~ ಸಾರಾಅಲಿ ಪರ್ಲಡ್ಕ ( ಬರಹಗಾರ್ತಿ)

ಭಾಷೆ ಎನ್ನುವುದು ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು ಹಾಗೂ ನಮ್ಮ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಕೀಲಿಕೈ. ಕನ್ನಡ ಭಾಷೆ ಹಾಗೂ ಇಲ್ಲಿನ ಸಾಹಿತ್ಯದ ಮೆರುಗನ್ನು ವರ್ಣಿಸುವುದೆಂದರೆ ಅದು ಪದಗಳಿಗೆ ನಿಲುಕುವಂತದ್ದಲ್ಲ. ಕನ್ನಡದ ಮಣ್ಣಲ್ಲಿ ಹುಟ್ಟಿ ಬೆಳೆದ ನಾವುಗಳೇ ಧನ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಕನ್ನಡ ಭಾಷೆಯನ್ನು ಉಳಿಸಿಕೊಂಡರೆ ಕರ್ನಾಟಕದೊಳಗಿರುವ ನಮ್ಮ ಆಡು ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ ಹಾಗೂ ಇನ್ನಿತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬಹುದು. ಭಾಷಾ ಆಸಕ್ತಿಯೇ ಕುಂಠಿತವಾದರೆ ಅದರ ಸಾಹಿತ್ಯವು ಉಳಿಯುವ ಮಾತೆಲ್ಲಿಂದ ಬಂತು? ಕ್ರಮೇಣ ಓದುಗರಿಲ್ಲವಾದಂತೆಯೇ ಆಯಾ ಭಾಷೆಯ ಬರಹಗಾರರು ಹಾಗೂ ಲೇಖಕರು ಮರೆಯಾಗುತ್ತಾರೆ. ಆಮೇಲಿನ ಕಾಲಗಳಲ್ಲಿ ಲೇಖಕ ಪದದ ಅರ್ಥವನ್ನು ಅಂತರ್ಜಾಲ ಪದಕೋಶದಲ್ಲಿ ತಡಕಾಡಬೇಕಾದ ಭೀತಿಯ ಲಕ್ಷಣಗಳನ್ನು ಇಂದಿನ ಪೀಳಿಗೆಯ ಜೀವನ ಕ್ರಮ ತೋರಿಸಿಕೊಡುತ್ತಿದೆ. ಭಾಷೆಯನ್ನು ಅಪ್ಪಿ ಉಳಿಸಿಕೊಳ್ಳದಿದ್ದರೆ ತದನಂತರ ಅದರ ಪತನದ ವಿಷಣ್ಣತೆಯನ್ನು ಉಣ್ಣಬೇಕಾದ ಅನಿವಾರ್ಯತೆ ಎದುರಾಗುವುದಂತು ಖಚಿತ.

ಸಾಂಸ್ಕೃತಿಕ ವೇದಿಕೆಯೊಂದರಲ್ಲಿ ಸಂಗೀತದ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವವರ ಆಕರ್ಷಣೀಯ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವಾಗ ನಾವು ಕೂಡ ಹೀಗೆಯೇ ನರ್ತಿಸಬೇಕೆಂದು ಒಂದು ನಿಮಿಷ ಅನಿಸುತ್ತದೆ. ಅಂತೆಯೇ ಖ್ಯಾತ ಗಾಯಕಿ ಅಥವಾ ಗಾಯಕರ ಅದ್ಭುತವಾದ ಸುಮಧುರ ಹಾಡಿಗೆ ನಮ್ಮ ಧ್ವನಿಯನ್ನು ಸೇರಿಸಿಕೊಳ್ಳುತ್ತಾ ನಾವು ಕೂಡ ಗಾಯಕರಾಗಿ ಬಿಟ್ಟೆವೇನೋ ಅಥವಾ ಗಾಯಕರಾಗಬೇಕೆನ್ನುವ ತುಮುಲ ಮನದಲ್ಲಿ ಮೂಡುವುದು ಸಹಜ. ಹಾಗೆಯೇ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳನ್ನು ಓದುವಾಗ ಅಥವಾ ಕವಿಗೋಷ್ಠಿಗಳು ನಡೆಯುತ್ತಿರುವಾಗಲೇ ಕವಿ-ಕವಯತ್ರಿಗಳ ಸಂಖ್ಯೆಗಳಲ್ಲಿ ಹೆಚ್ಚಳ ಕಂಡು ಬರುವುದು ಕೂಡ ಇಂತಹದ್ದೇ ಬಯಕೆಗಳಿಂದ ಹುಟ್ಟುವಂತಹವುಗಳು.

ನಾವು ಅಥವಾ ನಾನು ಕೂಡ ಮಕ್ಕಳ ಭವಿಷ್ಯದ ಬುನಾದಿಗಾಗಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಾ ಅವರೊಳಗೆ ಮೂಡಬೇಕಾದ ಕನ್ನಡದ ಒಲವನ್ನು ಚಿವುಟುವ ಕಾಣದ ಕೈಗಳು ನಮ್ಮದೇ ಎಂದು ಒಪ್ಪಿಕೊಳ್ಳಲು ವಿಷಾದವಿದೆ. ಕನ್ನಡ ನಾಡಲ್ಲಿ ಕನ್ನಡದ ಒಲವು ಬತ್ತಿದರೆ ಮುಂದೆ ಭವಿಷ್ಯದಲ್ಲಿ ಕನ್ನಡವನ್ನು ಬಿತ್ತುವವರಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಕನ್ನಡವನ್ನು ಉಳಿಸಿ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಸಾಹಿತ್ಯದ ಕಡೆಗೆ ಆಸಕ್ತರಾಗಲು ಅವರನ್ನು ಹುರಿದುಂಬಿಸಬೇಕು. ಪ್ರತಿ ವಿಚಾರದಲ್ಲೂ ಆರೋಗ್ಯಪೂರ್ಣ ದೃಷ್ಟಿಕೋನ, ಚಿಂತನೆಗಳು ಆವಶ್ಯಕ. ನಾವು ಸಮಾನತೆಯ ದೃಷ್ಟಿಯಿಂದ ವಿಮರ್ಷಿಸುವಂತಹ ಪ್ರಭುಧ್ಧತೆಯನ್ನು ಮೈಗೂಡಿಸಿಕೊಂಡಿರೆ ನಮ್ಮ ಮುಂದಿನ ತಲೆಮಾರು ಆ ಆದರ್ಶತೆಯನ್ನು ಉಳಿಸಿಕೊಳ್ಳಬಹುದು. ಏಕೆಂದರೆ ಒಂದು ಒಳ್ಳೆಯ ಕಾರ್ಯಕ್ಕೆ ಪಡುವ ಶ್ರಮ ಫಲ ನೀಡದೆ ಇರುವುದಿಲ್ಲ. ಬರಹಗಾರರನ್ನು ಸನ್ಮಾನಿಸುವಲ್ಲಿ ಓದುಗರನ್ನು ಹುಡುಕಿ ಸನ್ಮಾನಿಸಬೇಕಾದ ಪರಿಸ್ಥಿತಿಯನ್ನು ಎದುರಿಸುವಂತಹ ವಿಷಮಸ್ಥಿತಿ ಕನ್ನಡ ಭಾಷಾ ಸಾಹಿತ್ಯಕ್ಕೆ ಒದಗದಿರಲಿ.
ಕೋಟಿ ಲೆಕ್ಕದಲ್ಲಿ ಕನ್ನಡಿಗರಿರುವ ಕರ್ನಾಟಕದಲ್ಲಿನ ಎಲ್ಲಾ ಕನ್ನಡ ಪತ್ರಿಕೆಗಳ ಮೌಲ್ಯಮಾಪನ ತೆಗೆದರೆ ಅದು ಲಕ್ಷಗಳೊಳಗಷ್ಟೇ ಉಳಿದಿರುತ್ತದೆ. ಅದರಲ್ಲು ಸಾಹಿತ್ಯ ಪತ್ರಿಕೆಗಳ ಚಂದಾದಾರರ ಸಂಖ್ಯೆ ಸಾವಿರಕ್ಕಿಂತ ಆಚೆ ದಾಟಿರದು ಅನ್ನುವುದು ವಿಷಾದದ ಸಂಗತಿ. ಇತ್ತೀಚೆಗೆ ದೀರ್ಘ ಬರಹಗಳನ್ನು ಓದಲು ಜನರು ಹಿಂದೇಟು ಹಾಕುತ್ತಾರೆ. ಬರಹಗಳನ್ನು ಇಂತಿಷ್ಟೇ ಪದಗಳೊಳಗೆ ತುರುಕಿ ಜನಗಳಿಗೆ ತಲುಪಿಸಬೇಕೆನ್ನುವ ಕರಾರು ಬೇರೆ. ಇಂತಹ ಸ್ಥಿತಿಯಲ್ಲಿ ಅಕ್ಷರಗಳ ಸಂಖ್ಯೆ ಇಷ್ಟರೊಳಗೆ ಸೀಮಿತಗೊಳಿಸಬೇಕೆಂದರೆ ಅಲ್ಲಿ ಸಂದೇಶಗಳು ವಿವರವಾಗಿ ಜನರಿಗೆ ತಲುಪಿಸಲು ಅಡಚಣೆಗಳಾಗುತ್ತದೆ. ಬರಹ ಅದೆಷ್ಟೇ ಸ್ವಾರಸ್ಯಕರವಾಗಿರಲಿ, ಆಕರ್ಷಕವಾಗಿರಲಿ ಓದುಗರನ್ನು ಸೆಳೆಯಬೇಕಾದರೆ ಬಣ್ಣದಲ್ಲಿ ಅದ್ದಿ ಪತ್ರಿಕೆಗಳನ್ನು ಓದುಗರ ಮುಂದಿಡಬೇಕು. ಹಾಗಿದ್ದರೆ ಮಾತ್ರ ಪತ್ರಿಕೋದ್ಯಮ ಸಫಲತೆ ಕಾಣುವುದೆಂದಾದರೆ ಬರಹದ ನೈಜ ಮೌಲ್ಯವೆಲ್ಲಿ ಎಂಬ ಪ್ರಶ್ನೆಗೆ ಉತ್ತರವೆಲ್ಲಿದೆ?