ಫೆಲಸ್ತೀನ್ ಹೋರಾಟಗಾರರಿಗೆ ಅಜೀವ ಸ್ಪೂರ್ತಿ

– ಅಶ್ವಾನ್ ಸಾದಿಕ್

ಫೆಲಸ್ತೀನ್ ಅಥವಾ ಫಲಸ್ತೀನಿಯರು ಎಂದೊಡನೆ ಜಗತ್ತಿಗೆ ಭಯೋತ್ಪಾದಕ ರಾಷ್ಟ್ರ, ಹಿಂಸಾವಾದಿಗಳು, ಜಗತ್ತಿನ ಶಾಂತಿಹರಣ ಮಾಡುವುದಕ್ಕಾಯೇ ಹುಟ್ಟಿಕೊಂಡಿರುವ ಶತ್ರುಗಳು ಎಂಬ ಮನಸ್ಥಿತಿಯೊಂದು ಮೂಡಿ ಬಿಟ್ಟಿದೆ. ಆದರೆ ವಾಸ್ತವದಲ್ಲಿ ನಿರಂತರ ಬಾಂಬುಗಳ ದಾಳಿಯ ಶಬ್ದಗಳು, ದಾಳಿಗಳಿಂದ ಸಂಪೂರ್ಣ ಅಥವಾ ಭಾಗಶಃ ಧ್ವಂಸಗೊಂಡ ಕಟ್ಟಡಗಳನ್ನೊಳಗೊಂಡ ದೇಶವಾಗಿದೆ ಫೆಲಸ್ತೀನ್. ಇಸ್ರೇಲ್ ಎಂಬ ಜಾಗತಿಕ ಭಯೋತ್ಪಾದಕ ಶಕ್ತಿಯ ವಿರುದ್ಧ ತನ್ನ ಮನೋಬಲವನ್ನು ಉಪಯೋಗಿಸಿ ಹೋರಾಟ ಚಳುವಳಿಗಳನ್ನು ನಡೆಸುತ್ತಿರುವ ರಾಷ್ಟ್ರವಾಗಿದೆ ಫೆಲಸ್ತೀನ್.

ಫೆಲಸ್ತೀನಿಗಿರುವ ಇತಿಹಾಸದ ಪುಟ ತೆರೆದು ನೋಡುವುದಾದರೆ 30ರ ದಶಕದಲ್ಲಿ ಜರ್ಮನಿಯಲ್ಲಿ ನಡೆದ ಭಯಂಕರ ಜನಾಂಗೀಯ ಹತ್ಯೆಯ ನಿರಾಶ್ರಿತ ಜನರಿಗೆ ನಾಡು ಕಟ್ಟಿಕೊಟ್ಟು, ಒಂದು ಅಂತರಾಷ್ಟ್ರೀಯ ಅಸ್ತಿತ್ವವನ್ನು ರೂಪಿಸಬೇಕೆಂಬ ಉದ್ದೇಶದಿಂದ ವಿಶ್ವಸಂಸ್ಥೆ 1947ರಲ್ಲಿ ಫೆಲಸ್ತೀನನ್ನು 2 ಭಾಗ ಮಾಡಿ ಒಂದು ಭಾಗವನ್ನು ಫೆಲಸ್ತೀನರಿಗೆ ಮತ್ತೊಂದು ಭಾಗವನ್ನು ಯಹೋದಿ ಇಸ್ರೇಲ್ ರಿಗೆ ನೀಡಿತು. ಆದರೆ 1948ರಲ್ಲಿ ಇಸ್ರೇಲ್, ಸುತ್ತಮುತ್ತಲಿನ ಕೆಲ ಪ್ರದೇಶಗಳ ಮೇಲೆ ಆಕ್ರಮಣಗಳನ್ನು ಎಸಗತೊಡಗಿತು. ಅಂದಿನಿಂದ ಇಂದಿನ ವರೆಗೆ ಇಸ್ರೇಲ್ ಫೆಲಸ್ತೀನ್ ಒಂದು ರಾಷ್ಟ್ರವೆಂದು ಒಪ್ಪಿಯೇ ಇಲ್ಲ.1992-94 ಆಸ್ಲೋ ಒಪ್ಪಂದವಿದ್ದರೂ ಅದನ್ನು ತಿರಸ್ಕರಿಸಿ ಬಹುಷ್ಕರಿಸಲಾರಂಭಿಸಿದರು. ಇಸ್ರೇಲಿನ ಮಾಜಿ ಮಹಿಳಾ ಪ್ರಧಾನಿಯೊಂದಿಗೆ ಫೆಲಸ್ತೀನ್ ಸ್ವಾತಂತ್ರ್ಯದ ಕುರಿತಾಗಿ ಪ್ರಶ್ನೆ ಮಾಡಿದಾಗ, “ಫೆಲಸ್ತಿನ್!!, ಏನು ಅದು? ಅಂಥದೇನೂ ಇಲ್ಲ!” ಎಂಬ ದುರಹಂಕಾರದ ಮಾತಿನೊಂದಿಗೆ ಫೆಲಸ್ತೀನನ್ನು ಒರೆಸಿಹಾಕಿಬಿಟ್ಟಿದ್ದಳು. ಆಕೆಯ ಮಾತನ್ನು ಅಕ್ಷರಶಃ ನಿಜವಾಗಿಸುವುದೇ ಇಸ್ರೇಲ್ ರಾಷ್ಟ್ರದ ಅಪೇಕ್ಷೆಯೂ ಆಗಿದೆ. ಈ ಹುನ್ನಾರಕ್ಕೆ ಜಗತ್ತಿನ ಸದ್ಯದ ಮೂಲ ನಿವಾಸಿಗಳನ್ನು ಒರೆಸಿ ಹಾಕಲು ಪ್ರಯತ್ನಿಸುತ್ತಿರುವ ದೊಡ್ಡ ರಾಷ್ಟ್ರವಾದ ಅಮೇರಿಕಾದ ಕುಮ್ಮಕ್ಕಿನ ಬೆಂಬಲವೂ ಇದೆ.

ಪ್ರತೀಬಾರಿ ವಿಶ್ವ ಸಂಸ್ಥೆಯು ಇಸ್ರೇಲಿನ ಆಕ್ರಮಣಗಳು, ಹಿಂಸಾ ಮಾರ್ಗಗಳು, ಫೆಲಸ್ತೀನರ ದಮನ ಇವುಗಳ ಕುರಿತಾದ ನಿರ್ಣಯ ತೆಗೆದುಕೊಂಡರೂ, ಅಮೆರಿಕ ಮಾತ್ರ ತನ್ನ ‘ವಿಟೋ’ ಹಕ್ಕನ್ನು ಚಲಾಯಿಸಿ ನಿಷ್ಕ್ರಿಯಗೊಳಿಸುತ್ತಿದೆ. ಅರಬ್ ಹಾಗೂ ಯೋರೋಪಿನ ಇತರ ರಾಷ್ಟ್ರಗಳು ಆಗಾಗ ಜೀವವೇ ಇಲ್ಲದ ಔಪಚಾರಿಕ ಪ್ರತಿಭಟನಾತ್ಮಕ ಹೇಳಿಕೆಗಳನ್ನು ಮಾತ್ರ ನೀಡುತ್ತಿವೆ.
ಎರಡು ಕಾಲಿನ ಕ್ರಿಮಿಗಳು ಎಂದು ಇಸ್ರೇಲ್ ನಾಯಕರು ವಿವರಿಸುವ ಫಲೆಸ್ತೀನಿಯರು ಮೂರನೆ ದರ್ಜೆ ನಾಗರಿಕರಾಗಿ, ಗುಲಾಮರಾಗಿ, ದಿನ ನಿತ್ಯದ ಊಟದ ಗಳಿಕೆಗೂ ಇಸ್ರೇಲಿಗರ ಕೃಪಾಕಟಾಕ್ಷಕ್ಕೆ ಕಾಯುವಂತೆ ಬದುಕಿದ್ದಾರೆ.

1980ರಲ್ಲಿ ಇಸ್ರೇಲರ ವಿರುದ್ಧ “ಇಂತಿಫಾದ” ಎಂಬ ಚಳುವಳಿಯೊಂದು ಪ್ರಾರಂಭಗೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಕೂಡ “ಗ್ರೇಟ್ ಮಾರ್ಚ್ ಆಫ್ ರಿಟರ್ನ್” ಎಂಬ ಹೆಸರಿನಲ್ಲಿ ಇಸ್ರೇಲಿ ವಿರುದ್ಧ ಚಳುವಳಿಗಳು ನಿರಂತರವಾಗಿ ನಡೆಯುತ್ತಿದೆ. ಹಲವು ವಿಧಾನಗಳನ್ನು ಬಳಸಿ ಪುಟ್ಟ ಪುಟ್ಟ ಮಕ್ಕಳು, ಯುವಕ ಯುವತಿಯರೂ, ವೃದ್ಧರೂ ಸೇರಿದಂತೆ ಪ್ರಾಯ ವ್ಯತ್ಯಾಸವಿಲ್ಲದೆ ಇಸ್ರೇಲ್ ವಿರುದ್ಧ ನಿರಂತರ ಹೊರಾಟದಲ್ಲಿ ತೊಡಗಿದ್ದಾರೆ. ನ್ಯಾಯಯುತ ಕಲ್ಲು ತೂರಾಟ, ರಸ್ತೆ ತಡೆ, ಮುಂತಾದವುಗಳನ್ನು ಅಸ್ತ್ರಗಳನ್ನಾಗಿ ಅಳವಡಿಸುತ್ತಿದ್ದಾರೆ. ಇಷ್ಟೇ ಕಾರಣಕ್ಕೆ ಇಸ್ರೇಲಿ ಸರಕಾರ ಸೇನೆಗೆ ಸಾಕಷ್ಟು ನೆಪಗಳಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ, ಫೆಲಸ್ತೀನಿಯರು ಹಿಂಸಾತ್ಮಕ ಚಟುವಟಿಕೆ, ಇಸ್ರೇಲಿ ಜೀವನಾಶ, ಇಸ್ರೇಲ್ ರಾಷ್ಟ್ರವನ್ನೇ ನಾಶಮಾಡುವ ಏಕೈಕ ಗುರಿಯಿರುವ ಭಯೋತ್ಪಾದಕ ದೇಶ ಎಂದೆಲ್ಲ ಬೊಬ್ಬೆ ಹಾಕುತ್ತಿದೆ. ಇವರಿಗೆ ಪೂರಕವಾಗಿ ಪಾಶ್ಚಿಮಾತ್ಯ ಮಾಧ್ಯಮಗಳು – ಒಂದೆರಡೂ ಅಪರೂಪದ ವಿನಾಯಿತಿ ಬಿಟ್ಟರೆ, ಸತ್ಯಾಸತ್ಯತೆಗಳ ಪರೀಕ್ಷೆ ಮಾಡದೆ ಇವರ ಮಾತನ್ನೇ ಅಂತಿಮ ಸತ್ಯವೆಂದು ನಂಬಿ ಸಂದರ್ಭವನ್ನು ಮತ್ತಷ್ಟು ಹದಗೆಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮ ಫೆಲಸ್ತೀನಿಯರ ಮೇಲೆ ಮತ್ತೂ ಘೋರವಾದ ದಾಳಿ ನಡೆಯುತ್ತಿದೆ. ಸಾವಿರಗಟ್ಟಲೆ ಹೆಣಗಳು ಬೀಳುತ್ತಿದೆ, ಅಸಂಖ್ಯಾತ ಮನೆಗಳು ಉರುಳುತ್ತಿದೆ, ಲಕ್ಷಗಟ್ಟಲೆ ಜನರು ಅನಾಥರಾಗುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟಗಳು ಇವನ್ನಲ್ಲ ‘ಕೊಲ್ಯಾಟರಲ್ ಡ್ಯಾಮೇಜ್’ ಎಂದು ತಿಪ್ಪೆಸಾರುತ್ತಿದೆ.

ಈ ಎಲ್ಲಾ ಅನ್ಯಾಯ, ಅಕ್ರಮಣ ನಡೆಯುತ್ತಿದ್ದರೂ, ಫೆಲಸ್ತಿನ್ ಇಂದಿಗೂ ಹೋರಾಟಗಾರರಿಗೆ ಸ್ಪೂರ್ತಿಯಾಗಿದೆ. ತಮ್ಮ ಮನೆಮಾರುಗಳು, ಸ್ವಂತದವರೂ, ಸರ್ವಸ್ವವೂ ನಶಿಸಿಹೋದಾಗಲು ಫೆಲಸ್ತೀನಿಯರು ವಿಶ್ವದ ಮುಂದೆ ತಲೆತಗ್ಗಿಸಿದ ಅಥವಾ ಯಾಚಿಸಿದ ಉದಾಹರಣೆಗಳಿಲ್ಲ. ಅವರೆಲ್ಲ ಜಗತ್ತಿನ ಮುಂದೆ ತಮ್ಮ ಒಗ್ಗಟ್ಟಿನ, ಪ್ರತಿಭಟನೆಯ, ಹಟದ, ಧೈರ್ಯದ ಮತ್ತು ವಿರೋಚಿತ ಗುಣಮಟ್ಟವನ್ನು ಪ್ರದರ್ಶಿಸಿದ್ದಾರೆ. ಈ ಜನರು ಜಗತ್ತಿನ ಅತ್ಯಂತ ಆಧುನಿಕ ಮತ್ತು ಶಕ್ತಶಾಲಿ ಯುದ್ಧ ಸಾಮಾಗ್ರಿಗಳನ್ನು ಹೊಂದಿರುವ ಸುಸಜ್ಜಿತ ಸೈನಿಕರ ವಿರುದ್ಧ ಆಯುಧವನ್ನಾಗಿ ಕೈಯಲ್ಲಿ ಕಲ್ಲುಗಳನ್ನು ಹಿಡಿದು ಧೀರತೆಯ ಪ್ರದರ್ಶನವನ್ನು ತೋರುತ್ತಿದ್ದಾರೆ. ಇತರೆ ದೇಶದ ಕಂದಮ್ಮಗಳ ಬಾಲ್ಯ ಹಾಗು ಉಚಿತ ಸಮಯವನ್ನು ತನ್ನ ಹೆತ್ತವರೊಂದಿಗೆ ಸಂತೋಷದಿಂದ ಕಳಿಯುತ್ತಿರುವಾಗ ಫೆಲಸ್ತೀನಿ ಕಂದಮ್ಮಗಳು ಇಸ್ರೇಲಿನ ಯುದ್ಧ ಟ್ಯಾಂಕ್‍ಗಳೊಂದಿಗೆ ಈಮಾನಿನ (ದೇವನ ವಿಶ್ವಾಸ) ಬರಿಗೈ ಹೋರಾಟದಲ್ಲಿ ನಿರತರಾಗಿದೆ.

ಒಂದು ದಿನ ಒಬ್ಬ ಫಲೆಸ್ಥೀನ್ ಯುವಕ ಕೈಯೊಳಗೆ ಹೊಕ್ಕ ಗುಂಡನ್ನು ನಾನೇ ತೆಗೆಯುತ್ತಿದ್ದ. ಅದು ತುಂಬಾ ಕಷ್ಟಕರವಾಗಿತ್ತು ಏಕೆಂದರೆ ಈ ಗುಂಡು ಬೆರಳಿನ ಎಲುಬಿನೊಳಗೆ ಹೊಕ್ಕಿತ್ತು. ಅನಸ್ತೇಷಿಯಾದ ಔಷಧಗಳು ಅವರಲ್ಲಿರಲಿಲ್ಲ. ಕೈಗಳಿಗೆ ಹಾಕುವ ಗ್ಲೌಸ್‍ಗಳು ಕೂಡ ಇಲ್ಲದೆ ನರ್ಸ್ ಒಬ್ಬಳು ಟಾರ್ಚ್ ಹಿಡಿದುಕೊಂಡು ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಶಸ್ತ್ರ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಡಾಕ್ಟರ್ “ನಮ್ಮಲ್ಲಿ ಅರಿವಳಿಕೆಯ ಔಷಧ ಮುಗಿದಿದೆ, ನಿನಗೆ ಅಸಾಧ್ಯ ನೋವುಂಟಾಗಬಹುದು” ಎನ್ನುತ್ತಾರೆ. ಆಗ ಈ ಯುವಕ ಡಾಕ್ಟರ್ , “ನಾನೊಬ್ಬ ಫಲಿಸ್ತೀನಿಗ, ಮರೀ ಬೇಡಿ” ಎಂದು ಆತ ಥಟ್ಟನೆ ಹೇಳಿದ. ಹೀಗೆ ಹೇಳುವ ರೋಗಿಗೆ ನಾನೇನು ತಾನೆ ಹೇಳಲಿ? ಒಂದು ಲೋಕಲ್ ಅನಸ್ತೀಷಿಯಾ ಕೂಡ ಇಲ್ಲದೆ ಡಾಕ್ಟರ್ ಶಸ್ತ್ರ ಚಿಕಿತ್ಸೆ ಮಾಡಿ ಮುಗಿಸುತ್ತಲೇ ಅವನು ಎದ್ದು ಹೋದ ಎನ್ನುತ್ತಾರೆ ಅಲ್ಲಿನ ಡಾಕ್ಟರ್.
(ಸಂಗ್ರಹ-ಫೆಲಸ್ತೀನಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಅಂಗ್ ಸ್ವಿ ಚಾಯ್‍ರ ಜೀವನಚರಿತ್ರೆ)
ಫೆಲಸ್ತೀನಿಯರ ಹೋರಾಟ ಮನಸ್ಥಿತಿ ಮತ್ತು ಮನೋಬಲಕ್ಕೆ ಈ ಘಟನೆಯು ಸಾಕ್ಷಿಯಾಗಿದೆ.

ಕಳೆದ ಎಪ್ಪತ್ತು ವರ್ಷಗಳಿಗೂ ಅಧಿಕ ಸಮಯದಿಂದ ದೌರ್ಜನ್ಯಕ್ಕೊಳಗಾಗುತ್ತಿರುವ ಫೆಲಸ್ತೀನಿಯರ ದಣಿವಿಲ್ಲದ ಹೋರಾಟ ಎರಡು ಮುಖ್ಯ ಆಧಾರಸ್ಥಂಭಗಳ ಮೇಲೆ ನಿಂತಿದೆ. 1. ಪ್ರತಿಭಟನೆ ಸಂಕಲ್ಪ 2. ಒಗ್ಗಟ್ಟಿನ ಸಾಮರ್ಥ್ಯ. ಆದ್ಯ ಕಾಲಘಟ್ಟದಿದಂದಲೂ ಫೆಲಸ್ತೀನಿಯರ ಒಗ್ಗಟ್ಟನ್ನು ಒಡೆಯಲು ಇಸ್ರೇಲಿ ಶಕ್ತಿಗಳು ಶ್ರಮಿಸಿದರೂ, 1980ರ ಕಾಲಘಟ್ಟದಲ್ಲಿ ಕೊನೆಗೆ ಅದು ತಿರುಕನ ಕನೆಸೆಂದು ಅವರು ಅರ್ಥೈಸಿಕೊಂಡರು. ನಂತರ ಅವರ ಪ್ರಯತ್ನ ಫೆಲೆಸ್ತೀನಿಯನ್ನರ ಪ್ರತಿಭಟನಾ ಮನೋಭಾವವನ್ನು ಕೆಡುವ ಸಲುವಾಗಿ ಮೊದಲಿಗೆ ಅವರ ಮೂಲಭೂತ ಅವಶ್ಯಕ ವಸ್ತುಗಳನ್ನೆಲ್ಲಾ ನಾಶ ಮಾಡಲಾರಂಭಿಸಿದರು. ನಂತರ ಕುಟುಂಬದ ಗಂಡಸರನ್ನು ಹೆಕ್ಕಿ ದೂರವಿರಿಸಲಾರಂಭಿಸಿದರು. ಆ ನಂತರ ಹೆಂಗಸರು, ಮಕ್ಕಳನ್ನು ಸಾಮೂಹಿಕವಾಗಿ ಹತ್ಯೆಮಾಡಲು ಶುರುಮಾಡಿದರು. ನಿರಾಶ್ರಿತ ಶಿಬಿರಗಳೆನ್ನೆಲ್ಲಾ ವ್ಯವಸ್ಥಿತವಾಗಿ ನಾಶ ಮಾಡಿ, ಜನರ ಪ್ರತಿಭಟನೆಯ ನೈತಿಕ ಸಂಕಲ್ಪವನ್ನು ನುಚ್ಚುನೂರು ಮಾಡುವ ಪ್ರಯತ್ನ ಮಾಡಲಾಯಿತು. ಇಂದಿಗೂ ಈ ಪ್ರಯತ್ನ ನಡೆಯುತ್ತಿದೆ. ಆದರೆ ಫೆಲಸ್ತೀನಿಯರು ಇಂದಿಗೂ ಇದ್ಯಾವುದಕ್ಕೂ ಬಗ್ಗದೆ ತಲೆಕೆಡಿಸಿಕೊಳ್ಳದೆ ದಿನಕಳೆದಂತೆ ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಿದ್ದಾರೆ.
1985ರಲ್ಲಿ ಸಬ್ರಾ ಪೆಲಸ್ತೀನಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೈನಿಕರಿಂದ ಬಾಂಬ್ ಹಾಗು ಶೆಲ್ ದಾಳಿಗಳು ನಡೆಯಿತು. ಮನೆ, ವಾಸ ಸ್ಥಳಗಳನ್ನು ಕಳೆದುಕೊಂಡ ಜನರು, ಇನ್ನೂರು ಚದರ ಅಡಿ ವಿಸ್ತೀರ್ಣದ ಪುಟ್ಟ ಶೆಡ್‍ನಲ್ಲಿ ಅಭಯ ಪಡೆದರು. ಇಸ್ರೇಲ್ ಸೈನಿಕ ಟ್ಯಾಂಕುಗಳು, ಬಂದೂಕು ದಾರಿ ಸೈನಿಕರು ಶಿಬಿರದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು 1985ರಿಂದ 1987ರ ವೆರೆಗೆ (ಮಧ್ಯೆ ಒಂದೆರೆಡು ತಿಂಗಳು ಹೊರೆತುಪಡಿಸಿ) ಎರಡು ವರ್ಷಗಳ ಕಾಲ ದಿಗ್ಬಂಧನಗೊಳಿಸಿದ್ದರು. ಶಿಬಿರದ ಜನ ಹೊರ ಹೋಗದಂತೆ, ಹೊರಗಿನವರು ಒಳ ಬಾರದಂತೆ ನಿರ್ಬಂಧಿಸಲಾಗಿತ್ತು. ಶಿಬಿರದೊಳಗೆ ಸತತ ಶೆಲ್ಲುಗಳು ಹಾಗು ಬಾಂಬುಗಳ ಸುರಿಮಳೆಯಾಗುತ್ತಿತ್ತು. ಕದನವಿರಾಮದ ಒಂದೆರಡು ತಿಂಗಳು ಕೂಡ ಕರ್ಫ್ಯೂ ಇದ್ದಂತಹ ಪರಿಸ್ಥಿತಿ ಇತ್ತು. ಜನರು ಹಸಿವೆಯಿಂದ ಅಸುನೀಗುತ್ತಿದ್ದರು. ಯುವಕರು ಹಸಿವನ್ನು ತಡೆದುಕೊಂಡು ಉಪವಾಸವಿದ್ದು ಮಕ್ಕಳಿಗೆ, ಮಹಿಳೆಯರಿಗೆ ಹಾಗು ವೃದ್ಧರಿಗೆ ಆಹಾರವನ್ನು ಹಂಚುತ್ತಿದ್ದರು. ಆಹಾರವನ್ನು ಕೇಳಿದಾಗಲೆಲ್ಲಾ ಅವರ ಮೇಲೆ ಶೆಲ್ಲುಗಳು, ಗುಂಡಿನ ದಾಳಿಗಳು ನಡೆಯುತ್ತಿತ್ತು. ಕೊನೆಗೆ ಧಾರ್ಮಿಕ ಮುಖಂಡರು ಶಿಬಿರದಲ್ಲಿ ಸಾಯುತ್ತಿರುವ ಫೆಲಸ್ತೀನಿಯರಿಗೆ ಮನುಷ್ಯರ ಶವವನ್ನು ತಿನ್ನುವುದಕ್ಕೆ ಅನುಮತಿ ನೀಡಿದಾಗ, ಶಿಬಿರದ ಜನರು ಹೀಗೆ ಉತ್ತರಿಸಿದರು : “ಇತಿಹಾಸದಲ್ಲಿ ದೇಶಗಳು, ಜನಸಮೂಹಗಳು ಯುದ್ಧದಿಂದಾಗಿ, ಬರಗಾಲ, ಪ್ರಕೃತಿ ವಿಕೋಪದಿಂದಾಗಿ ನಿರ್ಣಾಮಗೊಂಡದ್ದು ಇದೆಯಾದರೂ, ಮನುಷ್ಯರೇ ನಿರ್ಮಿಸಿದ ಕ್ರೌರ್ಯದಡಿಯಲ್ಲಿ ಹಸಿವಿನಿಂದ ಸಾಯುತ್ತಿರುವವರಲ್ಲಿ ನಾವೇ ಮೊದಲಿಗರು. ನಮ್ಮನ್ನು ಕೊಲ್ಲುವ ಈ ಹಸಿವು ಎಂಬುದು ಒಂದು ಆಯುಧವಾಗುವುದೇ? ನಾವು ಹಸಿವಿನ ಶಿಕ್ಷೆಯ ಕಾರಣಕ್ಕೆ ಅವರಿಗೆ ಶರಣಾಗಬೇಕೆ? ಎಲ್ಲಿದೆ ಇಪ್ಪತನೆಯ ಶತಮಾನದ ಆತ್ಮಸಾಕ್ಷಿ? ಹೀಗೆ ನಾವು ನಾಶವಾಗಬೇಕಾದರೆ ಅದು ಒಂದು ಇತಿಹಾಸವಾಗಲಿ” ಎಂದು ಅಂತಹ ಸಂದಿಗ್ಧ ಹೀನಾಯ ಪರಿಸ್ಥಿತಿಯಲ್ಲೂ ಕೂಡ ಫೆಲಸ್ತಿನಿಯರು ಶರಣಾಗದೆ ಧೈರ್ಯದಿಂದ, ಹೆಮ್ಮೆಯಿಂದ ಶಹಾದತನ್ನು ಕಾಯುತ್ತಿದ್ದರು.

“ನಾನು ಸಹಿಸುವೆ
ನಾನು ಸಹಿಸುವೆ, ದೃಢ ಸಂಕಲ್ಪದೊಂದಿಗೆ, ನಾನು ಸಹಿಸುವೆ
ನನ್ನ ತಾಯ್ನೆಲದಲ್ಲಿ, ನಾನು ಸಹಿಸುವೆ
ನನ್ನ ರೊಟ್ಟಿಯನ್ನು ಅವರು ಕಸಿದುಕೊಂಡಾಗ, ನಾನು ಸಹಿಸುವೆ
ನನ್ನ ಮಕ್ಕಳನ್ನು ಅವರು ಕೊಲೆ ಮಾಡಿದಾಗ, ನಾನು ಸಹಿಸುವೆ
ನನ್ನ ಮಕ್ಕಳನ್ನು ಅವರು ಸುಟ್ಟಾಗ, ನಾನು ಸಹಿಸುವೆ
ನನ್ನ ಮನೆಯನ್ನು ಅವರು ಸುಟ್ಟಾಗ,
ಓ ನನ್ನ ಮನೆಯೇ
ನಿನ್ನ ಗೊಡೆಗಳ ನೆರಳಲ್ಲಿ, ನಾನು ಸಹಿಸುವೆ
ಹೆಮ್ಮೆಯಿಂದ, ನಾನು ಸಹಿಸುವೆ
ಒಂದು ಕೋಲು, ಒಂದು ಚೂರಿಯೊಂದಿಗೆ, ನಾನು ಸಹಿಸುವೆ
ಕೈಯಲ್ಲಿ ಧ್ವಜವನ್ನು ಹಿಡಿದು, ನಾನು ಸಹಿಸುವೆ
ಮತ್ತೆ ಅವರು ನನ್ನ ಕೈಯನ್ನು ಕಡಿದರೆ, ಧ್ವಜವ
ಇನ್ನೊಂದು ಕೈಯಲಿ ಹಿಡಿದು, ನಾನು ಸಹಿಸುವೆ
ನನ್ನ ಹೊಲ, ನನ್ನ ತೋಟದ ಜೊತೆಗೆ, ನಾನು ಸಹಿಸುವೆ
ನನ್ನ ನಂಬಿಕೆಯ ಮೇಲಿನ ದೃಢತೆಯೊಂದಿಗೆ, ನಾನು ಸಹಿಸುವೆ
ನನ್ನ ಉಗುರುಗಳು, ನನ್ನ ಹಲ್ಲುಗಳ ಜೊತೆಗೆ, ನಾನು ಸಹಿಸುವೆ
ನನ್ನ ದೇಹದಲ್ಲಿ ಗಾಯಗಳಾದಲ್ಲಿ, ಎರಡುಪಟ್ಟಾಗಲಿ
ನನ್ನ ಗಾಯಗಳು ಮತ್ತು ಹರಿಯಲಿ ನನ್ನ ರಕ್ತ, ನಾನು ಸಹಿಸುವೆ “

ಈ ಹಾಡನ್ನು ಇಸ್ರೇಲಿನ ವಶದಲ್ಲಿದ್ದ ಪ್ರದೇಶದ ಫೆಲಸ್ತೀನಿಯರು ಹಾಡುತ್ತಿದ್ದರು.
ಇಸ್ರೇಲ್‍ನ ಕೌರ್ಯವು ಹೆಚ್ಚಾಗಿ ಅಲ್ಲಿನ ಕಂದಮ್ಮಗಳು, ಯುವ ಸಮೂಹವನ್ನೇ ಗುರಿಯಾಗಿಸಿ ನಡೆಯುತ್ತಿದ್ದು ಹಲವಾರು ಮುಗ್ದ ಜೀವಗಳು ಅಸುನೀಗಿದೆ. ವರದಿಯ ಪ್ರಕಾರ ನವೆಂಬರ್ 2019ರಿಂದ ಅಕ್ಟೋಬರ್ 2020ರ ವರೆಗೆ 1,048 ಮಕ್ಕಳು ಇಸ್ರೇಲ್ ದಾಳಿಗೆ ತುತ್ತಾಗಿ ಗಂಭೀರ ಗಾಯಕ್ಕೊಳಗಾಗಿದ್ದಾರೆ. ರಝಾನ ಅಲ್ ನಜ್ಜರ್, ಸಜಿದ್ ಮುಝಾರ್, ಒಮರ್ ಅಲ್ ಬದವಿ, ಅಬ್ದುಲ್ಲಾ ಗೈಥ್, ಅಹ್ಮದ್ ಮನಸ್ರ ರಂತಹ ಅನೇಕ ಮುಗ್ದರು, ಹೋರಾಟಗಾರರು, ಇಸ್ರೇಲಿನ ಕ್ರೌರ್ಯಕ್ಕೆ ಶಹಾದತ್ ಹೊಂದಿದ್ದಾರೆ.

ಫೆಲಸ್ತೀನಿಯರು ತಮಗೆ ಆಗುತ್ತಿರುವಂತಹ ದೌರ್ಜನ್ಯದ ವಿರುದ್ಧದ ಹೋರಾಟದಲ್ಲಿ ಅವರು ಕೈಗೊಂಡಿರುವ ನಿಲುವು, ಅವರ ಸ್ಥೈರ್ಯ, ಎದೆಗಾರಿಕೆ ಇತರೆ ದೇಶಗಳಲ್ಲಿ ಶೋಷಿತ ಜನಾಂಗಕ್ಕೆ ಆಧುನಿಕ ಫರೋವರ(ಸರ್ವಾಧಿಕಾರಿಗಳ) ವಿರುದ್ಧದ ಹೋರಾಟಕ್ಕೆ ಚೈತನ್ಯದ ಸ್ಪೂರ್ತಿಯಾಗಿದೆ.

5 thoughts on “ಫೆಲಸ್ತೀನ್ ಹೋರಾಟಗಾರರಿಗೆ ಅಜೀವ ಸ್ಪೂರ್ತಿ

  1. ಪ್ಯಾಲೆಸ್ಥಿನ್ ಎಂದರೆ ಕುರಿ ಮೇಯಿಸುವ ಪ್ರದೇಶ ಎಂದರ್ಥ.
    ಯಹೂದಿಗಳ ಕ್ರೂರತೆಯನ್ನು ಚನ್ನಾಗಿ ವಿವರಿಸಿದ್ದಾರೆ ಆದರೆ ಇಷ್ಟೆಲ್ಲಾ ಕ್ರೂರತೆ ನಡೆಯುತಿದ್ದರು ವಿಶ್ವಸಂಸ್ಥೆ ಏನು ಮಾಡುತಿದೆ ಎಂಬುದು ಜನ ಸಾಮಾನ್ಯರ ಪ್ರಶ್ನೆ.

    Like

Leave a comment