ಭಾರತೀಯ ಮುಸ್ಲಿಮರನ್ನು ಜರ್ಮನಿಯ ಯಹೂದಿಯರಿಗೆ ಹೋಲಿಸಿದ್ದರೇ ಸಾವರ್ಕರ್!

ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ : ಭಾಗ 04

– ರಿಯಾಝ್ ಎ ಎಸ್
(ಪತ್ರಿಕೋದ್ಯಮ ವಿದ್ಯಾರ್ಥಿ – ಮಂಗಳೂರು ವಿಶ್ವವಿದ್ಯಾನಿಲಯ)

ನೀವು ಎಂದಾದರೂ ಯೋಚಿಸಿದ್ದೀರಾ? ಹಿಟ್ಲರ್ ಜಗತ್ತಿನ ಜನಪ್ರೀಯ ಸರ್ವಾಧಿಕಾರಿಯಾಗಿದ್ದು ಹೇಗೆ ಎಂದು? ಜರ್ಮನಿಯ ಬಹುಸಂಖ್ಯಾತ ಸಮುದಾಯವನ್ನು “ಅಂಧಭಕ್ತ” ರಾಗಲು ಪ್ರೇರೇಪಿಸಿದ್ದು ಹೇಗೆಂದು?. ಅದಕ್ಕಾಗಿ ಹಿಟ್ಲರ್ ಜನರ ಭಾವನೆಗಳನ್ನು ಬಡಿದೆಬ್ಬಿಸಿದ್ದ ಹಾಗೂ ಮಾನವ ಕುಲದಲ್ಲೇ ಜರ್ಮನ್ ಜನರಾದ ನಾವು ಆರ್ಯ ಜನಾಂಗದ ಶುದ್ಧ ರಕ್ತ ಹೊಂದಿದವರು ಮತ್ತು ಇತರರು ಎರಡನೇ ದರ್ಜೆಯ ನಾಗರಿಕರು ಎಂದು ಸಾರಿದ್ದ. ಈ ಮೂಲಕ ಜರ್ಮನ್ ಜನರನ್ನು “ಅಂಧಭಕ್ತ” ರಾಗಿ ಪರಿವರ್ತಿಸುವಲ್ಲಿ ಹಿಟ್ಲರ್ ಯಶಸ್ವಿಯಾಗಿದ್ದ.

ಒಂದು ದೇಶದ ಜನರ ಮೇಲೆ, ಅವರ ಸಂಸ್ಕೃತಿ, ಅವರ ಚಿಂತನೆಗಳ ಮೇಲೆ ಮಾಧ್ಯಮಗಳು ಬೀರುವ ಪ್ರಭಾವ ಅಪಾರವಾದುದು. ಮಾಧ್ಯಮಗಳು ಒಂದು ಸಮಾಜವನ್ನು ಯಾವ ದಿಕ್ಕಿಗೂ ತಲುಪಿಸಬಲ್ಲದು. ಅದು ಒಂದು ದೇಶವನ್ನು ಸರ್ವಾಧಿಕಾರಿ ವ್ಯವಸ್ಥೆಯಿಂದ ಪ್ರಜಾಪ್ರಭುತ್ವಕ್ಕೂ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರಕ್ಕೂ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಜರ್ಮನಿಯ ಮಾಧ್ಯಮಗಳು ಹಿಟ್ಲರನ ಅಧೀನದಲ್ಲಿತ್ತು. ಅದರ ಮೂಲಕ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡದ್ದು ಮಾತ್ರವಲ್ಲದೇ, ಜನರಲ್ಲಿ ದ್ವೇಷದ ಚಿಂತನೆಯನ್ನು ಬಿತ್ತುವಲ್ಲಿ ಯಶಸ್ವಿಯಾದ. ಹಿಟ್ಲರ್ ಒಂದು ಸಭೆಯಲ್ಲಿ ಜರ್ಮನ್ ಜನರನ್ನುದ್ದೇಶಿಸಿ “ನೀವು ನಿಮ್ಮ ದೇಶವನ್ನು ಪ್ರೀತಿಸುವುದಾದರೆ ಹಾಗೂ ನಿಮ್ಮ ಸೈನಿಕರನ್ನು ಗೌರವಿಸುವುದಾದರೆ ನನಗೆ ಮತವನ್ನು ನೀಡಬೇಕು ಮತ್ತು ಯಹೂದಿಗಳು ನಮ್ಮ ದೇಶದ ಒಳಗಿರುವ ಶತ್ರುಗಳು ಅವರು ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ” ಎಂದು ಭಾಷಣ ಮಾಡಿದ್ದ. ಮಾಧ್ಯಮಗಳ ಬೆಂಬಲವೂ ಕೂಡಿದಂತೆ ದೇಶಪ್ರೇಮ ಹಾಗೂ ಸೈನಿಕರ ಹೆಸರಿನಲ್ಲಿ ಜನರ ಭಾವನೆಗಳನ್ನು ಬಡಿದೆಬ್ಬಿಸಿ ಹಿಟ್ಲರ್, ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳುವಲ್ಲಿ ಸಫಲನಾದ.

ಹಿಟ್ಲರ್ ನನ್ನು ದೈವ ಮಾನವನಂತೆ, ರಕ್ಷಕನಂತೆ ಬಿಂಬಿಸುವ ಹಲವಾರು ಬಯೋಗ್ರಾಫಿಗಳು, ಬರವಣಿಗೆಗಳು, ಪುಸ್ತಕಗಳು ಪ್ರಕಟಗೊಂಡವು. ಒಂದು ಬಯೋಗ್ರಾಫಿಯಲ್ಲಿ ಹಿಟ್ಲರ್ ನನ್ನು ಜೀಸಸ್ ಕ್ರೈಸ್ ಗೆ ಹೋಲಿಕೆ ಮಾಡಿ ನಮ್ಮನ್ನು ರಕ್ಷಿಸಲು ಬಂದಿರುವ ದೈವ ಮಾನವನೆಂದು ಬಿಂಬಿಸಲಾಗಿತ್ತು. ಅದನ್ನು ಬರೆದವನು ಅವನ ಸ್ನೇಹಿತನೆಂದು ಹೇಳಲಾಗಿತ್ತು. ಆದರೆ ಕೆಲ ದಿನಗಳ ನಂತರ ಅದನ್ನು ಬರೆದವನು ಸ್ವತಃ ಹಿಟ್ಲರ್ ಆಗಿದ್ದ ಎನ್ನುವ ವಾಸ್ತವ ಬೆಳಕಿಗೆ ಬಂತು. ಹಿಟ್ಲರ್ ನ ಇನ್ನೊಂದು ಬಯೋಗ್ರಾಫಿ “ಮೇ ಕ್ಯಾಂಪ್” ನಲ್ಲಿ ತಾನು ಬಡ ಕುಟುಂಬದಲ್ಲಿ ಜನಿಸಿದವನು ಎಂದು ಬಿಂಬಿಸಿದನಲ್ಲದೇ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ ಎಂದಿದ್ದ. ಇದೆಲ್ಲವೂ ಸುಳ್ಳು ಎಂದು ನಂತರ ತಿಳಿಯಿತು. ಹೀಗೆ ಸುಳ್ಳುಗಳನ್ನೇ ತನ್ನ ಬಂಡವಾಳವಾಗಿಸಿಕೊಂಡಿದ್ದ ಹಿಟ್ಲರ್ ಜನರನ್ನು ವಾಸ್ತವದಿಂದ ಕನಸಿನ ಲೋಕಕ್ಕೆ ಮರುಳಾಗಿಸಿದ್ದ.

ಭಾರತದಲ್ಲಿಯೂ ಹಿಟ್ಲರ್ ನಿಂದ ಹಲವರು ಪ್ರೇರಿತಗೊಂಡಿದ್ದರು ಮತ್ತು ಅವನನ್ನು ಹಾಡಿ ಹೊಗಳಿದ್ದರು. ಅಂತಹಾ ವ್ಯಕ್ತಿಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಕೂಡ ಒಬ್ಬರು. ಇವರು ಪ್ರತಿಪಾದಿಸಿರುವ ಹಿಂದುತ್ವವು ಒಂದು ರಾಜಕೀಯ ಸಿದ್ಧಾಂತವಾಗಿದ್ದು, ಇದರಲ್ಲಿ ಹಿಂದೂ, ಸಿಕ್, ಬುದ್ದಿಷ್ಟ್, ಜೈನರನ್ನು ಹೊರತುಪಡಿಸಿ ಮುಸ್ಲಿಂ ಮತ್ತು ಕ್ರೈಸ್ತರನ್ನು ಹೊರಗಿನವರು ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿರುವ ಮುಸ್ಲಿಮರನ್ನು ಜರ್ಮನಿಯಲ್ಲಿರುವ ಯಹೂದಿಯರಿಗೆ ಹೋಲಿಸುವ ಮೂಲಕ ದ್ವೇಷದ ಚಿಂತನೆಗೆ ಅಡಿಪಾಯ ಹಾಕಿದರು. “ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್” ಎಂಬ ಪುಸ್ತಕದಲ್ಲಿ ಸಾವರ್ಕರ್ ರನ್ನು ಬಹಳಷ್ಟು ಉನ್ನತ ವ್ಯಕ್ತಿಯಾಗಿ, ಶ್ರೇಷ್ಠ ವ್ಯಕ್ತಿಯಾಗಿ ಪರಿಚಯಿಸಲಾಗಿತ್ತು. ಇದನ್ನು ಚಿತ್ರಗುಪ್ತ ಎನ್ನುವ ಲೇಖಕ ಬರೆದಿದ್ದ. ಆದರೆ 1987 ರಲ್ಲಿ ಚಿತ್ರಗುಪ್ತ ಎನ್ನುವವನು ಸ್ವತಃ ಸಾವರ್ಕರ್ ಆಗಿದ್ದ ಎನ್ನುವ ವಾಸ್ತವ ಜಗಜ್ಜಾಹಿರವಾಯಿತು.

ಸತ್ಯವನ್ನು ಮುಚ್ಚಿಡಲು ಅಥವಾ ತಿರುಚಲು ಸಾಧ್ಯವಿಲ್ಲ. ಸುಳ್ಳಿನಿಂದ ಕಟ್ಟಿದ ಕೋಟೆಗಳು ಧ್ವಂಸಗೊಂಡೇ ತೀರುತ್ತದೆ. ಹಿಟ್ಲರ್ ನ ಸುಳ್ಳುಗಳು ನಾಶಗೊಂಡಂತೇ, ಹಿಟ್ಲರ್ ನನ್ನು ಅನುಸರಿಸುವವರ ಸುಳ್ಳುಗಳೂ ನಾಶವಾಗಲಿದೆ. ಶಾಂತಿ, ಸಮಾನತೆ ಮತ್ತು ನ್ಯಾಯ ನೆಲೆಗೊಳ್ಳಬೇಕಾದರೆ ಜಗತ್ತಿನಲ್ಲಿರುವ ಅಸಮಾನತೆ, ಜನಾಂಗೀಯ ದ್ವೇಷ, ಜನವಿರೋಧಿ ಪ್ರಭುತ್ವ ಗಳು ಕೊನೆಗೊಳ್ಳಲೇ ಬೇಕಾಗಿದೆ.

Leave a comment