– ಅರ್ಫೀದ್ ಅಡ್ಕಾರ್
ಇಸ್ಲಾಮಿ ಪಂಡಿತರಾದ ಉಮರ್ ಖಾಝಿಯವರು ಧೀರತನದಿಂದ ಬ್ರಿಟಿಷರ ವಿರುದ್ದ ಸೆಣಸಾಡಿದ ಹೋರಾಟಗಾರರಲ್ಲಿ ಒಬ್ಬರು. ಆಲಿ ಮುಸ್ಲಿಯಾರ್ ಮತ್ತು ಕಾಕತರ ಆಮೀನಾ ರ ಆರು ಮಕ್ಕಳಲ್ಲಿ ಎರಡನೇ ಮಗನಾಗಿ 1765ರಲ್ಲಿ ಜನಿಸಿದರು. ಮಲಬಾರ್ ಪ್ರಾಂತ್ಯದಲ್ಲಿದ್ದ ಉಮರ್‌ರವರು ಬ್ರಿಟಿಷರ ಸಿಂಹಸ್ವಪ್ನರಾಗಿದ್ದು, ಸೂಫಿ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದರು.
ಇಸ್ಲಾಮಿ ಪಂಡಿತ ಉಮರ್ ಖಾಝಿ
ಉಮರ್‌ರವರು ಸಣ್ಣ ವಯಸ್ಸಿನಲ್ಲಿಯೇ ಇಸ್ಲಾಮಿನ ಬಗ್ಗೆ ತನ್ನ ತಂದೆಯಾದ ಆಲಿ ಮುಸ್ಲಿಯಾರ್‌ರ ಬಳಿ ಅದ್ಯಯನ ನಡೆಸುತ್ತಿದ್ದರು.
ತನ್ನ ಹತ್ತನೇ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದರು. ನಂತರ ಚಿಕ್ಕಪ್ಪ ರವರ ಆಶ್ರಯದಲ್ಲಿ ಬೆಳೆದರು. ಹನ್ನೊಂದನೆ ವಯಸ್ಸಿನಲ್ಲಿ ತಾನೂರುನಲ್ಲಿರುವ ದರ್ಸ್ ಒಂದರಲ್ಲಿ ಸೇರಿಕೊಂಡರು. ಅಹ್ಮದ್ ಮುಸ್ಲಿಯಾರ್ ಮುದರ್ರಿಸ್ ರವರ ನೇತೃತ್ವದಲ್ಲಿ ಉಮ್ಮರ್ ಖಾಝಿ ಇಸ್ಲಾಮಿಕ್ ಶಿಕ್ಷಣವನ್ನು ಪಡೆದುಕೊಂಡರು. ಅಲ್ಲಿ ಅಬ್ಬುಕೋಯ ಮುಸ್ಲಿಯಾರರ ಜೊತೆ ಗೆಳೆತನ ಬೆಳೆಸಿದರು. ಅಲ್ಲಿ ಮೂರು ವರ್ಷಗಳ ಅದ್ಯಯನದ ನಂತರ ಪೊನ್ನಾನಿಯ ಮಸೀದಿಯಲ್ಲಿದ್ದ ಪ್ರಖ್ಯಾತ ಖಾದಿರೀಯ ಸೂಫಿ ಮಮ್ಮುಕುಟ್ಟಿ ಖಾಝಿಯವರ ಬಳಿ ಧಾರ್ಮಿಕ ಅಧ್ಯಯನಕ್ಕಾಗಿ ಸೇರಿಕೊಂಡರು, ಆರು ವರ್ಷಗಳ ಕಾಲ ಶಿಕ್ಷಣದ ಜೊತೆಗೆ ಮಮ್ಮುಕುಟ್ಟಿ ಮುಸ್ಲಿಯಾರರ ಸಹಾಯಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು, ಮಮ್ಮುಕುಟ್ಟಿ ಮುಸ್ಲಿಯಾರರ ಮರಣ ನಂತರ ಅಲ್ಲಿನ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. ತಾನೂರು, ಪೊನ್ನಾನಿ ಹಾಗೂ ವೆಲಿಯಂಗೋಡ್ ಮಸೀದಿಗಳಲ್ಲಿ ಇವರು ಸೇವೆ ಸಲ್ಲಿಸಿದರು.ನಂತರ ಸಣ್ಣ ವಯಸ್ಸಿನಲ್ಲಿ ವೆಲಿಯಂಗೊಡ್ ಜುಮಾ ಮಸೀದಿಯ ಖಾಝಿಯಾಗಿ ನೇಮಕಗೊಂಡರು. ಹೀಗೆ ಉಮರ್‌ರವರು ವೆಲಿಯಂಗೊಡ್ ಉಮರ್ ಖಾಝಿಯಾಗಿ ಪ್ರಸಿದ್ಧಿ ಪಡೆದರು.
ಸ್ವಾತಂತ್ರ್ಯ ಸೇನಾನಿ ವೆಲಿಯಂಗೊಡ್ ಉಮರ್ ಖಾಝಿ
ದೇವರ ಸ್ವಂತ ನಾಡಿನಲ್ಲಿ ಬ್ರಿಟಿಷ್ ಆಳ್ವಿಕೆ ನಡೆಸಲು ಬಿಡುವುದಿಲ್ಲ ಎಂಬುದು ಉಮರ್ ಖಾಝಿಯವರ ಪ್ರಸಿದ್ಧ ಹೇಳಿಕೆಯಾಗಿದೆ.
18ನೇ ಡಿಸೆಂಬರ್ 1819ರಲ್ಲಿ ಬ್ರಿಟಿಷ್ ಜಿಲ್ಲಾಧಿಕಾರಿ ಮೈಕ್ಲಿನ್ ಎಂಬಾತ ಉಮರ್ ಖಾಝಿಯವರ ಬಂಧನಕ್ಕೆ ಆದೇಶ ನೀಡುತ್ತಾನೆ. ಆವಾಗ ಮಂಬುರಂ ತಂಙಳ್‌ರವರಿಗೆ ಅರಬಿಕ್‌ನಲ್ಲಿ ಒಂದು ಪತ್ರ ಬರೆಯುತ್ತಾರೆ. ಮಂಬುರಂ ತಂಙಳ್‌ರವರು ಆ ಪತ್ರದ ಸಂದೇಶದಂತೆ ಒಂದು ದೊಡ್ಡ ಸಂಖ್ಯೆಯ ಜನರನ್ನು ಜೈಲಿನ ಎದುರಿನಲ್ಲಿ ಜಮಾಯಿಸುತ್ತಾರೆ. ಬೃಹತ್ ಜನಸಾಗರ ಕಂಡು ಉಮರ್ ಖಾಝಿಯವರನ್ನು ಬಿಡುಗಡೆ ಮಾಡಲಾಗುತ್ತದೆ.
ಮೊತ್ತಮೊದಲ ಬಾರಿಗೆ ಬ್ರಿಟಿಷರಿಗೆ ನೇರಾನೇರ ಹಣಾಹಣಿಗೆ ಪಂಥಾಹ್ವಾನ ನೀಡುವ ಮೂಲಕ ಬ್ರಿಟಿಷರ ಪಾಲಿಗೆ ಕೊನೆಯವರೆಗೂ ಸಿಂಹಸ್ವಪ್ನವಾಗಿ ಕಾಡಿದರು.
ಕೆಲವೊಂದು ದಾಖಲೆಗಳ ಪ್ರಕಾರ ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನ್‌ರವರ ವೀರ ಮರಣದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಮರಕ್ಕೆ ಉಮರ್ ಖಾಝಿಯವರು ದುಮುಕಿದರು ಎನ್ನಲಾಗುತ್ತಿದೆ. ನಂತರ ಬ್ರಿಟಿಷ್ ಅಧಿಕಾರಿಗಳ ವಿರುದ್ದ ನಿಷ್ಠುರ ನಿಲುವಿನೊಂದಿಗೆ ಹೋರಾಟಕ್ಕಾಗಿ ಚೆಬತ್ತೂರು ನಿಬೂ ಸಾಹೆಬ್‌ರವರು ಉಮರ್ ಖಾಝಿಯವರನ್ನು ಬಂಧಿಸಿ ಕಠಿಣವಾದ ಚಿತ್ರಹಿಂಸೆ ಕೊಡುತ್ತಾರೆ. ಅವೆಲ್ಲವನ್ನೂ ಲೆಕ್ಕಿಸದ ಉಮರ್ ಖಾಝಿಯವರು ಜೈಲಿನಲ್ಲಿರುವಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಹುರಿದುಂಬಿಸುವ ಸಲುವಾಗಿ ಹಲವು ಕ್ರಾಂತಿಕಾರಿ ಸಾಹಿತ್ಯಗಳನ್ನು ಬರೆಯುತ್ತಿದ್ದರು. ಒಮ್ಮೆ ಬ್ರಿಟಿಷ್ ಅಧಿಕಾರಿ ಮೈಕ್ಲಿನ್ ನೇತೃತ್ವದಲ್ಲಿ ಉಮರ್ ಖಾಝಿಯನ್ನು ವಶಪಡಿಸುವ ಸಲುವಾಗಿ ಖಾಝಿಯವರ ಮನೆಗೆ ಪೋಲಿಸ್ ಸುತ್ತುವರಿಯಲಾಗುತ್ತದೆ. ಆ ಸಂದರ್ಭದಲ್ಲಿ ಉಮರ್ ಖಾಝಿಯವರು ಮನೆಯಲ್ಲಿ ಇರಲಿಲ್ಲ. ಅದಾಗ್ಯು ಅವರಿಗೆ ಮನೆಯನ್ನು ಪೋಲಿಸ್ ಸುತ್ತುವರಿದ ವಿಷಯ ತಿಳಿದು ತಕ್ಷಣ ಕಲ್ಲಿಕೋಟೆಯಲ್ಲಿನ ಬ್ರಿಟಿಷರ ಕಚೇರಿಗೆ ದೌಡಾಯಿಸಿ ನೀವೆಷ್ಟೇ ದೌರ್ಜನ್ಯ ಎಸಗಿದರೂ ನಾನು ಬ್ರಿಟಿಷ್ ಸರ್ಕಾರಕ್ಕೆ ಸುಂಕವನ್ನು ಪಾವತಿಸಲಾರೆ ಮತ್ತು ನನ್ನ ಕೊನೆಯ ಉಸಿರಿನ ವರೆಗೂ ಸ್ವಾತಂತ್ರ್ಯ ಹೋರಾಟದಿಂದ ಒಂದಿಂಚು ಹಿಂದೆ ಸರಿಯಲಾರೆ ಎಂದು ಖಡಕ್ ಆಗಿ ಹೇಳಿದರು.
1857ರಲ್ಲಿ ಅನಾರೋಗ್ಯ ಪೀಡಿತರಾಗಿ ನಿಧನರಾಗುವ ಮೂಲಕ ತನ್ನ ಜೀವನಕ್ಕೂ ಬ್ರಿಟಿಷರ ವಿರುದ್ದ ರಾಜಿರಹಿತ ಹೋರಾಟಕ್ಕೂ ಇತಿಶ್ರಿ ಹಾಡಿದರು.