ಹಿಜಾಬ್ ಕೇವಲ ವಸ್ತ್ರವಲ್ಲ: ಅದು ನನ್ನ ಘನತೆ

  • ✍ ಮಿಸ್ರಿಯಾ ಪುತ್ತೂರು

ಹಿಜಾಬ್ ನನ್ನ ಹಕ್ಕು ಎಂಬ ಭಿತ್ತಿ ಪತ್ರವನ್ನು ಹಿಡಿದು ಕಳೆದ ಹಲವಾರು ದಿನಗಳಿಂದ ಉಡುಪಿ ಯ ಒಂದು ಮೂಲೆಯ ಸರಕಾರಿ ಕಾಲೇಜಿನಲ್ಲಿ 5-6 ವಿದ್ಯಾರ್ಥಿನಿಯರು ಪ್ರತಿಭಟಿಸುತ್ತಿರುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. ಇಂದಿಗೂ ಆ ವಿದ್ಯಾರ್ಥಿನಿಯರು ತಮ್ಮ ಹಕ್ಕಿಗಾಗಿ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಹೌದು, ಹಿಜಾಬ್ ಇದು ಇಂದು ನಿನ್ನೆಯ ವಿಚಾರವಲ್ಲ. ಹಲವಾರು ವರ್ಷಗಳ ಹಿಂದೆಯೇ ಈ ಕೂಗು‌ ಎಲ್ಲೆಂದರಲ್ಲಿ ಕೇಳಿಸುತ್ತಿದೆ .ಹಿಜಾಬ್ ಇದು ಕೇವಲ ಆ ಕಾಲೇಜಿನ ವಿದ್ಯಾರ್ಥಿನಿಯರ ಮತ್ತು ಪೋಷಕರ ಸಮಸ್ಯೆಯಲ್ಲ. ಇದು ಒಂದು ಸಮುದಾಯದ ಸಮಸ್ಯೆಯಾಗಿದೆ .ಇದರ ಹಿಂದೆ ದೊಡ್ಡ ಷಡ್ಯಂತ್ರವೊಂದು ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಈ ಸಮುದಾಯವು ಮನಗಾನ‌ ಬೇಕಾಗಿದೆ. ಇಂದು ಹಿಜಾಬ್ ನಿರಾಕರಣೆಯು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಆದರೆ ಮುಂದೊಂದು ದಿನ ಎಲ್ಲಾ ಕ್ಷೇತ್ರಗಳಿಗೂ ಲಗ್ಗೆ ಇಡಲಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ನಾಣ್ಣುಡಿಯಂತೆ ಇಂದೇ ಜಾಗೃತ ರಾಗುವ ಅಗತ್ಯ ಮುಸ್ಲಿಂ ಸಮುದಾಯಕ್ಕಿದೆ. ಹಿಜಾಬ್ ಎಂದರೆ ತಲೆ ಹೊದಿಕೆ. ಅದು ಪ್ರತಿ ಒಬ್ಬ ಮುಸ್ಲಿಂ ಮಹಿಳೆಗೂ ಕಡ್ಡಾಯವಾಗಿದೆ ಮತ್ತು ಹಕ್ಕಾಗಿದೆ. ಅದು ಆಕೆಯ ಆಯ್ಕೆ ಆಗಿದೆ. ಅದು ಸಂವಿಧಾನಿಕ‌ವಾದ ಧಾರ್ಮಿಕ ಹಕ್ಕು. ಅನ್ಯ ಧರ್ಮದವರು ಸಿಂಧೂರ ಅಥವಾ ಇನ್ನೇನನ್ನೋ ಹಾಕುತ್ತಾರೆಂದು ನಾವು ಹಿಜಾಬ್ ಧರಿಸುವುದು ಅಲ್ಲ.


ಇದು ನಮ್ಮ ಗೌರವದ ಸಂಕೇತವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಪ್ರತಿಯಾಗಿ ಬೇರೆ ವಿದ್ಯಾರ್ಥಿಗಳು ಕೇಸರಿ ಶಾಲ್‌ನ್ನು ಧರಿಸಿಕೊಂಡು ‌ಕಾಲೇಜಿಗೆ ಪ್ರವೇಶಿಸುತ್ತಾರೆ ಎಂದರೆ ಇದರ ಒಳಮರ್ಮವೇನೆಂದು ಇದರಲ್ಲೇ ಅರ್ಥೈಸಿಕೊಳ್ಳಬಹುದು.

ಸಮಾನತೆ, ಏಕತೆ ‌ಎಂದೆಲ್ಲ‌ ಹೇಳಿ ಹಿಜಾಬನ್ನು‌‌ ನಿರಾಕರಿಸುತ್ತಿದ್ದಾರೆ. ಹಿಜಾಬ್ ಅಶಿಸ್ತು ಎಂದು ಹೇಳಿ‌ ಛೀಮಾರಿ ‌ಗಿಟ್ಟಿಸಿಕೊಂಡ ಸಚಿವರ ವರ್ಗಕ್ಕೇನೂ ಕಡಿಮೆ ಇಲ್ಲ. ಇಷ್ಟು ದಿನ‌ ಕಾಣದ ಅಶಿಸ್ತು, ಅಸಮಾನತೆ ‌ಇಂದೇಕೆ ಕಾಣುತ್ತಿದೆ ಎಂಬ ಯಕ್ಷ‌ ಪ್ರಶ್ನೆ ನಮ್ಮ ಮಧ್ಯೆ ಅಲೆದಾಡುತ್ತಿದೆ .

ಒಂದು ಕಾಲವಿತ್ತು. ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯ ಮೆಟ್ಟಿಲನ್ನೇ ನೋಡದವರು‌. ಸಣ್ಣ ವಯಸ್ಸಿನಲ್ಲಿಯೇ ವಿವಾಹ, ಕುಟುಂಬಕ್ಕೇ ಸೀಮಿತವಾಗಿದ್ದರು. ಸಮಯ ಕಳೆದಂತೆ ಕಾಲವೂ ಬದಲಾಯಿತು. ಇಂದು‌ ಮುಸ್ಲಿಂ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗವನ್ನೂ ಪಡೆಯುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡುತ್ತಿದ್ದಾರೆ. ಇದನ್ನೆಲ್ಲ ದೂರದಿಂದ ನೋಡುತ್ತಿದ್ದ ಮತೀಯ ಗುಂಪೊಂದು ತನ್ನ ಬೇಳೆ ಬೇಯಿಸಿಕೊಳ್ಳಲು ಹಿಜಾಬ್ ನ್ನು ನೆಪವಾಗಿ ಇರಿಸಿಕೊಂಡಿದೆ. ನಮ್ಮ ಶಿಕ್ಷಣವನ್ನು ಮೊಟಕುಗೊಳಿಸಲು ನಡೆಸುತ್ತಿರುವ ಷಡ್ಯಂತ್ರವಾಗಿದೆ.

ಶಿಕ್ಷಣಕ್ಕಾಗಿ ಹಿಜಾಬ್ ನೊಂದಿಗೆ ರಾಜಿ ಮಾಡಿಕೊಳ್ಳಿರಿ ಅಥವಾ ಕಾಲೇಜನ್ನು ಬದಲಾಯಿಸಿರಿ‌‌, ತುಂಡು ಬಟ್ಟೆಗಾಗಿ ಯಾಕೆ ಜಗಳವಾಡುತ್ತೀರಿ ಎಂಬ ಕೂಗು ನಮ್ಮ ಸಮುದಾಯದ ಮಧ್ಯೆ ಕೇಳಿ ಬರುತ್ತಿದೆ, ಈ ರೀತಿಯ ದ್ವಂದ್ವ ನಿಲುವುಗಳಿಂದ ಮೊದಲು ಹೊರಬಂದು ನ್ಯಾಯಯುತವಾಗಿ ಚಿಂತಿಸುವ ಅಗತ್ಯವಿದೆ. ಇದು ತುಂಡು ಬಟ್ಟೆಯಲ್ಲ ಇದು ಘನತೆಯ ಸಂಕೇತವಾಗಿದೆ.

ಸಮವಸ್ತ್ರ ಕಡ್ಡಾಯವಿರುವ ಸೇನೆಯಲ್ಲೂ ತಮ್ಮ ತಮ್ಮ ಧಾರ್ಮಿಕ ಹಕ್ಕನ್ನು ಪಾಲಿಸಲು ಅವಕಾಶವಿದೆ. ಸಿಖ್ ಧರ್ಮದ ಪೇಟ ಧರಿಸಿಕೊಂಡು ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನ ಮಂತ್ರಿ ಹುದ್ದೆಯನ್ನು ಡಾ.ಮನಮೋಹನ್ ಸಿಂಗ್ ಅಲಂಕರಿಸಿದಾಗಲೂ ಇಡೀ ದೇಶವೇ ಅವರನ್ನು ಒಪ್ಪಿತು ಮತ್ತು ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್ ತಲೆಗೆ ಸೆರಗನ್ನು ಹೊದ್ದುಕೊಂಡೇ ಆಡಳಿತ ನಡೆಸಿದರು. ಅಂದು ಕಾಣದ ಅಶಿಸ್ತು, ಅಸಮಾನತೆ ಇಂದೇಕೆ ? ನಿಜವಾಗಿಯೂ ವಿದ್ಯಾರ್ಥಿನಿಯರ ಹಿಜಾಬ್ ಅಶಿಸ್ತಾಗಿ ಕಂಡಿತೇ..? ಅಥವಾ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರೀಕರಿಸುವ ಹುನ್ನಾರವೇ? ಎಂಬಿತ್ಯಾದಿ ವಿಚಾರಗಳು ನಮ್ಮ ಮಧ್ಯೆ ನುಂಗಲಾರದ ಪ್ರಶ್ನೆಗಳಾಗಿಯೇ ಉಳಿದಿದೆ.

Leave a comment