ಹೆಣ ಮುಚ್ಚುವ ಕಾಂಚನ

✍ ಲುಕ್ಮಾನ್ ಅಡ್ಯಾರ್

ಸತ್ತ ಹೆಣವನು
ಕಜ್ಜಿನಾಯಿ
ಕಚ್ಚಿ ಎಳೆವಾಗ
ಕುಟುಂಬದ ಕೈಗಿಟ್ಟ
ಕಾಂಚಾನದ ಕಟ್ಟು
ಶವವನು ಪುನಃ
ಸಾಯುವಂತೆ ಮಾಡಿತು

ಧರ್ಮಕ್ಕಾಗಿ‌‌‌‌..
ಜಾತಿಗಾಗಿ‌…
ದೇಶಕ್ಕಾಗಿ‌‌‌..
ಎಂದೆಲ್ಲಾ ಬೊಬ್ಬಿರುವಾಗ
ಹೆಣ ಮಾತ್ರ ಮೌನ
ಕೋಮಿನ ಮತ್ತಿನ ಮುಂದೆ
ನಾನೂ ಗೌಣ

ಸತ್ತಾಗ ಸುಡುವುದು
ಜಡವನ್ನು ,
ಜಗವನ್ನಲ್ಲ
ಸುಡುಗಾಡಿನ ಕಟ್ಟಿಗೆ
ಪಕ್ಷದ ಕುರ್ಚಿಯನ್ನು
ಗಟ್ಟಿ ಮಾಡಲಿರುವುದಲ್ಲ

ಮತ್ತೊಮ್ಮೆ ಹುಟ್ಟಿ ಬಾ
ಮತ್ತೊಮ್ನೆ ಕೊಲೆಯಾಗು
ಇನ್ನೊಮ್ಮೆ ನಿನ್ನ ಹೆಣಕ್ಕೆ
ಪರಿಹಾರ ನೀಡುತ್ತೇವೆ
ಮತ್ತೆ ಪ್ರತೀಕಾರ
ತೀರಿಸುತ್ತೇವೆ

ಬದುಕಿನ ಹಸಿರಿಗೆ
ಕೋಮಿನ ಚೂರಿ
ಬದುಕು ಮೂರಾಬಟ್ಟೆ
ಸತ್ತ ಮೇಲೂ
ರಾಜಕುನ್ನಿಗಳ ಮುಂದೆ
ಹೆಣ ಬಿಕಾರಿ
ಮುಂದಿನ ಓಟಿಗೆ ತಯ್ಯಾರಿ!!

Leave a comment