
– ರಾ ಚಿಂತನ್
ಕರುನಾಡಿನ ಜೀವನದಿ ಉಗಮಸ್ಥಾನ ಕರ್ನಾಟಕದ ಕೊಡಗು ಜಿಲ್ಲೆ. ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ, ಸಮುದ್ರಮಟ್ಟಕ್ಕಿಂತಲೂ 1341 ಮೀಟರ್ಗಳಷ್ಟು ಎತ್ತರದಲ್ಲಿರುವ ತಲಕಾವೇರಿ ಕಾವೇರಿಯ ಉಗಮ ಸ್ಥಾನ.
ಇಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿ ಸಮುದ್ರ ಸೇರುತ್ತಾಳೆ. ಸುಮಾರು 802 ಕಿಲೋಮೀಟರ್ಗಳಷ್ಟು ಉದ್ದ ಹರಿಯುತ್ತಾಳೆ. ಈ ಸುದೀರ್ಘ ಪಯಣದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳಲ್ಲೂ ಕಾವೇರಿ ಹರಿಯುತ್ತಾಳೆ. ಆದ್ದರಿಂದಲೇ ದೇಶದ ಹಲವಾರು ನದಿಗಳಂತೆ ಕಾವೇರಿಗೂ ಅಂತರಾಜ್ಯ ನದಿಯೆಂಬ ಪಟ್ಟ ಸಿಕ್ಕಿದೆ. 802 ಕಿಲೋಮೀಟರ್ಗಳ ಉದ್ದದ ಹರಿವಿನಲ್ಲಿ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಕಾವೇರಿ ಕರ್ನಾಟಕದಲ್ಲೇ 381 ಕಿಲೋಮೀಟರ್ನಷ್ಟು ದೂರ ಹರಿಯುತ್ತಾಳೆ.
ತಮಿಳುನಾಡು, ಕೇರಳ ಪಾಂಡಿಚೆರಿಯಲ್ಲಿ 357 ಕಿಲೋಮೀಟರ್ವರೆಗೆ ಹರಿದು ಬಂಗಾಳಕೊಲ್ಲಿಯಲ್ಲಿ ವಿಲೀನವಾಗುತ್ತಾಳೆ. ಹಾಗೇ ಕರ್ನಾಟಕದ ಕೊಡಗಿನಿಂದ ಉದ್ಭವವಾಗಿ ತಮಿಳುನಾಡಿನ ಬಂಗಾಳ ಕೊಲ್ಲಿಯಲ್ಲಿ ಸೇರುವ ಕಾವೇರಿ ದಕ್ಷಿಣ ಭಾರತದ ಜೀವನದಿ ಎನಿಸಿದ್ದಾಳೆ. ಆಕೆ ಕರ್ನಾಟಕದಲ್ಲಿ ಹಲವು ಉಪನದಿಗಳನ್ನು ಸೇರಿಕೊಂಡು ಹಲವು ಹೆಸರಿನಲ್ಲಿ ಹರಿದು ಗಗನಚುಕ್ಕಿ ಭರಚುಕ್ಕಿ ಜಲಪಾತಗಳ ಸೃಷ್ಠಿಗೆ ಕಾರಣವಾಗುತ್ತಾಳೆ. ಮುಂದೆ ಶಿಂಷಾ ಜಲವಿದ್ಯುತ್ ಸ್ಥಾವರದಿಂದ ಮುಂದುವರೆದು ಕಾವೇರಿಯ ಎರಡು ಕವಲುಗಳು ಮತ್ತೆ ಒಂದಾಗಿ ಮುಂದುವರೆಯುತ್ತದೆ.
ಇದಾದ ಮೇಲೆ ಕಾವೇರಿ ಮೇಕೆದಾಟುವಿನೆಡೆಗೆ ಹರಿಯುತ್ತದೆ. ಈ ಸಂಗಮದ ವಿಷಯದಲ್ಲಿ ತಮಿಳುನಾಡು ಸರ್ಕಾರ ಖ್ಯಾತೆ ತೆಗೆಯುತ್ತಲೇ ಬಂದಿದೆ. ಅಲ್ಲಿ ಕಾವೇರಿ ಮತ್ತೊಂದು ಉಪನದಿ ಅರ್ಕಾವತಿ ಸೇರಿಕೊಳ್ಳುತ್ತದೆ. ಮೇಕೆದಾಟುವಿನ ಬಳಿ ಕಾವೇರಿಯ ಹರಿವು ಸಣ್ಣಸಣ್ಣ ಕವಲುಗಳಾಗಿದ್ದರಿಂದ ಹಿಂದೆ ಮೇಕೆಯೊಂದು ಈ ನದಿಯನ್ನು ಹಾರಿ ಹಾರಿ ದಾಟಿತೆಂಬ ಪ್ರತೀತಿ ಇದೆ. ಹಾಗಾಗಿ ಈ ಪ್ರದೇಶಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಮೇಕೆದಾಟುವಿನಿಂದ ಮುಂದುವರೆಯುವ ಕಾವೇರಿ ತಮಿಳುನಾಡನ್ನು ಪ್ರವೇಶಿಸುತ್ತಾಳೆ. ಇಲ್ಲಿಂದ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ 64 ಕಿಲೋಮೀಟರ್ಗಳಷ್ಟು ದೂರ ಕರ್ನಾಟಕ ಮತ್ತು ತಮಿಳುನಾಡಿನ ರಮ್ಯ ಮನೋಹರ ಸುಂದರ ನೈಸರ್ಗಿಕ ಗಡಿಯಾಗಿ ಮುಂದುವರೆಯುತ್ತದೆ. ಈ ನಡುವೆ ಉಡುತೊರೆ ಎಂಬ ಹಳ್ಳವು ಕಾವೇರಿ ನದಿಯನ್ನು ಸೇರಿಕೊಳ್ಳುತ್ತದೆ. ಅಲ್ಲಿಂದ ತಮಿಳುನಾಡು-ಕರ್ನಾಟಕ ಎರಡೂ ರಾಜ್ಯಗಳು ಸೇರುವ ಹೊಗೇನಕಲ್ನಲ್ಲಿ ಸಣ್ಣಪುಟ್ಟ ಜಲಪಾತಗಳನ್ನು ನಿರ್ಮಿಸಿಕೊಂಡು ಮುಂದೆ ಸಾಗುತ್ತಾಳೆ.
ಕಾವೇರಿಯು ಕರ್ನಾಟಕದಲ್ಲಿ 381 ಕಿ/ಮೀ ದೂರ ಹರಿದು ತನ್ನ ಉಪನದಿಗಳ ನೆರವಿನಿಂದ ಸಂಗ್ರಹಿಸುವ ನೀರಿನ ಹರಿವಿನಿಂದ ಒಟ್ಟಾರೆ ನೀರಿನ ಪ್ರಮಾಣದ ಶೇಕಡಾ 53ರಷ್ಟು ಪ್ರಮಾಣವು ಕರ್ನಾಟಕದ ಕೊಡುಗೆಯಾಗಿದೆ. ಆದರೆ ತಮಿಳುನಾಡು ಮಾತ್ರ ಕಾವೇರಿ ತನ್ನದೇ ಎಂಬಂತೆ ವರ್ತಿಸುತ್ತಿದೆ. ಕಾವೇರಿ ಹುಟ್ಟಿನಿಂದ ಮೇಕೆದಾಟು, ಹೊಗೇನಕಲ್ ವರೆಗೆ ಒಂದಲ್ಲ ಒಂದು ವಿಷಯಕ್ಕೆ ಅಡ್ಡಗಾಲು ಹಾಕುತ್ತಲೇ ಇದೆ.
ಕಾವೇರಿ ತಾಯಿ ಹುಟ್ಟಿ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲಿ ಹರಿಯುತ್ತಿದ್ದರು ಆಕೆ ನಮ್ಮ ಪಾಲಿಗೆ ಸಿಗಲು ಗುದ್ದಾಡಬೇಕು, ಅಂಗಲಾಚಬೇಕು, ಕೋರ್ಟ್ ಕಚೇರಿ ಅಲೆದಾಡಬೇಕು. ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ಕರ್ನಾಟಕ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸಲು ಹೊರಟಿರುವುದೇ ಈ ವಿವಾದಕ್ಕೆ ಕಾರಣ. ಕಾವೇರಿ ಕೊಳ್ಳದಲ್ಲಿ ಕಾಮಗಾರಿ ಕೈಗೊಂಡು ಕರ್ನಾಟಕ ಕಾವೇರಿ `ಐ’ ತೀರ್ಪನ್ನು ಉಲ್ಲಂಘಿಸುತ್ತಿದೆ ಎನ್ನುವುದು ತಮಿಳುನಾಡಿನ ಖ್ಯಾತೆ. ಆದರೆ ಕರ್ನಾಟಕ ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದಿದೆ. ಆದರೆ ತಮಿಳುನಾಡು ಮಾತ್ರ ಒಪ್ಪಲು ತಯಾರಿಲ್ಲ.
2013ರ ಸೆಪ್ಟೆಂಬರ್ನಲ್ಲಿ ಕರ್ನಾಟಕ ಸರ್ಕಾರ ಮೊದಲು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರಕ್ಕೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ ತಮಿಳುನಾಡು ಸರ್ಕಾರ ಇದಕ್ಕೆ ಬಿಲ್ಕುಲ್ ಒಪ್ಪುತ್ತಿಲ್ಲ.
ಮೇಕೆದಾಟುವಿನಲ್ಲಿ 22 ಕಡೆ ಅಣೆಕಟ್ಟು ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ಸುಮಾರು 48 ಟಿಎಂಸಿ ನೀರು ಸಂಗ್ರಹಣೆ ಮಾಡಬಹುದಾಗಿದೆ. ಕರ್ನಾಟಕವಿನ್ನೂ ಯೋಜನೆ ಪ್ರಸ್ತಾವನೆ ಮುಂದಿಟ್ಟು, ಯೋಜನಾ ವರದಿ ತಯಾರಿಸಿ ಕೇಂದ್ರ ಜಲಮಂಡಳಿ ಯೋಜನಾ ಸಮಿತಿಗೆ ಕಳುಹಿಸಿ ಕೊಟ್ಟು ಅಲ್ಲಿ ಒಪ್ಪಿಗೆ ಸಿಕ್ಕನಂತರ ಯೋಜನೆ ಆರಂಭವಾಗಬೇಕಿತ್ತು. ಸಮಿತಿಯ ಒಪ್ಪಿಗೆಯ ನಂತರವೂ ತಮಿಳುನಾಡು ನಕರಾ ಮಾಡುತ್ತಿದೆ.
2013ರ ಸೆಪ್ಟೆಂಬರ್ನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೇಕೆದಾಟುವಿನ ಈ ಯೋಜನೆಗೆ ವಿರೋಧವ್ಯಕ್ತಪಡಿಸಿದ್ದರು. ಕಾವೇರಿ ಜಲಾನಯನದ ಪ್ರದೇಶದಲ್ಲಿ ಅಣೆಕಟ್ಟು ಕಟ್ಟುವ ಮೂಲಕ ಕಾವೇರಿ `ಐ’ ತೀರ್ಪನ್ನು ಉಲ್ಲಂಘಿಸುತ್ತಿದೆ, ಇದಕ್ಕೆ ಅವಕಾಶ ನೀಡಬಾರದೆಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ಗೆ ಪತ್ರ ಬರೆದಿದ್ದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಎರಡೂ ರಾಜ್ಯಗಳ ಅನುಮತಿ ಪಡೆಯಬೇಕು. ಆದರೆ ಕರ್ನಾಟಕ ತಮಿಳುನಾಡಿಗೆ ಯಾವುದೇ ಮಾಹಿತಿ ನೀಡದೆ ಮೇಕೆದಾಟು ಯೋಜನೆ ಆರಂಭಿಸಲು ಮುಂದಾಗಿದೆ ಎನ್ನುವುದು ತಮಿಳುನಾಡು ದೂರು.
ಮೇಕೆದಾಟು ಯೋಜನೆ ಬಗ್ಗೆ 2014ರ ಏಪ್ರಿಲ್ನಲ್ಲಿ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ 13 ಹಾಗೂ ಷೆಡ್ಯೂಲ್ 9ರಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಪ್ರತಿತಿಂಗಳು ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಕಾವೇರಿ `ಐ’ ತೀರ್ಪಿನಲ್ಲಿ ತಿಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಹರಿದುಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ ಯೋಜನೆಗೆ ಬಳಸಿಕೊಳ್ಳುವುದು ಕರ್ನಾಟಕದ ಉದ್ದೇಶ.
ಕರ್ನಾಟಕದ ಈ ಯೋಜನೆಯಿಂದ ಕಾವೇರಿ ತೀರ್ಪಿನ ಉಲ್ಲಂಘನೆ ಯಾವುದೇ ರೀತಿಯಲ್ಲಿ ಆಗುವುದಿಲ್ಲ. ಸುಪ್ರಿಂಕೋರ್ಟ್ ನಲ್ಲೂ ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಪರವಾಗಿ ವಾದ ಮಂಡಿಸಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ಈ ಯೋಜನೆಯನ್ನು ತಡೆಯಲು ತುದಿಗಾಲಲ್ಲಿ ನಿಂತಿದೆ. ಕಾವೇರಿ ನದಿಗೆ ಕರ್ನಾಟಕ ಅಡ್ಡಲಾಗಿ ಅಣೆಕಟ್ಟೆ ಕಟ್ಟಲು ಹಾಕಿಕೊಂಡಿರುವ ಯೋಜನೆ ಅಕ್ರಮ ಎನ್ನುತ್ತಿದೆ.
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸ್ಥಾಪಿಸಲಾಗಿದ್ದ ನ್ಯಾಯಮಂಡಳಿಯು 2007ರ ಫೆಬ್ರವರಿ 5ರಂದು ನೀಡಿರುವ ಅಂತಿಮ ತೀರ್ಪಿನ ಅನ್ವಯ, ಎರಡೂ ರಾಜ್ಯಗಳಿಗೆ ಗಡಿಯಾಗಿರುವ ಬಿಳಿಗುಂಡ್ಲುವಿನಿಂದ ಕರ್ನಾಟಕವು ಪ್ರತಿ ವರ್ಷ 192ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ನಿಗದಿತ ಪ್ರಮಾಣದ ನೀರು ಬಿಟ್ಟ ನಂತರವೂ ಉಳಿಯುವ ಹೆಚ್ಚುವರಿ ನೀರನ್ನು ಕುಡಿಯುವ ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶವಿದೆ. ನ್ಯಾಯ ಮಂಡಳಿ ಕೂಡ ತನ್ನ ತೀರ್ಪಿನಲ್ಲಿ ಇದೇ ಅಭಿಪ್ರಾಯವ್ಯಕ್ತಪಡಿಸಿದೆ. ಹಾಗಾಗಿ ಕಾವೇರಿ ಕಣಿವೆಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಸಲು ಕರ್ನಾಟಕ ಯಾರನ್ನೂ ಕೇಳುವ ಅವಶ್ಯಕತೆ ಇಲ್ಲ.
ರಾಜ್ಯದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣವನ್ನು 1990ರಿಂದಲೂ ನಾಲ್ಕು ವರ್ಷ ಬಿಟ್ಟು ಉಳಿದೆಲ್ಲ ವರ್ಷಗಳಲ್ಲೂ 192 ಟಿಎಂಸಿ ಅಡಿಗಿಂತ ಹೆಚ್ಚೇ ನೀರನ್ನು ಬಿಡಲಾಗಿತ್ತು. ವಾಸ್ತವವಾಗಿ ಶಿವನಸಮುದ್ರ ನಂತರ ಕಾವೇರಿ ಕಣಿವೆಯಲ್ಲಿ 192 ಟಿಎಂಸಿ ಅಡಿಗಿಂತ ಹೆಚ್ಚು ನೀರು ಹರಿಯುತ್ತದೆ. ಆ ನೀರು ನಮ್ಮದಲ್ಲವೇ ಎನ್ನುವುದು ಕರ್ನಾಟಕದ ವಾದ.
ಸರಾಸರಿ 60-70 ಟಿಎಂಸಿ ಅಡಿ ನೀರು ಸಮುದ್ರ ಸೇರುತ್ತದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಟ್ಟು ವೃಥಾ ಪೋಲಾಗುವ ಉಳಿಕೆ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಿ ಕುಡಿಯುವ ನೀರಿಗೂ, ವಿದ್ಯುತ್ ಉತ್ಪಾದನೆಗೂ ಬಳಸುವುದು ಯೋಜನೆಯ ಉದ್ದೇಶ. ಈ ಪ್ರಕ್ರಿಯೆಯಿಂದ ಅಂದಾಜು 45ರಿಂದ 50 ಟಿಎಂಸಿ ಅಡಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಸುಮಾರು 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನೂ ಮಾಡಬಹುದು. ಅಸಲಿಗೆ 2007ರಲ್ಲಿ ನ್ಯಾಯಮಂಡಳಿಯ ತೀರ್ಪು ಹೊರಬಿದ್ದಾಗಲೇ ಈ ಯೋಜನೆ ಕೈಗೆತ್ತಿಕೊಳ್ಳಬೇಕಿತ್ತು.
ಮೇಕೆದಾಟು ಕರ್ನಾಟಕಕ್ಕೆ ಸೇರಿದ್ದು. ಅಲ್ಲಿ ಹರಿಯುವ ನೀರೂ ರಾಜ್ಯದ್ದೇ. ಹಾಗಾಗಿ ಯೋಜನೆಗೆ ಕಾನೂನಿನ ತೊಡಕಿಲ್ಲ, ನಿಶ್ಚಿಂತೆಯಿಂದ ಯೋಜನೆ ಆರಂಭಿಸಬಹುದೆಂದು ಅಂದೇ ಕರ್ನಾಟಕ ಪರ ವಕೀಲರಾದ ಎಫ್.ಎಸ್. ನಾರಿಮನ್ ಸಲಹೆ ನೀಡಿದ್ದರು. ಈ ಯೋಜನೆಯಿಂದ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡಿಗೂ ಪ್ರಯೋಜನವಿದೆ. ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಕಾಲಕ್ಕೆ ತಕ್ಕಂತೆ ನೆರೆಯ ರಾಜ್ಯಕ್ಕೆ ಬಿಡಬಹುದು. ಒಂದು ವೇಳೆ ನಾವು ಜಲವಿದ್ಯುತ್ ಯೋಜನೆ ಕೈಗೆತ್ತಿಕೊಂಡರೆ ವಿದ್ಯುತ್ ಉತ್ಪಾದನೆ ನಂತರದ ನೀರು ಸಹಜವಾಗಿ ತಮಿಳುನಾಡಿಗೆ ಹರಿಯುತ್ತದೆ. ಹಾಗಾಗಿ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ತಮಿಳುನಾಡು ಖ್ಯಾತೆ ತೆಗೆಯುವುದನ್ನೇ ಚಾಳಿಯನ್ನಾಗಿಸಿಕೊಂಡಿದೆ. ಈ ಯೋಜನೆಯಿಂದ ತನ್ನ ಹಿತಾಸಕ್ತಿಗೇನು ಧಕ್ಕೆ ಇಲ್ಲ ಎಂಬುದು ಗೊತ್ತಿದ್ದರೂ ಅದು ವಿರೋಧಿಸುತ್ತಿರುವುದು ದುರಾದೃಷ್ಟಕರ. ಬ್ರಿಟೀಷರ ಕಾಲದಿಂದಲೂ ತಮಿಳುನಾಡು ಕಾವೇರಿ ವಿಚಾರದಲ್ಲಿ ತಕರಾರು ತೆಗೆಯುತ್ತಿದೆ. ತನಗೆ ನೀರಿಲ್ಲ ರೈತರಿಗೆ ಕಷ್ಟವಾಗುತ್ತಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಲೇ ಇದೆ. ಆದರೆ ಅಲ್ಲಿನ ರೈತರು ವರ್ಷಕ್ಕೆ ಎರಡರಿಂದ ಮೂರು ಬೆಳೆ ಬೆಳೆಯುತ್ತಾರೆ. ಅವರಲ್ಲಿ ಸಾಕಷ್ಟು ನೀರು ಇಲ್ಲದೇ ಹೋದರೆ ಈ ಪ್ರಮಾಣದಲ್ಲಿ ಕೃಷಿ ಮಾಡಲು ಹೇಗೆ ಸಾಧ್ಯ?
ಸದ್ಯ ಯೋಜನೆಗೆ ಪ್ರಸ್ತಾವನೆ ಮಾತ್ರ ದೊರೆತಿದೆ. ಕೇಂದ್ರ ಜಲ ಆಯೋಗದ ಒಪ್ಪಿಗೆ ದೊರೆಯಬೇಕಿದೆ. ಹಣಕಾಸು ಸೇರಿದಂತೆ ನಮ್ಮ ವಿವಿಧ ಇಲಾಖೆಗಳ ಒಪ್ಪಿಗೆ ಸಿಗಬೇಕಷ್ಟೆ. ಹಾಗಾಗಿ ಹೆಚ್ಚು ಸದ್ದುಗದ್ದಲ ಮಾಡದೇ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾದ ಅವಶ್ಯಕತೆಯಿದೆ. ಈ ಯೋಜನೆ ಜಾರಿಗೊಂಡರೆ ಇದೊಂದು ರಾಜ್ಯದ ಅತ್ಯುತ್ತಮ ಯೋಜನೆಯಾಗಲಿದೆ. ಹೀಗಾಗಿ ಈಗ ಕೇಂದ್ರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಬೃಹತ್ ಪಾದಯಾತ್ರೆಗೆ ರಾಜ್ಯ ಮುಂದಾಗಿದೆ. ಸಾರಥ್ಯ ಕಾಂಗ್ರೆಸ್ ವಹಿಸಿಕೊಂಡಿದೆ.