ಬ್ಲೂ ಫ್ಲಾಗ್ ತೆರೆದಿಟ್ಟ ಅಸಹಿಷ್ಣುತೆ

ಬರಹ : ಸುಮಯ್ಯಾ ಅಥಾವುಲ್ಲಾ

ಜಾತಿ-ಧರ್ಮದ ಜೇಡರ ಬಲೆಯಲ್ಲಿ ಸಿಲುಕಿರುವ ದಕ್ಷಿಣ ಕನ್ನಡದ ಸಮುದ್ರದಲೆಗಳ ರೋದನೆ ದಿನೇದಿನೇ ಹೆಚ್ಚುತ್ತಲಿವೆ. ಇತ್ತೀಚಿಗೆ ಪಡುಬಿದ್ರಿ ಬೀಚ್ ನಲ್ಲಿ ನಡೆದ ಘಟನೆ ಈ ಪಟ್ಟಿಗೆ ಹೊಸ ಸೇರ್ಪಡೆ. ಕಾನೂನು ಉಲ್ಲಂಘನೆಯ (ಸಮುದ್ರ ಕಿನಾರೆಯಲ್ಲಿ ನಮಾಜ್ ನಿರ್ವಹಿ ನಿರ್ವಹಿಸುವುದು)ಹೆಸರಿನಲ್ಲಿ ಮುಸ್ಲಿಂ ಕುಟುಂಬವನ್ನು ಅಲ್ಲಿನ ಅಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅರಿವಿಲ್ಲದೆ ನಡೆದ ಘಟನೆ ಸಂವಾದದ ಮುಖಾಂತರ ಅದೇ ದಿನ ಕೊನೆಗೊಂಡಿತು. ಆದರೆ ಆಯಾಸವಿಲ್ಲದೆ ಕಾರ್ಯಪ್ರವೃತ್ತಿಯಲ್ಲಿರುವ ಸಾಮಾಜಿಕ ಜಾಲತಾಣವೆಂಬ ಮಾರುಕಟ್ಟೆ,ನಡೆದ ಘಟನೆಗೆ ಕೋಮು ಬಣ್ಣ ಹಚ್ಚಿ, ವಾರವಿಡೀ ವ್ಯಾಪಾರ ನಡೆಸಿತು.

ಏನಿದು ಬ್ಲೂ ಫ್ಲಾಗ್ ಮಾನ್ಯತೆ ? ಹಾಗಿದ್ದರೆ ಸಮುದ್ರಕಿನಾರೆಯಲ್ಲಿ ನಡೆಸುತ್ತಿದ್ದ ಪೂಜೆ ವಿಧಿ ವಿಧಾನಗಳನ್ನು ಇನ್ನು ಮುಂದೆ ನಡೆಸುವಂತಿಲ್ಲವೇ? ನಮಾಜ್ ನಿರ್ವಹಿಸುವುದಕ್ಕೆ ಮತ್ತು ಬ್ಲೂ ಫ್ಲಾಗ್ ಮಧ್ಯೆ ಇರುವ ಸಂಬಂಧವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಮನದಲ್ಲಿ ಮೂಡುತ್ತದೆ. ಪಡುಬಿದ್ರೆಯಲ್ಲಿ ನಡೆದ ಘಟನೆಯ ನಂತರ ಇವೆಲ್ಲಕ್ಕೂ ಉತ್ತರ ಹುಡುಕುವುದು ಇನ್ನೂ ಅವಶ್ಯಕವೆನಿಸಿದೆ.

ಬ್ಲೂ ಫ್ಲಾಗ್ ಮಾನ್ಯತೆಯ ಕುರಿತು ಒಂದಿಷ್ಟು

ಪರಿಶುದ್ಧ ನೀರು, ಶುದ್ಧ ಕರಾವಳಿ ಮತ್ತು ಸುರಕ್ಷತೆ ಎಂಬ ಧ್ಯೇಯದೊಂದಿಗೆ ಫೌಂಡೇಶನ್ ಫಾರ್ ಎನ್ವರ್ಮೆಂಟ್ ಅಂಡ್ ಎಜುಕೇಶನ್ (ಎಫ್ ಇ ಇ) ಸಂಸ್ಥೆ ಬ್ಲೂ ಫ್ಲಾಗ್ ಪ್ರಶಸ್ತಿಯನ್ನು ನೀಡುತ್ತದೆ. ಶೈಕ್ಷಣಿಕ ಪಾರಿಸಾರಿಕ ಹಾಗೂ ಸುರಕ್ಷಣಾ ನೀತಿಗಳನ್ನು ಹೊಂದಿರುವ ಕರಾವಳಿ ಸಮುದ್ರ ಕಿನಾರೆ ಮತ್ತು ಬೋಟಿಂಗ್ ಆಪರೇಟರ್ ಗಳಿಗೆ ಈ ಮಾನ್ಯತೆಯನ್ನು ನೀಡಲಾಗುತ್ತದೆ. ವಿಶ್ವದಾದ್ಯಂತ ಮಾನ್ಯತೆ ಪಡೆದಿರುವ ಬ್ಲೂ ಫ್ಲಾಗ್ ಪ್ರಶಸ್ತಿಗೆ ಅರ್ಹ ಸ್ಥಳಗಳನ್ನು ಅಂತರಾಷ್ಟ್ರೀಯ ತೀರ್ಪುಗಾರರ ತಂಡ ಆಯ್ಕೆ ಮಾಡುತ್ತದೆ.

2019 ರಲ್ಲಿ ಭಾರತ ತನ್ನ ದೇಶದ 13 ಸ್ಥಳಗಳನ್ನು ಪಟ್ಟಿಮಾಡಿ ತೀರ್ಪುಗಾರರ ತಂಡಕ್ಕೆ ನೀಡಿತ್ತು 2020 ಅಕ್ಟೋಬರ್ ನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಭಾರತದ ಒಟ್ಟು 08 ಬೀಚ್ ಗಳು ಬ್ಲೂ ಫ್ಲಾಗ್ ಮಾನ್ಯತೆಯನ್ನು ಪಡೆಯುವಲ್ಲಿ ಸಫಲವಾಗಿದೆ. ಈಗ ವಿಶ್ವದಲ್ಲೇ ಹೆಚ್ಚು ಬ್ಲೂ ಫ್ಲಾಗ್ ಕೀರ್ತಿಯನ್ನು ಭಾರತ ಪಡೆದಿರುತ್ತದೆ. ಅದರಲ್ಲೂ ಕರ್ನಾಟಕದ ಎರಡು ಬೀಚ್ ಗಳು ಬ್ಲೂ ಫ್ಲಾಗ್ ಮಾನ್ಯತೆಯನ್ನು ಪಡೆದ ಬೀಚ್ ಗಳ ಪಟ್ಟಿಯಲ್ಲಿವೆ. ಹೊನ್ನಾವರದ ಕಾಸರಕೋಡ ಬೀಚ್ ಅದರಲ್ಲೊಂದಾದರೆ ಮತ್ತೊಂದು ಉಡುಪಿಯ ಪಡುಬಿದ್ರಿ ಬೀಚ್.

ಪರಿಸರ ಸಂರಕ್ಷಣೆ ,ಮಾಲಿನ್ಯ ನಿಯಂತ್ರಣ
ಮುಂತಾದ ಶೈಕ್ಷಣಿಕ ಹಾಗೂ ಸುರಕ್ಷಣೆಗೆ ಸಂಬಂಧಪಟ್ಟಂತೆ ತ್ಯಾಜ್ಯವಿಲೇವಾರಿ ಸೌಲಭ್ಯ ಶೌಚಾಲಯ ವ್ಯವಸ್ಥೆ , ಪ್ರಥಮ ಚಿಕಿತ್ಸೆ ಸಲಕರಣೆಗಳ ಹೊಂದುವಿಕೆ, ನೀರು ಇಂತಿಷ್ಟು ಗುಣಮಟ್ಟವನ್ನು ಹೊಂದಿರುವುದು ಮುಂತಾದ 33ಕ್ಕೂ ಅಧಿಕ ಮಾನ ದಂಡಗಳು ಎಫ್ ಇ ಇ ಸಂಸ್ಥೆ ಪಟ್ಟಿಮಾಡುತ್ತದೆ.ಬ್ಲೂ ಫ್ಲಾಗ್ ಮಾನ್ಯತೆಯನ್ನು ಪಡೆದ ಸ್ಥಳ ಯಾವುದಾದರೂ ಕಡ್ಡಾಯ ಮಾನದಂಡಗಳಿಗೆ ವಿರುದ್ಧವಾಗಿ ನಡೆದರೆ ಅಥವಾ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೆ ಬ್ಲೂ ಫ್ಲಾಗ್ ಮಾನ್ಯತೆಯನ್ನು ಹಿಂಪಡೆಯಲಾಗುತ್ತದೆ.

ಧಾರ್ಮಿಕ ಚಟುವಟಿಕೆಗಳಿಗೂ ಬ್ಲೂ ಫ್ಲಾಗ್ ಇರುವ ಕೊಂಡಿ

ಸರಕಾರವು ದೇಶಕ್ಕೆ ಲಭಿಸಿರುವ ಬ್ಲೂ ಫ್ಲ್ಯಾಗ್ ಕೀರ್ತಿಯನ್ನು ಸಂರಕ್ಷಿಸಿಕೊಳ್ಳಲು ಕಾರ್ಯಚಟುವಟಿಕೆಗಳನ್ನು ನಿಬಂಧನೆಗಳನ್ನು ವಿಧಿಸುತ್ತದೆ. ಪಡುಬಿದ್ರಿ ಬೀಚ್ ನಲ್ಲಿ ನಡೆದ ಘಟನೆಯ ಅಧಿಕಾರಿಗಳು ಹೇಳುವ ಮಾತಿನ ಪ್ರಕಾರ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಬಾರದು ಎನ್ನುವುದು ಸರಕಾರದ ಆದೇಶ. ‘ಈ ಬೀಚ್ ಸ್ಥಳದಲ್ಲಿ ಯಾವುದೇ ಪೂಜೆ, ನಮಾಜ್ ಹಾಗೂ ಇನ್ನಿತರ ಧಾರ್ಮಿಕ ಕಾರ್ಯವನ್ನು ವೆಸಗುವಂತಿಲ್ಲ ‘ಎನ್ನುವ ಬೋರ್ಡ್ ಕೂಡ ಪಡುಬಿದ್ರೆ ಬೀಚ್ ನಲ್ಲಿ ಕಾಣಸಿಗುತ್ತದೆ.

ಪೂಜೆ ಪುರಸ್ಕಾರಗಳನ್ನು ನೆರವೇರಿಸುವ ಸಮುದ್ರದ ನೀರಿಗೆ ಹಲವು ಕಸಕಡ್ಡಿಗಳು ಸೇರುವುದರಿಂದ ನೀರು ಕಲುಷಿತಗೊಳ್ಳುತ್ತದೆ ಇದರಿಂದ ಪರಿಸರ ಮಾಲಿನ್ಯ ಉಂಟಾಗಿದ್ದು ಸ್ಲಾಗ್ ಮಾನದಂಡಕ್ಕೆ ಧಕ್ಕೆಯಾಗುತ್ತದೆ ಎಂಬುದು ಅಲ್ಲಗೆಳೆಯುವಂತಿಲ್ಲ.
ಆದರೆ,
ವ್ಯಾಯಾಮ ಮಾಡಿದಂತೆ ಮಾಡಿಮುಗಿಸುವ ನಮಾಜ್ ನಲ್ಲಿ ಪರಿಸರಕ್ಕಾಗುವ ಮಾಲಿನ್ಯ ವಾದರೂ ಏನು! ಸಮುದ್ರಕಿನಾರೆಯಲ್ಲಿ ಜನರು ನಡೆದಾಡಿದಂತೆ ಓಡಾಡಿದಂತೆ ಒಮ್ಮೆ ಕುಳಿತು, ಮತ್ತೊಮ್ಮೆ ನಿಂತು ಮಾಡಿ ಮುಗಿಸುವ ಸಂಭಾಷಣೆ (ನಮಾಜ್) ಯಾವ ಲೆಕ್ಕದಲ್ಲಿ ಬ್ಲೂ ಫ್ಲಾಗ್ ಮಾನದಂಡಗಳಿಗೆ ವಿರುದ್ಧ ವಾಗಿದೆ ಎಂಬುದು ಪ್ರಶ್ನಾರ್ಥಕವಾಗಿ ಉಳಿಯುತ್ತದೆ.

ಪಡುಬಿದ್ರೆಯ ಬೀಚ್ ನಲ್ಲಿ ಮುಸ್ಲಿಂ ಕುಟುಂಬ ಮತ್ತು ಅಧಿಕಾರಿಗಳ ಮಧ್ಯೆ ನಡೆದ ವಾದ-ವಿವಾದವನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿ “ಇವರನ್ನು ತಡೆಯದಿದ್ದರೆ ಎಲ್ಲರೂ ಒಂದು ಬಂದು ಶುರು ಹಚ್ಚಿಕೊಳ್ಳುತ್ತಾರೆ (ನಮಾಜ್ ಮಾಡುವುದು )” ಎಂದು ಅದೇ ವಿಡಿಯೋ ಮೂಲಕ ಹೇಳುವಾಗ ಫಲಕದ ಹಿಂದೆ ಇರುವುದು ಧಾರ್ಮಿಕ ಅಸಹಿಷ್ಣುತೆ ಮಾನದಂಡವೇ ಎಂಬ ಭೀತಿ ಕಾಡದಿರುವುದಿಲ್ಲ.

ಗತಿಸ ಹೋದ ಕಾಲದಲ್ಲಿ
ಸಹಿಷ್ಣುತೆ ಸಹಬಾಳ್ವೆಗೆಂದು ಸಾಕ್ಷಿಯಾಗಿದ್ದ ಬುದ್ಧಿವಂತರ ಜಿಲ್ಲೆ ನಂಬಲಸಾಧ್ಯ ರೀತಿಯಲ್ಲಿ ಬದಲಾವಣೆಯಾಗಿದೆ. ತನ್ನ ಮುಸ್ಲಿಂ ಸಹೋದರನ ನಮಾಜಿನ ಸಮಯವಾದರೆ ಆತನಿಗಾಗಿ ಸಹಕರಿಸುತ್ತಿದ್ದ ಹಿಂದೂ ಸಹೋದರ, ಹಿಂದೂ ಸಹೋದರನ ಮನೆಯಲ್ಲಿ ನಡೆಯುವ ಭೂತಕೋಲದಲ್ಲಿ ತನ್ನದೇ ಮನೆಯ ಕಾರ್ಯಕ್ರಮದಂತೆ ಭಾಗಿಯಾಗುತ್ತಿದ್ದ ಮುಸ್ಲಿಂ ಸಹೋದರ ಒಂದಿಬ್ಬರಾದರೂ ಉಳಿದಿರಬಹುದೇ ಎಂಬ ಗಾಡ ಪ್ರಶ್ನೆ ದಕ್ಷಿಣಕನ್ನಡದಲ್ಲಿ ತಲೆದೋರಿದೆ.

ಸರಕಾರವು ತನ್ನ ನಿಬಂಧನೆಗಳನ್ನು ತುಂಬಾ ನಾಜೂಕಾಗಿ ಅಳವಡಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪೂಜೆ ವಿಧಿ-ವಿಧಾನ ಮುಂತಾದ ಯಾವುದೇ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಫಲಕವನ್ನು ಹೊರತುಪಡಿಸಿ, ಸರಕಾರವು ಅತ್ಯಂತ ಸೂಕ್ಷ್ಮವಾಗಿ “ಪರಿಸರಕ್ಕೆ ಮಾಲಿನ್ಯ ವಾಗುವಂತಹ ಯಾವುದೇ ವಿಧಿವಿಧಾನಗಳು ಬ್ಲೂ ಫ್ಲಾಗ್ ನಿಬಂಧನೆಗಳಿಗೆ ವಿರುದ್ಧವಾದ ಚಟುವಟಿಕೆಗಳು ನಡೆಸುವಂತಿಲ್ಲ ಎಂಬ ಫಲಕವನ್ನು ಹಾಕುವುದು ಎಲ್ಲ ರೀತಿಯಿಂದಲೂ ಸರಿದೂಗ ಬಹುದಾದಂತಹ ನಿರ್ಣಯ. ಇಂತಹ ಯುಕ್ತಿ ಪೂರ್ಣ ನಿಬಂಧನೆ ಕೋಮು ಬಣ್ಣ ಹಚ್ಚಲು ಕಾಯುತ್ತಿರುವ ಹಲವಾರು ಹದ್ದುಗಳ ದಾಳಿಯಿಂದ ಕಾಪಾಡಿ ಅನವಶ್ಯಕ ಗೊಂದಲಗಳಿಗೆ ತೆರೆ ಎಳೆಯುತ್ತದೆ .

One thought on “ಬ್ಲೂ ಫ್ಲಾಗ್ ತೆರೆದಿಟ್ಟ ಅಸಹಿಷ್ಣುತೆ

Leave a reply to Fathima Usman Cancel reply