ಭಾಗ :6
ರಿಯಾಝ್ ಅಂಕತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯ
“ಭಾರತದಲ್ಲಿ ಜೀವಿಸಬೇಕಾದರೆ ಜೈ ಶ್ರೀರಾಮ್ ಹೇಳಬೇಕು” ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕೈಯಲ್ಲಿ ಕತ್ತಿ, ಖಡ್ಗ, ಪಿಸ್ತೂಲ್ ಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವ, ಮಸೀದಿಗಳ ಮುಂದೆ ಇಸ್ಲಾಮಿನ, ಮುಸಲ್ಮಾನರ ವಿರುದ್ಧ ಕೇಕೆಗಳನ್ನು ಹಾಕುವ ಭಯೋತ್ಪಾದಕರ ಗುಂಪನ್ನು ನೀವು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಕಂಡಿರಬಹುದು. ಇದು ಎಲ್ಲಾ ಪ್ರಜೆಗಳಿಗೂ ತಮ್ಮ ತಮ್ಮ ಧರ್ಮವನ್ನು ಆಚರಿಸುವ, ಅನುಸರಿಸುವ ಮತ್ತು ಪ್ರಚಾರಪಡಿಸುವ ಸಮಾನ ಅವಕಾಶ ನೀಡಿದಂತಹಾ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಎಂಬುದು ಆಘಾತಕಾರಿ ಮತ್ತು ಬೇಸರದ ಸಂಗತಿಯಾಗಿದೆ. ಗಲಭೆಕೋರರನ್ನು ತಡೆದು ಕಟ್ಟಿಹಾಕಬೇಕಾದ ಸರ್ಕಾರ ಮಾತ್ರ ತಮ್ಮ ಉಳಿವಿಗಾಗಿ, ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ನಡೆಸುವವರ ಮನೆಗಳನ್ನು ಗುರುತಿಸಿ ಅದರ ಮೇಲೆ ಬುಲ್ಡೋಝರ್ ಹತ್ತಿಸುವ ಮೂಲಕ ಗಲಭೆಕೋರರಿಗೆ ಕಾನೂನಿನ ರಕ್ಷಣೆ ನೀಡುತ್ತಿರುವುದು ಪ್ರಭುತ್ವದ ದ್ವೇಷ ಮನೋಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ದೇಶದ ಬಹುಸಂಖ್ಯಾತ ಹಿಂದುಗಳು ಏಪ್ರಿಲ್ 10 ಮತ್ತು ಏಪ್ರಿಲ್ 16 ರಂದು ರಾಮನವಮಿ ಮತ್ತು ಹನುಮ ಜಯಂತಿಯನ್ನು ಬಹಳ ಭಕ್ತಿಯಿಂದ, ಪ್ರೀತಿ-ಸೌಹಾರ್ದತೆಯಿಂದ ದೇಶದಾದ್ಯಂತ ಆಚರಿಸುತ್ತಾರೆ. ಆದರೆ ಇಲ್ಲಿ ಹಿಂದೂ -ಮುಸಲ್ಮಾನರನ್ನು ಪರಸ್ಪರ ಎತ್ತಿ ಕಟ್ಟಿ ತಮ್ಮ ರಾಜಕೀಯ ಲಾಭ ಪಡೆಯುವ ಶಕ್ತಿಗಳು ಹಿಂದೂ ಧರ್ಮವನ್ನು, ಹಿಂದೂ ಧರ್ಮದ ಆಚರಣೆಗಳನ್ನು ಅವಮಾನಗೊಳಿಸುವ ಕಾರ್ಯಕ್ಕೆ ಇಳಿಯುತ್ತಾರೆ. ರಾಮನವಮಿಯ ದಿನ ಉದ್ದೇಶಪೂರ್ವಕವಾಗಿ ಮುಸ್ಲಿಮರ ಪ್ರದೇಶ, ಮಸೀದಿಯ ಮುಂಭಾಗ ಘೋಷಣೆಗಳನ್ನು ಹಾಕುತ್ತಾ ಅಲ್ಪಸಂಖ್ಯಾತ ಸಮುದಾಯವನ್ನು ಪ್ರಚೋದಿಸುವ ಕೆಲಸವನ್ನು ಮಾಡಲಾಗುತ್ತದೆ. ದೆಹಲಿಯ ಜಹಂಗೀರ್ ಪುರದಲ್ಲಿ ರಾಮನವಮಿಯ ದಿನ ಮೆರವಣಿಗೆ ನಡೆಸುತ್ತಾ ಮೂರು ಬಾರಿ ಉದ್ದೇಶಪೂರ್ವಕವಾಗಿ ಮಸೀದಿಯ ಮುಂಭಾಗಕ್ಕೆ ಬರುತ್ತಾರೆ. ಮೂರನೇ ಬಾರಿ ಕೆಲವರು ಮಸೀದಿಯ ಮೇಲೆ ಹತ್ತಿಕೊಂಡು ಭಗವಧ್ವಜವನ್ನು ಹಾರಿಸುತ್ತಾರೆ. ಈ ರೀತಿ ಹಿಂದೂ ಧರ್ಮವನ್ನು ಅವಮಾನ ಮಾಡಿಕೊಂಡು ಅಲ್ಪಸಂಖ್ಯಾತರಲ್ಲಿ ಭೀತಿಯನ್ನು ಹುಟ್ಟಿಸುತ್ತಾರೆ. ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸುತ್ತದೆ. ಕರ್ನಾಟಕದ ಹುಬ್ಬಳ್ಳಿಯಲ್ಲಿ ದೇವಸ್ಥಾನದ ಮುಂಭಾಗ ಅನ್ಯಧರ್ಮೀಯ ಕಲ್ಲಂಗಡಿಗಳನ್ನು ಮಾರಾಟ ಮಾಡುತ್ತಿದ್ದಾನೆ ಎನ್ನುವ ಕಾರಣಕ್ಕಾಗಿ ಅವುಗಳನ್ನು ನಾಶ ಮಾಡಲಾಗುತ್ತದೆ. ಈ ರೀತಿಯಾಗಿ ದ್ವೇಷದ ಹಲವು ಮುಖಗಳು ದೇಶದ ಮುಂದೆ ಅನಾವರಣಗೊಳ್ಳುತ್ತದೆ.

ಕೋಮುಗಲಭೆಯನ್ನು ನಡೆಸಿದವರು ಯಾರು? ಅವರಿಗೆ ಯಾವ ಶಿಕ್ಷೆಯನ್ನು ನೀಡಬೇಕು? ಎಂದು ಮಹಾನಗರ ಪಾಲಿಕೆಗಳ ಬುಲ್ಡೋಝರ್ ಗಳು ತೀರ್ಮಾನಿಸುವುದಾದರೆ, ಇಲ್ಲಿ ಪೊಲೀಸ್ ತನಿಖೆ, ನ್ಯಾಯಾಲಯ, ವಿಚಾರಣೆಯ ಅಗತ್ಯವಿಲ್ಲವೇ? ಎನ್ನುವ ಪ್ರಶ್ನೆ ಮೂಡುತ್ತದೆ. ದೆಹಲಿಯ ಜಹಂಗೀರ್ ಪುರದಲ್ಲಿ ನಾವು ಅಕ್ರಮ ಮನೆಗಳನ್ನು ತೆರವು ಮಾಡಿದ್ದೇವೆ ಎನ್ನುವ ಉತ್ತರವನ್ನು ಸರ್ಕಾರ ಸುಪ್ರಿಂ ಕೋರ್ಟ್‌ಗೆ ನೀಡುತ್ತದೆ. ದೆಹಲಿಯಲ್ಲಿ ಸುಮಾರು 781 ಸಕ್ರಮಗೊಳ್ಳದ ಸ್ಲಮ್ ಗಳು ಇದ್ದು, ಇದೆಲ್ಲವನ್ನು ಬಿಟ್ಟು ಮುಸ್ಲಿಮ್ ಬಾಹುಳ್ಯ ಪ್ರದೇಶವಾದ ಜಹಂಗೀರ್ ಪುರವನ್ನು ಮಾತ್ರ ಆಯ್ಕೆ ಮಾಡಿದ್ದು, ಪ್ರತಿಭಟಿಸುವ ಧ್ವನಿಯನ್ನು ಹತ್ತಿಕ್ಕುವ ಸರಕಾರದ ಹೇಡಿತನದ ಕೃತ್ಯವಾಗಿದೆ.
ಉತ್ತರ ಪ್ರದೇಶದಲ್ಲಿ ಸಿಎಎ, ಎನ್ ಆರ್ ಸಿ ಪ್ರತಿಭಟನೆಯ ಸಂದರ್ಭದಲ್ಲಿ ಗಲಭೆಗಳು, ಹಿಂಸಾಚಾರಗಳು ನಡೆಯಿತು. ಯೋಗಿ ಆದಿತ್ಯನಾಥ್ ಸರ್ಕಾರ ಆಸ್ತಿ ಪಾಸ್ತಿಗಳನ್ನು ನಾಶಮಾಡುವವರ ಮನೆಗಳನ್ನು ಧ್ವಂಸ ಮಾಡುತ್ತೇವೆ ಎನ್ನುವ ಕಾನೂನನ್ನು ಜಾರಿಗೆ ತಂದಿತು. ತದನಂತರ ಈ ಕಾನೂನನ್ನು ಸುಪ್ರಿಂ ಕೋರ್ಟ್ ಅನೂರ್ಜಿತಗೊಳಿಸಿತು. ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿದರೆ ಆ ನಿರ್ದಿಷ್ಟ ವ್ಯಕ್ತಿ ಮೆರವಣಿಗೆಯಲ್ಲಿ ಇದ್ದಾನೆಯೇ, ಹಿಂಸಾಚಾರದಲ್ಲಿ ನೇರವಾಗಿ ಭಾಗವಹಿಸಿದ್ದಾನೆಯೇ ಎಂದು ಸಾಬೀತಾದರೆ ಮಾತ್ರ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸುತ್ತದೆ. ಇದನ್ನು ಸರ್ಕಾರ ಅಥವಾ ಪೊಲೀಸರು ತೀರ್ಮಾನ ಮಾಡಲು ಸಾಧ್ಯವಿಲ್ಲ. ಇಂದು ಬುಲ್ಡೋಝರ್ ಮೂಲಕ ನ್ಯಾಯ ತೀರ್ಮಾನ ಮಾಡುತ್ತಿದ್ದು, ಇದು ಸ್ವತಂತ್ರ್ಯ ನ್ಯಾಯಾಂಗ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಕಳಂಕವಾಗಿದೆ. ಇಂದು ಸರ್ಕಾರ ಬುಲ್ಡೋಝರ್ ಮೂಲಕ ಧ್ವಂಸಗೊಳಿಸಲು ಹೊರಟಿರುವುದು ಕೇವಲ ಮನೆಗಳನ್ನಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವವನ್ನಾಗಿದೆ. ಆದ್ದರಿಂದ ಸರ್ಕಾರದ ದ್ವೇಷದ, ಸರ್ವಾಧಿಕಾರದ ರಾಜಕೀಯವನ್ನು ತಡೆಯಲು ಜನರು ಮುಂದೆ ಬರಬೇಕಾಗಿದೆ.