ಇದು ಯಾರಪ್ಪನಾ ದೇಶವೂ ಅಲ್ಲ!

  • ✍ ರಾ ಚಿಂತನ್

ಬಾಬ್ರಿ ಕೇವಲ ಮಸೀದಿಯಲ್ಲ.
ಹಿಜಾಬ್ ಕೇವಲ ಬಟ್ಟೆಯಲ್ಲ.
ಇದು ಅಸ್ತಿತ್ವ!
ಅಸ್ತಿತ್ವಕ್ಕೆ ಕೈ ಇಟ್ಟಾಗಲೇ ಅಲ್ಲವೇ ಸಂಘರ್ಷ?
ಕೈ ಇಟ್ಟವರಾರು, ಇಡುತ್ತಿರುವವರಾರು?

ಹೋಗು ಪಾಕಿಸ್ತಾನಕ್ಕೆನ್ನುವೆ
ಪಕ್ಕದೂರಿಗೆ ಹೋಗಲು ಕಾಸಿಲ್ಲ!
ನಿನ್ನಲ್ಲೂ… ನನ್ನಲ್ಲೂ…
ದಿವಾಳಿ ಭಾರತದಲ್ಲಿ
ನಾನು ಬಡವ, ನೀನೂ ಬಡವ.
ಆದರೂ ಎಲ್ಲಾ ಮಾರುವೆ ಎನ್ನುತಾ
ಜೈಕಾರ ಹಾಕುವೆ, ಮಾರಲು
ಉಳಿದಿರುವ ಪುಟಗೋಸಿ ಬೇಡವೇ
ಯಕಃಶ್ಚಿತ್ ಮಾನ ಮುಚ್ಚಲು!

ನನಗಿಷ್ಟ ಭಾರತ, ನನ್ನ ಮನೆಯಿದು
ಇಲ್ಲಿ ಗಣೇಶ, ಶಾರದೆ, ರಸಋಷಿ, ರಬ್ಬ್,
ಜೀಸಸ್, ಬುದ್ಧ, ಮಹಾವೀರ, ಕವಿವರ್ಯ,
ವೀರಕಲಿಗಳೆಲ್ಲಾ ನನ್ನವರು!
ಎಲ್ಲರೆಂದರೆ ಎಲ್ಲರೂ…

ಆದರೂ ಪಾಕಿಸ್ತಾನಕ್ಕೆ ಹೋಗೆನ್ನುತಾ
ಮಂದಿರ-ಮಸೀದಿ, ಹಿಂದೂ -ಮುಸ್ಲಿಂ
ಸಂಘರ್ಷದಲ್ಲಿ ಸಿಲುಕಿ ನೀನೇ ನರಳುತ್ತಿರುವೆ.
ಹೊಟ್ಟೆ ಹಸಿವಲ್ಲೂ ಧರ್ಮದಮಲೇರಿಸಿಕೊಂಡ
ನಿನಗೊಂದು ಕಠಿಣ ಸತ್ಯ ಹೇಳಲೇ- ಇದು
ಯಾರಪ್ಪನಾ ದೇಶವೂ ಅಲ್ಲ!

Leave a comment