ಹುಲಿಯ ಹೆಜ್ಜೆಯ ಗುರುತು ಮಂಜರಾಬಾದ್ ಕೋಟೆ!!

ಜೈನುಲ್ ಅಕ್ಬರ್ ಬಿ, ಕಡೇಶಿವಾಲಯ

ಸಕಲೇಶಪುರ ಸಮೀಪ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ಧಾರಿ 75ರ ಪಾರ್ಶ್ವದಲ್ಲಿರುವ “ಮಂಜರಾಬಾದ್ ಕೋಟೆ.” ಇದನ್ನು ಹಝ್ರತ್ ಟಿಪ್ಪು ಸುಲ್ತಾನ್ 1792 ರಲ್ಲಿ ಫ್ರೆಂಚ್ ಇಂಜಿನಿಯರರ ಸಹಾಯದಿಂದ ಯುರೋಪಿಯನ್ ಶೈಲಿಯಲ್ಲಿ ಕಟ್ಟಿಸಿದರು. ಸಮುದ್ರ ಮಟ್ಟದಿಂದ 3241 ಅಡಿ ಎತ್ತರದಲ್ಲಿರುವ ಈ ಐತಿಹಾಸಿಕ ಕೋಟೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಡೆದ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದೆ.

ಈ ಕೋಟೆಯನ್ನು ಸೈನಿಕರಿಗೆ ವಿವಿಧ ತರಬೇತಿ ನೀಡಲು,ಮದ್ಧು -ಗುಂಡುಗಳ ದಾಸ್ತಾನು ನಡೆಸಲು ಉಪಯೋಗಿಸಲಾಗುತ್ತಿತ್ತು.ನಕ್ಷತ್ರಾಕಾರದ ಕೋಟೆಯ ಹೊರ ಆವರಣವನ್ನು ಬೆಣಚು ಕಲ್ಲಿನಿಂದ ಕಟ್ಟಲಾಗಿದ್ಧು ,ಒಳಾಂಗಣದ ಗೋಡೆಯನ್ನು ಸುಟ್ಟ ಇಟ್ಟಿಗೆಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ.ಬೇಸಿಗೆ ಕಾಲದಲ್ಲಿಯೂ ಇಲ್ಲಿರುವ ಸಣ್ಣ ಸಣ್ಣ ಭವನಗಳು ತಂಪಾಗಿರುವಂತೆ ವಿಶೇಷ ಗಾರೆ ಬಳಸಲಾಗಿದೆ.

ವೈರಿ ಸೈನಿಕರು ಕೋಟೆ ಪ್ರವೇಶಿಸಿದಂತೆ ಕೋಟೆಯ ಸುತ್ತಲೂ ಸಂಪೂರ್ಣ ನೀರಿನಿಂದ ಆವೃತವಾಗುವಂತೆ ಕಾಲುವೆ ರೀತಿಯ ಗುಂಡಿಯನ್ನು ತೋಡಲಾಗಿದೆ.ಕೋಟೆಯ ಮೇಲೆ ನಿಂತು ನೋಡಿದರೆ ಬಹುದೂರದವರೆಗೆ ಕಾಣುವ ವಿಹಂಗಮ ನೋಟ ಮನಸೂರೆಗೊಳಿಸುತ್ತದೆ. ಆಕಾಶ ಶುಭ್ರವಾಗಿದ್ಧರೆ ಇಲ್ಲಿಂದ ಅರಬ್ಬೀ ಸಮುದ್ರವೂ ಬರೀಗಣ್ಣಿಗೆ ಕಾಣಿಸುತ್ತದೆ.

ಟಿಪ್ಪು ಸುಲ್ತಾನ್ ಕೋಟೆಯ ಕಾಮಗಾರಿ ವೀಕ್ಷಿಸಲು ಬಂದಾಗ ಕೋಟೆಯು ದಟ್ಟ ಮಂಜಿನಿಂದ ಆವೃತವಾಗಿದ್ಧ ಕಾರಣ “ಮಂಜರಾಬಾದ್ ಕೋಟೆ” ಎಂದೇ ನಾಮಕರಣ ಮಾಡಿದರಂತೆ.ಈ ಕೋಟೆಯಿಂದ ಶ್ರೀರಂಗಪಟ್ಟಣ ನಡುವೆ ಸಂಪರ್ಕ ಸಾಧಿಸಲು ಸುರಂಗ ಮಾರ್ಗವೂ ಇತ್ತೆಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಸರ್ಕಾರದ ಸೋಮಾರಿತನದಿಂದ ಐತಿಹಾಸಿಕ ಕೋಟೆ ಇದೀಗ ಶಿಥಿಲಾವಸ್ಥೆಯಲ್ಲಿದೆ.ಕೋಟೆಯ ಪ್ರಮುಖ ಭಾಗಗಳು ಈಗಾಗಲೇ ಹಾನಿಗೀಡಾಗಿದ್ಧು ಹೊರ ಕವಚದಿಂದ ಗಾರೆ ಕಿತ್ತು ಸುಟ್ಟ ಇಟ್ಟಿಗೆಗಳು ಕಣ್ಣಿಗೆ ಕಾಣಿಸುತ್ತವೆ.

ಬರೀ 17 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್ ಅದೆಂತಹ ದೂರದೃಷ್ಟಿಯ ನಾಯಕ ಎಂಬುದಕ್ಕೆ ಈ ಕೋಟೆ ಸಣ್ಣ ನಿದರ್ಶನ.

Leave a comment