ಮೊಂಬತ್ತಿ ಉರಿಯತ್ತಲೇ ಇದೆ.ಅತ್ಯಾಚಾರ ಹೆಚ್ಚುತ್ತಲೇ ಇದೆ.

ಬರಹ:ಸಿದ್ದೀಕ್ ಜಾರಿಗೆಬೈಲು

ಅಂದು ಭಾರತವು ಮಹಿಳೆಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸುವ ದೇಶವಾಗಿತ್ತು.ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಪಡೆಯುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆಯುತ್ತಿರುವ ಭೀಕರ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು.‌ಭಾರತವು ಆರ್ಥಿಕತೆ ಹಾಗೂ ಬಾಹ್ಯಾಕಾಶ ವಿಜ್ಙಾನದಲ್ಲಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು,ವಿಶ್ವದಲ್ಲಿ ಭಾರತ ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ.

ಹಾಗೆಯೇ ಇನ್ನೊಂದು ವರದಿಯ ಪ್ರಕಾರ ಒಬ್ಬಂಟಿ ಹೆಣ್ಣು ಮಕ್ಕಳ ಪ್ರವಾಸಕ್ಕೆ ಭಾರತ ವಿಶ್ವದಲ್ಲಿ 9ನೇ ಅಪಾಯಕಾರಿ ದೇಶ ಎಂಬುವಷ್ಟರಮಟ್ಟಿಗೆ ಇರುವ ಅನೈತಿಕತೆಯ ಕಾವು ಹೆಚ್ಚಿದೆ. 2012 ನಿರ್ಭಯಾ ಪ್ರಕರಣ, ಹೈದರಾಬಾದ್,ಉನ್ನಾವೋ ಅತ್ಯಚಾರ ಪ್ರಕರಣಗಳು,ರಾಷ್ಟ್ರ ರಾಜಧಾನಿಯಲ್ಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು 2018 ಕಠುವಾದಲ್ಲಿ 8 ವರ್ಷದ ಮಗುವನ್ನು ದೇವಸ್ಥಾನದಲ್ಲಿ ನಿರಂತರ ಅತ್ಯಾಚಾರ & ಕೊಲೆ ಪ್ರಕರಣ ಹೀಗೆ ಭಾರತ ಜಾಗತಿಕ ಮಟ್ಟದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಸದ್ದು ಮಾಡಿದ ಬಳಿಕ, ಬ್ರಿಟನ್‌ ಮತ್ತು ಅಮೆರಿಕ ದೇಶಗಳು ಭಾರತಕ್ಕೆ ಬರುವ ತಮ್ಮ ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಅತಂಕ ವ್ಯಕ್ತಪಡಿಸಿವೆ.

ಇದೀಗ, ಮತ್ತದೇ ವಿಚಾರವಾಗಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ 20 ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕತ್ತನ್ನು ಹಿಸುಕಿ, ನಾಲಗೆ ಕತ್ತರಿಸಿ ಗಂಭೀರವಾಗಿ ಗಾಯಗಳನ್ನು ಮಾಡಿದ ಅಮಾನವೀಯ ಕೃತ್ಯವು ಗಾಂಧೀಜಿ‌ ಕಂಡ ಕನಸಿನ ಭಾರತದಲ್ಲಿ ಹೆಣ್ಣು ಸಮೂಹವನ್ನು ಆತಂಕಕ್ಕೀಡುಮಾಡಿದೆ.

ಇಂತಹ ಘಟನೆಗಳು ಹೊಸತೇನಲ್ಲ. ಪ್ರತೀ ದಿನ ಅದೆಷ್ಟೋ ಪ್ರಕರಣಗಳು ನಡೆಯುತ್ತಿವೆ. ಕೆಲವೊಂದು ಸುದ್ದಿಯಾದರೆ, ಹೆಚ್ಚಿನವು ಸುದ್ದಿಯಾಗುವುದೇ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಪ್ರತೀ 15 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಭಾರತದಲ್ಲಿ ಅತ್ಯಾಚಾರ ನಡೆಯುತ್ತಿದೆ.

ವಿಶ್ವ ಮಗಳ ದಿನ ಆಚರಿಸಿ ಎರಡು ದಿನ ಕಳೆಯುವಷ್ಟರಲ್ಲಿ, ದೇಶಾದ್ಯಂತ ಸುದ್ದಿಯಲ್ಲಿರುವ ಹಥ್ರಾಸ್ ಪ್ರಕರಣದ ಕುರಿತು ಹೇಳುವುದಾದರೆ, ದಲಿತ ಸಮುದಾಯದ ಯುವತಿಯನ್ನು ಸೆಪ್ಟೆಂಬರ್ 14 ರಂದು ನಾಲ್ಕು ಜನ ಕಾಮುಕರು ಅತ್ಯಾಚಾರಗೈದಿದ್ದು, ಯುವತಿಯ ಸಹೋದರ ಕಾನೂನಿನಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರೂ ಯುವತಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಳಿಕವಷ್ಟೇ ಪ್ರಕರಣ ವೈರಲ್ ಆಗುತ್ತದೆ.
ಆರಂಭದಲ್ಲಿ ಪೋಲೀಸ್ ಸಿಬ್ಬಂಧಿಗಳು ನೆರವಿಗೆ ಬರದೇ ನಾಲ್ಕೈದು ದಿನಗಳ ಬಳಿಕ ತನಿಖೆ ಆರಂಭಿಸಿದ್ದು, ಅಲ್ಲದೇ ಶವವನ್ನು ಮೃತಳ ಕುಟುಂಬಕ್ಕೂ ಕಾಣಿಸದೇ, ಅವರ ಅನುಮತಿಯನ್ನೂ‌ ಪಡೆಯದೇ ರಾತ್ರೋರಾತ್ರಿ ಅಂತಿಮ‌ ಸಂಸ್ಕಾರ ಮಾಡಿದ್ದು ರಕ್ಷಣಾ ವ್ಯವಸ್ಥೆಯ ಮೇಲೆಯೇ ಸಂಶಯಾಸ್ಪದ ವರದಿಗಳು ಕಂಡುಬರುತ್ತಿವೆ‌.

ಪೋಲೀಸರು ಹಥ್ರಾಸ್ ಪ್ರದೇಶಕ್ಕೆ ಯಾವುದೇ ಮಾಧ್ಯಮಗಳಿಗೆ ಅವಕಾಶ ಮಾಡಿಕೊಡದೇ, ಹೆತ್ತವರನ್ನು ದಿಗ್ಭಂಧನದಲ್ಲಿರಿಸಿ ಮಾನವ ಸರಪಳಿಯಲ್ಲಿ ಏಕಾಏಕಿ ಅಂತ್ಯ ಸಂಸ್ಕಾರ ಮಾಡಿದ್ದು ರಾಜಕೀಯ ಹುನ್ನಾರವಲ್ಲದೆ, ಮತ್ತಿನ್ನೇನು?
ಯುವತಿಯ ತಂದೆ-ತಾಯಿ, ಕುಟುಂಬಸ್ಥರಿಗೆ ‘ಮಗಳಿಗೆ ಅತ್ಯಾಚಾರವಾಗಿದೆ’ ಎಂಬ ನೋವು‌‌ ಒಂದೆಡೆಯಾದರೆ, ಗೌರವಾನ್ವಿತ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳಿಲ್ಲದೇ ಅತ್ಯಂತ ಹೀನಾಯವಾಗಿ ಪೋಲೀಸರೇ ಅಂತ್ಯ ಕ್ರಿಯೆ ನಡೆಸಿದ್ದು ಇನ್ನಷ್ಟೂ ದುಃಖಕ್ಕೆ ಒಳಪಡಿಸಿದೆ.
ಸಂತ್ರಸ್ಥೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಉಲ್ಲೇಖಿಸಿದೆ.ಹಾಗಾದರೆ ಸಾವಿಗೆ ಕಾರಣ ಏನು ಎಂಬುವುದು ನಿಖರವಾದ ತನಿಖೆಯಿಂದಲೇ ತಿಳಿಯಬೇಕಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಹತ್ರಾಸ್ ಗ್ರಾಮಕ್ಕೆ ದಿಗ್ಬಂಧನ ವಿಧಿಸಲಾಗಿದ್ದು, ಮಾಧ್ಯಮ ಪತ್ರಕರ್ತರು ಮತ್ತು ರಾಜಕಾರಣಿಗಳಿಗೆ ಕುಟುಂಬಸ್ಥರನ್ನು ಸಂಪರ್ಕಿಸುವುದನ್ನು ಸಂಪೂರ್ಣ ತಡೆಹಿಡಿದು ಆತಂಕಕ್ಕೊಳಪಡಿಸಿದ್ದು ಯಾವ ತಪ್ಪಿಗೆ? ಎಂಬ ವಿಚಾರ ಎಲ್ಲೆಡೆ ಆಕ್ರೋಶಕ್ಕೆ ಹೇತು ಮಾಡಿದೆ. ಇದೆಲ್ಲದರ ನಡುವೆ ಜಿಲ್ಲಾ ಎಸ್ಪಿ ಸೇರಿ ನಾಲ್ವರನ್ನು ಅಮಾನತುಗೊಳಿಸಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿದಂತಿದೆ.

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ಆಡಳಿತ ವ್ಯವಸ್ಥೆ ಮಾತ್ರ ಮೌನವಾಗಿದೆ. ದಲಿತ ಯುವತಿಯರ, ಬಡ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಬೆಳಕಿಗೆ ಬಂದರೂ ಹತ್ರಾಸ್ ಬಾಲಕಿಯ ಅತ್ಯಾಚಾರಗಳಂತಹಾ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಿರೀಕ್ಷೆಯನ್ನೇ ಮರೆಯಾಗಿಸುತ್ತಿದೆ.
ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳು ಇವರೇ ಎಂದು ಗೊತ್ತಿದ್ದರೂ ಶಿಕ್ಷೆಗೆ ಒಳಪಡಿಸಲು ಏಳು ವರ್ಷ ತೆಗೆದುಕೊಂಡ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹೇಗೆ ತಾನೇ ನಂಬಿಕೆ ಬರಲು ಸಾಧ್ಯ?

ಅದಾಗಲೇ ದೇಶಾದ್ಯಂತ “Justice for Manisha” ಎಂಬ ವಾಕ್ಯದೊಂದಿಗೆ ಪ್ರತಿಭಟನೆಯ ಧ್ವನಿ ಹೆಚ್ಚುತ್ತಿದ್ದು, ಮೊಂಬತ್ತಿ ಮತ್ತು‌ ಪೋಸ್ಟರ್ ಗಳು ಪ್ರದರ್ಶಿಸಲ್ಪಡುತ್ತಿದೆ.
ಎಷ್ಟು ಪ್ರತಿಭಟಿಸಿದರೂ ಮಾಧ್ಯಮಕ್ಕೆ ಸ್ವಾತಂತ್ರ್ಯವಿಲ್ಲದ, ಪೋಲೀಸರಿಗೆ ಅಧಿಕಾರವಿಲ್ಲದ, ಜನರಿಗೆ ರಕ್ಷಣೆ ಇಲ್ಲದ ನಮ್ಮೀ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯ ನಿರೀಕ್ಷಿಸಲು ಸಾಧ್ಯವೇ ?
ವ್ಯಾಪಕ ಆಕ್ರೋಶದ ಬಳಿಕ ದಿಗ್ಭಂದನ ತೆರವುಗೊಳಿಸಿದ ಉ.ಪ್ರದೇಶ ಸರ್ಕಾರ, ಅಪರಾಧಿಗಳಿಗೆ ಶಿಕ್ಷೆ ಕೊಡುವ ಭರವಸೆಯನ್ನೂ ಮುಂದಿಟ್ಟಿದೆ.

ಏನೇ ಆದರೂ, ದೇಶದಲ್ಲಿ ಈ ರೀತಿಯ ಪ್ರಕರಣಗಳು ವರದಿಯಾದಾಗ ಸಂತ್ರಸ್ಥೆಯ ಜೀವ ಉಳಿಸುವ ಕನಿಷ್ಠ ಮಾನವೀಯ ನೆಲೆಯಲ್ಲಿ ವ್ಯವಸ್ಥೆ ಮಾಡಲೂ ಮುಂದಾಗದೇ, ಸೀತೆಗೆ ರಕ್ಷಣೆಯಿಲ್ಲದ ರಾಮರಾಜ್ಯದಲ್ಲಿನ ಸರ್ಕಾರದ ಅವ್ಯವಸ್ಥೆಯು ಜನತೆಯನ್ನು ಕಂಗಾಲಾಗಿಸಿದೆ.

ಬದುಕಿರುವಾಗ ರಕ್ಷಣೆ ನೀಡದೆ, ಕೊಲೆಯಾದ ನಂತರವೂ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನಡೆಸದೆ, ರಾಜಕೀಯ ಲಾಭಕ್ಕಾಗಿ, ಜಾತಿಗೆ ಸೀಮಿತಗೊಳಿಸಿದ ಮೃತ ಮನೀಷಾಳ ನ್ಯಾಯಕ್ಕಾಗಿ ಧ್ವನಿ ಹೆಚ್ಚುತ್ತಿದ್ದೂ, ಮೊಂಬತ್ತಿ ಉರಿಯುತ್ತಲಿದ್ದೂ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ನಿರ್ಲಕ್ಷ್ಯ ಮತ್ತು ತಾರತಮ್ಯ ಬಿಟ್ಟು ಶಾಸಕಾಂಗ, ನ್ಯಾಯಾಂಗ , ಕಾರ್ಯಾಂಗ ಒಟ್ಟಾಗಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೆ ಮಾತ್ರ ನಿರ್ಭೀತಿಯಿಂದಿರಬಹುದು.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವರ್ಗವೊಂದು ನಿರ್ವಹಿಸಬೇಕಾದ ಕರ್ತವ್ಯವಾಗಿದೆ.

One thought on “ಮೊಂಬತ್ತಿ ಉರಿಯತ್ತಲೇ ಇದೆ.ಅತ್ಯಾಚಾರ ಹೆಚ್ಚುತ್ತಲೇ ಇದೆ.

  1. ಮಾಷಾ ಅಲ್ಲಾ
    ಉತ್ತಮ ಲೇಖನ
    ಉಪಯುಕ್ತ ಮಾಹಿತಿ
    ಲೇಖಕರಿಗೆ ಧನ್ಯವಾದಗಳು💝🌹

    Like

Leave a comment