- ✍ ಮಿಸ್ರಿಯಾ.ಐ.ಪಜೀರ್

ಸತ್ಯ ನುಡಿಯುವವರನ್ನೂ, ಗಾಂಧಿ ನಡೆದು ತೋರಿಸಿದ ಅಹಿಂಸಾ ಮಾರ್ಗದಲ್ಲಿ ಹೋರಾಡುವವರನ್ನೂ ದೇಶದ್ರೋಹಿಗಳನ್ನಾಗಿಯೂ, ಸುಳ್ಳನ್ನೇ ಸತ್ಯವೆಂಬಂತೆ ಬಿಂಬಿಸಿ ಹಿಂಸೆಯನ್ನೇ ಬಂಡವಾಳವನ್ನಾಗಿಸಿಕೊಂಡವನ್ನು ದೇಶಭಕ್ತರನ್ನಾಗಿಯೂ ಕಾಣುವ ಈ ದುರಂತ ದಿನಗಳಲ್ಲಿ ಬಾಲ್ಯಕಾಲದಲ್ಲಿ ನನ್ನ ಮನದಾಳದಲ್ಲಿ ಅಚ್ಚೊತ್ತಿದ ಗಾಂಧಿ ತಾತ ಕಾಡತೊಡಗಿದ್ದಾನೆ..ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಗಾಂಧೀಜಿಯವರ ಹೆಸರು ಕೇಳದ ದಿನಗಳೇ ಇರಲಿಲ್ಲ. ಮಕ್ಕಳ ಹಾಡಿನ ಮೂಲಕವೋ, ಅಭಿನಯ ಗೀತೆಗಳ ಮೂಲಕವೋ ಒಂದಲ್ಲ ಒಂದು ರೀತಿಯಲ್ಲಿ ಬಾಪೂಜಿಯ ಹೆಸರು ಹೇಳುತ್ತಿದ್ದೆವು. ನಾನು ಗಾಂಧೀಜಿಯ ಕುರಿತಾಗಿ ಮೊದಲು ಕಲಿತ ಹಾಡು ‘ಗಾಂಧೀ ತಾತ ನನ್ನಜ್ಜ ಬಗ್ಗಿ ಬಗ್ಗಿ ನಡೆದಿದ್ದ…..
ಖಾದಿ ಬಟ್ಟೆ ತೊಡುತಿದ್ದ…..”
ಈ ಹಾಡಿನಿಂದಾಗಿ ನಮಗಾಗಲೇ ಗಾಂಧಿ ನಮ್ಮವರೆಂಬ ಭಾವನೆ ಮನಸ್ಸಿನಲ್ಲಿ ಮೂಡಿತ್ತು. ನನ್ನ ನಾಲ್ಕರ ಹರೆಯದ ಪುಟ್ಟ ಮಗಳು ಶಹೀಮಾಳಿಗೂ ಇದೇ ಹಾಡನ್ನು ಹಾಡಿಸುತ್ತೇನೆ. ಅಂದಿನ ದಿನಗಳಲ್ಲಿ ತರಗತಿಯಲ್ಲಿ ಗಾಂಧಿ ಖಾದಿ ಬಟ್ಟೆಯನ್ನು ಯಾಕೆ ತೊಡುತ್ತಿದ್ದರು ಗೊತ್ತಾ? ಎಂದು ಟೀಚರ್ ಪ್ರಶ್ನೆಯನ್ನು ಕೇಳುತ್ತಿದ್ದರು. ಇಲ್ಲವೆಂದಾಗ, ಅವರು ಅದಕ್ಕೆ ನೀಡುತ್ತಿದ್ದ ಉತ್ತರವೂ ಅಷ್ಟೇ ಪರಿಣಾಮಕಾರಿಯಾಗಿರುತ್ತಿತ್ತು. ಬೆಂಚಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತಿರುವ ಗೆಳತಿಯರನ್ನು ತೋರಿಸಿ, ಅವಳ ಬಟ್ಟೆಯನ್ನು ನೀನು ತೊಡಲು ಇಷ್ಟ ಪಡುತ್ತೀಯಾ? ತೊಡಬಾರದೆಂದಲ್ಲ. ಇಷ್ಟ ಪಡುತ್ತೀಯಾ? ಇಲ್ಲ ತಾನೇ?ಅದೇ ರೀತಿ ಗಾಂಧೀಜಿಯವರು ಬ್ರಿಟಿಷರು ತಯಾರಿಸಿದ ಬಟ್ಟೆಯನ್ನು ತೊಟ್ಟುಕೊಳ್ಳಲು ಇಷ್ಟಪಡದೆ ತಾನೇ ಸ್ವತಃ ಚರಕದಿಂದ ನೂಲನ್ನು ನೇಯ್ದು ಹತ್ತಿ ಬಟ್ಟೆ ತಯಾರಿಸುತ್ತಿದ್ದರು ಹಾಗೂ ಇತರರಿಗೂ ಅದನ್ನೇ ತೊಡಲು ಉತ್ತೇಜಿಸುತ್ತಿದ್ದರು ಎಂದಾಗ ನಾವು ಪುಳಕಗೊಳ್ಳುತ್ತಿದ್ದೆವು. ಇದು ಬ್ರಿಟಿಷರ ವಿರುದ್ಧದ ಹೋರಾಟ ಎಂಬುವುದನ್ನು ಅರ್ಥೈಸಿಕೊಳ್ಳುವಷ್ಟು ಪ್ರಬುದ್ಧತೆ ನಮಗಾಗ ಇರಲಿಲ್ಲ.

ಗಾಂಧೀಜಿಯ ಕುರಿತಾಗಿ ಹಲವಾರು ಹಾಡುಗಳಿದ್ದವು. ನಾನು ಅವರನ್ನು ಅರಿತದ್ದೇ ಹಾಡಿನ ಮೂಲಕ. ‘ಗಾಂಧೀ ತಾತನ ಆಶ್ರಮದಲ್ಲಿ ಇದ್ದವು ಮೂರು ಕೋತಿಗಳು ನೀತಿಯ ಸಾರುವ ಕೋತಿಗಳು….’
ಈ ಹಾಡಿಗೆ ನಮ್ಮ ಟೀಚರು ತರಗತಿಯಲ್ಲಿ ಮೂವರನ್ನು ಕೋತಿಗಳನ್ನಾಗಿ ಮಾಡಿ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಳ್ಳಲು ಹೇಳುತ್ತಿದ್ದರು. ಉಳಿದವರೆಲ್ಲಾ ಸೇರಿ ಹಾಡುತ್ತಾ ಅಭಿನಯಿಸುತ್ತಿದ್ದೆವು. ತನ್ಮೂಲಕ ಕೆಟ್ಟದ್ದನ್ನು ಕೇಳಬಾರದು, ನೋಡಬಾರದು, ಆಡಬಾರದು ಎಂಬ ಗಾಂಧೀಜಿಯವರ ಬೋಧನೆಯನ್ನು ಕಲಿತೆವು.
‘ಪುಟ್ಟ ಕೌಮುದಿ, ಹಿಂದೂಸ್ತಾನಕ್ಕೆ ಹಿಂದಿರುಗಿದುದು’ ಪಾಠಗಳು ಬರಿಯ ಪಾಠವಾಗಿರದೆ ದೇಶಭಕ್ತನೆಂದರೆ ಗಾಂಧೀಜಿ, ಗಾಂಧೀಜಿಯೆಂದರೆ ದೇಶಭಕ್ತ ಎಂಬಷ್ಟು ಗಾಢವಾಗಿ ನಮ್ಮನ್ನಾವರಿಸಿತ್ತು. ಸ್ವಾತಂತ್ರ್ಯ ದಿನಾಚರಣೆ ಬಂತೆಂದರೆ ಸಾಕು, ಅಂದಿನ ಸಮಾರಂಭಕ್ಕೆ ಅತಿಥಿಗಳಾಗಿ ಬರುತ್ತಿದ್ದ ಗಣ್ಯರ ಬಾಯಲ್ಲೂ ಗಾಂಧೀಜಿ,ಮಕ್ಕಳ ಭಾಷಣದಲ್ಲೂ ಗಾಂಧೀಜಿ. ದೇಶ ಭಕ್ತಿ ಗೀತೆಯಲ್ಲೂ ಗಾಂಧೀಜಿ.
‘ಇದು ಬಾಪೂಜಿ ಬೆಳಗಿದ ಭಾರತ…’
ಹಾಗೆಯೇ ‘ಕಾಥೇವಾಡದ ಪೋರ ಬಂದರಿನಲ್ಲಿ ಜನಿಸಿದರು
ಮೋಹನ ದಾಸ ಕರಮ ಚಂದ ಗಾಂಧಿ ಎಂಬವರು…..’
ಈ ಹಾಡಿನ ಕೊನೆಯಲ್ಲಿ
‘ಜನವರಿ ತಿಂಗಳ ಮೂವತ್ತರಂದು
ಇಹವನು ತ್ಯಜಿಸಿದರು
ನಾಥೂರಾಮನ ಗುಂಡಿಗೆ ಸಿಲುಕಿ
ಜಾಗವ ಎದೆಯಲ್ಲಿ’ ಎಂಬ ಸಾಲುಗಳಿದ್ದವು. ನಮಗೆ ಅದಾಗಲೇ ಗೋಡ್ಸೆಯ ಬಗ್ಗೆ ಮನದಲ್ಲಿ ಅಸಹನೆ ಮೂಡಲಾರಂಭಿಸಿತ್ತು. ಆಶ್ಚರ್ಯವೆಂದರೆ ನಮಗೆ ಇದನ್ನೆಲ್ಲಾ ಕಲಿಸಿದ ಟೀಚರ್ ಬ್ರಾಹ್ಮಣರಾಗಿದ್ದರು. ಅವರು ಯಾವತ್ತೂ ನಮಗೆ ಗಾಂಧೀಜಿಯ ಚಿತ್ರಣವನ್ನು ಕೆಟ್ಟದಾಗಿ ಚಿತ್ರಿಸಿ ಕೊಡಲಿಲ್ಲ. ಅವರೆಂದರೆ ‘ಮಹಾತ್ಮ’ ಅದರಾಚೆಗೆ ಅನ್ಯ ಕಲ್ಪನೆಗಳಿರಲಿಲ್ಲ.

ಆ ಸುಂದರ ದಿನಗಳನ್ನು ಕೇಸರೀಕರಣವು ಅದೆಷ್ಟು ಬೇಗ ಧ್ವಂಸಗೊಳಿಸಿತೆಂದರೆ ನಾ ಕಲಿತ ಹಾಡುಗಳು ಈಗ ಯಾರ ಬಾಯಲ್ಲೂ ಕೇಳಸಿಗುವುದಿಲ್ಲ. ಶಾಲೆಯಲ್ಲಿ ಶಿಕ್ಷಕರೂ ಕೂಡಾ ಗಾಂಧೀಜಿಯ ತತ್ವಾದರ್ಶಗಳನ್ನು ಬೋಧಿಸುವ ಗೋಜಿಗೇ ಹೋಗುವುದಿಲ್ಲ. ಈಗಿನ ಮಕ್ಕಳು ಗಾಂಧೀಜಿಯ ಬಗ್ಗೆ ಬಹಳ ತುಚ್ಛವಾಗಿ ಮಾತಾಡುವಷ್ಟರ ಮಟ್ಟಿಗೆ ಅವರ ಮೆದುಳು ತೊಳೆಯಲಾಗುತ್ತಿದೆ. ಎರಡು ವರುಷಗಳ ಹಿಂದೆ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬ್ರಾಹ್ಮಣ ಹುಡುಗನೊಬ್ಬ ನನ್ನ ಬಳಿ ಟ್ಯೂಷನ್‌ಗಾಗಿ ಬರುತ್ತಿದ್ದ. ಪ್ರತಿಯೊಂದು ವಿಚಾರಗಳನ್ನು ಪ್ರಶ್ನಿಸುವ ಗುಣ ಆತನಲ್ಲಿತ್ತು. ಇದನ್ನು ಗಮನಿಸಿದ ನಾನು “ನೀನು ವಿಚಾರವಾದಿಯಾಗುತ್ತಿ” ಎಂದಾಗ ಥಟ್ಟನೆ “ವಿಚಾರವಾದಿಯಾಗುವುದಿಲ್ಲ” ಎಂದ. ಆತನ ಪ್ರತಿಕ್ರಿಯೆಗೆ ನಾನು ಅವಾಕ್ಕಾದೆ. ವಿಚಾರವಾದಿ ಎಂದರೆ ಏನೆಂದು ನನ್ನನ್ನು ಆತ ಪ್ರಶ್ನಿಸಬಹುದು ಎಂಬ ಊಹೆ ಸುಳ್ಳಾಗಿತ್ತು. ಆತನ ವಯಸ್ಸಿನಲ್ಲಿ ನನಗೆ ವಿಚಾರವಾದಿ ಅಂದ್ರೆ ಏನೆಂದು ತಿಳಿಯುವುದು ಬಿಡಿ, ಆ ಪದವೇ ಗೊತ್ತಿರಲಿಲ್ಲ. ವ್ಯವಸ್ಥಿತವಾಗಿ ಎಳೆ ಮನಸ್ಸಿನೊಳಗೆ ಇದೆಲ್ಲವನ್ನೂ ತುಂಬಿಕೊಡಲಾಗುತ್ತದೆ. ಹೀಗೆ ಒಂದು ದಿನ ಆತ ನನ್ನಲ್ಲಿ ಕೆಲವೊಂದು ಆಘಾತಕಾರಿ ವಿಷಯಗಳನ್ನು ಮಾತಾಡಿದ. “ಅಕ್ಕ, ಗಾಧೀಜಿ ಒಳ್ಳೆಯವರೇ? ಕೆಟ್ಟವರೇ? “ಒಳ್ಳೆಯವರು” ಎಂದೆ. ಇಲ್ಲ, “ಕೆಟ್ಟವರು” ಎಂದ. ಆತ ಯಾತಕ್ಕಾಗಿ ಈ ರೀತಿ ಹೇಳುತ್ತಿದ್ದಾನೆಂದು ತಿಳಿಯಲು ಪ್ರಯತ್ನಿಸಿದೆ. ಚಿನ್ನ ಧರಿಸಬಾರದು ಎಂಬುದಾಗಿ ಗಾಂಧೀಜಿ ಹೇಳಿದ್ದಾರೆಂಬುದು ನಾನು ಆತನಿಂದ ಪಡೆದ ಉತ್ತರವಾಗಿತ್ತು. ನಾನು, ನೀನು ಚಿನ್ನ ಧರಿಸುತ್ತಿಲ್ಲವೇ? ಹಾಗಿದ್ದರೆ ಅವರ್ಯಾಕೆ ನಿನಕೆ ಕೆಟ್ಟವರಾಗಿ ಕಾಣುತ್ತಾರೆ ಎಂದೆ. ಅವರನ್ನೇ ಏಕೆ ರಾಷ್ಟ್ರಪಿತನೆನ್ನಬೇಕು? ಬೇರೆ ಯಾರೂ ಇಲ್ಲವೇ? ಆತ ಮರುಪ್ರಶ್ನೆ ಹಾಕಿದ. ನಿನ್ನ ಪ್ರಕಾರ ಯಾರಾಗಬೇಕಿತ್ತು ಎಂದಾಗ ಮೌನವಾದ. ಸ್ವಲ್ಪ ಹೊತ್ತು ಕಳೆದು ” ಅವರು ಕೂಡಾ ಕೊಲೆ ಮಾಡಿದ್ದಾರೆ” ಎಂದ. ಇದನ್ನು ಕೇಳಿಸಿಕೊಂಡ ನನಗೆ ಸಿಟ್ಟು ತಡೆಯಲಾಗಲಿಲ್ಲ. ಗಾಂಧಿ ಕೊಲೆಗಾರನಲ್ಲ, ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆ ಕೊಲೆಗಾರ. ಆತನೊಬ್ಬ ದೇಶದ್ರೋಹಿ.ನಿನ್ನ ಪ್ರಕಾರ ಆತ ರಾಷ್ಟ್ರಪಿತನಾಗಬೇಕಿತ್ತು ತಾನೆ? ಎಂದು ಖಾರವಾಗಿಯೇ ಕೇಳಿದೆ. ಅಲ್ಲಿಂದ ಮುಂದೆ ಆತನಿಗೆ ಒಂದೊಂದೇ ವಿಚಾರಗಳನ್ನು ಸಾವಧಾನವಾಗಿ ಮನವರಿಕೆ ಮಾಡುತ್ತಾ ಬಂದೆ. ಇದನ್ನರಿತ ಆತನ ಹೆತ್ತವರು ನನ್ನ ಬಳಿ ಟ್ಯೂಷನ್ ಕೊಡಿಸುವುದನ್ನು ನಿಲ್ಲಿಸಿಯೇ ಬಿಟ್ಟರು. ಸತ್ಯವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುವುದು ಬಹುದೊಡ್ಡ ಸವಾಲೇ ಸರಿ. ಹಾಗಾಗಿ ಗಾಂಧೀಜಿಯವರ ಆತ್ಮಕಥೆಯಾದ ‘ನನ್ನ ಸತ್ಯಾನ್ವೇಶಣೆ’ಯನ್ನು ಎಲ್ಲಾ ಹೆತ್ತವರು ಓದಲೇಬೇಕು, ಮಕ್ಕಳಿಗೂ ಓದಿಸಬೇಕು. ಮಹಾತ್ಮಾ ಗಾಂಧಿಯ ಬಗ್ಗೆ ನೂರು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವರು ರಾಷ್ಟ್ರಪಿತನೆಂಬುದನ್ನು ಅಲ್ಲಗಳೆಯುವಂತೆಯೇ ಇಲ್ಲ. ಗಾಂಧಿಗೆ ಪರ್ಯಾಯವಾಗಿ ಇನ್ನೊಬ್ಬ ಗಾಂಧಿ ಹುಟ್ಟಲು ಸಾಧ್ಯವೇ ಇಲ್ಲ.