ಅನಿಯಮಿತ ಅತ್ಯಾಚಾರಗಳು : ವಿಕೃತ ಪ್ರಭಾವ ಬೀರುವ ಸಿನಿಮಾಗಳೂ ಒಂದು ಕಾರಣ

ಜಾಗತಿಕ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಚಾರಗಳ ಸುದ್ದಿ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಭಾರತ ದೇಶದಲ್ಲಿ ಎಂಬುವುದು ನಮಗರಿಯುವ ಸಂಗತಿ. ದೇಶವನ್ನೇ ಬೆಚ್ಚಿಬೀಳಿಸಿದ ಮತ್ತು ದೇಶದ ಮೌಲ್ಯವನ್ನು ಕುಗ್ಗಿಸಿದಂತಹ ಅದೆಷ್ಟೋ ಭಯಾನಕ ಅತ್ಯಾಚಾರಗಳಿಗೆ ಭಾರತ ಸಾಕ್ಷಿಯಾಗಿದೆ.

2018-19ರ ಒಂದು ವರದಿಯ ಪ್ರಕಾರ ದೇಶದಲ್ಲಿ ದಿನಕ್ಕೆ 87ಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತದೆ ಎಂಬ ಸುದ್ದಿಯು ಮಹಿಳಾ ಸುರಕ್ಷತೆಯಲ್ಲಿ ದೇಶವು ಎಷ್ಟು ಹಿಂದೆ ಸರಿದಿದೆ ಎನ್ನುವಂಥದ್ದಕ್ಕೆ ಕುರುಹು. ನಿರ್ಭಯಾ, ಹತ್ರಾಸ್ ಗ್ಯಾಂಗ್ ರೇಪ್, ಹೈದರಾಬಾದ್ ಗ್ಯಾಂಗ್ ರೇಪ್, ಕಥುವಾ ಅತ್ಯಾಚಾರ ಹಾಗೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಬೀಯಾ ಅತ್ಯಾಚಾರ ಮುಂತಾದ ಹತ್ತು ಹಲವು ಅತ್ಯಾಚಾರಗಳಂತೂ ದೇಶವನ್ನು ತಲ್ಲೀನಗೊಳಿಸಿದೆ.

ಆದರೆ ಈ ಆಧುನೀಕರಣ ಹೊಸ್ತಿಲಲ್ಲಿ ಇಂತಹ ಮಹಿಳಾ ದೌರ್ಜನ್ಯ ಪ್ರಕರಣಗಳು, ಅತ್ಯಾಚರಗಳು ದಿನಗಳುರುಳಿದಂತೆಯೇ ಹೆಚ್ಚಾಗಲು ಕೆಲ ದುಷ್ಟ ಪ್ರಭಾವ ಬೀರುವ, ವಿಕೃತದತ್ತ ಓಲೈಸುವ ಸಿನಿಮೀಯ ದೃಶ್ಯಗಳೂ ಒಂದು ಕಾರಣವೆಂಬ ಸತ್ಯಾಸತ್ಯತೆಯನ್ನು ನಾವು ಒಪ್ಪಲೇಬೇಕಾಗಿದೆ. ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು ಕನ್ನಡದ ಒಂದು ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಅದಲ್ಲದೆ ಹಲವು ಅತ್ಯಾಚಾರ ಆರೋಪಿಗಳು ವಿಚಾರಣೆಯ ಸಂದರ್ಭದಲ್ಲಿ ಹಲವು ಸಿನಿಮಾಗಳ ಹೆಸರು ಹೇಳಿ ತಮ್ಮ ಕರ್ಮಕಾಂಡಕ್ಕೆ ಕಾರಣವೇನೆಂದು ಬಾಯಿ ಬಿಟ್ಟಿದ್ದರು.

ಕೆಲವು ಆರೋಪಿಗಳು ಬಹಿರಂಗವಾಗಿ ಬಾಯಿಬಿಟ್ಟ ಇಂತಹ ಉದಾಹರಣೆಗಳಾದರೆ , ಹೆಚ್ಚಿನವು ತಾವು ಮಾಡುತ್ತಿರುವ ಅತ್ಯಾಚಾರಕ್ಕೆ ಕೆಲ ಸಿನಿಮಾಗಳ ದೃಶ್ಯಗಳೇ ಕಾರಣವೆಂಬ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸಲ್ಲ. ಸಿನಿಮಾದಲ್ಲಿ ಪ್ರತ್ಯಕ್ಷಗೊಳ್ಳುವ ವ್ಯತಿರಿಕ್ತ ವಿಕೃತ ಪ್ರಚೋದನೆ ನೀಡುವ ದೃಶ್ಯಗಳು ವೀಕ್ಷಕನ ಮನಸ್ಥಿತಿಯನ್ನು ಒಂದು ಕ್ಷಣಕ್ಕೆ ಬದಲಾಯಿಸುತ್ತದೆ. ಹೆಚ್ಚಿನವು ಒಂದು ಕ್ಷಣಕ್ಕೆ ಮಾತ್ರವಲ್ಲದೆ ಅದು ಅನಿಯಮಿತ ಕ್ಷಣದವರೆಗೂ ಬದಲಾವಣೆಯ ಪರಿಣಾಮ ಬೀಳುತ್ತದೆ. ತನ್ನ ಮನದಲ್ಲಿ ಏನೋ ಒಂದು ಚಂಚಲದ ಸ್ವರೂಪವನ್ನು ಆತ ಅನುಭವಿಸುತ್ತಾನೆ.

ಸಿನಿಮಾದಲ್ಲಿ ಅರೆಬರೆ ಡ್ರೆಸ್ ಹಾಕಿಕೊಂಡ ತರುಣಿಯೊಬ್ಬಳು, ಅಶ್ಲೀಲ ಭಂಗಿಗಳಲ್ಲಿ ಕ್ಯಾಬರೆ ಮಾಡುವಾಗ ಸುತ್ತ ಸೇರಿರುವವರೆಲ್ಲಾ ಚಪ್ಪಾಳೆ ತಟ್ಟುವುದು, ಶಿಳ್ಳೆ ಹಾಕುವುದು, ನೋಟು ಎಸೆಯುವುದು ಮಾತ್ರವಲ್ಲ ನಾಯಕನ ಹೆಂಡತಿ ಇಲ್ಲವೇ ಮಗಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುತ್ತಾಳೆ. ಅತ್ಯಾಚಾರಿಗಳನ್ನು ಪತ್ತೆಹಚ್ಚಿ ಕೊಲೆ ಮಾಡುವುದು, ಆ ಮೂಲಕ ಸೇಡು ತೀರಿಸಿಕೊಳ್ಳುವುದೇ ನಾಯಕನ ಕೆಲಸವಾಗುತ್ತದೆ. ಮೂರು ಗಂಟೆಯ ಕಾಲ ಸೇಡಿನ ವೈಭವೀಕರಣವನ್ನು ಪ್ರೇಕ್ಷಕ ನೋಡಿ ಆನಂದಿಸುತ್ತಾನೆ. ಇದಲ್ಲದೆ ಕೆಲವಂತು ದೃಶ್ಯಗಳಿಂದ ಅತ್ಯಾಚಾರ ಹೇಗೆ ಮಾಡಬೇಕೆಂಬ ಸಂಪೂರ್ಣ ಕ್ರಿಯಾತ್ಮಕ ಮಾಹಿತಿಯನ್ನೂ ವೀಕ್ಷಕ ಕಲೆ ಹಾಕುತ್ತಾನೆ. ಈ ದುಷ್ಟ ಪರಿಣಾಮದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ದುರುಳ ಕೃತ್ಯಗಳನ್ನು ಮಾಡುವ ಮೂಲಕ ದುರಿತಕ್ಕೊಳಗಾಗುತ್ತಾನೆ.

ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರು, ಯುವಕರು ಪ್ರಭಾವಕ್ಕೊಳಗಾಗುವವರು. ಗ್ರಾಮೀಣ ಪ್ರದೇಶದ ಜನರಿಗೆ ಮನರಂಜನೆ ಎಂದರೆ ಸಿನಿಮಾ ಒಂದೇ. ಟಿವಿಗಳ ಮೂಲಕ , ಮೊಬೈಲ್ ಗಳ ಮೂಲಕ ಬರುವ ಇಂತಹ ದೃಶ್ಯಗಳು, ಚಿತ್ರಗಳು ಪ್ರೇಕ್ಷಕನ ಮುಗ್ಧ ಮನಸ್ಸನ್ನು ಬದಲಾಯಿಸುವ ತಾಂತ್ರಿಕ ಶಕ್ತಿ ಪಡೆದಿರುತ್ತವೆ.

ಕಾರಿನಲ್ಲಿ, ಆಟೋದಲ್ಲಿ, ಬಸ್ಸಿನಲ್ಲಿ ಅತ್ಯಾಚಾರ ಮಾಡುವ ಕಲ್ಪನೆಗಳನ್ನು ಕಟ್ಟಿಕೊಟ್ಟದ್ದೂ ಕೆಲ ಸಿನಿಮಾಗಳು. ಹುಟ್ಟಿನಿಂದಲೇ ಯಾರೂ ಅತ್ಯಾಚಾರಿಗಳಾಗಿರುವುದಿಲ್ಲ. ಇಂತಹ ಸಿನಿಮಾಗಳು ಅಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತವೆ. ಯುವ ಮನಸ್ಸುಗಳ ಮೇಲೆ ಪರಿಣಾಮ ಉಂಟುಮಾಡುತ್ತವೆ. ಬಸ್‌ನಲ್ಲಿ ಅತ್ಯಾಚಾರ ಮಾಡುವ ಹೀನಕೃತ್ಯ ಇಂತಹ ಪ್ರೇರೇಪಿತ ಮನೋವಿಕಾರಿಗಳಿಂದಾದದ್ದು ಎನ್ನುವುದನ್ನು ಗಮನಿಸಬೇಕು

ಮಾನವ ಜೀವನವನ್ನು ಸಕರಾತ್ಮಕ ಮನಸ್ಥಿತಿಯತ್ತ ಬದಲಾಯಿಸುವ, ಕೆಟ್ಟ ಮನಸ್ಥಿತಿಯನ್ನು ಬದಲಾಯಿಸುವ ಅದೆಷ್ಟೋ ಸಿನಿಮಾಗಳು ಅಸ್ತಿತ್ವದಲ್ಲಿರುವಾಗ, ಇಲ್ಲಿ ಬೊಟ್ಟು ಮಾಡುತ್ತಿರುವಂಥದ್ದು ನಕರಾತ್ಮಕ ಪರಿಣಾಮವನ್ನು ಅದರಲ್ಲೂ ಅತ್ಯಾಚಾರದ ಮನಸ್ಥಿತಿಗೆ ಓಲೈಸುವ ಸಿನಿಮಾಗಳನ್ನು ಮಾತ್ರ. ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕರು ಇದರ ಬಗ್ಗೆ ದೀರ್ಘ ಚಿಂತನೆಮಾಡಬೇಕಾಗಿದೆ. ತಮ್ಮ ಲಾಭಕ್ಕೋಸ್ಕರ ಒಂದು ಜನಸಮೂಹದ ಭಾವನೆಯಲ್ಲಿ ವ್ಯತಿರಿಕ್ತ ದುಷ್ಟಪರಿಣಾಮವುಂಟಾಗಲು ಕಾರಣವಾಗುವ ಮೂಲಕ ಸ್ವದುರಿತಕ್ಕೊಳಗಾಗಬೇಡಿ ಎಂಬ ಕಳಕಳಿ.

One thought on “ಅನಿಯಮಿತ ಅತ್ಯಾಚಾರಗಳು : ವಿಕೃತ ಪ್ರಭಾವ ಬೀರುವ ಸಿನಿಮಾಗಳೂ ಒಂದು ಕಾರಣ

Leave a comment