ಬರಹಗಾರರು : ಹರ್ಷದ್ ಎಸ್.ಕೆ.

ಪಾದದಡಿ ಸ್ವರ್ಗವನ್ನಿಟ್ಟು,
ಸಹನೆಯ ಕಟ್ಟೆಯ ಒಡಲಲ್ಲಿ ಹೊತ್ತು.
ಹೊಗಳಿಕೆಗೆ ನಿಲುಕದ,
ಬರವಣಿಗೆಗೆ ಸಾಟಿಯಿಲ್ಲದ
ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ
ಪದವೆ ಅಮ್ಮ
ಉದರದ ಚಲನೆಯ ಅರಿತು
ಕಂದನ ಬರುವಿಕೆಯ ತಿಳಿದು
ಕಾತರದಿ ಕಾದು ನೀ ಕಾಪಿಟ್ಟು
ಲೋಕದ ಭಯವಿಲ್ಲದಂತೆ, ಗರ್ಭದಲ್ಲಿ ನೀನು ಬೆಚ್ಚಗಿನ ಸುರಕ್ಷೆ ಕೊಟ್ಟಾಗ
ಬಗೆಬಗೆಯ ಖಾದ್ಯವ ತ್ಯಜಿಸಿ
ಕಂದನ ಆರೈಕೆಯ ಸಲುವಾಗಿ
ಚುಚ್ಚಿಸಿಕೊಂಡು ಸೂಜಿ, ಔಷಧಿ
ಮನುಕುಲ ಶ್ರೇಷ್ಟರಂತೆ ಧೀರ,ಶೂರ,ಜಾಣ ನಾನಾಗ ಬೇಕೆಂದು ಕನಸು ಕಂಡಾಗ
ಪ್ರಪಂಚಕ್ಕೆ ನಾನು ಬರುವ ಮೊದಲು ಪ್ರಪಂಚ ಏನೆಂದು ನೀ ನನಗೆ ತಿಳಿಸಿಕೊಡುತ್ತಿದ್ದಾಗ
ಗಾಢಾ ನಿದ್ದೆಯಲ್ಲಿ ನೀನಿರುವೆ ಎಂದು ತಿಳಿಯದೆ ನಾ ನಿನಗೆ ಕೊಡುತ್ತಿದ್ದ ತೊಂದರೆ, ನೋವು ನೀನು ಸಹಿಸಿ ಕೊಂಡಾಗ
ನಾನು ಭೂಮಿಗೆ ಬರುವ ದಿನವನ್ನು ನಿನಗೆ ನೋವಾಗುವ ದಿನವೆಂದು ತಿಳಿದರು ಖುಷಿ ಪಟ್ಟಾಗ
ನಿನಗಾದ ನೋವನ್ನು ಸಹಿಸಿ ನನ್ನ ಮೊದಲ ಬಾರಿಗೆ ನೋಡಿ ಮುತ್ತಿಕ್ಕಿದ ಕ್ಷಣದಲ್ಲಿ ನೀ ಅತ್ತಾಗ
ನಾನು ಹುಟ್ಟಿದ ದಿನವನ್ನು ನಿನ್ನ ಮರುಹುಟ್ಟು ಎಂದು ತಿಳಿಯದೆ ನನ್ನ ಜನ್ಮದಿನವೆಂದು ಹೇಗೆ ಆಚರಿಸಿಲಿ.