
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಮತ್ತು ಇನ್ನಿತರ ಆಪ್ತರು ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಬರ್ಭರವಾಗಿ ಹತ್ಯೆ ಮಾಡಿದ ಘಟನೆ ನಿಜಕ್ಕೂ ನಿಬ್ಬೆರಗುಗೊಳಿಸುವಂಥದ್ದು.
ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏನು ಕ್ರಮಕೈಗೊಂಡಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ ಬಳಿಕ ಈಗ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ಆರೋಪಿಗಳನ್ನು ಬೆನ್ನತ್ತುತ್ತಿದ್ದಾರೆ.
ರೈತರ ದುರ್ಮರಣ ನಡೆದ ನಂತರ ಸಾಮಾಜಿಕ ಜಾಲತಾಣ ಮತ್ತು ಜಾಗತಿಕ ಮಟ್ಟದಲ್ಲಿ ಹಲವು ವಿರೋಧಾಭಾಸಗಳು ಕೇಳಿ ಬಂದಿದ್ದು, ಹಲವು ಬಿಜೆಪಿ ವಿರೋಧಿ ಪಕ್ಷಗಳು, ರೈತಾಪಿ ವರ್ಗದವರು ಪ್ರಕರಣದ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಮೂಲ ಕಾರಣಕರ್ತನಾದ ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾನನ್ನು ಈ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ಒದಗಿಸಬೇಕೆಂದು ಆಗ್ರಹಿಸಿದ್ದರು. ಇದೀಗ ಹಲವು ಒತ್ತಡಕ್ಕೆ ಮಣಿದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವು ಆರೋಪಿಗಳನ್ನು ಬೇಟೆಯಾಡುತ್ತಿದೆ. ಆದರೆ ಇದು ಮೇಲ್ಮಟ್ಟಕ್ಕೆ ಜನರ ಮನ ಕೆರಳುವುದು ಬೇಡವೆಂದು ಯೋಗಿ ಆದಿತ್ಯನಾತ್ ಮಾಡುತ್ತಿರುವ ನಾಟಕ ಮಾತ್ರವಾಗಿದೆ.
ಇನ್ನೊಂದು ನಮ್ಮ ದೇಶದಲ್ಲಾಗುತ್ತಿರುವ ಆಘಾತಕಾರಿ ಬೆಳವಣಿಗೆಯೇನೆಂದರೆ ಬಿಜೆಪಿ ಹಿನ್ನೆಲೆಯುಳ್ಳ ಯಾರಾದರೂ ಹಲ್ಲೆಗೆ ಕಾರಣಕರ್ತರಾದರೆ , ಆ ಸಂತ್ರಸ್ತರನ್ನು ಭೇಟಿ ಮಾಡಲು ಯಾರಾದರೂ ಪ್ರತಿಷ್ಠಿತರು ಹೋದರೆ ಅವರಿಗೆ ತಡೆಗೋಡೆ ಹಾಕುವಂಥದ್ದು, ಅವರನ್ನು ಬಂಧಿಸುವಂಥದ್ದು ಯಾವ ರೀತಿಯ ಪರಿಕಲ್ಪನೆ ಎಂದು ತಿಳಿಯುತ್ತಿಲ್ಲ. ಇದರರ್ಥ ಬಿಜೆಪಿಯ ಪ್ರಭುತ್ವವು ಪರೋಕ್ಷವಾಗಿ ಕೃತ್ಯವನ್ನು ಒಪ್ಪಿಕೊಂಡಂತೆ ಎಂದೂ ಭಾಸವಾಗುತ್ತದೆ. ಲಖೀಂ ಪುರ ಖೇರಿಗೆ ಪ್ರಿಯಾಂಕ ಗಾಂಧಿ, ಅಖಿಲೇಶ್ ಯಾದವ್,ನವಜೋತ್ ಸಿಂಗ್, ರಾಹುಲ್ ಗಾಂಧಿಯನ್ನು ಒಳಗೊಂಡ ಹಲವು ನಾಯಕರು ಸಂತ್ರಸ್ತರನ್ನು ಭೇಟಿ ಮಾಡಲು ಹೊರಟರೆ, ಅವರನ್ನು ಬಂಧಿಸಿದ ಪರಿ ನಮ್ಮ ದೇಶದಲ್ಲಿ ನಡೆದಿದೆ. ಈ ಮೊದಲು ನಡೆದ ಹತ್ರಾಸ್ ನಂತಹ ಘಟನೆಯಲ್ಲೂ ನಾವು ಈ ಧೋರಣೆಯನ್ನು ನೋಡಿದ್ದೇವೆ.
ಲಖಿಂಪುರ ಪ್ರಕರಣದಲ್ಲಿಇನ್ನೂ ಕೂಡ ಪೊಲೀಸರು ಮುಖ್ಯ ಆರೋಪಿಯಾದ ಆಶಿಶ್ ಮಿಶ್ರಾನನ್ನು ಬಂಧಿಸದೆ, ಆಶೀಶ್ ನ ಆಪ್ತರಾದ ಆಶಿಶ್ ಪಾಂಡೆ ಮತ್ತು ಲವಕುಶ್ ಎಂಬವರನ್ನು ಬಂಧಿಸಿದ್ದಾರೆ. ದೇಶವೇ ನಾಚುವಂತಹ ಈ ಕುಕೃತ್ಯವನ್ನು ನಾವು ಖಡಾ ಖಂಡಿತವಾಗಿ ವಿರೋಧಿಸಬೇಕಾಗಿದೆ. ಇದರ ಮುಖ್ಯ ಆರೋಪಿಯನ್ನು ಬಂಧಿಸುವವರೆಗೂ ಸಾಮಾನ್ಯ ಪ್ರಜ್ಞೆಯುಳ್ಳ ಎಲ್ಲಾ ಪ್ರಜೆಗಳು ಇದರ ವಿರುದ್ಧ ಸೆಟೆದು ನಿಲ್ಲಬೇಕಾಗಿದೆ.