ಒಡೆದು ಆಳುವ ನೀತಿಯ ಮುಂದಿನ ಅಧ್ಯಾಯದ ಗುರಿಗೆ ಲಕ್ಷದ್ವೀಪದ ಜನರನ್ನು ಬಲಿಪಡಿಸಲಾಗುತ್ತಿದೆ

ಏನಿದು ಲಕ್ಷದ್ವೀಪ ವಿವಾದ : ಸಂಪೂರ್ಣ ಮಾಹಿತಿ ಇಂದಿನ ಸಂಪಾದಕೀಯದಲ್ಲಿ.

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಭಾರತ. ಹಲವು ಭಾಷೆ, ವಿವಿಧ ಜಾತಿ, ಧರ್ಮದ ಜನರು ಸಾಮರಸ್ಯದಿಂದ ಬಾಳಿ ಬದುಕಬೇಕಾದ ಸುಂದರ ಸಂವಿಧಾನದ ತವರು ಭಾರತ. ಪರಕೀಯರ ಕಪಿಮುಷ್ಟಿಯಿಂದ ಲಕ್ಷಾಂತರ ಹೋರಾಟಗಾರರ ಸಾವು ನೋವುಗಳ ಪರಿಣಾಮವಾಗಿ ಭಾರತ ಇಂದು ಉಸಿರಾಡುತ್ತಿದೆ. ಅವರ ತ್ಯಾಗ, ಪರಿಶ್ರಮದ ಆ ಹೋರಾಟಗಳಿಗೆ ಬ್ರಿಟೀಷರು ಈ ದೇಶವನ್ನು ಬಿಟ್ಟು ಹೋದಾಗ ಕೋಟ್ಯಾಂತರ ಭಾರತೀಯರು ನೆಮ್ಮದಿಯ ಜೀವನದ ಕನಸು ಕಂಡಿದ್ದರು. ಆದರೆ ದಿನಕಳೆದಂತೆ ಬಂದ ಒಂದೊಂದು ವಿನಾಶಕಾರಿ ತತ್ವ ಸಿದ್ಧಾಂತಗಳು ದೇಶವನ್ನು ಒಡೆದು ಆಳುವ ನೀತಿಯತ್ತ ಕೊಂಡೊಯ್ಯಲು ಆರಂಭಿಸಿತು. ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿ ಸದಾ ಹಿಂಸೆಯ ಮುಖಾಂತರ ದೇಶವನ್ನು ಹಿಡಿ ತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆಯಿತು. ಜನರ ಬದುಕುವ ಹಕ್ಕನ್ನು ಕಸಿದು, ಜನರ ನಡುವೆ ವಿಷಬೀಜ ಬಿತ್ತುವಂತಹ ಪ್ರಕ್ರಿಯೆಗಳು ನಡೆಯಲಾರಂಭಿಸಿತು.ಇದರ ಮುಂದಿನ ಅಧ್ಯಾಯವಾಗಿದೆ ಇಂದು ಚರ್ಚೆಯಾಗುತ್ತಿರುವ ಲಕ್ಷದ್ವೀಪದ ಕಬಳಿಸುವಿಕೆ.

ಲಕ್ಷದ್ವೀಪ ಎಂಬ ಸಣ್ಣ ಪ್ರದೇಶದ ಜನರು ನೆಮ್ಮದಿಯ ಜೀವನ ನಡೆಸುತ್ತಿರುವುದು ಕೆಂಗಣ್ಣಿಗೆ ಗುರಿಯಾಗಿ ಅಲ್ಲಿನ ಜನರನ್ನು ಅತಂತ್ರಗೊಳಿಸಲು ಎಲ್ಲಾ ಕರಾಳ ನಿಯಮಗಳನ್ನು ಸಜ್ಜುಗೊಳಿಸಲಾಗಿದೆ.
ಶಾಂತಿ ಸಮಾನತೆ ಸೌಹಾರ್ದತೆಯನ್ನು ಸಾಗುತ್ತಾ ವಿದೇಶಿ ಸಂಬಂಧ ವ್ಯಾಪಾರ ವ್ಯವಹಾರದಲ್ಲಿ ವಿಶ್ವದಲ್ಲೇ ವಿಶಿಷ್ಟ ಸ್ಥಾನಮಾನದಿಂದ ಗುರುತಿಸಿ ಕೊಂಡು ಬಂದಿದ್ದ ನಮ್ಮ ದೇಶವು ಒಂದಲ್ಲೊಂದು ಸಮಸ್ಯೆಯನ್ನು ಹುಟ್ಟು ಹಾಕಿ ಕೊಂಡು ಜನರನ್ನು ಅಭಿವೃದ್ಧಿಯ ಹೆಸರಲ್ಲಿ ಸಂಕಷ್ಟಕ್ಕೆ ಸಿಲುಕಿಸಿಕೊಂಡು ಬರುತ್ತಿದೆ. ಇದಕ್ಕೆ ಕಾರಣ ಇಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವೇ ಎಂದು ಹೇಳಬಹುದು. ಸರ್ಕಾರವು ಪ್ರತೀ ಹಂತದಲ್ಲೂ ಇಂದು ತನ್ನ ಆಡಳಿತದಲ್ಲಿ ವೈಫಲ್ಯ ಕಂಡರೂ ಇದನ್ನು ಸರಿ ಪಡಿಸಲು ಅಸಾಧ್ಯ ಎಂಬಂತಾಗಿದೆ. ವಿದೇಶಿ ವ್ಯಾಪಾರಿಗಳ ಮೇಲಿನ ಒಲವನ್ನು ಎತ್ತಿ ತೋರಿಸುತ್ತಿದೆ. ದೇಶದಲ್ಲಿ ಜನರು ಇಂದು ಕೋವಿಡ್ ನಿಂದಾಗಿ ಸಂಕಷ್ಟವನ್ನು ಎದುರಿಸುತ್ತಿದ್ದರೂ ಜನರ ಬೇಡಿಕೆಗಳನ್ನು ಈಡೇರಿಸಲು ವಿಫಲವಾದ ಸರ್ಕಾರದ ಕಣ್ಣು ಅಭಿವೃದ್ಧಿಯ ಹೆಸರಿನಲ್ಲಿ ಲಕ್ಷದ್ವೀಪವನ್ನು ಆಕ್ರಮಣ ಮಾಡಿ ಅಲ್ಲಿಯೂ ವಿದೇಶಿ ಉದ್ಯಮಿಗಳ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದೆ ಎಂಬುವುದು ಯಥಾ ಸಾಕ್ಷಿಗಳಾಗಿ ಕಾಣುತ್ತಿದೆ.

ಏನಿದು ದ್ವೀಪ ಸಮೂಹದ ಕಥೆ?
ಭಾರತವು ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿದೆ ಲಕ್ಷದ್ವೀಪ. ಇದು ಅರಬಿ ಸಮುದ್ರದ ಮಧ್ಯೆ ಇರುವ ಸುಂದರವಾದ ಒಂದು ಪುಟ್ಟ ದ್ವೀಪ.

36 ದ್ವೀಪಗಳ ಪೈಕಿ 10 ದ್ವೀಪಗಳಲ್ಲಿ ಜನವಾಸವಿರುವ ಲಕ್ಷದ್ವೀಪ 2011ನೇ ಜನಗಣತಿಯ ಪ್ರಕಾರ ಸುಮಾರು 65000 ಜನರು ವಾಸವಾಗಿದ್ದಾರೆ. ಶೇಕಡ 95 ರಷ್ಟು ಮುಸ್ಲಿಂ ಸಮುದಾಯ ಮತ್ತು ಶೇಕಡ 93 ಸಾಕ್ಷರತಾ ಪ್ರಮಾಣ ಹೊಂದಿದ, ತೆಂಗು ಬೆಳೆಯುವ ಸುತ್ತಲೂ ನೀರಿನಿಂದ ಆವರಿಸಿದ ಪ್ರಕೃತಿ ರಮಣೀಯ ಲಕ್ಷದ್ವೀಪ. ಅಲ್ಲಿನ ಜನರ ಸಂಸ್ಕೃತಿಯೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದೇ ಕಾರಣವನ್ನು ಮುಂದಿಟ್ಟು ಪ್ರವಾಸ ತಾಣವನ್ನು ಇನ್ನಷ್ಟು ಅಭಿವೃದ್ದಿಗೊಳಿಸಲಿದ್ದೇವೆ ಎಂಬ ನೆಪದಲ್ಲಿ ತರುವ ಅಲ್ಲಿನ ಹೊಸ ಹೊಸ ನಿಯಮಗಳು ಲಕ್ಷದ್ವೀಪದ ಶಾಂತಿ ಮತ್ತು ಸಂಸ್ಕೃತಿಯನ್ನು ಬುಡಮೇಲುಗೊಳಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ.

ಕೇರಳದ ಕೊಚ್ಚಿಗೆ ಇದು ಸ್ವಲ್ಪ ಹತ್ತಿರದಲ್ಲೇ ಇರುವುದರಿಂದ ಇದರ ಆಡಳಿತ ಕಚೇರಿಯು ಕೂಡ ಕೊಚ್ಚಿಯಲ್ಲಿ ಕಾಣಬಹುದು. ಸಾಂಪ್ರದಾಯಿಕವಾಗಿ ಕೇಂದ್ರಾಡಳಿತ ಪ್ರದೇಶದ ಆಡಳಿತ ನೋಡಿಕೊಳ್ಳುವ ಅಧಿಕಾರವನ್ನು IAS ಅಧಿಕಾರಿಗಳು ಹೊಂದಿರುತ್ತಾರೆ. ಆದರೆ ನಮ್ಮ ಕೇಂದ್ರ ಸರ್ಕಾರವು ದ್ವೀಪದ ಆಡಳಿತ ಅಧಿಕಾರಿಯಾಗಿದ್ದ ದೀಪಕ್ ಶರ್ಮಾರವರ ನಿಧನ ನಂತರ ಡಿಸೆಂಬರ್ 2020 ರಲ್ಲಿ ಒಬ್ಬ ರಾಜಕೀಯ ಹಿನ್ನೆಲೆಯ ವ್ಯಕ್ತಿಯನ್ನು ಆಡಳಿತ ಅಧಿಕಾರಿಯಾಗಿ ನೇಮಿಸಲಾಯಿತು. ಅದು ನಮ್ಮ ದೇಶದ ಪ್ರಧಾನಮಂತ್ರಿಯ ಆಪ್ತ, ಬಿಜೆಪಿ ನಾಯಕ ಪ್ರಫುಲ್ ಕೋಡಾ ಪಟೇಲ್.

ರಾಷ್ಟಪತಿಯ ಅಧೀನದಂತೆ ಆಡಳಿತ ನಡೆಸಬೇಕಾಗಿದ್ದ ಅಧಿಕಾರಿ ಐಎಎಸ್ ಅಧಿಕಾರಿ ಆಗ ಬೇಕಾಗಿದ್ದರೂ ಬದಲಾಗಿ ರಾಜಕೀಯ ಹಿನ್ನಲೆ ಹೊಂದಿರುವ ಅಧಿಕಾರಿಯನ್ನು ನೇಮಿಸಿರುವುದು ದೇಶದ ಆಡಳಿತ ನೀತಿಗೆ ವಿರುದ್ಧವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

2020 ಡಿಸೆಂಬರ್ ವರೆಗೆ ಲಕ್ಷದ್ವೀಪದ ನಿವಾಸಿಗಳ ಜನಜೀವನ ಸಹಜ ಮತ್ತು ಶಾಂತಿಯುತವಾಗಿತ್ತು. ಅಕ್ರಮ ಅನುದಾನದಿಂದ ದೂರವಿದ್ದ ಅಲ್ಲಿನ ಜನ ಜೀವನ ಅರ್ಥವ್ಯಸ್ಥವಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್ ಬಂದು ಒಂದು ವರ್ಷದ ವರೆಗೆ ಸೋಂಕು ಹರಡದ ಲಕ್ಷದ್ವೀಪದಲ್ಲಿ ತಮ್ಮ ಉದ್ದೇಶವನ್ನು ಹೇರುವ ಭರದಲ್ಲಿ ಅಧಿಕಾರಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಹಲವೆಡೆ ಸಾರ್ವಜನಿಕವಾಗಿ ತೊಡಗಿಸಿಕೊಂಡಿದ್ದರಿಂದ ಈಗ ಲಕ್ಷದ್ವೀಪದಲ್ಲಿ ಕ್ರಮೇಣ ಕೊರೋನಾ ಹರಡಿ ಸುಮಾರು 7,000 ಜನರು ರೋಗಕ್ಕೆ ತುತ್ತಾಗಿದ್ದಾರೆ ಎಂಬುವುದು ಸುದ್ದಿಯಾಗುತ್ತಿದೆ.

ಕೇಂದ್ರದ ಆಜ್ಞೆಯನ್ನು ಚಾಚು ತಪ್ಪದೇ ಪಾಲಿಸಬೇಕು ಎಂಬ ಹೊಣೆಯ ಮೇಲೆ ಲಕ್ಷದ್ವೀಪದ ಆಡಳಿತ ಅಧಿಕಾರಿ ಪ್ರಫುಲ್ ಕೋಡಾ ಪಟೇಲ್ ನೇಮಕಗೊಂಡ ಅಂದಿನಿಂದ ತನ್ನ ಜನ ವಿರೊಧಿ ನೀತಿಗಳನ್ನು ಅಲ್ಲಿನ ಜನರ ಮೇಲೆ ಹೇರಲು ಆರಂಭಿಸಲು ಶುರು ಮಾಡಿದ್ದಾರೆ. ಜನರು ದ್ವೀಪ ದ ಮೇಲೆ ಆಗುವ ಆಕ್ರಮಣಗಳ ವಿರುದ್ಧ ಧ್ವನಿ ಎತ್ತದಂತೆ ತಡೆಯಲು ಪಾಸಾ ಕಾಯ್ದೆಯನ್ನು (PASA – Prevention of Anti Social Activities Act ) ಜಾರಿಗೊಳಿಸುತ್ತಾರೆ. ಈ ಪಾಸಾ ಕಾಯ್ದೆಯ ಪ್ರಕಾರ ಅಲ್ಲಿನ ಜನರು ಯಾವುದೇ ರೀತಿಯ ಸಮಾಜ ವಿರೊಧಿ (ಅಂದರೆ ಇವರ ಕಾನೂನುಗಳ ವಿರುದ್ಧ ಧ್ವನಿಯೆತ್ತುವುದು)ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಯಾವುದೇ ರೀತಿಯ ಸಾರ್ವಜನಿಕ ಪ್ರಕಟನೆ ನೀಡದೆ ,ಬಹಿರಂಗಪಡಿಸದೆ ಒಂದು ವರ್ಷದವರೆಗೆ ಬಂಧಿಸಬಹುದು. ಒಬ್ಬನೇ ಒಬ್ಬ ಕ್ರಿಮಿನಲ್ ಇಲ್ಲದೆ ಜೈಲು ಪೋಲೀಸ್ ಠಾಣೆಗಳು ಖಾಲಿ ಇರುವ ಮಾದರಿಯಲ್ಲಿದ್ದ ಲಕ್ಷದ್ವೀಪದಲ್ಲಿ ತುರ್ತಾಗಿ ಗೂಂಡಾಕಾಯ್ದೆ ಜಾರಿಗೆ ತರಲಾಯಿತು.

ಸಾಮಾನ್ಯವಾಗಿ ಸಣ್ಣ ಪುಟ್ಟ ಕಳ್ಳತನ ಅಪರಾಧಗಳ ಹೊರತುಪಡಿಸಿ ಯಾವುದೇ ಅಪರಾಧಗಳು ನಡೆಯದೇ ಮುಚ್ಚಿದ ಜೈಲುಗಳಿರುವ ಲಕ್ಷದ್ವೀಪ ದಲ್ಲಿ ಈ ಗೂಂಡಾ ಕಾಯ್ದೆಗಳು ಜನರನ್ನು ಇಕ್ಕಟ್ಟಿಗೆ ಸಿಲುಕಿಸುವುದಲ್ಲದೇ ನಿರ್ದಿಷ್ಟವಾಗಿ ಯಾವ ಅಪರಾಧಕ್ಕಾಗಿ ಈ ಕಾಯ್ದೆ ಜಾರಿಯಾಗಿದೆ ಎನ್ನುವುದು ಸ್ಪಷ್ಟವಿಲ್ಲ. UAPA, NSA ಯಂತಹ ಕರಾಳ ಕಾನೂನುಗಳ ಮೂಲಕ ಅಮಾಯಕ ಜನರನ್ನು ವರ್ಷಗಟ್ಟಲೆ ಬಂಧಿಸಿದ ರೀತಿಯಲ್ಲಿ ಲಕ್ಷದ್ವೀಪದಲ್ಲಿ ಕೂಡ ಮುಂದೆ ಅಂತಹ ಪ್ರಕ್ರಿಯೆಗಳು ನಡೆಯಲ್ಲ ಎನ್ನಲು ಅಸಾದ್ಯ.

ಶೇಕಡಾ 95 ರಷ್ಟು ಮುಸ್ಲಿಂ ಸಮುದಾಯ ವಾಸವಾಗಿರುವ ದ್ವೀಪದಲ್ಲಿ ಮದ್ಯ ಉಪಯೋಗಿಸದ ಸಮುದಾಯವಿರುವಲ್ಲಿ ಟೂರಿಸಂನ ಹೆಸರಲ್ಲಿ ಚರಿತ್ರೆಯಲ್ಲೇ ಮೊದಲ ಬಾರಿಗೆ ಪಬ್ಲಿಕ್ ಬಾರ್ ಓಪನ್ ಮಾಡಲಾಯಿತು. ಪ್ರವಾಸಿಗಳಿಗೆ ಬೇಕಾಗಿ ಪ್ರವಾಸಿಗರು ಇರುವ ಸ್ಥಳದಲ್ಲಿ ಮಾತ್ರ ಮದ್ಯ ಲಭ್ಯವಾಗಿತ್ತು. ಅದನ್ನು ದ್ವೀಪದ ಎಲ್ಲಾ ಸ್ಥಳಗಳಲ್ಲಿ ಅನುಮತಿಸಿರುವುದು ಅಲ್ಲಿನ ಜನರಲ್ಲಿ ಕುಡಿತದ ಚಟ ತರಿಸಿ ಇನ್ನಷ್ಟು ಅಪರಾಧಗಳನ್ನು ಹೆಚ್ಚಿಸಿ ಅದರ ಪ್ರಯೋಜನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ತಿಳಿದು ಬರುತ್ತಿದೆ.

ಲಕ್ಷದ್ವೀಪದ ಜನರು ಮಾಂಸಾಹಾರಿಗೆ ಅವಲಂಬಿತರಾಗಿದ್ದು, ಈ ಮುಖ್ಯ ಆಹಾರವನ್ನು ಕಸಿಯುವ ಪ್ರಯತ್ನದೊಂದಿಗೆ ಜನರು ಆಹಾರಕ್ಕಾಗಿ ಪರದಾಡುವ ಸ್ಥಿತಿಯನ್ನು ನಿರ್ಮಿಸಲಾಗಿದೆ. ಶಾಲೆಯ ಮಕ್ಕಳ ಊಟಕ್ಕೆ ನೀಡುತ್ತಿದ್ದ ಅಲ್ಲಿನ ದೈನಂದಿನ ಆಹಾರ ಬೀಫ್ ಆಹಾರವನ್ನು ಕಡಿತಗೊಳಿಸಲಾಗಿದೆ. ಅಲ್ಲಿನ ಈಗಿನ ನಿಯಮದ ಪ್ರಕಾರ ಗೋ ಮಾಂಸ ನಿಷೇಧವನ್ನು ಉಲ್ಲಂಘಿಸಿದರೆ 7 ವರ್ಷಗಳ ಕಾಲ ಜೈಲು ಎಂಬ ನಿಯಮವನ್ನು ಅವರ ಮೇಲೆ ಹೇರಲಾಗಿದೆ.

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸುವವರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿರಬಾರದು ಎಂದು ಕಾನೂನು ಮಾಡಲಾಯಿತು. ಲಕ್ಷದ್ವೀಪದಲ್ಲಿ ಈಗಿರುವ ಬಹುತೇಕ ವ್ಯಕ್ತಿಗಳು 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಾಗಿದ್ದಾರೆ. ಇಂತಹ ಹೊಸ ನಿಯಮಗಳನ್ನು ಹೇರಿ ಅಲ್ಲಿನ ಜನರನ್ನು ಸ್ಥಳೀಯ ಆಡಳಿತ ದಿಂದ ಹೊರಗಿಡುವ ಪ್ರಯತ್ನಗಳು ನಡೆಯುತ್ತಿದೆ.
ಸುಮಾರು 30 ಕ್ಕೂ ಅಧಿಕ ಅಂಗನವಾಡಿಗಳನ್ನು ಮುಚ್ಚಿ ಮಕ್ಕಳನ್ನು ವಂಚಿಸುವ ಪ್ರಯತ್ನವೂ ನಡೆದಿದೆ.

ಲಕ್ಷದ್ವೀಪದ ಜನರ ಮುಖ್ಯ ಕಸುಬು ಮೀನುಗಾರಿಕೆಯಾಗಿರುವಾಗ ಕರಾವಳಿ ರಕ್ಷಣಾ ಕಾಯ್ದೆಯ ಹೆಸರಲ್ಲಿ ಮೀನುಗಾರರ ಎಲ್ಲಾ ಶೆಡ್ ಗಳನ್ನು ಕೆಡವಲಾಗಿದೆ. ಇದರ ಮುಖ್ಯ ಉದ್ದೇಶವು ವಿದೇಶಿ ಉದ್ಯಮಿಗಳಿಗೆ ಇಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವುದಾಗಿದೆ. ಆಡಳಿತ ಅಧಿಕಾರಿಯು ಇದಕ್ಕೆ ನೀಡುವ ಕಾರಣ ಅಭಿವೃದ್ದಿಯ ಹೆಜ್ಜೆ ಎಂಬುದು ಆಗಿದೆ. ಅಭಿವೃದ್ದಿಯ ಇನ್ನೊಂದು ಹೆಜ್ಜೆ ಎಂಬಂತೆ ರಸ್ತೆ ಅವಲೋಕನವನ್ನು ಮುಂದಿರಿಸಿದ್ದಾರೆ. ಕೆಲವೇ ಕೆಲವು ವಾಹನ ಓಡಾಟವಿರುವ ಈ ಪುಟ್ಟ ದ್ವೀಪದಲ್ಲಿ 7 ಮೀಟರ್ ನಷ್ಟು ರಸ್ತೆಯನ್ನು ಅಗಲಗೊಳಿಸುವುದರಿಂದ ರಸ್ತೆ ಬದಿಯಲ್ಲಿನ ಮನೆಗಳು ಸ್ಥಳಾಂತರಿಸಬೇಕಾಗುತ್ತದೆ. ಮತ್ತೆ ಅವರು ನಿರಾಶ್ರಿತರಾದರೂ ಅಚ್ಚರಿಯಿಲ್ಲ.

ಒಟ್ಟಿನಲ್ಲಿ ಈ ಎಲ್ಲಾ ನಿಯಮಗಳು ಲಕ್ಷದ್ವೀಪದ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದಲ್ಲದೆ ಏಳಿಗೆಯ ಒಂದಲ್ಲ ಅಂಶವೂ ಇಲ್ಲ ಎಂಬುವುದು ಅಲ್ಲಿನ ಜನರೇ ಪ್ರತಿಭಟಿಸುವ ಮೂಲಕ ತೋರಿಸುತ್ತಿದ್ದಾರೆ. ನಿರಂತರ ಪ್ರಯತ್ನಗಳಿಂದಾಗಿ 95% ಮುಸ್ಲಿಮ್ ಎಂವ ವರ್ಗ ಇರುವ ಪ್ರದೇಶದ ಶಾಂತಿಯನ್ನು ಕಿತ್ತೆಸೆಯಲು ಮುಂದಾದ ಈ ಒಂದು ಪ್ರಕ್ರಿಯೆ ಅರಿತು ಲಕ್ಷದ್ವೀಪದ ಜನರ ಪರ ಸಂವಿಧಾನ ಒಪ್ಪುವ ಪ್ರತಿಯೊಬ್ಬರೂ ಹೋರಾಡಬೇಕಾಗಿದೆ. ಭಾರತದ ಒಂದು ಭಾಗವಾದ ಕೇಂದ್ರಾಡಳಿತ ಪ್ರದೇಶದ ಈ ಸಂಕಷ್ಟದ ಸಮಯದಲ್ಲಿ ನಾವು ಅವರೊಂದಿಗೆ ಹೋರಾಟಕ್ಕಾಗಿ ಕೈ ಜೋಡಿಸಬೇಕಾಗಿದೆ.

Leave a comment