-ಆಮಿರ್ ಬನ್ನೂರು
(ಯುವ ಬರಹಗಾರರು)
ಸೆರೆ ಹಿಡಿದ ಸತ್ಯ ತೆರೆಯಲ್ಲಿ ಕಂಡು
ಭಯಭೀತರಾದ ಭೀಭತ್ಸರ ತಂಡ
ಊರ ತಿರುವಿನಲ್ಲಿ ಸಂಭ್ರಮಿಸಿದ್ದಾರೆ,
ಸೆರೆ ಹಿಡಿದವನ ಸಾವಿನ ಸುದ್ದಿಗೆ..!
ಭರತ ಮಾತೆಯ ಮಕ್ಕಳ ಚಿತೆ
ತಿಂಗಳು ಘಟ್ಟಲೇ ಎಡಬಿಡದೆ
ಹೊತ್ತಿ ಉರಿದು
ಊರೆಲ್ಲಾ ಕಪ್ಪು ಕವಿದರೆ!
ಡೋಲು ಬಾರಿಸಿ,ಚಿಮಿಣಿ ಹೊತ್ತಿಸಿ
ಅತ್ಮಾಭಿಮಾನದಿಂದ ದಿಗ್ಗಜರಿಗೆ
ನೀವು ಜೈ ಕಾರ ಹಾಕಿದರೆ
ಜಗದ ನೈಜ್ಯ ದೃಶ್ಯಗಳನ್ನು
ಸೆರೆಹಿಡಿದು ಜನರೊಂದಿಗೆ
ಜಾಗರೂಕತೆಯ ಸಂದೇಶ
ಸಾರಿದವನ ಸಾವಿಗೆ ಸಂಭ್ರಮವಂತೆ..!

ಸಂಜೆಯಾದರೆ ಕತ್ತಲಾಗುತ್ತೆ
ಮಳೆ ಬಂದರೆ ಮೈ ಒದ್ದೆಯಾಗುತ್ತೆ
ಇಲ್ಲಿಯಾದರೆ ಬದುಕಬೇಕು
ಹಾಗಾದರೆ ಒಂದಿಷ್ಟು ಆಹಾರವು ಬೇಕು…
ಕತ್ತಲಾದಾಗ,ಮಳೆ ಬಂದಾಗ
ಗೂಡು ಸೇರಿ ಸುರಕ್ಷರಾಗಬೇಕು
ಅದಕ್ಕೂ ಒಂದು ತುಂಡು ನೆಲ ಬೇಕು
ವಿಶಾಲ ಜಗದಲ್ಲಿ ನೆಲವನ್ನು
ಹುಡುಕಿ ಬಂದ ಬಡವರನ್ನು
ಧರ್ಮದ ಹೆಸರಿನಲ್ಲಿ ಸುಟ್ಟುಕೊಂದ
ಪರಾಕ್ರಮಿಗಳ ಅಮಾನವೀಯತೆಯ
ಕ್ಲಿಕ್ಕಿಸಿದ ಮಾನವೀಯ ಮನಸ್ಸಿನ
ಸಾವಿಗೆ ಸಂಭ್ರಮವಂತೆ!
ಸಾವಿನ ಸುದ್ದಿಗೆ
ಕುಣಿದವನು,ಕೂಗಿದವನೂ
ಸಾವಿನ ಸರಣಿಯಲ್ಲಿ
ಇಂದಲ್ಲ, ನಾಳೆಯಾದರೂ ಖಚಿತ.
ಇದರಿತರೂ ಅವರು ಕುಣಿಯುತ್ತಿದ್ದಾರೆ
ತಮ್ಮ ಸಾವಿನ ಸುದ್ದಿಗೆ ಕುಣಿಯಲು
ಒಂದಿಷ್ಟು ಮಂದಿ ದೊರಕಲಿ ಎಂಬ ಹಾಗೆ