ಬೆಳಗಾವಿ ಕಡೆ ಪಯಣ

– ಅಥಾವುಲ್ಲಾ ಪುಂಜಾಲಕಟ್ಟೆ

ಸ್ನೇಹಿತರ ಭೇಟಿಗಾಗಿ ನನ್ನ ಒಂದು ದಿನದ ಬೆಳಗಾವಿ ಪಯಣದಲ್ಲಿ ಅಲ್ಲಿನ ಆಚಾರ-ವಿಚಾರಗಳು, ಆಕರ್ಷಕ ಭೌಗೋಳಿಕ ವಾತಾವರಣ, ಸ್ನೇಹಿತರೊಂದಿಗೆ ಕೇಳಲ್ಪಟ್ಟ ಇತಿಹಾಸ ಮತ್ತು ನಾನು ಭೇಟಿ ಕೊಟ್ಟ ಸ್ಥಳದ ಇತಿಹಾಸದೊಂದಿಗೆ ಸ್ನೇಹಿತರ ಪ್ರೀತಿ ಪಾತ್ರ ಇತ್ಯಾದಿ ಎಲ್ಲವೂ ನನ್ನನ್ನು ಬೆಳಗಾವಿಯತ್ತ ಮತ್ತೆ ಕೈಬೀಸಿ ಕರೆಯುತ್ತಿದೆ…

ಹಲವು ರಾಜಮಹಾರಾಜರು ಆಳಿದ ಇತಿಹಾಸ ಹೊಂದಿರುವ ಬೆಳಗಾವಿ ಇತಿಹಾಸದುದ್ದಕ್ಕೂ ಹಲವು ಹೆಸರಿನಿಂದ ಕರೆಯಲ್ಪಡುತ್ತಿತ್ತು ಅವುಗಳಲ್ಲಿ ಪ್ರಮುಖವಾಗಿ ಕಮಲ್ ಬಸದಿ, ವೇಣುಪುರ (ಬಿದಿರಿನ ನಗರ ), ಬೆಳಗಾಂ, ಅಝಮ್ ನಗರ ಇತ್ಯಾದಿ. ಇನ್ನು 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ 1924 ರ ಡಿಸೆಂಬರ್ ನಲ್ಲಿ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ನಡೆದದ್ದು ಕೂಡ ಲ್ಲಿಯೆ ಆಗಿತ್ತು. 1961 ವರೆಗೆ ಗೋವಾದ ಆಡಳಿತದ ಭಾಗವಾಗಿ ಪೋರ್ಚುಗೀಸರ ಅಧೀನದಲ್ಲಿತ್ತು, ಇನ್ನೂ 1947 ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ಸಮಯದಲ್ಲಿ ಬಾಂಬೆ ರಾಜ್ಯದ ಅಧೀನದಲ್ಲಿತ್ತು ನಂತರ 1956 ರಲ್ಲಿ ಭಾಷಾವಾರು ಪ್ರಾಂತ್ಯದ ವಿಂಗಡೆಯಿಂದಾಗಿ ಮೈಸೂರು ರಾಜ್ಯಕ್ಕೆ ದಕ್ಕಿತು, 2006ರಲ್ಲಿ ಬೆಳಗಾವಿಯನ್ನು ಕರ್ನಾಟಕ ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡುವ ಮೂಲಕ ಸುವರ್ಣ ವಿಧಾನಸೌಧವನ್ನು ಸಹ ಬೆಳಗಾವಿಯಲ್ಲಿ ನಿರ್ಮಿಸಲಾಯಿತು, ಬಳಿಕ ಪ್ರತಿವರ್ಷದ ಚಳಿಗಾಲದ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿದೆ.

ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿ ಪ್ರದೇಶವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಭೌಗೋಳಿಕವಾಗಿ ಸಹ್ಯಾದ್ರಿ ತಪ್ಪಲಿಗೆ ಪಾದಸ್ಪರ್ಶ ಹೊಂದಿದ್ದು ಮತ್ತೊಂದು ಕಡೆ ಕೇವಲ 100 ಕಿಲೋಮೀಟರ್ ಗೆ ಅರಬ್ಬಿ ಸಮುದ್ರ ಇರುವ ಕಾರಣಕ್ಕಾಗಿ ಬೆಳಗಾವಿಯ ವಾತಾವರಣವು ಅತ್ಯಂತ ತಂಪು ದಾಯಕವಾಗಿ ಆಕರ್ಷಣೀಯವಾಗಿದೆ, ಇನ್ನು ಜಿಲ್ಲೆಯಲ್ಲಿ ಶೇಕಡ 40ರಷ್ಟು ಕನ್ನಡ ಭಾಷಿಕರಾದರೆ ಶೇಕಡ 38ರಷ್ಟು ಮರಾಠಿ ಮಾತನಾಡುವ ಜನರಿದ್ದಾರೆ, ಇದೇ ಕಾರಣಕ್ಕಾಗಿ ಪದೇಪದೇ ಭಾಷಾ ವಿಚಾರದಲ್ಲಿ ಶೀತಲ ಸಮರ ನಡೆಯುವುದುಂಟು. ಅಲ್ಲದೇ ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜಕೀಯ ವಿಷಯವೂ ಆಗಿದೆ.

ಇಲ್ಲಿನ ಪ್ರಮುಖ ಆದಾಯವು ತರಕಾರಿ, ಮಾಂಸ, ಕೋಳಿ ಸಾಕಾಣೆ, ಮೀನು ಸಾಕಣೆ, ಗಣಿಗಾರಿಕೆ, ಮರಗಳು ಇತ್ಯಾದಿ ಆಗಿದೆ.
ಬೆಳಗಾವಿಯ ಉತ್ತಮ ಭೌಗೋಳಿಕ ವಾತಾವರಣದ ಕಾರಣಕ್ಕಾಗಿ ಇಲ್ಲಿ ಭಾರತ ಸೇನೆಯ ಮಿಲಿಟರಿ ಆಸ್ಪತ್ರೆ, ಇಂಡೋ-ಟಿಬೆಟಿಯನ್ ಬೋರ್ಡರ್ ಪೊಲೀಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಇತ್ಯಾದಿ ಸೈನಿಕ ತರಬೇತಿ ಕೇಂದ್ರಗಳನ್ನು ಒಳಗೊಂಡಿದೆ.

ಕರ್ನಾಟಕದ ಶೈಕ್ಷಣಿಕ ಕೇಂದ್ರದ ಪ್ರಮುಖ ನಗರವಾಗಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಒಳಗೊಂಡಂತೆ ಹಲವು ವಿದ್ಯಾಕೇಂದ್ರಗಳ ತವರಾಗಿದೆ.
ಇನ್ನಿತರ ಹಲವು ವಿಶೇಷತೆ ಹೊಂದಿರುವ ಬೆಳಗಾವಿಯು ನನ್ನ ಒಂದು ದಿನದ ಪಯಣದಲ್ಲಿ ಸ್ನೇಹಿತರ ಜೊತೆಗೂಡಿ ಅಲ್ಲಿನ ಸ್ವಾದಿಷ್ಟ ಆಹಾರಗಳು, ಸಂಜೆಯ ವೇಳೆ ಬೀದಿ ಬದಿಗಳಲ್ಲಿ ಸಿಗುವ ಚಾಟ್ಸ್ ತಿಂಡಿಗಳು ಮತ್ತು ಬೆಳಗಾವಿಯ ಸಿಹಿತಿಂಡಿಗಳು ನನ್ನ ಬೆಳಗಾವಿಯ ಪಯಣಕ್ಕೆ ಇನ್ನಷ್ಟು ಪುಷ್ಟಿ ನೀಡಿತು, ಈ ಸಂದರ್ಭದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂದರ್ಭದ ಬೈಕ್ ಸವಾರಿಯು ಪ್ರಕೃತಿ ಸೌಂದರ್ಯವನ್ನು ಸವಿಯಲು ಇನ್ನಷ್ಟು ಸಹಕಾರಿಯಾಯಿತು.

ಕನ್ನಡ, ಮರಾಠಿ, ಉರ್ದು ಇನ್ನಿತರ ಹಲವು ಭಾಷೆಗಳನ್ನಾಡುವ ಜನರನ್ನು ಹೊಂದಿರುವ ಬೆಳಗಾವಿಯ ಸಂಭಾಷಣೆಯು ಅವರ ಪ್ರೀತಿಪಾತ್ರದೊಂದಿಗೆ ವಿಶೇಷ ಅನುಭವ ನೀಡಿತು.

ನಿರಂತರ ಕೆಲಸದ ಜಂಜಾಟದ ಮಧ್ಯೆ ನನ್ನ ಈ ಒಂದು ದಿನದ ಬೆಳಗಾವಿ ಭೇಟಿಯು ಸ್ನೇಹಿತರ ಪ್ರೀತಿ ಪಾತ್ರದೊಂದಿಗೆ ಅಲ್ಲಿನ ವಾತಾವರಣ, ಆಚಾರ-ವಿಚಾರಗಳು ನನ್ನ ಮನಸ್ಸನ್ನು ಹಗುರಗೊಳಿಸುವುದರೊಂದಿಗೆ ಪಯಣವು ಜೀವನದ ನೆನಪಿನಲ್ಲಿ ಅಚ್ಚಲಿಯಾಗಿ ಉಳಿಯುವಂತೆ ಮಾಡಿದೆ… ಮತ್ತೆ ನನ್ನ ಪ್ರೀತಿ ಪಾತ್ರರೊಂದಿಗೆ ಬೆಳಗಾವಿ ಭೇಟಿಗೆ ಅವಕಾಶ ಬಂದೋದಗಲಿ ಎಂಬ ಹಂಬಲವು ವ್ಯಕ್ತವಾಗುತ್ತಿದೆ…
ಸಲಾಂ ಬೆಳಗಾಂ…

Leave a comment