✍ ರವಿಕಿರಣ್ ರೈ, ಕದ್ರಿ, ಮಂಗಳೂರು

ಆಗಿನ ಮುಸ್ಲಿಮರ ಪೂರ್ವಜರು ನವಾಬ ಸುಲ್ತಾನರ ಸೇನೆಯಲ್ಲಿದ್ದುಕೊಂಡು ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದಾರೆ, ಅದಕ್ಕಾಗಿ ಈಗಿನ ಮುಸ್ಲಿಮರನ್ನೂ ಹಿಂದೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂಬ ವಿವರಣೆ ಹಿಂದುತ್ವ ಸಂಘಟನೆಗಳದ್ದು. 1665ರಲ್ಲಿ ನಮ್ಮ ಕುಂದಾಪುರ ತಾಲೂಕಿನ ಬಸರೂರು ಒಂದು ದೊಡ್ಡ ಬಂದರಾಗಿದ್ದು ಅಲ್ಲಿ ಅರಬಿಗಳು, ಪೋರ್ಚುಗೀಸರು ಮತ್ತು ಸ್ಥಳೀಯ ಜೈನರು, ನಾಡವರು ವಿದೇಶದೊಂದಿಗೆ ಭಾರೀ ವ್ಯಾಪಾರ ಮಾಡುತ್ತಿದ್ದರು. ಬಸರೂರು ಬಂದರ್‌ನಿಂದ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು, ಮಸಾಲೆ ಪದಾರ್ಥ ಮತ್ತು ಅಕ್ಕಿ ಅರಬಿ ದೇಶಕ್ಕೆ ನಿರ್ಯಾತವಾಗುತ್ತಿತ್ತು. ಆ ಸಮಯದಲ್ಲಿ ಬಸರೂರು ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. ಇದು ಶಿವಾಜಿಯ ಕಿವಿಗೆ ಮುಟ್ಟಿತು. ಶಿವಾಜಿ ಕೇವಲ ತನ್ನ 800 ಸೈನಿಕರೊಂದಿಗೆ ಸಮುದ್ರ ಮಾರ್ಗವಾಗಿ ಬಂದು ಬಸರೂರಿನ ಮೇಲೆ ದಾಳಿ ಮಾಡಿ ಪೋರ್ಚುಗೀಸ್ ಮತ್ತು ಅರಬಿಗಳನ್ನು ಲೂಟಿ ಮಾಡಿ ಹೊಡೆದೋಡಿಸಿದ್ದು ಮಾತ್ರವಲ್ಲ ಸ್ಥಳೀಯ ಹಿಂದೂ ವ್ಯಾಪಾರಿಗಳನ್ನೂ ಲೂಟಿ ಮಾಡಿದನು. ಅಷ್ಟೇ ಅಲ್ಲ, ಇಲ್ಲಿ ಆಗ ಇದ್ದ ಮಹಾಲಿಂಗೇಶ್ವರ ದೇವಸ್ಥಾನ ಅತ್ಯಂತ ಪ್ರಸಿದ್ಧ ಮತ್ತು ಅತಿ ಶ್ರೀಮಂತ ದೇವಸ್ಥಾನವಾಗಿತ್ತು. ಶಿವಾಜಿ ದಾಳಿ ಮಾಡಿದ್ದು 13 ಫೆಬ್ರವರಿ 1665ರಲ್ಲಿ. ಆಗ ಇಲ್ಲಿ ಜಾತ್ರೆ ನಡೆಯುತ್ತಿತ್ತು. ಘಟ್ಟದ ಮೇಲಿನ ಶ್ರೀಮಂತರೆಲ್ಲಾ ಇಲ್ಲಿಗೆ ಬಂದು ದೇವರಿಗೆ ಭಾರೀ ಕಾಣಿಕೆ ಕೊಡುತ್ತಿದ್ದರು. ಶಿವಾಜಿ ಆ ದೇವಸ್ಥಾನವನ್ನು ಘಜನಿ ಮಾದರಿಯಲ್ಲಿ ಲೂಟಿ ಹೊಡೆದು ಅಡ್ಡ ಬಂದ ನೂರಾರು ಸ್ಥಳೀಯ ಹಿಂದೂ ಜನರನ್ನು ಹತ್ಯೆ ಮಾಡಿ ಅಲ್ಲಿದ್ದ ಹಿಂದೂ ಶ್ರೀಮಂತರನ್ನೆಲ್ಲಾ ಸುಲಿಗೆ ಮಾಡಿ ಆ ಸಂಪತ್ತನ್ನು ತನ್ನ ಹಡಗಿನಲ್ಲಿ ತುಂಬಿಸಿಕೊಂಡು ಸಮುದ್ರ ಮಾರ್ಗವಾಗಿಯೇ ಮರಳಿ ತನ್ನ ಮರಾಠ ರಾಜ್ಯಕ್ಕೆ ಹೋದನು.

ಆಗ ಶಿವಾಜಿ ಜತೆ ಬಂದ ಅನೇಕ ಮರಾಠ ಸೈನಿಕರು ಇಲ್ಲಿಯೇ ಉಳಿದು ಜನರನ್ನು ಸುಲಿಗೆ ಮಾಡುತ್ತಾ ಸುಖಮಯ ಜೀವನ ಸಾಗಿಸತೊಡಗಿದರು. ಶಿವಾಜಿ ಆಗ ಮಾಡಿದ ತಪ್ಪಿಗೆ ಈಗ ನಮ್ಮ ತುಳುನಾಡಲ್ಲಿ ನೆಲೆ ನಿಂತಿರುವ ಶಿವಾಜಿ ಕ್ಷತ್ರಿಯ ಮತ್ತು ಭಾವಸರ್ ಕ್ಷತ್ರಿಯ (ದರ್ಜಿ) ಜಾತಿಯ ಮರಾಠಿಗರನ್ನು ನಾವು ದ್ವೇಷಿಸಲು ಸಾಧ್ಯವೇ? ಅಂತೆಯೇ ಎರಡನೇ ಬಾಜಿರಾವ್ ಪೇಶ್ವೆ ಚಿತ್ಪಾವಣ್ ಬ್ರಾಹ್ಮಣನಾಗಿದ್ದರೂ ಅವನು ಸ್ವತಃ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದ ಶೃಂಗೇರಿ ಶಾರದಾ ಮಠವನ್ನು ಸಂಪೂರ್ಣ ಲೂಟಿ ಹೊಡೆದನು. ಆ ಮಠದಲ್ಲಿ ಎಷ್ಟೊಂದು ಸಂಪತ್ತು ಇತ್ತೆಂದರೆ ಅದನ್ನು ಪುಣೆಗೆ ಸಾಗಿಸಲು ಪೇಶ್ವೆಗೆ ಐವತ್ತು ಎತ್ತಿನ ಬಂಡಿಗಳು ಮತ್ತು 25 ಆನೆಗಳು ಬೇಕಾದವು. ಮಠದ ಲೂಟಿಗೆ ಅಡ್ಡ ಬಂದ ಎರಡು ಸಾವಿರಕ್ಕೂ ಹೆಚ್ಚು ಶೃಂಗೇರಿಯ ಶೈವ ಬ್ರಾಹ್ಮಣರನ್ನು ಮತ್ತು ನಾಮಧಾರಿ ಒಕ್ಕಲಿಗರನ್ನು ಬಾಜಿರಾವ್ ಕೊಚ್ಚಿ ಕೊಂದು ಹಾಕಿಸಿದನು.
ಪೇಶ್ವೆಯ ಸೈನ್ಯದ ಜತೆ ಅಡುಗೆ ಭಟ್ಟರಾಗಿ ಆಗ ಬಂದಿದ್ದ ಅನೇಕ ಚಿತ್ಪಾವನ ಬ್ರಾಹ್ಮಣರು ಆಗ ಹತ್ತಿರದ ಕೊಪ್ಪ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನೆಲೆಸಿ ಸ್ಥಳೀಯರ ಕೃಷಿ ಭೂಮಿಯನ್ನು ಬಲಾತ್ಕಾರದಿಂದ ವಶಪಡಿಸಿಕೊಂಡು ಕೃಷಿಕರಾಗಿ ಜೀವನ ನಡೆಸತೊಡಗಿದರು. ಅವರ ಇಂದಿನ ತಲೆಮಾರನ್ನು ನಾವು ಕೊಪ್ಪ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಕಾಣಬಹುದು. ಭಾವೆ, ದಾಮ್ಲೆ, ಲೊಂಢೆ, ಗೋಖಲೆ, ರಾನಡೆ, ಮರಾಠೆ, ಕಾರ್ಣಿಕ್, ಪುರಾಣಿಕ್, ಪಟ್ವರ್ಧನ್, ಪಾಟ್ಕರ್, ಕರಾಡೆ, ಖಾಡಿಲ್ಕರ್, ಚಿಪ್ಳೂನ್ಕರ್, ದೀಕ್ಷಿತ್, ಜೋಶಿ, ಭಟ್, ಫಡ್ನವೀಸ್, ಮುಂತಾದ ಕುಲನಾಮವುಳ್ಳ ಮರಾಠಿ ಬ್ರಾಹ್ಮಣ ಕುಟುಂಬಗಳನ್ನು ಕೊಪ್ಪ, ಬೆಳ್ತಂಗಡಿ ಮತ್ತು ಮಂಗಳೂರಿನಲ್ಲಿ ವಿವಿಧ ವೃತ್ತಿಯಲ್ಲಿ ನಾವು ಕಾಣಬಹುದು. ಇವರೆಲ್ಲರ ಪೂರ್ವಜರು 1791 ರಲ್ಲಿ ಬಾಜಿರಾವ್ ಪೇಶ್ವೆ ಶೃಂಗೇರಿ ಮಠಕ್ಕೆ ದಾಳಿ ಮಾಡಿದಾಗ ಮರಾಠಾ ಸೈನ್ಯದ ಜತೆ ಬಂದು ಇಲ್ಲಿ ನೆಲೆಸಿದವರು. ಇವರಲ್ಲಿ ಇಂದು ಅನೇಕರು ಹಿಂದೂ ದೇವಸ್ಥಾನಗಳ ಟ್ರಸ್ಟಿಗಳೂ ಆಗಿದ್ದಾರೆ. ಇವರೆಲ್ಲಾ ಈಗ ಕಟ್ಟರ್ ಆರೆಸ್ಸೆಸ್ ಮತ್ತು ಬಿಜೆಪಿಯ ಕುರುಡು ಬೆಂಬಲಿಗರು. ಶೃಂಗೇರಿಯಲ್ಲಿ ಇವರ ಪೂರ್ವಜರು ಮಾಡಿದ ಅಪರಾಧಕ್ಕೆ ಈಗ ಈ ಮರಾಠಿ ಬ್ರಾಹ್ಮಣರನ್ನು ನಾವು ದ್ವೇಷಿಸಬೇಕೆ? ಹಿಂದಿನವರ ತಪ್ಪಿಗಾಗಿ ನಾವು ಇಂದಿನ ಮುಸ್ಲಿಮರನ್ನು ದ್ವೇಷಿಸುವುದಾದರೆ ಚಿತ್ಪಾವಣ್ ಮತ್ತು ಕರಾಡೆ ಬ್ರಾಹ್ಮಣರ ಪೂರ್ವಜರ ಕುಕೃತ್ಯ ನೋಡಿ ಇಂದಿನ ತಲೆಮಾರಿನ ಮರಾಠಿ ಬ್ರಾಹ್ಮಣರನ್ನೂ ನಾವು ತುಳುವರು ದ್ವೇಷಿಸಬೇಕು ಅಲ್ಲವೇ? ವಿಪರ್ಯಾಸವೆಂದರೆ ಶಿವಾಜಿ ಕೆಳಜಾತಿಯವನು ಎಂಬ ನೆಪದಲ್ಲಿ ಶಿವಾಜಿಯ ಪಟ್ಟಾಭಿಷೇಕಕ್ಕೆ ಅಡ್ಡಿಪಡಿಸಿ ಅವನನ್ನು ಅತಿ ಹೀನಾಯವಾಗಿ ಅವಮಾನಿಸಿದ್ದೂ ಇದೇ ಚಿತ್ಪಾವಣ್ ಬ್ರಾಹ್ಮಣ ಮಂತ್ರಿಗಳು. ಶಿವಾಜಿಯ 50ನೇ ವಯಸ್ಸಿನಲ್ಲಿ ಅವನಿಗೆ ವಿಷಪ್ರಾಶನ ಮಾಡಿಸಿ ಕೊಂದವರು ಶಿವಾಜಿಯ ಮಂತ್ರಿಗಳಾಗಿದ್ದ ಬ್ರಾಹ್ಮಣ ಪೇಶ್ವೆಗಳೇ ಹೊರತು ಮುಸ್ಲಿಮರಲ್ಲ! ಶಿವಾಜಿಯನ್ನು ಕೊಲ್ಲಲು ಕುತಂತ್ರಿ ಪೇಶ್ವೆಗಳಿಗೆ ಸಾಥ್ ಕೊಟ್ಟಿದ್ದು ಶಿವಾಜಿಯ ಎರಡನೇ ಹೆಂಡತಿ ಜೋಯರಾಬಾಯಿ!
ಟಿಪ್ಪುಸುಲ್ತಾನನ ಸೇನೆಯಲ್ಲಿ ಕೇವಲ ಶೇ. 40 ಮುಸ್ಲಿಮರಿದ್ದರೆ ಶೇ.60 ಹಿಂದೂಗಳಿದ್ದರು. ಒಂದು ವೇಳೆ ಟಿಪ್ಪುಕೇರಳದಲ್ಲಿ ಹಾಗೂ ಕೊಡಗಿನಲ್ಲಿ ಅತಿರೇಕ ಮಾಡಿ ರಕ್ತ ಹರಿಸಿದ್ದರೆ ಅದಕ್ಕೆ ಹೆಚ್ಚಿನ ಹೊಣೆ ಅವನ ಸೈನ್ಯದಲ್ಲಿದ್ದ ಶೇ. 60 ಹಿಂದೂಗಳದ್ದು. ಅಂತೆಯೇ ಶಿವಾಜಿಯ ಮತ್ತು ಪೇಶ್ವೆಗಳ ಮರಾಠಾ ಸೈನ್ಯದಲ್ಲಿ ಹಿಂದೂಗಳು ಶೇ.70 ಇದ್ದರೆ ಮುಸ್ಲಿಮರೂ ಶೇ.30 ಇದ್ದರು. ಶಿವಾಜಿಯ ಜಲ ಸೈನ್ಯದಲ್ಲಿಯಂತೂ ಶೇ. 70 ಸೈನಿಕರು ಆಫ್ರಿಕಾ ಮೂಲದ ಸಿದ್ದಿ ಮುಸ್ಲಿಮರಾಗಿದ್ದರು. ಹೀಗಾಗಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕಾಗಿ ಹೋರಾಡಿದ್ದಲ್ಲ. ಅವನು ತನ್ನ ರಾಜ್ಯದ ರಕ್ಷಣೆ ಮತ್ತು ವಿಸ್ತರಣೆಗಾಗಿ ಮಾತ್ರ ಯುದ್ಧ ಮಾಡಿದ್ದು ಹಾಗೂ ಹಿಂದೂ ದೇವಸ್ಥಾನಗಳನ್ನು ಲೂಟಿ ಹೊಡೆದಿದ್ದು. 1741 ರಿಂದ 1751ರ ನಡುವೆ ಪೇಶ್ವೆಗಳ ನಾಗಪುರದ ಸುಬೇದಾರ ಭಾಸ್ಕರ ಪಟವರ್ಧನ್ ಎಂಬ ಬ್ರಾಹ್ಮಣನು ಮರಾಠಾ ಸೈನಿಕರೊಂದಿಗೆ ಹತ್ತು ವರ್ಷದಲ್ಲಿ ಆರು ಬಾರಿ ಬಂಗಾಳದ ಮೇಲೆ ದಾಳಿ ಮಾಡಿ ಅಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಬಂಗಾಳಿ ಹಿಂದೂ ನಾಗರಿಕರನ್ನು ಕೊಂದು ಹಳ್ಳಿ ಹಳ್ಳಿಗಳಿಗೂ ನುಗ್ಗಿ ದೇವಸ್ಥಾನ ಮತ್ತು ವ್ಯಾಪಾರಿಗಳ ಸಂಪತ್ತು ಲೂಟಿ ಮಾಡಿದನು. ಇವತ್ತಿಗೂ ಬಂಗಾಳದಲ್ಲಿ ಮರಾಠರನ್ನು ಕ್ರೂರ ಡಕಾಯಿತರು (ಬಾರ್ಗೀ-ಬೊರ್ಗೀ) ಎಂದೇ ಬಂಗಾಳಿಗಳು ಕರೆಯುತ್ತಾರೆ. ಆದರೂ ಈಗ ಹಿಂದುತ್ವವಾದಿಗಳು ಶಿವಾಜಿಯ ಕೋಪಿಷ್ಠ ಮುಖದ ಚಿತ್ರವನ್ನು ತಮ್ಮ ವಾಹನದ ಹಿಂಬದಿಯ ಗ್ಲಾಸ್ ಮೇಲೆ ಹಾಕಿ ‘‘ಹಿಂದೂ ಹೃದಯ ಸಾಮ್ರಾಟ’’ ಎಂದು ಕರೆಯುತ್ತಿರುವುದು ವಿಪರ್ಯಾಸ. ರಜಪೂತರ ಸಂಸ್ಥಾನದಲ್ಲಿಯೂ ಪೇಶ್ವೆ-ಮರಾಠರು 1740 ರಿಂದ 1760ರ ನಡುವೆ ಮೊಘಲರಿಗಿಂತ ನಾಲ್ಕು ಪಟ್ಟು ಹೆಚ್ಚು ಹಿಂದೂಗಳ ಮಾರಣ ಹೋಮ ನಡೆಸಿದ್ದರು.
ಕೇವಲ ಸಂಪತ್ತು ಲೂಟಿ ಮಾಡಲು ಮಾತ್ರ ಮರಾಠರು ಇತರ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದ್ದದ್ದು. ಬೆಳವಾಡಿ ಮಲ್ಲಮನ ಸಹಿತ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಂಸ್ಥಾನಗಳ ಮೇಲೆ ಮರಾಠಾ ಸೈನಿಕರು ಅನೇಕ ಸಾರಿ ದಾಳಿ ಮಾಡಿ ಭಯಂಕರ ಲೂಟಿಗೈದು ಎದುರು ಬಿದ್ದ ಸಾವಿರಾರು ಲಿಂಗಾಯತರ ಮತ್ತು ಶ್ರೀಮಂತ ಜೈನರ ಮಾರಣಹೋಮ ನಡೆಸಿರುವುದಾಗಿ ಉತ್ತರ ಕರ್ನಾಟಕದ ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ ಈಗ ಹಿಂದುತ್ವವಾದಿಗಳು ಮರಾಠಾ ಇತಿಹಾಸವನ್ನು ತಿರುಚುತ್ತಾ ಆ ಸಮಯದಲ್ಲಿ ಹೀಗೆ ಹಿಂದೂಗಳನ್ನೇ ಲೂಟಿ ಹೊಡೆದು ಕೊಂದವರು ಮರಾಠರಲ್ಲ, ಅದು ಪೇಶ್ವೆಯ ಸೈನ್ಯದಲ್ಲಿ ತೂರಿಕೊಂಡಿದ್ದ ‘‘ಪಿಂಡಾರಿ’’ ಎಂಬ ಕ್ರೂರ ಕ್ರಿಮಿನಲ್ ಜನಾಂಗದವರು ಎಂದು ಬರೆಯುತ್ತಿದ್ದಾರೆ. ಇಷ್ಟೆಲ್ಲಾ ಭೀಕರವಾಗಿ ಹಿಂದೂಗಳದ್ದೇ ರಕ್ತ ಹರಿಸಿದ ಚಿತ್ಪಾವನ ಬ್ರಾಹ್ಮಣರು ಮತ್ತು ಮರಾಠರನ್ನು ಹಿಂದೂ ಧರ್ಮದ ರಕ್ಷಕರೆನ್ನುವುದು ವಿಪರ್ಯಾಸ.