1: ಅಂಕೆಗೇಡಿತನ
ಭಾಗ: 1
ಪ್ರವೇಶಿಕೆ
ಮನಸ್ಸು ತಿಳಿದೋ, ತಿಳಿಯದೆಯೋ ಕೆಲವು ಗುಣಗಳನ್ನು ರೂಢಿ ಮಾಡಿಕೊಂಡುಬಿಡುತ್ತದೆ.
ಈ ರೂಢಿಗತವಾದಂತಹ ಗುಣಗಳೇ ವ್ಯಕ್ತಿಯ ಆಲೋಚನೆಯ ಕ್ರಮವನ್ನು ರೂಪಿಸುವುದು, ವರ್ತಿಸುವುದು, ಭಾವಿಸುವುದು, ಗ್ರಹಿಸುವುದು ಮತ್ತು ಅವರ ಜೀವನ ಕ್ರಮವನ್ನು ನಿರ್ಧರಿಸುವುದು. ಒಟ್ಟಾರೆ ವ್ಯಕ್ತಿಯ ಬದುಕು ಉತ್ತಮ ಮಟ್ಟದಲ್ಲಿರಲು ಅಥವಾ ಹಾಳಾಗಲು ಕಾರಣ ಗುಣಗಳೇ.
ವ್ಯಕ್ತಿಗಳಲ್ಲಿ ಖಿನ್ನತೆ, ಆತಂಕ, ಮರೆಯಲಾಗದ ನೋವು, ಭಾವನಾತ್ಮಕವಾದ ಅವಲಂಬನೆ, ಕುಟುಂಬಗಳಲ್ಲಿ ಜಗಳ, ಮನಸ್ತಾಪ, ಸಂಬಂಧಗಳಲ್ಲಿ ಒಡಕು, ಆತ್ಮಹತ್ಯೆಯ ಇಚ್ಛೆ, ಹೊಡೆದಾಟ, ದೋಷಾರೋಪಣೆ, ಬಗೆ ಹರಿಯದ ಬಿಕ್ಕಟ್ಟು, ಅನಗತ್ಯ ಭಯ, ಸ್ಥಿಮಿತದಲ್ಲಿರದ ಮನಸ್ಸು, ನಿಯಂತ್ರಿಸಿಕೊಳ್ಳಲಾಗದ ವರ್ತನೆಗಳು ಮತ್ತು ಕೆಲಸಗಳು, ವ್ಯಸನಗಳು, ನೆಮ್ಮದಿಯಿಲ್ಲದ ಬದುಕು; ಇವಕ್ಕೆಲ್ಲಾ ಕಾರಣ ನಮ್ಮೊಳಗಿರುವ ಗುಣಗಳೇ.
ವ್ಯಕ್ತಿಗಳ ಗುಣಗಳು ಅವರವರ ವರ್ತನೆಗಳಲ್ಲಿ, ಮಾತುಗಳಲ್ಲಿ, ಇರುವ ರೀತಿಗಳಲ್ಲಿ, ಇತರರನ್ನು ನಡೆಸಿಕೊಳ್ಳುವ ಬಗೆಗಳಲ್ಲಿ, ವಸ್ತುಗಳನ್ನು, ವ್ಯಕ್ತಿಗಳನ್ನು ಅಥವಾ ಸನ್ನಿವೇಶಗಳನ್ನು ಕಾಣುವ ದೃಷ್ಟಿಯಲ್ಲಿ ತಿಳಿಯುತ್ತದೆ.

ರೋಗದ ಲಕ್ಷಣಗಳನ್ನು ತಿಳಿದುಕೊಳ್ಳುವುದಕ್ಕೆ ಹೆದರುವವರು ಬಹಳ ಮಂದಿ. ಏಕೆಂದರೆ ತಮಗೆ ರೋಗವಿದೆ ಎಂದಾದರೆ ಏನು ಮಾಡುವುದು ಎಂಬ ಅಂಜಿಕೆ ಅವರಿಗೆ. ಅದು ಬೇಡ.
ಮನಸ್ಸಿನ ರೋಗದ ಲಕ್ಷಣಗಳು ವ್ಯಕ್ತಿಯ ಗುಣ ನಡವಳಿಕೆಯಿಂದ ತಿಳಿಯುತ್ತದೆ.
ಮೊದಲು ನಮಗಿದೆಯಾ ಅಂತ ನೋಡಿಕೊಳ್ಳೋಣ. ನಂತರ ಇತರರಲ್ಲಿ ಕಂಡರೆ ಅದನ್ನು ಅವರ ಗಮನಕ್ಕೆ ತರೋಣ.
ಆರೋಗ್ಯವಂತ ಮನಸ್ಸು ಆರೋಗ್ಯವಂತ ವ್ಯಕ್ತಿಯನ್ನು, ಕುಟುಂಬವನ್ನು ಮತ್ತು ಸಮಾಜವನ್ನು ರೂಪಿಸುತ್ತದೆ.
ನಮ್ಮ ವರ್ತಮಾನವು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಮನಸ್ಸಿನ ಸಮಗ್ರ ಆರೋಗ್ಯದ ಕಡೆಗೆ ಗಮನ ಕೊಡಬೇಕು. ನಮ್ಮ ಭವಿಷ್ಯವು ನೆಮ್ಮದಿಯಿಂದ ಇರಬೇಕಾದರೆ ಮಕ್ಕಳ ಸಮಗ್ರ ಪೋಷಣೆಯ ಬಗ್ಗೆ ಗಮನ ಕೊಡಬೇಕು.
ಇದರ ಹೊರತು ಬೇರೆ ಯಾವ ರೀತಿಯಲ್ಲಿಯೂ ನಾವು ನೆಮ್ಮದಿಯನ್ನು ಕಂಡುಕೊಳ್ಳಲಾರೆವು.
ಹಾಗಾಗಿ ನಮ್ಮದೇ ಕೇಡಿ ಮನಸ್ಸಿನ ವಿವಿಧ ಗುಣಲಕ್ಷಣಗಳನ್ನು ಗುರುತಿಸುವ ನಿಘಂಟು ಇದು. ಒಂದೊಂದೇ ಕೇಡಿತನಗಳನ್ನು ತಿಳಿಯುತ್ತಾ ಹೋಗೋಣ. ಅದಕ್ಕೆ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೂಡಾ ಗಮನಿಸೋಣ.

ಮೊದಲ ಭಾಗ ಪ್ರಾರಂಭ
1: ಅಂಕೆಗೇಡಿತನ
ಯಾವ ವ್ಯಕ್ತಿಯು ತನ್ನ ಮಾತು, ವರ್ತನೆ ಮತ್ತು ಪ್ರತಿಕ್ರಿಯೆಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಲಾಗುವುದಿಲ್ಲವೋ ಅವನಿಗೆ ಅಂಕೆಗೇಡಿತನ ಇದೆ ಎನ್ನಬಹುದು. ಪರಿಣಾಮವನ್ನು ಆಲೋಚಿಸದೇ ತಟ್ಟನೆ ಮಾತಾಡುವುದು, ಹಟಾತ್ತನೆ ಕೆರಳುವುದು, ಬಂದ ಕೋಪವನ್ನು ತಡೆದುಕೊಳ್ಳದೇ ಕೂಗಾಡುವುದು, ದಾಳಿ ಮಾಡುವುದು, ನಿರಾಶೆ, ಭಯ, ಅಸೂಯೆಯೇ ಮೊದಲಾದ ಭಾವನೆಗಳನ್ನು ನಿಯಂತ್ರಿಸಿಕೊಳ್ಳದೇ ದೊಡ್ಡ ಪ್ರಮಾಣದಲ್ಲಿಯೇ ತೋರ್ಪಡಿಸಿಕೊಳ್ಳುವುದು.
ಅಂಕೆ ಇಲ್ಲದೇ ಊಟ ಮಾಡುವುದು. ಹಾಗೆಯೇ ನಿದ್ರೆಯೂ ಕೂಡಾ. ಇವೆಲ್ಲವೂ ಅಂಕೆಗೇಡಿತನದ ವ್ಯಾಪ್ತಿಗೇ ಬರುವವು.
ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದ ಗುಣ, ತೀವ್ರವಾಗಿ ಪ್ರತಿಕ್ರಿಯಿಸುವ ಮತ್ತು ವರ್ತಿಸುವ ಗುಣ ಮತ್ತು ಹಠಾತ್ತನೆ ವರ್ತಿಸುವ ಗುಣವೆಲ್ಲವನ್ನೂ ಅಂಕೆಗೇಡಿತನ ಎಂದು ಕರೆದರೂ ಇದು ಅನೇಕ ಸಮಸ್ಯೆಗಳ ಒಕ್ಕೂಟವಾಗಿರುವ ಸಾಧ್ಯತೆ ಇರುತ್ತದೆ.
ಆ ಒಕ್ಕೂಟದಲ್ಲಿ ಜಿದ್ದುಗೇಡಿತನ (ಆಪೋಸಿಶನಲ್ ಡಿಫಾಯಿಂಟ್ ಡಿಸಾರ್ಡರ್), ತೀವ್ರಗೇಡಿತನ (ಇಂಟರ್ಮಿಟೆಂಟ್ ಎಕ್ಸ್’ಪ್ಲೋಸಿವ್ ಡಿಸಾರ್ಡರ್), ನಡೆಗೇಡಿತನ (ಕಂಡಕ್ಟ್ ಡಿಸಾರ್ಡರ್), ಕಿಚ್ಚುಗೇಡಿತನ (ಪೈರೋಮೇನಿಯಾ), ಚೋರಗೇಡಿತನ (ಕ್ಲೆಪ್ಟೋಮೇನಿಯಾ), ಹಠಾತ್ ಪ್ರವೃತ್ತಿ (ಇಂಪಲ್ಸಿವ್ ಡಿಸಾರ್ಡರ್), ಅತಿಗೇಡಿತನ (ಹಿಸ್ಟ್ರಿಯಾನಿಕ್ ಪರ್ಸನಾಲಿಟಿ ಡಿಸಾರ್ಡರ್) ಹಲವಾರು ಸಮಸ್ಯೆಗಳು ಇರಬಹುದು. ಈ ಎಲ್ಲದರ ವಿಷಯಗಳೂ ಅಕ್ಷರಗಳ ಅನುಕ್ರಮಣಿಕೆಯನ್ನು ಆಧರಿಸಿ ಮುಂದೆ ಬರುತ್ತವೆ. ಆಗ ಅಂಕೆ ಇಲ್ಲದ ವರ್ತನೆಗೆ ಕಾರಣ ಏನು ಎಂದು ತಿಳಿದು ಅದಕ್ಕೆ ಸೂಕ್ತ ಅರಿವಾಳಿಕೆ ಚಿಕಿತ್ಸೆಯನ್ನು (ಕಾಗ್ನಿಟಿವ್ ಥೆರಪಿ) ಅಥವಾ ಇತರ ಚಿಕಿತ್ಸಾಕ್ರಮಗಳನ್ನು ಅನುಸರಿಸಬಹುದು.
ಮಾನಸಿಕ ಸಮಸ್ಯೆಗಳಲ್ಲಿ ಅವುಗಳ ರೋಗ ಲಕ್ಷಣಗಳನ್ನು ಗಮನಿಸುತ್ತಾ ಕಾರಣವನ್ನು ಕಂಡುಕೊಳ್ಳುವುದು ಬಹಳ ಮುಖ್ಯವಾದ ಹಂತವಾಗಿರುತ್ತದೆ. ಅದರ ನಂತರ ಪರಿಹಾರದ ಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಮುಂದುವರಿಯಲಾಗುವುದು.
ನೆನಪಿಡಿ: ನಮ್ಮ ವರ್ತಮಾನವು ನೆಮ್ಮದಿಯಿಂದ ಇರಬೇಕಾದರೆ ನಮ್ಮ ಮನಸ್ಸಿನ ಸಮಗ್ರ ಆರೋಗ್ಯದ ಕಡೆಗೆ ಗಮನ ಕೊಡಬೇಕು. ನಮ್ಮ ಭವಿಷ್ಯವು ನೆಮ್ಮದಿಯಿಂದ ಇರಬೇಕಾದರೆ ಮಕ್ಕಳ ಸಮಗ್ರ ಪೋಷಣೆಯ ಬಗ್ಗೆ ಗಮನ ಕೊಡಬೇಕು.