ನಿನ್ನಾಸೆಯೂ ನೆರವೇರಲಿ..!

ಸಿರಾಜ್ ಗಡಿಯಾರ್

ದ್ವೇಷ ಭಾಷಣದಿಂದ ಚಪ್ಪಾಳೆ ಗಿಟ್ಟಿಸಿಕೊಂಡವನೆ ಕೇಳಿಲ್ಲಿ
ನಿನ್ನಾಸೆಯೂ ನೆರವೇರಲಿ
ಘನಘೋರ ಕಲಹವೊಂದು ನಡೆದು ಬಿಡಲಿ
ಹೆಣಗಳ ರಾಶಿಯಲಿ ನಿನ್ನ ಮಕ್ಕಳ ದೇಹವಿರಲಿ
ಧರ್ಮ ರಕ್ಷಿಸಲು ಇಷ್ಟಾದರು ಮಾಡಲಾರೆಯಾ …?

ಖುರ್ಚಿ ಉಳಿಸುವ ಉಮೇದಿಗೆ
ಪ್ರಜೆಗಳ ನಡುವೆ ತಂದಿಕ್ಕುವ
ಚತುರ ರಾಜಕಾರಣಿಯೇ
ನಿನ್ನಾಸೆಯೂ ನಡೆದುಬಿಡಲಿ
ಬೀಸಿ ಬರುವ ಕತ್ತಿಯೊಂದು
ನಿನ್ನ ಮಕ್ಕಳ ಕತ್ತು ಸೀಳಲಿ
ನಿನ್ನ ಗೆಲುವಿಗೆ ಅವರ ನೆತ್ತರಿನದ್ದೇ
ಅಭಿಷೇಕವಾಗಲಿ .

ಎಲ್ಲವನ್ನು ಸವಿದು ಆಳುವವನ
ಅಂಡು ನೆಕ್ಕುವ ಮಾಧ್ಯಮವೇ
ನಿನ್ನಾಸೆಯೂ ನೆರವೇರಲಿ
ಬದುಕು ಕಟ್ಟಲಾಗದೆ ಬೀದಿಗೆ ಬಿದ್ದ
ಜನರ ಗುಂಪಿನಲಿ
ನಿನ್ನ ಮನೆಯ ಮಕ್ಕಳೂ ತಟ್ಟೆ ಹಿಡಿದಿರಲಿ .

ಅನ್ಯಾಯ ನಡೆದಾಗಲೂ
ಅಮಾಯಕರಿಗೆ ಶಾಂತಿ ಮಂತ್ರವ ಉಪದೇಶಿಸುವ
ಬುದ್ದಿ ಜೀವಿ ಚಿಂತಕನೆ
ನಿನ್ನಾಸೆಯೂ ನೆರವೇರಲಿ
ದಮನಿತರ ದೀನ ರೋಧನೆಯಲಿ
ನಿನ್ನ ಮನೆಯ ಮಕ್ಕಳ ದನಿಯೂ
ನಿನ್ನ ಕಿವಿತಾಕಲಿ.

ಮತ ನೀಡಿದ ತಪ್ಪಿಗೆ
ಸಹಿಸಿಕೊಂಡು ಬದುಕುವ ಮುಲಾಜಿಗೆ
ಮತದಾರನು ಒಗ್ಗಿಕೊಂಡಿದ್ದಾನೆ
ಸಮೂಹಸನ್ನಿಗೆ ಒಳಗಾದ ಮತಭ್ರಾಂತಿಯ ಜನರಿಗೆ
ನೇತೃತ್ವ ನಾಯಕರ ಮಕ್ಕಳದ್ದೆ ಆಗಿರಲಿ
ಬಡವನ ಮನೆಯ ಮಕ್ಕಳು
ಅವರಷ್ಟಕೆ ಬದುಕಿಬಿಡಲಿ.

Leave a comment