ಕೇಂದ್ರ ಸರಕಾರ ಕೆಲವೊಂದು ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ರೀತಿ ಮತ್ತು ನಿಲುವು

– ಅಲ್ತಾಫ್ ಮದ್ದಡ್ಕ

ರಾಷ್ಟ್ರೀಯ ಶಿಕ್ಷಣ ನೀತಿ; “ಬೇರೆಯವರ ಬುದ್ಧಿವಾದಕ್ಕೆ ಕಿವಿಕೊಡುವ ಸದ್ಬುದ್ಧಿ ನಮ್ಮಲ್ಲಿ ಇದ್ದರೆ ನಾವು ನಮ್ಮ ಜೀವನದಲ್ಲಾಗುವ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು” ಖ್ಯಾತ ಸಾಹಿತಿಗಳಾದಂತಹ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜೀವನದ ಬಗೆಗಿನ ಸುಂದರ ವಾಕ್ಯಗಳು. ಪ್ರಸ್ತುತ ಎನ್ ಇ ಪಿ ವಿಚಾರಕ್ಕೂ ಕೂಡ ಈ ವಾಕ್ಯಗಳನ್ನು ವಿಮರ್ಶಾತ್ಮಕ ವಾಕ್ಯಗಳಾಗಿ ಬಳಸಲು ಅನುಕೂಲವಾಗಿದೆ. ಯಾವ ರೀತಿಯಲ್ಲಿ ಎಂದು ಹೇಳುವುದಾದರೆ ಪ್ರಾಯಶಃ ಪ್ರಸ್ತುತ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ವಿಧ್ಯಾರ್ಥಿಗಳು, ಶಿಕ್ಷಕರು, ಅದೇ ರೀತಿ ಅನೇಕ ಚಿಂತಕರು, ರಾಜಕೀಯ ನಾಯಕರು ಚರ್ಚಿಸುತ್ತಿರುವ ವಿಷಯವಾಗಿದೆ ಎನ್ ಇ ಪಿ. ಯಾಕಿಷ್ಟು ಚರ್ಚೆ? ಯಾಕಿಷ್ಟು ಟೀಕೆ? ಯಾಕಿಷ್ಟು ವಿಮರ್ಶನೆಗಳು? ಎಂಬ ಪ್ರಶ್ನೆಯೂ ಇರಬಹುದು. ಏಕೆಂದರೆ ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ಕರಡು ಪ್ರತಿಯನ್ನು ರಚಿಸಿ ಅದನ್ನು ಯಾವುದೇ ವಿಧದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸದೇ ಹಿಂಬಾಗಿಲಿನ ಮೂಲಕ ಈ ಕಾಯಿದೆ ದೇಶಾದ್ಯಂತ ಜಾರಿಗೊಳಿಸಲು ಆದೇಶ ನೀಡಿದೆ ಮತ್ತು ನಮ್ಮ ಕರ್ನಾಟಕ ರಾಜ್ಯವೇ ಈ‌ ನೀತಿಯನ್ನು ಪ್ರಥಮವಾಗಿ
ಜಾರಿಗೊಳಿಸಿದೆ. ಈ ಮೊದಲೇ ತಿಳಿಸಿದ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳು ಅನ್ವಯವಾಗುವುದು ಇಲ್ಲಿ.

ವಿಧಾನಸಭೆಯಲ್ಲಿ ನಮ್ಮ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸದೇ ಅದನ್ನು ನೇರವಾಗಿ ರಾಜ್ಯಸರ್ಕಾರ ಜಾರಿಗೊಳಿಸಿದೆ. ಈ‌ ನೀತಿಯಲ್ಲಿ ಎಷ್ಟು ಒಳ್ಳೆಯ ಅಂಶಗಳು ಇದೆಯೋ ಅದಕ್ಕಿಂತ ದುಪ್ಪಟ್ಟು ಗೊಂದಲಗಳೇ ಇದೆ. ಕಾರಣ ವಿದ್ಯಾರ್ಥಿಗಳಲ್ಲಿ ಕೇಳಿದರೆ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ‌. ಈ ನೀತಿಯಲ್ಲಿ ಬೋಧಿಸಲಿರುವ ಶಿಕ್ಷಕರಲ್ಲಿ ಕೇಳಿದರೆ ಅವರಿಗೂ ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಹೀಗೆಲ್ಲಾ ಇರುವ ಕಾಯಿದೆ ಗೊಂದಲವಲ್ಲದೆ ಮತ್ತೇನು? ಇನ್ನು ಈ ನೀತಿಯಲ್ಲಿ 4 ವರ್ಷ ಡಿಗ್ರಿ ವ್ಯಾಸಂಗ ಬೋಧಿಸಲು ಬೇಕಾದಷ್ಟು ಶಿಕ್ಷಕರಿದ್ದಾರೆಯೇ. ಈ ವರ್ಷವಂತೂ ಅತ್ಯಂತ ಅಧಿಕ ಮಟ್ಟದ ಪದವಿ ವಿದ್ಯಾಭ್ಯಾಸಕ್ಕೆ ವಿಧ್ಯಾರ್ಥಿಗಳು ಸೇರ ಬಯಸುತಿದ್ದಾರೆ ಮತ್ತು ಅವರಿಗೆ ಬೋಧಿಸುವಷ್ಟು ಶಿಕ್ಷಕರಿಲ್ಲ ಮಾತ್ರವಲ್ಲ ಮತ್ತು ಹೊಸ ಕಾಯಿದೆ ಬಗ್ಗೆ ಅರಿಯದ ವಿದ್ಯಾರ್ಥಿಗಳು ಯಾವ ಶಿಕ್ಷಣ ವ್ಯವಸ್ಥೆ ಎಂಬುವುದರ ಬಗ್ಗೆ ಗೊಂದಲದಲ್ಲಿ ಇದ್ದಾರೆ. ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಎಮ್‌ ಕೆ ಸ್ಟಾಲಿನ್, ಪಶ್ಚಿಮ ಬಂಗಾಳ ಸರ್ಕಾರ,.ಕೇರಳ ಸರ್ಕಾರ ಮತ್ತು ಅನೇಕ ರಾಜ್ಯಗಳು ಇದಕ್ಕೆ ತೀವ್ರವಾಗಿ ವಿರೋಧಿಸಿದೆ‌.
ಇಂದಿನಿಂದ ಆರಂಭವಾಗುವ ಕರ್ನಾಟಕ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ಈಗಾಗಲೇ ಹಲವಾರು ಶಾಸಕರು,ಚಿಂತಕರು, ರಾಜಕಾರಣಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿ ಸಂಘಟನೆಗಳು ಈ ಎನ್ ಇ ಪಿ ಯನ್ನು ಹಿಂಪಡೆಯಬೇಕೆಂದು ತಾಕೀತು ಮಾಡಿದ್ದು, ಯಾವ ರೀತಿಯು ನಿಲುವು ಬರಲಿದೆ ಎಂಬುವುದು ಕುತೂಹಲಕಾರಿಯಾಗಿದೆ.

2014 ರ ನಂತರ ಅಧಿಕಾರ ಹಿಡಿದ ಆಡಳಿತ ಸರಕಾರ ಜಾರಿಗೊಳಿಸಿರುವ ಅನೇಕ ಕಾಯಿದೆ ಮತ್ತು ನಿಲುವುಗಳ ಬಗ್ಗೆ ನಾವು ನೋಡುವುದಾದರೆ ಅನೇಕ ಕಾಯಿದೆಗಳ ಶಾಸನ ಮತ್ತು ಮಸೂದೆಗಳಿಗೆ ವಿರೋಧವಿದ್ದರೂ ತಮ್ಮ ಹಿತಾಸಕ್ತಿ ಮತ್ತು ವೋಟ್ ಬ್ಯಾಂಕನ್ನು ಮನದಲ್ಲಿಟ್ಟುಕೊಂಡು ತಮ್ಮ ಹಿಂದುತ್ವ ಪ್ರೇರಿತ ವರ್ಗವು ಹೇಳಿಕೊಟ್ಟ ರೀತಿಯಲ್ಲಿ ಅನೇಕ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ ಮತ್ತು ಅದನ್ನು ಹಿಂಪಡೆಯಲು ಎಷ್ಟೇ ವಿರೋಧವಿದ್ದರೂ ಅದನ್ನು ಹಿಂಪಡೆಯುತ್ತಿಲ್ಲ ಕಾರಣ ಒಂದು ವೋಟ್ ಬ್ಯಾಂಕ್.
ಉದಾಹರಣೆಗೆ ಎನ್ ಆರ್ ಸಿ ವಿಚಾರದಲ್ಲಿ ಅನೇಕ ವಿರೋಧವಿದ್ದರೂ ಜಾರಿಗೊಳಿಸಲಾಯಿತು, ಇದಲ್ಲದೇ ಅನೇಕ ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಪೌರತ್ವ ಕಾಯಿದೆ ವಿರುದ್ಧ ನಿರ್ಣಯಗಳನ್ನೂ ತೆಗೆದುಕೊಂಡಿದ್ದಾರೆ. ಇದೊಂದು ಕಡೆಯಾದರೆ

ಡಾ||ಬಿ ಆರ್ ಅಂಬೆಡ್ಕರ್ ರವರು ಇಡೀ ದೇಶಾದ್ಯಂತ ಸಂಚರಿಸಿ ಒಂದು ಕರಡು ಸಮಿತಿಯನ್ನು ರಚಿಸಿ‌ ಅನೇಕ ರೀತಿಯಲ್ಲಿ ಚರ್ಚೆಗಳನ್ನು ಜಾರಿಗೊಳಿಸಿದಂತಹ ಸಂವಿಧಾನದ ಅನೇಕ ಜನಪರ ಶಾಸನಗಳನ್ನು, ಜನರ ವಿರೋಧವಿದ್ದರೂ ಕೂಡ ಕೇಂದ್ರ ಸರ್ಕಾರ ತಿದ್ದುಪಡಿ ಮಾಡುತ್ತಿದೆ. ಅದರಲ್ಲಿ ಒಂದಾಗಿದೆ ಸಂವಿಧಾನದ 370 ನೇ ವಿಧಿ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದು.
ಅಂಬೆಡ್ಕರ್ ರವರ ವಾಕ್ಯವಾಗಿದೆ “ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು” ನಿಜವಾಗಿಯೂ ಈ ವಾಕ್ಯ ಪ್ರಸ್ತುತ ಇರುವ ಕೇಂದ್ರ ಸರ್ಕಾರಕ್ಕೆ ತಿಳಿಹೇಳುವ ರೀತಿಯಲ್ಲಿ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾನ ನಂತರ ಅಲ್ಲಿಯ ಜನರು ಅನುಭವಿಸಿತ್ತಿರುವ ಸಂಕಷ್ಟ, ದೌರ್ಜನ್ಯ,ಸಮಸ್ಯೆಗಳನ್ನು ಅನೇಕ ಮಾಧ್ಯಮಗಳಲ್ಲಿ ನಾವು ಗಮನಿಸುತಿದ್ದೇವೆ. ಆ ವಿಧಿ ರದ್ದಾದ ಇಂದಿಗೂ ಅಲ್ಲಿ ಚುನಾವಣೆ ನಡೆಯದೇ ಇರುವುದು ವಿಪರ್ಯಾಸ.

ಇನ್ನು ದೆಹಲಿಯಲ್ಲಿ ಸುಮಾರು ಆರು ತಿಂಗಳಿಂದೀಚಿಗೆ ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತಂದ ಹೊಸ ಮೂರು ಕಾಯಿದೆ ವಿರುದ್ಧ ಪ್ರತಿಭಟಿಸಿತ್ತಿರುವ ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ ಮತ್ತು ದೇಶದ ಅನೇಕ ರೈತರನ್ನು ನಾವೆಲ್ಲ ಗಮನಿಸಿರಬಹುದು. ಹೊಸ ಕೃಷಿ ಕಾಯಿದೆಯು ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ, 2020, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆಗಳಂತಹ ಸರಕುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತದೆ. ಇದರಿಂದ ತೊಂದರೆಯಿದೆ ಎಂದು ರೈತರು
ಎಷ್ಟೇ ಪ್ರತಿಭಟಿಸಿದರೂ, ಜೀವಹಾನಿಯಾದರು ಇದ್ಯಾವುದಕ್ಕೂ ಲೆಕ್ಕಿಸದೇ ತನ್ನ ನಿಲುವಿನಲ್ಲೇ ನೆಲೆ ನಿಂತಿರುವುದನ್ನು ಗಮನಿಸುವಾಗ ಕೇಂದ್ರ ಸರ್ಕಾರವು ಸಮಾಜ ವಿರೋಧಿ ಫ್ಯಾಸಿಸ್ಟರ ಆದೇಶವನ್ನು ಪಾಲಿಸುವುದು ಮಾತ್ರವಲ್ಲೇ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೇಂದ್ರ ಸರಕಾರವು ಇಂತಹ ಹತ್ತು ಹಲವು ಜನವಿರೋಧಿ ಕರಾಳ ಕಾನೂನುಗಳನ್ನು ಜಾರಿಗೊಳಿಸಿದರೂ,ಅದರಿಂದ ಜನಸಾಮಾನ್ಯರಿಗೆ ಅನೇಕ ನಷ್ಟವಿದೆಯೆಂದು ತಿಳಿದರೂ ಕಣ್ಣಿದ್ದೂ ಕುರುಡರಂತೆ ನಟಿಸುವ ನಮ್ಮಂತಹ ಕೆಲ ಜನಸಾಮಾನ್ಯರ ಮೌನವು ನಿಜಕ್ಕೂ ವಿಪರ್ಯಾಸಗೊಳಿಸುವಂಥದ್ದು.

Leave a comment