ಮತಾಂತರ ನಿಷೇಧ ಕಾಯ್ದೆ:ಅಳಿವಿನತ್ತ ಸಾಗುತ್ತಿರುವ ವರ್ಗದ ಅವೈಜ್ಞಾನಿಕತೆ ಮತ್ತು ಅವೈಚಾರಿಕತೆಯ ಶರಣಾಗತಿಯನ್ನು ಪ್ರತ್ಯಕ್ಷಿಸುತ್ತಿರುವ ವಿಧೆಯಕ

ಲೇಖನ: ಇಮ್ರಾನ್ ಪಾಂಡವರಕಲ್ಲು

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೊಳಿಸಿದ್ದ ‘ಮತಾಂತರ ನಿಷೇಧ ಕಾಯಿದೆ’ಯನ್ನು ಇದೀಗ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ಹಲವು ದಿನಗಳಿಂದ ವಿಧಾನಸಭಾ ಕಲಾಪದಲ್ಲಿ ಸಾಧಕ – ಬಾಧಕ ಚರ್ಚೆಯಾಗುತ್ತಿದ್ದು, ಅಧಿಕೃತವಾಗಿ ಕಟ್ಟಲೆಯನ್ನು ಅನುಷ್ಠಾನಗೊಳಿಸುವ ಎಲ್ಲಾ ಸಾಧ್ಯತೆಗಳು ಸನ್ನಿಹಿತವಾಗುತ್ತಿದೆ.

ಸಂವಿಧಾನದ 25 (1) ನೇ ವಿಧಿಯ ಸ್ಪಷ್ಟ ಉಲ್ಲಂಘಣೆ, ಬದುಕುವ , ಧಾರ್ಮಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ , ಮೂಲ ಆಶಯವಾದ ಜಾತ್ಯಾತೀತತೆ, ಭಾಷಾತೀತತೆಗೆ ತದ್ವಿರುದ್ಧ ಮತ್ತು ನಿರ್ದಿಷ್ಟ ಸಮುದಾಯಗಳ ಅವನತಿಯ ಪರೋಕ್ಷ ಗುರಿಯನ್ನು ಹೊಂದಿರುವ ಕಾರಣ ಈ ಕಾಯ್ದೆಗೆ ಎಲ್ಲೆಡೆ ವಿರೋಧಾಭಾಸಗಳು ವ್ಯಕ್ತವಾಗುತ್ತಿದೆ.

ಇದೆಲ್ಲಾ ಒಂದು ಕಡೆಯಾದರೆ, ತಾತ್ವಿಕತೆ ಮತ್ತು ತಾರ್ಕಿಕತೆಯ ಆಯಾಮದಲ್ಲಿ ನಾವು ಇಂಗಿತರಾಗಿ ಈ ಕಾನೂನಿನ ಅಂತರಾಳದತ್ತ ಕಣ್ಣು ಹಾಯಿಸಿದರೆ ಇದೊಂದು ಸೈದ್ಧಾಂತಿಕ ವಿರತಿಯ ಸೋಲೊಪ್ಪಿಗೆ ಎಂದು ಭಾಸವಾಗುತ್ತದೆ.

ಈ ಕಾಯಿದೆಯನ್ವಯ ಪ್ರಕಾರ ಯಾರೇ ಒಬ್ಬರು ಮತಾಂತರ ಬಯಸುವವರು 60 ದಿನಗಳ ಮೊದಲು ಸಂಬಂಧಪಟ್ಟ ಜಿಲ್ಲಾ ದಂಡಾಧಿಕಾರಿಗೆ ತಿಳಿಸಬೇಕು ಮತ್ತು ಮತಾಂತರ ಮಾಡುವವರೂ 30 ದಿನಗಳ ಹಿಂದೆ ಸುಳಿವನ್ನು ನೀಡಬೇಕು. ಇದರೊಟ್ಟಿಗೆ ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ ಮತಾಂತರವಾಗುವುದರ ವಿರುದ್ಧ ಸಂಬಂಧಿಕರು, ಸ್ನೇಹಿತರು ಯಾರಿಗೂ ಬೇಕಾದರೆ ಆಕ್ಷೇಪಣೆ ಸಲ್ಲಿಸಬಹುದು, ಮತ್ತು ಕೇಸನ್ನೂ ನೀಡಬಹುದು. ನಿಯಮದನ್ವಯ ಈ ಕೇಸನ್ನು ಪೊಲೀಸರು ಸ್ವೀಕರಿಸಿ ಎಫ್ ಐ ಆರ್ ಅನ್ನೂ ದಾಖಲಿಸಬಹುದು. ಈ ನಿಯಮವನ್ನು ನಾವು ಆಳವಾಗಿ ವಿಮರ್ಶಿಸಿದರೆ ಕೆಲವು ಸತ್ಯಗಳು ನಮ್ಮನ್ನೇ ಕೆಣಕುತ್ತದೆ.

ಅದೇನೆಂದರೆ ಒಬ್ಬ ಮತಾಂತರವಾಗಲು ಬಯಸುವಾಗ ,ಆತನಿಗೆ ಸಂಬಂಧಪಟ್ಟವರಿಗೆ, ಅಥವಾ ಯಾರಿಗಾದರೂ ಒಬ್ಬರಿಗೆ ಆಕ್ಷೇಪಣೆ ಉಂಟೇ ಆಗುತ್ತದೆ. ಒಂದು ವೇಳೆ ಆಗದಿದ್ದರೂ ಬಯಸುವವನ ಒಬ್ಬ ಶತ್ರು ಬಲವಂತವಾಗಿ ಆಕ್ಷೇಪಣೆಯನ್ನು ನೀಡಿದರೆ ಅದೇ ಸಾಕು. ನಿಜವಾಗಿಯೂ ಒಬ್ಬ ಮತಾಂತರವಾಗಲು ಬಯಸುವವನಿಗೆ ಇಂತಹ ಯಾವುದೇ ಕಟ್ಟಲೆಗಳಿರಬಾರದು. ಮತಾಂತರವಾಗುವುದು ಅವನ ಇಚ್ಛೆ. ಅವನ ಸ್ವಾತಂತ್ರ್ಯ. ಅದರ ವಿರುದ್ಧ ಯಾರಿಗೇ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬಾರದು. ಯಾಕೆಂದರೆ ಅದು ಅವನ ಬದುಕುವ ಹಕ್ಕು. ಅದನ್ನು ಪ್ರಶ್ನೆ ಮಾಡಲು ಅವರಾರು? ಪರಿಸ್ಥಿತಿ ಕೈಮೀರಲು ಒಂದು ಕಾರಣ ತನ್ನ ವಿರುದ್ಧ ಆಕ್ಷೇಪಣೆ ಸಲ್ಲಿಸುವವರೇ ಆಗಿರುತ್ತಾರೆ.

ಈ ಕಾಯಿದೆಯ ಪ್ರಕಾರ ಬಲವಂತ, ವಂಚನೆ, ಆಮಿಷಕ್ಕೊಳಗಾಗಿ ಮತಾಂತರವಾಗಲು ಅವಕಾಶ ಇಲ್ಲ ಎಂಬ ವಾದವು ಮೇಲ್ನೋಟಕ್ಕೆ ಮಾತ್ರ ಸಮಂಜಸ. ಯಾಕೆಂದರೆ ಒಬ್ಬ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ, ಅಧ್ಯಯನ ಮಾಡಿ ಮತಾಂತರವಾದರೆ ಈತನ ಅಥವಾ ಈಕೆಯ ಮತಾಂತರವನ್ನು ವಿರೋಧಿಸುವವ ‘ ಆಮಿಷಕ್ಕೊಳಗಾಗಿ ಮತಾಂತರಗೊಂಡ’ ಎಂಬ ಕಾರಣವನ್ನಿಟ್ಟುಕೊಂಡು ಆಕ್ಷೇಪಣೆ ನೀಡಿ, ಅದರ ನೈಜಾಂಶವನ್ನು ಮತಾಂತರ ಬಯಸುವವ ವ್ಯಕ್ತಪಡಿಸಿದರೂ ಏಕ ಪಕ್ಷೀಯ ನಿಲುವಿನಲ್ಲಿ ಅದನ್ನು ಅಲ್ಲಗಳೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಇವನ ಸ್ವ ಇಚ್ಛೆಯ ಹಕ್ಕಿಗೆ ಬೆಲೆಯೇ ಇಲ್ಲದಂತಾಗುತ್ತದೆ.

ಮುಖ್ಯಾಂಶದ ಸಂಗತಿಯೇನೆಂದರೆ, ಈಗಾಗಲೇ ಈ ಲೇಖನದ ತಲೆಬರಹದಲ್ಲಿ ಕೊಟ್ಟಹಾಗೆ ‘ ಈ ಕಾಯಿದೆಯು ಅವನತಿಯಾಗುತ್ತಿರುವ ಒಂದು ಸಿದ್ಧಾಂತದ ಅವೈಚಾರಿಕತೆ ಮತ್ತು ಅವೈಜ್ಞಾನಿಕತೆಯ ದುರ್ಬಲತೆಯನ್ನು ಪ್ರತ್ಯಕ್ಷವಾಗಿ ಗೊತ್ತುಪಡಿಸುತ್ತಿರುವ ವಿಧೇಯಕವಾಗಿದೆ ಅಥವಾ ಎತ್ತಿ ತೋರಿಸುತ್ತಿರುವ ವಿಧೇಯಕವಾಗಿದೆ. ಇದೇನಪ್ಪ ಹೀಗೆ ಎಂದು ಅಚ್ಚರಿಯಾಗಬೇಡಿ. ನಾನು ಓದುಗರೊಂದಿಗೆ ಇದರ ಒಂದು ವಿಶ್ಲೇಷಣೆಯನ್ನು ನೀಡಲು ಬಯಸುತ್ತೇನೆ.

ಸನಾತನ ಧರ್ಮದ ಸೈದ್ಧಾಂತಿಕ ನಿಲುವನ್ನೇ ನಾನು ‘ಅಳಿವಿನತ್ತ ಸಾಗುತ್ತಿರುವ ಅಥವಾ ಅವನತಿಯತ್ತ ಸಾಗುತ್ತಿರುವ ‘ ಎಂಬುವುದಾಗಿ ವಾದಿಸಿರುವಂಥದ್ದು.
ಈ ಮತಾಂತರ ನಿಷೇಧ ಕಾಯಿದೆಯ ಮುಖ್ಯ ಉದ್ದೇಶವೇ ಸನಾತನ ಹಿಂದೂ ಧರ್ಮದ ರಕ್ಷಣೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಹಿಂದೂ ಧರ್ಮದ ವಿಶ್ವಾಸಿಗಳು ಬೇರೆ ಧರ್ಮಕ್ಕೆ ಮತಾಂತರವಾಗುತ್ತಿರುವುದಲ್ಲದೆ ಇನ್ನುಳಿದ ಧರ್ಮಗಳಿಂದಲ್ಲ. ಯಾಕೆಂದರೆ ಸನಾತನ ಹಿಂದೂ ಧರ್ಮವು ಹಲವು ಅವೈಜ್ಞಾನಿಕತೆಗಳು ಅವೈಚಾರಿಕತೆಗಳು ಮತ್ತು ಮೌಢ್ಯ ತತ್ವಗಳು ಹೊಂದಿರುವ ಧರ್ಮವಾಗಿದೆ. ಈ ಧರ್ಮದ ವಿಶ್ವಾಸಿ ಬೆಳೆದಂತೆ, ಬುದ್ಧಿ ಹೆಚ್ಚಾದಂತೆ ನೈಜತೆಯನ್ನು ಅರಿತು ಧರ್ಮ ತೊರೆಯಲೇ ಪ್ರಯತ್ನಿಸುತ್ತಾನೆ.

ಸನಾತನ ಧರ್ಮದ ಹಲವು ನಂಬಿಕೆಗಳು, ಆಚರಣೆಗಳು ಮೌಢ್ಯಗಳಿಂದ ಮತ್ತು ಪ್ರಚಲಿತಕ್ಕೆ, ಸತ್ಯಕ್ಕೆ ದೂರವಾದದ್ದು ಎಂದು ವ್ಯೂಢ ಅಧ್ಯಯನದ ಮೂಲಕ ಆ ಧರ್ಮದ ವಿಶ್ವಾಸಿ ತಿಳಿದುಕೊಳ್ಳುತ್ತಾನೆ. ಆ ವ್ಯಕ್ತಿಗೆ ಅದರಲ್ಲಿ ಅಸಮಾಧಾನ ಮತ್ತು ಅತೃಪ್ತಿ ಉಂಟಾದಾಗ ಬೇರೆ ಜೀವನ ಶೈಲಿಯನ್ನು ಹುಡುಕಿಕೊಳ್ಳುತ್ತಾನೆ. ಅದನ್ನೇ ಇಲ್ಲಿ ಇವರು ಮತಾಂತರ ಎಂದು ಹೇಳುತ್ತಿರುವುದು. ನಾಡಿದ್ದು ಅವನು ನನಗೆ ಈ ಧರ್ಮ ಇಷ್ಟವಿಲ್ಲ ,ನಾನು ತೊರೆಯುತ್ತೇನೆ ಎಂದರೂ ವೈಷಮ್ಯಪೂರಿತ ಸಂಬಂಧಿಕರು ಆಮಿಷದ ಅಥವಾ ಬಲತ್ಕಾರದ ಆಕ್ಷೇಪಣೆಯನ್ನು ಸಲ್ಲಿಸುತ್ತಾರೆ. ಅದನ್ನು ಕಣ್ಣು ಮುಚ್ಚಿ ಸ್ವೀಕರಿಸಲು ಅವಕಾಶವಿರುವ ಪೊಲೀಸರು ಅವನ ಹಕ್ಕಿಗೆ ಧಕ್ಕೆಯಾಗುತ್ತಾರೆ ಅವನ ಸ್ವಾತಂತ್ರ್ಯವನ್ನು ಕಸಿಯುತ್ತಾರೆ. ಸಾಯುವವರೆಗೂ ಅವನು ಅತೃಪ್ತಿಯಾಗಿ ಅದೇ ಧರ್ಮದಲ್ಲಿ ಇರಬೇಕಾಗುತ್ತದೆ.

ಸನಾತನ ಧರ್ಮದ ಆಚಾರ ವಿಚಾರಗಳು, ಜಾತಿ ಶ್ರೇಣೀಕರಣದಿಂದ ವಿಮುಕ್ತಿಗೊಳ್ಳುವ ಯಾರಿಗೂ ಇಂತಹ ಅವಕಾಶಗಳು ಮುಂದಿನ ದಿನಗಳಲ್ಲಿ ದೊರೆಯುವುದು ಬಲು ಬವಣೆ. ಆದರೆ ಇನ್ನಿತರ ಧರ್ಮದವರು ಹಿಂದೂ ಧರ್ಮಕ್ಕೆ ಮತಾಂತರವಾಗಲು ಬಯಸಿದರೆ ಇಂದು ಹೇಳಿರುವ ಯಾವುದೇ ಕಟ್ಟಲೆಗಳನ್ನು ವಿಧಿಸಲಿಕ್ಕಿರಲಿಕ್ಕಿಲ್ಲ. ಆದರೆ ಇನ್ನಿತರ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಅತೀ ಕಡಿಮೆ.

ಹಾಗಾಗಿ ಇಂತಹ ಹಲವು ತಮ್ಮ ವಿಶ್ವಾಸಿಗಳು ಸನಾತನ ಧರ್ಮವನ್ನು ತೊರೆಯುತ್ತಿರುವುದು ಹಿಂದೂ ಧರ್ಮದ ಜನಸಂಖ್ಯೆ ಕಡಿಮೆಯಾಗುವ ಮೂಲಕ ಅವನತಿಯತ್ತ ಸಾಗುವ, ಅಳಿವಿನತ್ತ ಸಾಗುವ ಭೀತಿಯ ಕಾರಣದಿಂದ ಒತ್ತಾಯ ಪೂರ್ವಕವಾಗಿಯೂ ಈ ವಿಧೇಯಕವನ್ನು ಜಾರಿಗೊಳಿಸುತ್ತಿರುವಂಥದ್ದು. ಮಾತ್ರವಲ್ಲ ಪರೋಕ್ಷವಾಗಿ ಇನ್ನುಳಿದ ಧರ್ಮಗಳಿಗೆ ಸನಾತನ ಧರ್ಮ ಶರಣಾಗತಿಯಾದ ಹಾಗೆಯೂ ಆಗುತ್ತದೆ.

ಇನ್ನೊಂದು ಮುಖ್ಯ ವಿಚಾರವೇನೆಂದರೆ ಮತಾಂತರ ವೆಂಬ ಪದದ ಬಳಕೆಯೇ ಅಸಮಂಜಸ. ಅದು ಮತಾಂತರವಲ್ಲ ಹೊರತಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ. ಸಂವಿಧಾನಕ್ಕೆ ಬದ್ಧವಾಗಿ ತಾನು ಇಚ್ಛಿಸಿದ ಪ್ರಕಾರ ಹೇಗೆ ಬೇಕಾದರೂ ಬದುಕಬಹುದು. ಅಷ್ಟಾಗಿಯೂ ವಿರೋಧಾಭಾಸ ಮಾಡುವುದಾದರೆ, ಮತಾಂತರವಾಗಲು ಬಯಸುವವನ ಧಾರ್ಮಿಕ ಅಸ್ಮಿತೆಯನ್ನು ರಕ್ಷಣೆ ಮಾಡುವುದು ಅವನ ಸಂಬಂಧಿಕರ ಹೊಣೆಯಾಗಿರುತ್ತದೆ. ಪರಿಸ್ಥಿತಿ ಕೈ ಮೀರಿದ ಮೇಲೆ ಅವರ ಪಾತ್ರ ಎಷ್ಟಾದರು ಅಷ್ಟೇ.

ಧರ್ಮದ ಅವನತಿಯ ಎಲ್ಲಾ ಭೀತಿಯನ್ನು ಅರಿತ ಹಿಂದುತ್ವ ರಾಜಕಾರಣದ ಬಿಜೆಪಿಯು ಇಂತಹ ಒಂದು ಕಾಯಿದೆಯನ್ನು ಅನುಷ್ಠಾನ ಗೊಳಿಸಲು ಪ್ರಯತ್ನಿಸುತ್ತಿದೆ. ಇದರ ಮೂಲಾಶಯವನ್ನು ನಾವು ಆಳವಾಗಿ ಅರಿಯಲು ಪ್ರಯತ್ನಿಸುವ ಮೂಲಕ ಇದನ್ನು ಪ್ರತ್ಯಕ್ಷವಾಗಿ ವಿರೋಧಿಸಬೇಕಾಗಿದೆ.

One thought on “ಮತಾಂತರ ನಿಷೇಧ ಕಾಯ್ದೆ:ಅಳಿವಿನತ್ತ ಸಾಗುತ್ತಿರುವ ವರ್ಗದ ಅವೈಜ್ಞಾನಿಕತೆ ಮತ್ತು ಅವೈಚಾರಿಕತೆಯ ಶರಣಾಗತಿಯನ್ನು ಪ್ರತ್ಯಕ್ಷಿಸುತ್ತಿರುವ ವಿಧೆಯಕ

  1. ಸ್ವಾಮಿ, ನಿಮ್ಮ ಪ್ರಕಾರ ಸನಾತನ ಹಿಂದೂ ಧರ್ಮ ಮೌಡ್ಯತೆ ಆಚರಣೆ ಹೊಂದಿದೆ, ನಿಮಗೆ ಹಿಂದೂ ಧರ್ಮದ ಬಗ್ಗೆ ತಿಳುವಳಿಕೆ ಇದೆ ಎಂದು ಕೊಳ್ಳುತ್ತೇನೆ, ನಿಮಗೆ ಗೊತ್ತಾ, ರಾಜರಾಮ್ ಮೋಹನ್ ರಾಯ್ ಸತಿಸಹಗಮನ, ಬಾಲ್ಯ ವಿವಾಹ ದ ವಿರುದ್ಧ ಹೋರಾಡಿದ್ದು, ಅಂಬೇಡ್ಕರ್ ನೀಡಿದ ಹಿಂದೂ ಕಾನೂನನ್ನು ಅಳವಡಿಸಿ ಕೊಂಡು ಹಿಂದೂ ಧರ್ಮ ನಿಂತ ನೀರಲ್ಲ ಎಂದು ನಿರೂಪಿಸಿದೆ. ಗಾಳಿ, ನೀರು, ಭೂಮಿ,
    ಪಶು ಪಕ್ಷಿ ಪ್ರಾಣಿ ಸಂಕುಲಗಳನ್ನು ದೇವರ ರೂಪದಲ್ಲಿ ಕಂಡ ಧರ್ಮ ಹಿಂದೂ ಧರ್ಮ ಮಾತ್ರ,ಹಿಂದೂ ಧರ್ಮದ ಕೆಲ ತಪ್ಪು ಆಚರಣೆ ವಿರುದ್ಧ ಹೋರಾಡಿದ ಶ್ರೇಷ್ಠರನ್ನು ನಾವು ನೋಡಿದ್ದೇವೆ ಅವರನ್ನು ತಲೆ ಕಡಿಯಿರಿ ಎಂದು ಫತ್ವಾ ನೀಡುವ ಧರ್ಮ ಗುರುಗಳು ಹಿಂದೂ ಧರ್ಮದಲ್ಲಿ ಇಲ್ಲ, ಇರಲಿ, ನೀವು ಹಿಂದುವಾಗಿ ಹುಟ್ಟಿಧ್ದಲ್ಲಿ ಹಿಂದೂ ಧರ್ಮದ ಕೆಟ್ಟ ಆಚರಣೆ ಬಗ್ಗೆ ಎಚ್ಚರಿಸಿ ಅನ್ಯ ಧರ್ಮದಲ್ಲಿ ಹುಟ್ಟಿದ್ದರೆ ಆ ಧರ್ಮದ ಕೆಟ್ಟ ಆಚರಣೆಯ ಬಗ್ಗೆ ಬೆಳಕು ಚೆಲ್ಲಿ ಇಲ್ಲವೇ ನಿಮ್ಮ ಧರ್ಮ ಬದಲಾವಣೆಗೆ ಹೊಂದಿಕೊಂಡು ಸಾಗುತ್ತಿರುವ ಮನುಕುಲದ ಶ್ರೇಷ್ಠ ಧರ್ಮವಾ ಎಂಬುದಾದರು ತಿಳಿಸಿ.

    Like

Leave a comment