ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ!
ಭಾಗ:-3
– ಮಹಮ್ಮದ್ ರಿಯಾಝ್
(ಪತ್ರಿಕೋದ್ಯಮ ವಿದ್ಯಾರ್ಥಿ -ಮಂಗಳೂರು ವಿಶ್ವ ವಿದ್ಯಾನಿಲಯ)
ಜರ್ಮನ್ ಹಿಟ್ಲರ್ ಎಂಬ ಸರ್ವಾಧಿಕಾರಿಯ ಅಧೀನದಲ್ಲಿತ್ತು. ಇಡೀ ಜರ್ಮನ್ ನ ಬಹುಸಂಖ್ಯಾತ ಸಮುದಾಯ ಹಿಟ್ಲರ್ ನ ಮಾತಿನ ಮೋಡಿಗೆ ಬಲಿಯಾಗಿತ್ತು. ಜನ ಅವನನ್ನು ದೇವ ಮಾನವನಂತೆ ಬಿಂಬಿಸಿ ಅವನ ಕ್ರೂರತೆ, ಅವನ ದ್ವೇಷದ ಚಿಂತನೆಗೆ ದೇಶ ಸೇವೆಯ ಪಟ್ಟ ನೀಡತೊಡಗಿದ್ದರು. ಹಿಟ್ಲರ್ ಅಲ್ಲಿನ ಜನರ ಮನಸ್ಸಿನಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷದ, ಭಯದ, ಆರ್ಯ ಜನಾಂಗದ ಶ್ರೇಷ್ಠತೆಯ ಅಮಲನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದ. ಮದವೇರಿದ ಆನೆಯಂತೆ ಅಲ್ಲಿನ ಜನರು ತಮಗೆ ತಾವೇ ತಿಳಿಯದಂತೆ ಇತಿಹಾಸದ ಕ್ರೂರ ರಕ್ತ ಸಿಕ್ತ ಚರಿತ್ರೆಗೆ ಕಾರಣರಾದರು.
ಶಾಸನಗಳು ಜನಪರವಾಗಿರಬೇಕು, ಜನರ ಅಭಿವೃದ್ಧಿಗೆ ಪೂರಕವಾಗಿರಬೇಕು. ಯಾವಾಗ ಶಾಸನಗಳ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಲಾಗುತ್ತದೆಯೋ, ಆವಾಗ ಆ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರದ ಸಂಕೋಲೆಯತ್ತ ವಾಲುತ್ತಿದೆ ಎನ್ನಬಹುದು. ಹಿಟ್ಲರ್ ಜರ್ಮನಿಯ ಅಧ್ಯಕ್ಷನಾದ. ಕಮಾಂಡರ್ ಇನ್-ಚೀಫ್ ಅಧಿಕಾರವನ್ನೂ ಅಲಂಕರಿಸಿಕೊಂಡ. ಹಿಟ್ಲರನ ನ್ಯೂರೆಂಬರ್ಗ್ ಕಾನೂನು ಯಹೂದಿಗಳ ನಾಗರಿಕ, ಸಾಮಾಜಿಕ ಮತ್ತು ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸುವ ಶುದ್ಧ ಆರ್ಯನ್ ಅಲ್ಲದ ಜನಾಂಗಗಳಿಗೆ ಕುತ್ತಾದ ಕಾನೂನಾಗಿತ್ತು. ಇದು ಅಲ್ಲಿನ ಯಹೂದಿ ಸಮುದಾಯಕ್ಕೆ ಮುಂದೆ ಬರಲಿರುವ ಪ್ರಳಯದ ಮುನ್ಸೂಚನೆಯಾಗಿತ್ತು.
ಟೈಮ್ಸ್ ಪತ್ರಿಕೆ ಹಿಟ್ಲರನನ್ನು ವರ್ಷದ ವ್ಯಕ್ತಿಯಾಗಿ ಸಾರಿತ್ತು. ಜನ ಅವನಿಗೆ, ಅವನ ಕನಸಿನ ಲೋಕಕ್ಕೆ ಮರುಳಾಗಿದ್ದರು. ಜರ್ಮನ್ನರ ಆತ್ಮಾಭಿಮಾನವನ್ನು ಮೇಲೆತ್ತಿದ ಹಿರಿಮೆ ಆತನದ್ದು ಎಂದು ಸಾರಿದರು. ಬರ್ಲಿನ್ ನಲ್ಲಿ ಹಿಟ್ಲರನ ರ್‍ಯಾಲಿಗಳೇನು, ಅವುಗಳ ವೈಭವವೇನು, ಜನಸ್ತೋಮವೇನು, ಜನಪ್ರೀಯತೆಯ ತುತ್ತ ತುದಿಗೇರಿ ಅವನು ವಿಜೃಂಭಿಸಿದ್ದ. ಇಡೀ ದೇಶ ಆತನ ಮಾತಿಗೆ, ಚಿಂತನೆಗೆ ಮೋಹಿತಗೊಂಡಿತ್ತು. ಯಾವಾಗ ಒಂದು ದೇಶ ಒಬ್ಬ ವ್ಯಕ್ತಿಯನ್ನು ಅಥವಾ ಆಡಳಿತಗಾರನನ್ನು ದೇವಮಾನವನಂತೆ ಕಂಡು ಪೂಜಿಸಲು ಪ್ರಾರಂಭಿಸುತ್ತದೋ, ಯಾವಾಗ ಜನತೆ ಅವನ ಮಾತಿಗೆ ಬಲಿಯಾಗಿ “ಅಂಧ ಭಕ್ತ” ರಂತೆ ಅನುಸರಿಸಲು ಪ್ರಾರಂಭಿಸುತ್ತಾರೋ ಆವಾಗ ಆ ದೇಶ ಸರ್ವಾಧಿಕಾರದತ್ತ ಹೆಜ್ಜೆ ಹಾಕುತ್ತಿದೆ ಎನ್ನಬಹುದು.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಇಂದು ಸರ್ವಾಧಿಕಾರದ ಸಂಕೋಲೆಗಳಲ್ಲಿ ಬಂಧನವಾಗುತ್ತಿದೆಯೇ? 2019 ರಲ್ಲಿ “ದಿ ಇಕೊನಾಮಿಸ್ಟ್” ಪ್ರಕಟಿಸಿದ ಜಗತ್ತಿನ ಪ್ರಜಾಪ್ರಭುತ್ವ ದೇಶಗಳ ಸೂಚ್ಯಾಂಕದಲ್ಲಿ ಭಾರತ 10 ಸ್ಥಾನ ಕಳೆದುಕೊಂಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಜಮ್ಮು ಕಾಶ್ಮೀರ ದಲ್ಲಿ ಜನ ಬೆಂಬಲವಿಲ್ಲದೆ ಆರ್ಟಿಕಲ್ 370 ರ ರದ್ದತಿ ಹಾಗೂ ಅಲ್ಲಿನ ಜನರ ಸಂವಹನ, ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಿರುವುದು ಮತ್ತು ಎನ್ ಆರ್ ಸಿ, ಸಿಎಎ ಕಾನೂನಿನ ವಿರುದ್ಧ ದೇಶದಾದ್ಯಂತ ಭುಗಿಲೆದ್ದ ಆಕ್ರೋಶವೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ನಾವು ಇತಿಹಾಸದ ಪುಟಗಳಿಂದ ಪಾಠ ಕಲಿಯಬೇಕಾಗಿದೆ. ಹಿಟ್ಲರನ ದ್ವೇಷ, ಚಿಂತನೆ, ಕ್ರೂರತೆ ಮತ್ತೆ ಹುಟ್ಟಿ ಬರದಂತೆ ಎಚ್ಚರವಹಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಅಂತಹಾ ಕರಾಳ ದಿನಗಳು ಮತ್ತೆ ಮರುಕಳಿಸಬಹುದು. ದೇಶದಲ್ಲಿ ಹುಟ್ಟಬಲ್ಲ ಹಿಟ್ಲರನ ಚಿಂತನೆಯನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ.
