- ✍ ನಿರಂಜನಾರಾಧ್ಯ.ವಿ.ಪಿ. ಶಿಕ್ಷಣತಜ್ಞರು

ನಮಗೆ ತಿಳಿದಿರುವಂತೆ, ಕೋವಿಡ್ 19 ಮಾರ್ಚ್ 2020 ರಿಂದ ಇಲ್ಲಿಯವರೆಗೆ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಅತ್ಯಂತ ದುರಂತ ಪರಿಣಾಮವನ್ನು ಬೀರಿದೆ. ಶಿಕ್ಷಣದ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣಕ್ಕೆ ಬಂದೊದಗಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಆಯವ್ಯಯದ ಬಗ್ಗೆ ಇದ್ದ ದೊಡ್ಡ ನಿರೀಕ್ಷೆಗಳು ಹುಸಿಯಾಗಿವೆ. ಶಿಕ್ಷಣ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ಹಾಗೂ ಮಹತ್ವ ಸಿಕ್ಕಿಲ್ಲ. ಇದರಿಂದಾಗಿ, ಮಕ್ಕಳ ಕಲಿಕಾ ಕಾರ್ಯಕ್ರಮ, ಪೋಷಣೆ ಮತ್ತು ಯೋಗಕ್ಷೇಮ ಸೇರಿದಂತೆ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಹಲವು ಸಮಸ್ಯೆಗಳು ಸಮಸ್ಯೆಗಳಾಗಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಸಮಗ್ರ ಶಿಕ್ಷಣ ಅಭಿಯಾನಕ್ಕೆ ರೂ.6333 ಕೋಟಿಗಳ ಅತ್ಯಲ್ಪ ಹೆಚ್ಚಳದೊಂದಿಗೆ ರೂ 37,383 ಕೋಟಿಗಳನ್ನು ನೀಡುವ ಮೂಲಕ (2021-22ರಲ್ಲಿ ರೂ.31,050 ಕೋಟಿಗಳು ಪ್ರಸ್ತುತ 2022-23ರ ಬಜೆಟ್‌ನಲ್ಲಿ 37,383 ಕೋಟಿಗಳು), ಮೂಲಭೂತ ಹಕ್ಕನ್ನು ಒದಗಿಸುವ ಆರ್‌ಟಿಇ ಕಾಯ್ದೆಯ ಅನುಷ್ಠಾನವನ್ನು ಬಜೆಟ್ ಮತ್ತಷ್ಟು ಹಳಿತಪ್ಪಿಸಿದೆ.ಆಗಸ್ಟ್ 2021 ರಲ್ಲಿ ಚುಕ್ಕಿಯಿಲ್ಲದ ಪ್ರಶ್ನೆಯೊಂದಕ್ಕೆ ಉತ್ತರಿಸಲು ಲೋಕಸಭೆಗೆ ಒದಗಿಸಿದ ಮಾಹಿತಿಯ ಅನ್ವಯ, ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸಿದ 12 ವರ್ಷಗಳ ನಂತರ ಆರ್‌ಟಿಇ ಅನುಸರಣೆಯ ರಾಷ್ಟ್ರೀಯ ಸರಾಸರಿ ಶೇಕಡ. 25.5 ಎಂದು ಬಹಿರಂಗಗೊಂಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅನುಸರಣೆ ಶೇಕಡ 1.3 ರಿಂದ 63.6 ವರೆಗೆ ವ್ಯತ್ಯಾಸ ಹೊಂದಿದೆ.
ಸಾರ್ವತ್ರಿಕ ಗುಣಮಟ್ಟದ ಶಿಕ್ಷಣವನ್ನು ಸಾಧಿಸಲು ಕಲಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಆರ್‌ಟಿಇ ಕಾಯಿದೆ ನಿಗದಿ ಪಡಿಸಿರುವ ಕನಿಷ್ಟ ಮೂಲ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಬಜೆಟ್ ಸ್ಪಷ್ಟ ಸೂಚನೆಯಾಗಿದೆ.
ಈ ಬಜೆಟ್ನಲ್ಲಿ ಘೋಷಿಸಿರುವ ಹಲವು ಕಾರ್ಯಕ್ರಮಗಳು, ಕಳೆದ ವರ್ಷ, 2021-22 ರಲ್ಲಿ ಘೋಷಿಸಲಾದ ಕಾರ್ಯಕ್ರಮಗಳ ನಕಲಲ್ಲದೆ ಬೇರೇನೂ ಅಲ್ಲ. ಪಿಎಮ್ ಇ-ವಿದ್ಯಾ ಅಡಿಯಲ್ಲಿ ಒಂದು ವರ್ಗ -ಒಂದು ದೂರದರ್ಶನ ಚಾನೆಲ್ ಮತ್ತು ಹೊಸ ಸೈನಿಕ ಶಾಲೆಗಳನ್ನು ತೆರೆಯುವ ಕಾರ್ಯಕ್ರಮಗಳನ್ನು ಹಿಂದಿನ ಬಜೆಟ್‌ನಲ್ಲಿ ಈಗಾಗಲೇ ಘೋಷಿಸಲಾಗಿತ್ತು.
ಮತ್ತೊಂದು ಹಾಸ್ಯಾಸ್ಪದ ಸಂಗತಿಯೆಂದರೆ, ಡಿಜಿಟಲ್ ಶಿಕ್ಷಣವು ತರಗತಿಯ ಕಲಿಕೆಗೆ ಪರ್ಯಾಯವಲ್ಲ ಎಂದು ಪ್ರಪಂಚದಾದ್ಯಂತದ ಎಲ್ಲಾ ಸಂಶೋಧನೆಗಳು ಸ್ಪಷ್ಟವಾಗಿ ಸೂಚಿಸಿವೆ. ಭಾರತದಂತಹ ದೇಶಗಳಲ್ಲಿ ಈಗಿರುವ ದೊಡ್ಡ ಡಿಜಿಟಲ್ ಅಂತರದಿಂದಾಗಿ ಶಿಕ್ಷಣದಲ್ಲಿ ಅಸಮಾನತೆ ಮತ್ತು ತಾರತಮ್ಯಗಳು ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದಿರುವ ಸತ್ಯ.
ಈ ಸತ್ಯದ ನಡುವೆಯೂ ಆಯವ್ಯಯ ಡಿಜಿಟಲ್ ಕಲಿಕೆಗೆ ಅನಗತ್ಯ ಪ್ರಾಮುಖ್ಯತೆಯನ್ನು ನೀಡುತ್ತದೆ. ಡಿಜಿಟಲ್ ಶಿಕ್ಷಣದ ಉದ್ಯಮಿಗಳನ್ನು ಉತ್ತೇಜಿಸಲು ಕೇಂದ್ರವು ಡಿಜಿಟಲ್ ಶಿಕ್ಷಣವನ್ನು ಆಯವ್ಯಯದಲ್ಲಿ ಉತ್ತೇಜಿಸುತ್ತಿದೆ. ಇದರ ಭಾಗವಾಗಿ , ಬಜೆಟ್‌ನಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ 750 ವರ್ಚುವಲ್ ಲ್ಯಾಬ್‌ಗಳು, 75 ಕೌಶಲ್ಯ ಇ-ಲ್ಯಾಬ್‌ಗಳು, ಇ-ಕಂಟೆಂಟ್ ಅನ್ನು ಡಿಜಿಟಲ್ ಶಿಕ್ಷಕರ ಮೂಲಕ ಇಂಟರ್ನೆಟ್, ಮೊಬೈಲ್ ಫೋನ್‌ಗಳು, ಟಿವಿ ಮತ್ತು ರೇಡಿಯೊ ಮೂಲಕ ತಲುಪಿಸಲು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಲಾಗಿದೆ. ಶಿಕ್ಷಕರಿಂದ ಗುಣಮಟ್ಟದ ಇ-ವಿಷಯವನ್ನು ಅಭಿವೃದ್ಧಿಪಡಿಸಲು ಸ್ಪರ್ಧಾತ್ಮಕ ಕಾರ್ಯವಿಧಾನವನ್ನು ಸಶಕ್ತಗೊಳಿಸಲು ಮತ್ತು ಡಿಜಿಟಲ್ ಬೋಧನಾ ಸಾಧನಗಳೊಂದಿಗೆ ಸಜ್ಜುಗೊಳಿಸಲು ಮತ್ತು ಉತ್ತಮ ಕಲಿಕೆಯ ಫಲಿತಾಂಶಗಳನ್ನು ಸುಲಭಗೊಳಿಸಲು ಹೊಂದಿಸಲಾಗುವುದು ಎಂದು ಅದು ಹೇಳುತ್ತದೆ. ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಹ ಅದು ಹೊಂದಿದೆ.
ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿ ಸಮಾಜದ ಪ್ರತಿಶತ 80 ರಷ್ಟು ಅವಕಾಶವಂಚಿತ ಹಾಗು ಬಡ ಜನರ ಮಕ್ಕಳನ್ನು ಶಿಕ್ಷಣದಿಂದ ಹೊರಗಿಟ್ಟು ಪ್ರತಿಶತ 20 ರಷ್ಟು ಶ್ರೀಮಂತ ವರ್ಗದ ಮಕ್ಕಳಿಗೆ ಅನುಕೂಲವಾಗುವಂತಹ ಒಂದು ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವತ್ತ ಭಾರತ ಸಾಗುತ್ತಿದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ .