
– ಸಮದ್ ಶಾಂತಿನಗರ
ಭಾರತ ದೇಶವು ಸ್ವಾತಂತ್ರ್ಯ ಪೂರ್ವದಲ್ಲಿ ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಸಮಯದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವದ ಹಂಗು ತೊರೆದು ಹೋರಾಡುವಾಗ ಬ್ರಿಟೀಷರು ಹಿಂದೂ ಮತ್ತು ಮುಸ್ಲಿಂ ಎಂದು ವಿಭಜನೆ ಮಾಡಿ (Devide and Rule) ಜನರ ಮನಸ್ಸುಗಳಲ್ಲಿ ಕೋಮು ವಿಷಬೀಜ ಬಿತ್ತಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಿದ್ದರು. ಬ್ರಿಟೀಷರು ಈ ಭಾರತವನ್ನು ಬಿಟ್ಟು ಹೋಗುವ ಮೊದಲೇ ಈ ಜಾತಿಯ ಹೆಸರಲ್ಲಿ ಕೋಮು ಧ್ರುವೀಕರಣ ಮಾಡುವ ಕೆಲಸವನ್ನು ದೇಶದ ಒಳಗಿರುವ ಫ್ಯಾಶಿಸ್ಟ್ ಶಕ್ತಿಗಳು ತಮ್ಮದಾಗಿಸಿಕೊಂಡಿದ್ದರು. ದೇಶ ಪರಕೀಯರ ಆಡಳಿತದಿಂದ ಸ್ವಾತಂತ್ರ್ಯವಾದ ನಂತರ ನಿರಂತರವಾಗಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸಿ ದೇಶದ ಅಧಿಕಾರವನ್ನು ಪಡೆದಿದ್ದಾರೆ. ಇದು ಮುಂದುವರೆದು ಒಂದು ಸಮುದಾಯವನ್ನೇ ನಾಶ ಮಾಡುವ ಕ್ರೂರ ಮನಸ್ಥಿತಿಯಾಗಿ ಬದಲಾಗಿದೆ. ಕಳೆದ 7 ವರ್ಷಗಳಲ್ಲಿ ನಿರಂತರವಾಗಿ ಗುಂಪು ಹತ್ಯೆ, ಹೊಸ ಹೊಸ ಕಾನೂನುಗಳು ಮುಸ್ಲಿಮರನ್ನು ಗುರಿಯಾಗಿಸಿ ಜಾರಿಗೆ ತರಲಾಗುತ್ತಿದೆ. ಪೌರತ್ವ ಕಾಯ್ದೆ ಸೇರಿದಂತೆ ಮುಸ್ಲಿಂ ಶರೀಹತ್ ವಿಚಾರಗಳಿಗೂ ಸವಾರಿ ಮಾಡಿದೆ. ಈ ಸಾಲಿಗೆ ಜನಸಂಖ್ಯಾ ನಿಯಂತ್ರಣ ಕಾಯ್ದೆಯು ಸೇರಿಕೊಂಡಿದೆ.
ಭಾರತ ದೇಶದಲ್ಲಿ ಸುಮಾರು 130 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಜನಸಂಖ್ಯಾ ನಿಯಂತ್ರಣದ ವಿಚಾರವಾಗಿ “ನಾವಿಬ್ಬರೂ ನಮಗಿಬ್ಬರು” ಘೋಷಣೆಯನ್ನು ಹಿಂದೆ ಬಸ್ಸು ನಿಲ್ದಾಣ, ಆಸ್ಪತ್ರೆ, ಸಾರ್ವಜನಿಕ ಕಟ್ಟಡಗಳಲ್ಲಿ ಕಾಣಲು ಸಾಧ್ಯವಾಗುತ್ತಿತ್ತು. ಜನಸಂಖ್ಯೆ ನಿಯಂತ್ರಣಕ್ಕೆ ಬರಬೇಕು. ಸಂಪನ್ಮೂಲಗಳ ಕೊರತೆಯನ್ನು ನಿಭಾಯಿಸಬೇಕು. ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ನಿಜ. ಆದರೆ ಅದು ಒಂದು ಸಮುದಾಯವನ್ನು ಗುರಿಯಾಗಿಸಿ ಕಾನೂನು ಆಗಬಾರದು. ಜನಸಂಖ್ಯಾ ನಿಯಂತ್ರಣ ಕಾನೂನಿನ ಪ್ರಕಾರ ದಂಪತಿಗೆ 2 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಸರಕಾರಿ ಉದ್ಯೋಗ ಸಿಗುವುದಿಲ್ಲ. ಈ ಮೊದಲೇ ಸರಕಾರಿ ಉದ್ಯೋಗದಲ್ಲಿದ್ದರೆ ಮುಂಬಡ್ತಿ, ಸಬ್ಸಿಡಿ, ಪಿಂಚಣಿ ಕಡಿತವಾಗುತ್ತದೆ. ಸರಕಾರದಿಂದ ಯಾವುದೇ ಸೌಲಭ್ಯಗಳು 3ನೇ ಮಗುವಿಗೆ ಸಿಗುವುದಿಲ್ಲ. ಈ ಕಾಯ್ದೆಯಿಂದ ನೇರವಾಗಿ ಮುಸಲ್ಮಾನರನ್ನು ಬಲಿಪಶು ವಾಗಿಸುವ ತಂತ್ರವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಸರಕಾರಿ ಉದ್ಯೋಗ, ಚುನಾವಣೆ, ಸರಕಾರಿ ಸೌಲಭ್ಯಗಳಿಂದ ದೂರಗೊಳಿಸಿ ಮುಸಲ್ಮಾನರು ದೇಶದ ಮುಖ್ಯವಾಹಿನಿಯಿಂದ ಹೊರಗೆ ಹಾಕುವ ಹುನ್ನಾರಗಳು ಅಸ್ಸಾಂ ಮುಖ್ಯಮಂತ್ರಿಯ ಮಾತುಗಳಿಂದ ಸ್ಪಷ್ಟವಾಗುತ್ತದೆ.
ದೇಶದ Fertiliry rate (ಒಂದು ಹೆಣ್ಣು ಸರಾಸರಿ ಜನ್ಮ ನೀಡುವ ಮಕ್ಕಳು) 2.2 ಮತ್ತು ಈ ಕಾನೂನು ಜಾರಿಗೆ ತಂದ ಅಸ್ಸಾಂ ಕೇವಲ 1.9 Fertiliry rateನ್ನು ಹೊಂದಿದೆ. ಇವರ ಉದ್ದೆಶವು ಜನಸಂಖ್ಯೆ ನಿಯಂತ್ರಣ ಆಗಿದ್ದರೆ ಅಸ್ಸಾಂನಂತಹ ರಾಜ್ಯಗಳಲ್ಲಿ ಇಂತಹ ಕಾಯ್ದೆಯ ಅವಶ್ಯಕತೆಯೇ ಇರಲಿಲ್ಲ. ಇವರ ಮುಖ್ಯ ಉದ್ದೇಶ ಮುಸ್ಲಿಂ ವಿರೋಧ ಹೊರತು ದೇಶದ ಅಭಿವೃದ್ದಿಯಲ್ಲ.
ಜನಸಂಖ್ಯೆ ನಿಯಂತ್ರಣ ಕಾಯ್ದೆಯಲ್ಲಿ ಮೇಲ್ನೋಟಕ್ಕೆ ಯಾವುದೇ ಸಮಸ್ಯೆಗಳು ಕಾಣದಿದ್ದರೂ ಅಧ್ಯಯನ ಮಾಡಿದಂತೆ ಅನಾಹುತಗಳ ಪರಿಚಯವಾಗುತ್ತದೆ. ಈ ಕಾಯ್ದೆಯು ಮುಸಲ್ಮಾನರ ಗುರಿಯಾಗಿಸಿ ಮಾಡಿದ್ದಾದರೂ ಎಲ್ಲಾ ಜನರಿಗೂ ಸಮಸ್ಯೆ ಖಂಡಿತ. ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ವ್ಯಕ್ತಿಗೆ 3 ಮಕ್ಕಳು ಹೊಂದಿದ್ದರೆ ಅವನು ವಿಚ್ಛೇದನ ಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಕೆಲವು ಮನೆಗಳಲ್ಲಿ ಗಂಡು ಮಗು ಬೇಕೆನ್ನುವ ಆಸೆಯಿಂದ ವಿಚ್ಛೇದನ ಮಾತ್ರವಲ್ಲದೇ ಭ್ರೂಣ ಹತ್ಯೆಗಳು ವ್ಯಾಪಕವಾಗಿ ಹೆಚ್ಚಾಗುತ್ತದೆ. ಪ್ರಸ್ತುತ 1000 ಪುರುಷರಿಗೆ 950 ಮಹಿಳೆಯರು ಭಾರತದಲ್ಲಿ ದಾಖಲಾಗುತ್ತಿವೆ. ಈ ಕಾಯ್ದೆಯಿಂದ ಮಹಿಳೆಯರ ಸಂಖ್ಯೆಯಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ. ಹುಟ್ಟಿದ ಮಕ್ಕಳು ಎರಡೂ ಹೆಣ್ಣಾಗಿದ್ದರೆ ಗಂಡನ ಮನೆಗೆ ಹೋದ ನಂತರ ಹೆತ್ತವರನ್ನು ನೋಡಿಕೊಳ್ಳಲು ಯಾರು ಇಲ್ಲದೆ ಹೆಚ್ಚೆಚ್ಚು ವೃದ್ಧಾಶ್ರಮಗಳ ಮೊರೆ ಹೋಗುವ ಪರಿಸ್ಥಿತಿ ಸೃಷ್ಟಿಯಾಗಬಹುದು. ಹೀಗೆ ಈ ಕಾಯ್ದೆಯಿಂದ ಹತ್ತು ಹಲವು ದೋಷಗಳನ್ನು ಕಾಣಲು ಸಾಧ್ಯವಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ ಸಂಪೂರ್ಣ ವೈಫಲ್ಯ ಹೊಂದಿದಾಗ ಜನರ ಆಲೋಚನೆಯ ದಿಕ್ಕನ್ನು ಬದಲಾಯಿಸುವ ಪ್ರಯತ್ನ ಮತ್ತು ಜನರನ್ನು ಭಾವನಾತ್ಮಕ ವಾಗಿ ಪ್ರಚೋದನೆ ಮಾಡುವ ಕೆಲಸ ಹೌದು ಎನ್ನುವುದು ಸ್ಪಷ್ಟ. ಜನರು ಎಲ್ಲಾ ಕಾಯ್ದೆಗಳ ಬಗ್ಗೆ ವೈಚಾರಿಕವಾಗಿ ಅಧ್ಯಯನ ಮಾಡಿ ಇನ್ನಷ್ಟು ಶಕ್ತಿಯಾಗಬೇಕಿದೆ. ಎಲ್ಲಾ ಕುತಂತ್ರಗಳನ್ನು ಜನಪರ ಹೋರಾಟಗಳಿಂದ ಮಾತ್ರ ಸೋಲಿಸಿ ದೇಶವನ್ನು ಸ್ವತಂತ್ರಗೊಳಿಸಬಹುದು ಎಂಬ ಚಿಂತನೆ ಇಟ್ಟುಕೊಂಡು ಮುನ್ನಡೆಯಬೇಕಿದೆ.