
ಸಂಸತ್ತಿನಲ್ಲಿ ಸಮಗ್ರ ಚರ್ಚೆ ಮಾಡದೆ ಹಲವು ವಿರೋಧಗಳ ನಡುವೆಯೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸಲೇಬೇಕೆಂದು ಪಟ್ಟು ಹಿಡಿದು ಒಂದು ಹಂತದಲ್ಲಿ ಜಾರಿಗೊಳಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿರುವ ಕೇಂದ್ರ ಸರಕಾರದ ಈ ಯೋಜನೆಯ ಹಿಂದಿರುವ ಕಾರ್ಯಸೂಚಿಯ ಅಜೆಂಡಾ ಏನೆಂದು ದೇಶದ ಜನತೆ ಅರಿಯಬೇಕಾಗಿದೆ.
ಬಿಜೆಪಿ ಪ್ರೇರಿತ ಕೇಂದ್ರ ಸರಕಾರವು ಈ ಶಿಕ್ಷಣ ನೀತಿಯ ಮೂಲಕ ತಮ್ಮ ಸೈದ್ಧಾಂತಿಕ ಮತ್ತು ತಾತ್ವಿಕತೆಯ ಹಿತಾಸಕ್ತಿಯ ಅನುಷ್ಠಾನದ ದೂರಗಾಮಿ ದೂರಾಲೋಚನೆಯನ್ನು ಇಟ್ಟುಕೊಂಡಿದೆ. ಬಿಜೆಪಿ ಮತ್ತು ಅದರ ಪೋಷಕ ಸಂಘಟನೆಯಾದ ಆರ್ ಎಸ್ ಎಸ್ ಭವಿಷ್ಯದಲ್ಲಿ ತಮ್ಮ ಸಿದ್ಧಾಂತದ ಸಂಪೂರ್ಣವಾದ ಹಿಡಿತಕ್ಕೋಸ್ಕರ ವಿರೋಧಗಳ ನಡುವೆಯೂ ಅನುಷ್ಠಾನಕ್ಕೆ ತರಲು ಅವಸರ ಅವಸರವಾಗಿ ಪ್ರಯತ್ನಿಸುತ್ತಿರುವಂಥದ್ದು.
ಶಿಕ್ಷಣ ನೀತಿಯನ್ನು ಬುಡಮೇಲು ಗೊಳಿಸುವ ಮೂಲಕ ಅಂದರೆ ತಮ್ಮ ದೂರದೃಷ್ಟಿಯ ಆಚಾರ- ವಿಚಾರಗಳನ್ನು ಪರೋಕ್ಷವಾಗಿ ಶಿಕ್ಷಣದ ಮೂಲಕ ಹೇರಿ, ತಮ್ಮ ಸಮಗ್ರ ಉದ್ದೇಶವನ್ನು ಈಡೇರಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂಬುವುದು ಸ್ಪಷ್ಟವಾಗುತ್ತಿದೆ.
ದೇಶದ ಉನ್ನತ ಶಿಕ್ಷಣದ ಇತಿಹಾಸವನ್ನು ಮೆಲಕುಹಾಕಿದರೆ ಸ್ವಾತಂತ್ರ್ಯ ಪೂರ್ವದಲ್ಲಿ 1857 ರ ವಿಶ್ವವಿದ್ಯಾಲಯ ಕಾಯಿದೆ II ರ ಅಡಿಯಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯ ಸ್ಥಾಪಿಸುವುದರ ಮೂಲಕ ಪ್ರಾರಂಭವಾಗುತ್ತದೆ, ವಿಶ್ವವಿದ್ಯಾಲಯಗಳು ಬ್ರಿಟಿಷರ ಸಾಂಸ್ಕೃತಿಕ ವಸಾಹತೀಕರಣಕ್ಕೆ ಒಂದು ವೇದಿಕೆಯಾಯಿತು. 1935 ರ ತನಕ ಬ್ರಿಟಿಷರ ಸ್ವಾಮ್ಯದಲ್ಲಿದ್ದ ಉನ್ನತ ಶಿಕ್ಷಣವನ್ನು ಪ್ರಾಂತೀಯ ರಾಜಕೀಯ ವ್ಯವಸ್ಥೆಗೆ ಹಸ್ತಾಂತರಿಸಲಾಯಿತು. ಸ್ವಾತಂತ್ರದ ನಂತರ 1958 ರಲ್ಲಿ ಉನ್ನತ ಶಿಕ್ಷಣದ ಮೇಲ್ವಿಚಾರಣೆಗಾಗಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವನ್ನು ಸ್ಥಾಪಿಸಿ ಸ್ವತಂತ್ರ ಭಾರತದ ಉನ್ನತ ಶಿಕ್ಷಣಕ್ಕೆ ರೂಪುರೇಷೆಗಳನ್ನು ನೀಡಲಾಯಿತು. ಮುಂದುವರಿದು ಉನ್ನತ ಶಿಕ್ಷಣದಲ್ಲಿ ವಿವಿಧ ಸುಧಾರಣೆಗಳನ್ನೊಳಗೊಂದಂತೆ ಅನೇಕ ಬದಲಾವಣೆಗಳಾದವು .
ಪ್ರಸ್ತುತ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಬಹಳ ಗಣನೀಯವಾದದ್ದು.
ಹಿನ್ನೆಲೆ :
ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು 2018ರ ಡಿಸೆಂಬರ್‌ನಲ್ಲಿ ತನ್ನ 486 ಪುಟಗಳ ‘ಎನ್‌ಇಪಿ:2019’ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ರೊ. ವಸುದ ಕಾಮತ್, ಪ್ರೊ. ಮಂಜುಲ್ ಭಾರ್ಗವ, ಡಾ. ರಾಮ್ ಶಂಕರ್ ಕುರೀಲ್, ಪ್ರೊ. ಓ.ವಿ.ಕಟ್ಟೀಮನಿ, ಕ್ರಿಶ್ಣಮೋಹನ್ ತ್ರಿಪಾಠಿ, ಪ್ರೊ. ಮಾಜರ್ ಆಸೀಫ್, ಪ್ರೊ.ಎಂ.ಕೆ.ಶ್ರೀಧರ್, ರಾಜೇಂದ್ರ ಪ್ರತಾಪ್ ಗುಪ್ತ ಈ ಸಮಿತಿಯ ಸದಸ್ಯರು. ಇವರಲ್ಲಿ ಎಂ.ಕೆ.ಶ್ರೀಧರ್ ಅವರು ಆರೆಸ್ಸಸ್‌ನ ಸಂಘಚಾಲಕರಾಗಿದ್ದವರು ಮತ್ತು ಎಬಿವಿಪಿಯ ಉಪಾದ್ಯಕ್ಷರಾಗಿದ್ದವರು. ರಾಜೇಂದ್ರ ಪ್ರತಾಪ್ ಗುಪ್ತ ಅವರು 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನ ರೂಪಿಸಿದವರಲ್ಲಿ ಪ್ರಮುಖರು. 2018ರಲ್ಲಿ ಆಗಿನ ಕೇಂದ್ರ ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ಅವರು ತಮ್ಮ ಸಲಹೆಗಾರರಾಗಿದ್ದ ಈ ರಾಜೇಂದ್ರ ಪ್ರತಾಪ್ ಗುಪ್ತ ಅವರನ್ನ ಭ್ರಷ್ಟಾಚಾರದ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಿದ್ದರು. ಮತ್ತೊಂದೆಡೆ ಕೊಠಾರಿ ಆಯೋಗದಲ್ಲಿ 21 ಸದಸ್ಯರಲ್ಲಿ ಶಿಕ್ಷಣ ತಜ್ಞರಿದ್ದರು, ಸಂವಿಧಾನ ತಜ್ಞರಿದ್ದರು, ಉಪಕುಲಪತಿಗಳಿದ್ದರು, ವಿದೇಶಿ ಶಿಕ್ಷಣ ತಜ್ಞರಿದ್ದರು. ಆದರೆ ಕಸ್ತೂರಿ ರಂಗನ್ ಸಮಿತಿಯಲ್ಲಿನ 7 ಸದಸ್ಯರ ಪೈಕಿ ಕೆಲ ಸದಸ್ಯರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ.
ಮೇ 31, 2019ರಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ತಯಾರಾದ “ರಾಷ್ಟ್ರೀಯ ಶಿಕ್ಷಣ ನೀತಿ 2019”ಯನ್ನ ಮೋದಿ ಸರಕಾರ ಸಾರ್ವಜನಿಕವಾಗಿ ಪ್ರಕಟಿಸಿತು. ಜೂನ್ 30ರ ಒಳಗೆ ಪ್ರತಿಕ್ರಿಯೆ, ಅಭಿಪ್ರಾಯಗಳನ್ನ ಸಲ್ಲಿಸಬೇಕೆಂದು ತಿಳಿಸಿದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ನಂತರ ಈ ಗಡುವನ್ನು ಆಗಸ್ಟ್ 31, 2019ಕ್ಕೆ ವಿಸ್ತರಿಸಿತು. ನಂತರ ಕೆಲ ತಿಂಗಳ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ 55 ಪುಟಗಳ ಪರಿಶ್ಕರಿಸಿದ ‘ಎನ್‌ಇಪಿ 2020’ಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಅದರ ಮುಖ್ಯಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿತು ಮತ್ತು ಕರಡು ಪ್ರತಿಯನ್ನೂ ತನ್ನ ಜಾಲತಾಣದಲ್ಲಿ ಪ್ರಕಟಿಸಿತು.
ಈ ಶಿಕ್ಷಣ ನೀತಿಯನ್ನು ದೇಶದ ಪ್ರಗತಿಪರರು, ಉನ್ನತ ವಿಶ್ವವಿದ್ಯಾನಿಲಯಗಳು, ವಿದ್ಯಾಸಂಸ್ಥೆಗಳು, ಜಾತ್ಯಾತೀತವಾದಿಗಳು, ಹಲವು ವಿದ್ಯಾರ್ಥಿ ಸಂಘಟನೆಗಳು ಕಟುವಾಗಿ ವಿರೋಧಿಸುತ್ತಿದ್ದಾರೆ. ಎನ್ ಇ ಪಿಯು ವಿಳಂಬವಾಗಿದೆ, ವೈಜ್ಞಾನಿಕವಾಗಿಲ್ಲ, ಮಧ್ಯಕಾಲೀನ ಇತಿಹಾಸವನ್ನು ಕೈಬಿಟ್ಟಿದೆ, ಮುಸ್ಲಿಂ ಹೋರಾಟಗಾರರನ್ನು ಕೈಬಿಟ್ಟಿದೆ ಎಂಬ ಹಲವು ಟೀಕೆಗಳನ್ನು ಎನ್ ಇ ಪಿ ವಿರೋಧಿಗಳು ಪ್ರಸ್ತಾಪಿಸುತ್ತಿದ್ದಾರೆ. ಅದು ಹೌದೂ ಕೂಡ.
ಯಾಕೆಂದರೆ ‘ಎನ್‌ಇಪಿ 2020’ ಶಿಕ್ಷಣ ನೀತಿಯು ಸಂವಿಧಾನ ಅನುಚ್ಚೇದಗಳನ್ನು ಬಹಿರಂಗವಾಗಿಯೆ ಕಡೆಗಣಿಸಿದೆ. ಈ ವರದಿಯಲ್ಲಿ ಸಮಾಜವಾದ, ಜಾತ್ಯಾತೀತ, ಬಂಧುತ್ವ ಮತ್ತು ಸಮಾನತೆಯ ಪ್ರಸ್ತಾಪವಿಲ್ಲ. 14ನೆ ವಯಸ್ಸಿನವರೆಗೂ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣವನ್ನು ಪ್ರತಿಪಾದಿಸುವ ಸಂವಿಧಾನ ಅನುಚ್ಚೇದ 21ಎ, 45ರ ಕುರಿತು ಪ್ರಸ್ತಾಪವಿಲ್ಲ. ಇದು ಈ ನೀತಿಯ ವಿಶ್ವಾಸಾರ್ಹತೆಗೆ ಕುಂದುಂಟು ಮಾಡುತ್ತದೆ.
ಈ ಶಿಕ್ಷಣ ನೀತಿಯು ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಕುರಿತಾಗಿ ನಡೆಯುತ್ತಿರುವ ಬದಲಾವಣೆಗಳು, ಪ್ರಯೋಗಗಳು ಮತ್ತು ಸಾಧನೆಗಳನ್ನು ಅಧ್ಯಯನ ಮಾಡಿಲ್ಲ. ಹಿಂದಿನ ಶಿಕ್ಷಣ ನೀತಿಗಳನ್ನು ತುಲನಾತ್ಮಕ ವಿಶ್ಲೇಷಣೆ ಮಾಡಿಲ್ಲ. ತಾನು ಯಾವ ಆಧಾರದ ಮೇಲೆ ಶಿಫಾರಸ್ಸುಗಳನ್ನು ಮಾಡುತ್ತಿದ್ದೇನೆ ಎಂಬುದಕ್ಕೆ ಯಾವುದೆ ಸಾಕ್ಚಿಗಳಿಲ್ಲ, ಆಧಾರಗಳಿಲ್ಲ.
ನೆರೆಹೊರೆ ಶಾಲಾ ವ್ಯವಸ್ಥೆಯ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ. ಸಮಾನ ಶಿಕ್ಷಣ ಪದ್ದತಿ ಕುರಿತು ಮಾತನಾಡುವುದಿಲ್ಲ. ಈ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳುವುದಿಲ್ಲ. ಪ್ರಜಾಪ್ರಭುತ್ವದ ಆಧಾರಸ್ತಂಬವೇ ಕುಸಿದು ಬೀಳುತ್ತದೆ.
ಇನ್ನೊಂದೆಡೆ ಶಿಕ್ಷಣವು ಏಳನೇ ಶೆಡ್ಯೂಲ್‌ನ ಪ್ರಕಾರ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಇಲ್ಲಿ ರಾಜ್ಯಗಳಿಗೂ ಸಹ ಸಮಾನ ಜವಬ್ದಾರಿಗಳಿವೆ. ಆದರೆ ಇದನ್ನು ನಿರ್ಲಕ್ಷಿಸಿ ‘ಎನ್‌ಇಪಿ 2020’ ಕೇಂದ್ರ ಮಟ್ಟದಲ್ಲಿ ಒಂದು ನಿಯಂತ್ರಣ ಪ್ರಾಧಿಕಾರ ರಚಿಸಲು ಬಯಸುತ್ತದೆ. ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುತ್ತದೆ. ಇದು ಒಕ್ಕೂಟ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡುತ್ತದೆ. ಇಂತಹ ಹಲವು ಲೋಪದೋಷಗಳನ್ನು ಎನ್ ಇ ಪಿ 2020 ಒಳಗೊಂಡಿದೆ.ಈ ಒಂದು ಕರಾಳ ಮನಸ್ಥಿತಿಯ ನೀತಿಯನ್ನು ದೇಶದ ಎಲ್ಲಾ ನೈಜ ನಾಗರಿಕರು ವಿರೋಧಿಸಬೇಕೆಂದು ಇತ್ತೀಚೆಗಷ್ಟೇ ವಿರೋಧಿ ಮಂಡಳಿಯು ಕರೆಯನ್ನು ಕೊಟ್ಟಿತ್ತು.
ಒಟ್ಟಾರೆಯಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬಿಜೆಪಿ ಪ್ರೇರಿತ ಅಥವಾ ಆರ್ ಎಸ್ ಎಸ್ ಶಕ್ತಿಗಳ ಸೈದ್ಧಾಂತಿಕ ದೂರಾಲೋಚನೆಯ ದುರಾಲೋಚನೆಯಾಗಿದೆ.
Ee vasthava sandesha kevala Twitter s, face bookers galondige hanchikolluvudannu bittu hegaadaru janasaamaanyarige sandesha thalupuva haage maadi horaatagalige kare needi
LikeLike