ರಾಬಿಯಾ ಕ್ಷಮಿಸಿ ಬಿಡು

– ರಿಯಾಝ್ ಕಡಂಬು

ದೇಶ ಸೇವೆ ಮಾಡಲು
ನೀ ಸಮವಸ್ತ್ರ ಧರಿಸಿ
ಪರೇಡ್ ನಡೆಸಿದ
ಅದೇ ಬೀದಿಯಲ್ಲಾಗಿತ್ತು
ರಾಕ್ಷಸರು ನಿನ್ನ ಹರಿದು ತಿಂದದ್ದು

ಗದ್ದುಗೆಯಲ್ಲಿ ಕೂತವರ
ಕುರ್ಚಿಯ ಅಡಿಯಲ್ಲೇ…
ಸೈರನ್ ಹಾಕಿ ಮಹಾಶಯರು
ಸಾಗುವ ರಸ್ತೆ ಬದಿಯಲ್ಲೇ
ಕ್ರೌರ್ಯವೆಸಗಿ ನಿನ್ನ ಕೊಂದಿದ್ದು

ಸಂಸತ್ ನ ಗದ್ದಲದ ನಡುವೆ
ನಿನ್ನ ಕಿರುಚಾಟ ಕೇಳಲಿಲ್ಲ..
ನವಿಲನ್ನಾಡಿಸುವ ರಾಜ
ಕಣ್ಣು ತೆರೆದರೆ ಕಾಣುವಷ್ಟು
ಹತ್ತಿರದಲ್ಲಾಗಿತ್ತು ನಿನ್ನ ರಕ್ತ ಹೀರಿದ್ದು

ನಿನ್ನ ಶರೀರಕ್ಕೆ ಚುಚ್ಚಿದ
ವಿಚಾರ ಗೊತ್ತಾದಾಗ
ಆಳುವವರ ಮನಸು ಕರಗಲ್ಲ
ಯಾಕೆಂದರೆ 2002 ರಲ್ಲಿ
ಇವರೇ ಆಗಿತ್ತು ಈ ರೀತಿ ಮೆರೆದಿದ್ದು

ದಿಲ್ಲಿಯ ಮುಖ್ಯನಿಗೆ
ಕೈ ಚಿಹ್ನೆಯ ಯುವಕನಿಗೆ
ನಿನ್ನ ಮನೆಯ ದಾರಿ ಕಾಣಲ್ಲ
ಜಾತಿ, ಧರ್ಮ ನೋಡಿಯಷ್ಟೇ
ಮನೆಬಾಗಿಲಿಗೆ ಧಾವಿಸುವುದು

ಆಫ್ಘಾನಿನ ತಾಲಿಬಾನಿಗಳ
ವರದಿಯ ಶಬ್ದದ ನಡುವೆ
ಇಲ್ಲಿಯ ಮಾಧ್ಯಮಗಳಿಗೂ
ನಿನಗಾದ ಕ್ರೌರ್ಯವ
ಬಿತ್ತರಿಸಲು ಸಮಯವಿಲ್ಲ..

ಒಮ್ಮೆ ಜೋರಾಗಿ ಅತ್ತು
ಕಿರುಚಾಡದ ಹಾಗೆ
ನಿನ್ನ ತೇಗಿದ ಕ್ರೂರರ ಮಧ್ಯೆ
ನಿನಗಾಗಿ ಕಣ್ಣೀರು ಹಾಕಲು
ನ್ಯಾಯಕ್ಕೆ ಕೂಗಲು ಯಾರಿರುವರು..

ನ್ಯಾಯ ವ್ಯವಸ್ಥೆಯೇ ಕುರುಡಾಗಿ ನಿಂತಿದೇ
ರಕ್ಷಣೆಯ ಮಾತುಗಳು
ಮನ್ ಕೀ ಬಾತ್ ನಲ್ಲಿ
ಸುಳ್ಳುಗಳ ನಡುವೆ ತೇಲಾಡುತ್ತಿದೆ

ನಿನ್ನ ಕೊನೇಯ ಕಣ್ಣೀರು
ರಕ್ತದಿಂದ ಕರಗಿ ಹೋದ ವಸ್ತ್ರ
ಕ್ರೌರ್ಯಕ್ಕೆ ಬಲಿಯಾದ ನಿನ್ನ ಶರೀರ..
ಇದೆಲ್ಲವೂ ಮಣ್ಣು ಸೇರಿದೆ..
ಹೆತ್ತ ಗರ್ಭವಷ್ಟೇ ಕೊರಗುತ್ತಿದೆ..

Leave a comment