
ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ | ಭಾಗ 05
– ಮಹಮ್ಮದ್ ರಿಯಾಝ್
ಅಸ್ತಿತ್ವ ಎನ್ನುವುದೇ ಹಾಗೆ. ಅದು ತ್ಯಾಗ, ಬಲಿದಾನವನ್ನು ಕೇಳುತ್ತದೆ. ಜಗತ್ತಿನಲ್ಲಿ ಅಸ್ತಿತ್ವಕ್ಕಾಗಿ ನಡೆದ ಹೋರಾಟ, ಕ್ರಾಂತಿಗಳನ್ನು ಕೆದಕುತ್ತಾ ಹೋದರೆ ಸಮಾಜದಲ್ಲಿರುವ ಶ್ರೀಮಂತ, ಬಹುಸಂಖ್ಯಾತ ಮತ್ತು ಆಡಳಿತ ನಡೆಸುವ ವರ್ಗಗಳು ಸಮಾಜದ ದುರ್ಬಲ, ಅಲ್ಪಸಂಖ್ಯಾತ ವರ್ಗಗಳನ್ನು ತಮ್ಮ ಗುಲಾಮರನ್ನಾಗಿಸಿ ಅವರ ಅಸ್ತಿತ್ವವನ್ನೇ ಇಲ್ಲದಾಗಿಸಲು ನಿರಂತರ ಪ್ರಯತ್ನಿಸುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ. ಇಂದು ಅಸ್ಸಾಮಿನಲ್ಲಿ ಅಸ್ತಿತ್ವಕ್ಕಾಗಿ ನಡೆದ ಹೋರಾಟಗಳು ನಮ್ಮ ಮುಂದಿದೆ. ಈ ಘಟನೆಯು ಅಸ್ತಿತ್ವಕ್ಕಾಗಿ ಹೋರಾಟಗಳು ಅನಿವಾರ್ಯಗಿದೆ ಮತ್ತು ಅದು ತ್ಯಾಗ, ಬಲಿದಾನವನ್ನೂ ಕೇಳುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಅಸ್ಸಾಮಿನಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸುತ್ತಿರುವುದು ಇಂದು ನಿನ್ನೆಯ ಘಟನೆಯಲ್ಲ. ಅದು ಆಕಸ್ಮಿಕವೂ ಅಲ್ಲ. ಅವುಗಳು ವ್ಯವಸ್ಥಿತವಾಗಿ ರೂಪಿಸಲಾಗಿರುವ ಸಂಚುಗಳು. 1971 ರಲ್ಲಿ ಬಾಂಗ್ಲಾ ವಿಭಜನೆಯ ನಂತರ ದೇಶಕ್ಕೆ ಬಾಂಗ್ಲಾದೇಶದಿಂದ ವಲಸಿಗರು ಬಂದಿದ್ದಾರೆ ಎನ್ನುವ ಕೋಮು ಆಧಾರಿತ, ದ್ವೇಷ ಹುಟ್ಟಿಸುವ ಪ್ರಚಾರ ವ್ಯಾಪಕವಾಗಿ ನಡೆಯಿತು. ಹಿಂದುತ್ವ ಕೋಮುವಾದಿ ಶಕ್ತಿಗಳು ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡರು ಮತ್ತು ಜನರನ್ನು ವಿಭಜಿಸುವಲ್ಲಿ ಸಫಲರಾದರು. ಮುಂದೆ ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರನ್ನು ಅಸ್ಸಾಮಿನಲ್ಲಿ ಅಕ್ರಮ ವಿದೇಶಿಗರು ಎಂದು ಬಿಂಬಿಸಿ ವ್ಯಾಪಕ ಹಿಂಸಾಚಾರ, ಹತ್ಯಾಕಾಂಡ ಮತ್ತು ಒಕ್ಕಲೆಬ್ಬಿಸುವಿಕೆ ನಿರಂತರವಾಗಿ ನಡೆಯಿತು. 1983 ರಲ್ಲಿ ನೆಲ್ಲಿ ಎನ್ನುವ ಪ್ರದೇಶದಲ್ಲಿ ನಡೆದ ಭೀಕರ ಹತ್ಯಾಕಾಂಡವು ಪೂರ್ವ ಬಂಗಾಳ ಮೂಲದ ಮುಸ್ಲಿಂ ರೈತರು ಸೇರಿ ಸುಮಾರು 2191 ಜನರನ್ನು (ಅನಧಿಕೃತ ಅಂಕಿ ಅಂಶಗಳ ಪ್ರಕಾರ 10,000 ಜನರನ್ನು) ಬಲಿ ಪಡೆಯಿತು. ದೇಶವನ್ನು ಇಡೀ ಜಗತ್ತಿನ ಮುಂದೆ ತಲೆ ತಗ್ಗಿಸುವಂತೆ ಮಾಡಿದ ಬಾಬರಿ ಮಸೀದಿ ಧ್ವಂಸದ ನಂತರ 1993 ರಲ್ಲಿ ನಡೆದ ಗಲಭೆಯಲ್ಲಿ ಹಲವಾರು ಅಮಾಯಕ ಜನರು ಹತರಾದರು. 2012 ರಲ್ಲಿ ನಡೆದ ಗಲಭೆಯಲ್ಲಿ ಲಕ್ಷಕ್ಕಿಂತಲೂ ಅಧಿಕ ಜನರು ತಮ್ಮ ಗ್ರಾಮಗಳನ್ನು ಬಿಟ್ಟು ಶಿಬಿರಗಳಲ್ಲಿ ಬದುಕಬೇಕಾಯಿತು. ಹೀಗೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಅಸ್ತಿತ್ವವನ್ನು ಇಲ್ಲದಾಗಿಸಲು ವ್ಯವಸ್ಥಿತವಾದ ಸಂಚುಗಳು ಮುಂದುವರಿದವು.
ಅಸ್ಸಾಮಿನ ಧರಾಂಗ್ ಜಿಲ್ಲೆಯ ಧೋಲ್ ಪುರ ಗ್ರಾಮದ ಸಿಪಾಜಾರ್ ಎಂಬಲ್ಲಿ ಅಕ್ರಮ ನಿವಾಸಗಳನ್ನು ತೆರವುಗೊಳಿಸುವ ಹೆಸರಿನಲ್ಲಿ ನಡೆದ ಭೀಕರ ಕ್ರೌರ್ಯಕ್ಕೆ ವಿಶ್ವವೇ ಬೆಚ್ಚಿ ಬಿದ್ದಿದೆ. ಶಸ್ತ್ರಾಸ್ತ್ರಗಳೊಂದಿಗೆ ಬಂದ ಪೊಲೀಸರು ಅಲ್ಲಿನ ರೈತಾಪಿ ಜನರ ಮೇಲೆ ನಕ್ಸಲ್ ಉಗ್ರರ ಮೇಲೆ ಎರಗಿದಂತೆ ದಾಳಿ ನಡೆಸಿರುವುದು ಅಸ್ಸಾಂ ಪೊಲೀಸರ ಮನಸ್ಥಿತಿಯನ್ನು ತೆರೆದಿಟ್ಟಿದೆ. ತಲೆತಲಾಂತರದಿಂದ ಜೀವನ ನಡೆಸಿತ್ತಿರುವ ಪುಟ್ಟ ವಸತಿಯೂ ಇಲ್ಲದ 800 ಕ್ಕೂ ಹೆಚ್ಚು ಕುಟುಂಬಗಳನ್ನು ಕಾರ್ಪೊರೇಟ್ ಕೃಷಿ ಕಂಪನಿಗಳ ಹಿತಾಸಕ್ತಿಗಾಗಿ ಬಲವಂತವಾಗಿ ಒಕ್ಕಲೆಬ್ಬಿಸುವಂತೆ ಒತ್ತಡ ಹೇರಲಾಯಿತು. ಇದನ್ನು ಅಲ್ಲಿನ ಜನರು ಸಹಜವಾಗಿಯೇ ಪ್ರತಿಭಟಿಸಿದರು. ಪೊಲೀಸರು ಯಾವುದೇ ಮುನ್ಸೂಚನೆ ಇಲ್ಲದೆ ನಿರಾಯುಧವಾಗಿ, ಅಸಹಾಯಕನಾಗಿ ಓಡಿ ಬರುತ್ತಿದ್ದ ಓರ್ವ ಕೂಲಿ ಕಾರ್ಮಿಕನ ಮೇಲೆ ಗುಂಡು ಹಾರಿಸಿದ್ದು ಮಾತ್ರವಲ್ಲದೆ, ಪೊಲೀಸರ ಸಮ್ಮುಖದಲ್ಲಿಯೇ ಗುಂಡು ತಗುಲಿ ಬಿದ್ದಿದ್ದ ಆತನ ಮೃತ ಶರೀರದ ಮೇಲೆ ಓರ್ವ ಸರಕಾರಿ ಛಾಯಾಚಿತ್ರ ಗ್ರಾಹಕ ನೆಗೆದು ಕುಪ್ಪಳಿಸಿ ಮೃಗೀಯವಾಗಿ ವರ್ತಿಸಿರುವುದು ಮಾನವೀಯ ಮನಸ್ಸುಗಳನ್ನು ತಲ್ಲಣಗೊಳಿಸಿದೆ. ಒಬ್ಬ ಸರಕಾರಿ ಛಾಯಾಗ್ರಾಹಕ ಆ ಮಟ್ಟಿಗೆ ಕ್ರೌರ್ಯವನ್ನು ಮೆರೆಯಬಲ್ಲನಾದರೆ, ಕೈಯಲ್ಲಿ ಬಂದೂಕು ಹಿಡಿದ ಪೊಲೀಸರು ಯಾವ ಮಟ್ಟದ ಕ್ರೌರ್ಯ ಮೆರೆದಿರಬಹುದು? ಸತ್ತು ಬಿದ್ದ ವ್ಯಕ್ತಿಗೆ ನಗೆದು ನೆಗೆದು ತುಳಿಯಬೇಕಾದರೆ ಅವನ ಎದೆಯೊಳಗೆ ಎಷ್ಟು ದ್ವೇಷವಿರಬೇಕು? ಅದಲ್ಲದೆ 800 ಕುಟುಂಬಗಳ ಸಾವಿರಾರು ಮಂದಿಗೆ ಆರಾಧನಾ ತಾಣವಾಗಿದ್ದ 4 ಮಸೀದಿಗಳನ್ನು ಧ್ವಂಸಗೊಳಿಸಿರುವುದು ಅಲ್ಪಸಂಖ್ಯಾತ ಸಮುದಾಯದ ಅಸ್ತಿತ್ವವನ್ನು ಇಲ್ಲದಾಗಿಸಲು ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಸುವ ಜನಾಂಗೀಯ ಹಿಂಸೆಯ ಭಾಗವಾಗಿದೆ.
ಅಸ್ತಿತ್ವದ ಪ್ರಶ್ನೆಗಳು ಬಂದಾಗ ಶರಣಾಗಿ ಓಡಿ ಹೋಗುವ ಬದಲು ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ, ಕಾನೂನು ಹೋರಾಟಗಳನ್ನು ಮಾಡಬೇಕಾಗಿದೆ. ಇತಿಹಾಸದುದ್ದಕ್ಕೂ ಶರಣಾಗಿ ಓಡಿ ಹೋದ ಸಮುದಾಯ ತಮ್ಮ ಅಸ್ತಿತ್ವ, ವಾಸಸ್ಥಳ, ಸಂಪತ್ತು ಹಾಗೂ ತಮ್ಮವರ ಜೀವಗಳನ್ನು ಕಳೆದುಕೊಂಡಿತು. ಇನ್ನೊಂದೆಡೆ ಅಸ್ತಿತ್ವದ ಪ್ರಶ್ನೆಗಳು ಬಂದಾಗ ಶರಣಾಗಿ ಓಡಿ ಹೋಗದೆ, ಸೆಟೆದು ನಿಂತು ತ್ಯಾಗ ಬಲಿದಾನಗಳನ್ನು ನೀಡಿದ ಸಮುದಾಯ ಇತಿಹಾಸದಲ್ಲಿ ಜಯಗಳಿಸಿರುವುದು ನಿದರ್ಶನವಾಗಿದೆ.