾಣದೆ ಗಂಭೀರತೆಯಿಂದ ಕಾಣಬೇಕು.

ನಮ್ಮ ದೇಶದ, ರಾಜ್ಯದ ಸೌಂದರ್ಯ ಈ ದೇಶದ ಸಂವಿಧಾನ, ವೈವಿಧ್ಯತೆಯಲ್ಲಿ ಅಡಗಿದೆ. ಎಲ್ಲರೂ ಒಗ್ಗೂಡಿದರೆ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ನರಮೇಧವನ್ನು ತಡೆಯಲು ಅದನ್ನು ಅರಿತು ಅದನ್ನು ತಡೆಯುವುದು, ಪ್ರತಿರೋಧಿಸುವುದು ಮಾತ್ರವೇ ಪರಿಹಾರ. ದೇಶದಲ್ಲಿ ಫ್ಯಾಸಿಸಂ ನಡೆಸುತ್ತಿರುವ ಅರಾಜಕತೆ, ಅನ್ಯಾಯ ಹಾಗು ನರಮೇಧದ ಎಲ್ಲಾ ಪ್ರಯತ್ನಗಳನ್ನು ದೇಶದ ನಾಗರಿಕ ಸಮಾಜವು ಎದುರಿಸಿ ಫ್ಯಾಸಿಸಂನನ್ನು ಸೋಲಿಸಬೇಕಿದೆ.

Leave a comment