ಈ ಸಂದಿಗ್ಧತೆಯಲ್ಲಾದರೂ ಧರ್ಮಾಂಧತೆಯೆಂಬ ಮಾನಸಿಕ ರೋಗದಿಂದ ಹೊರ ಬನ್ನಿ- ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ಶಾಸಕರಿಗೆ ‘ಕನ್ನಡಿ’ಯ ಕಳಕಳಿ

ದೇಶವು ಕೋವಿಡ್ -19 ರ 2ನೇ ಅಲೆಯ ಸಂಕಷ್ಟದಲ್ಲಿ ಮುಳುಗಿಹೋಗಿದೆ. ಜನಸಾಮಾನ್ಯರು ದಿಕ್ಕು ತೋಚದಂತಹ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಇಂದು ಶವಗಳ ರಾಶಿ ಕಂಡು ಕುಟುಂಬಗಳ ರೋಧನ ಭುಗಿಲೇಳುತ್ತಿದೆ. ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರಕಾರದ ವರ್ತನೆ ಇಲ್ಲಿ ನೋಡಲು ಬಲುಭೀಕರವಾಗಿ ಕಾಣುತ್ತಿದೆ. ಆಮ್ಲಜನಕ ಪೂರೈಕೆಯಲ್ಲಿ ಕೊರತೆ, ವೆಂಟಿಲೇಟರ್ ಕೊರತೆ, ಆಸ್ಪತ್ರೆಯಲ್ಲಿ ಬೆಡ್ ಕೊರತೆ, ಇವೆಲ್ಲವನ್ನೂ ಪೂರೈಕೆ ಮಾಡಬೇಕಾದ ಸರ್ಕಾರ ರಾಜಕೀಯದ ಜೊತೆ ಕೋಮು ಬೇಳೆಯನ್ನು ಬೇಯಿಸುವುದರಲ್ಲಿ ತಲ್ಲೀಣವಾಗಿರುವುದು ಕಂಡುಬರುತ್ತಿದೆ.

ಇದಕ್ಕೆ ಸೂಕ್ತ ಉದಾಹರಣೆಯಾಗಿದೆ ನಿನ್ನೆ ನಡೆದ ಬೆಡ್ ಬ್ಲಾಕಿಂಗ್ ಹಗರಣದ ಕುರಿತಾದ ಸಂಸದ ತೇಜಸ್ವಿಯವರ ನಡವಳಿಕೆ.
ದೇಶದಾದ್ಯಂತ ಹಬ್ಬಿರುವ ಸೋಂಕಿನಿಂದ ರಾಜ್ಯದಲ್ಲಿ ಕೂಡ ಪರಿಸ್ಥಿತಿಯು ಕೈ ಮೀರಿದಂತಾಗಿದ ಸನ್ನಿವೇಶದಲ್ಲಿ ಚಾಮರಾಜನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ 24 ಕೊರೋನ ಸೋಂಕಿತ ರೋಗಿಗಳು ಮೇ 3 ರಂದು ಆಮ್ಲಜನಕ ಕೊರತೆಯಿಂದ ಬಲಿಯಾದರು. ಇದಕ್ಕೆ ಮೂಲ ಕಾರಣ ಅಲ್ಲಿನ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ವಿಫಲತೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿ ಆಸ್ಪತ್ರೆಯ ಸೌಕರ್ಯಗಳ ಬಗ್ಗೆ ಗಮನವಹಿಸಬೇಕಾದ ರಾಜ್ಯ ಸರ್ಕಾರವು ಕಿಂಚಿತ್ತೂ ಜನರ ಬಗ್ಗೆ ಕಾಳಜಿ ವಹಿಸದೆ ಕೂತಲ್ಲಿಂದಲೇ ಮಾಡಿ ಮುಗಿಸುವ ಕಾರ್ಯದಂತೆ ವರ್ತಿಸಿದೆ. ಸೂಕ್ಷ್ಮವಾಗಿ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದೆ, ಈ ಒಂದು ಗಂಭೀರ ವಾದ ದುರಂತವನ್ನು ತಿರುಚುವ ತಿರುಚುವ ಯತ್ನದ ಒಂದು ಭಾಗವಾಗಿದೆ ನಿನ್ನೆಯಿಂದ ಸುದ್ದಿಯಾಗುತ್ತಿರುವ ಬೆಡ್ ದಾಂಧಲೆಯ ಕುರಿತಾದ ತೇಜಸ್ವಿ ಸೂರ್ಯ ಮತ್ತು ಅಲ್ಲಿದ್ದ ಬಿಜೆಪಿ ಶಾಸಕರ ನಡವಳಿಕೆ.

ರಾಜ್ಯದಲ್ಲಿ ಜನರು ಸಂಕಷ್ಟವನ್ನು ಎದುರಿಸುತ್ತಿದ್ದರೂ ತುಟಿಕ್ ಪಿಟಿಕ್ ಎನ್ನದ ಇಲ್ಲಿನ ಆಡಳಿತದಲ್ಲಿ ಇರುವ ಶಾಸಕರು, ಸಂಸದರು ತಮ್ಮ ಸರ್ಕಾರದ ಆಡಳಿತ ವಿಫಲತೆಯ ಬಗ್ಗೆ ಜನ ಧ್ವನಿ ಎತ್ತಿದಾಗ ಪ್ರತ್ಯಕ್ಷಗೊಳ್ಳುತ್ತಾ ಘಟನೆಯನ್ನು ತಿರುಚುವ ಯತ್ನಕ್ಕೆ ಕೈ ಹಾಕುತ್ತಿದ್ದಾರೆ.
ಬಂಗಾಳ ಚುನಾವಣೆ ಕಳೆದ ನಂತರ ನಿನ್ನೆ ಒಮ್ಮೆಲೆ ಬಿಬಿಎಂಪಿ ವಾರ್ ರೂಮ್ ಗೆ ಪ್ರತ್ಯಕ್ಷರಾಗಿ ಒಂದಿಷ್ಟು ಉದ್ದದ ಚೀಟಿಯನ್ನಿಟ್ಟುಕೊಂಡು 17 ಸಿಬ್ಬಂದಿಗಳ ಹೆಸರುಗಳನ್ನು ಓದುತ್ತಾರೆ. ಆ ಹೆಸರುಗಳೆಲ್ಲವೂ ಮುಸ್ಲಿಂ ಹೆಸರುಗಳು. “ಇವರೆಲ್ಲಾ ಯಾರು? ಯಾಕೆ ಅಪಾಯಿಂಟ್ ಮಾಡಿದ್ದೀರಾ ಇಂತಹವರನ್ನು? ದಾರಿಯಲ್ಲಿ ಹೋಗುವವರನ್ನು ಯಾಕೆ ಸೇರಿಸಿಕೊಂಡಿದ್ದೀರಾ? ಇದೇನು ಮದರಸನಾ? ಇದೇನು ಹಜ್ ಕಮಿಟಿ ಲಿಸ್ಟಾ? ಇವರೆಲ್ಲರೂ ಬೆಡ್ ದಂಧೆಯಲ್ಲಿರುವವರು ” ಹಾಗೆ ಹೀಗೆ ಎಂದು ತೇಜಸ್ವಿ ಸೂರ್ಯ ಮತ್ತು ಅವನ ಬಳಿ ಇದ್ದ ಸತೀಶ್ ರೆಡ್ಡಿ ಎಂಬ ಬಿಜೆಪಿ ಶಾಸಕ ,ಹಾಗೂ ಇನ್ನೊಬ್ಬ ಬಿಜೆಪಿ ಶಾಸಕ ಉದ್ರೇಕಕಾರಿಯಾಗಿ ಮೇಲಧಿಕಾರಿಗಳೊಂದಿಗೆ ವಾದ ಮಾಡುತ್ತಾರೆ.ಅದಾದ ಬಳಿಕ ಕೆಲ ಮಾಧ್ಯಮಗಳು ಇವರೆಲ್ಲರೂ ಕರ್ನಾಟದ ಹೀರೋಗಳೆಂಬ ಚಿತ್ರಣವನ್ನು ಜನರೊಂದಿಗೆ ಬಿತ್ತಿಲು ಶುರುಮಾಡಿದರು. ಈ ಕಾರಣದಿಂದ ಚಾಮರಾಜನಗರದಲ್ಲಿ ನಡೆದ ಘಟನೆಯನ್ನು ರಾಜ್ಯದ ಹೆಚ್ಚಿನ ಜನತೆ ಮರೆತೇ ಬಿಟ್ಟರು.

ಇಲ್ಲಿ ನಿಜಕ್ಕೂ ಈ ಬೆಡ್ ಬ್ಲಾಕ್ ಪ್ರಕರಣ ಹಲವು ದಿನಗಳ ಹಿಂದೆ ಸುದ್ದಿಯಾಗುತ್ತಿತ್ತು.ಯಾವುದೋ ಒಂದು ತಂಡ ಇದರ ವಿರುದ್ಧ ಸಂಬಂಧಪಟ್ಟ ಮೇಲಿನ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು. ಡಿಸಿಎಂ ಅಶ್ವತ್ಥ ನಾರಾಯಣರವರಿಗೂ ಇದರ ಸುಳಿವು ಬಂದಿರುತ್ತದೆ ಮಾತ್ರವಲ್ಲ ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೂ ಖಡಕ್ ಸೂಚನೆಯನ್ನೂ ನೀಡಿರುತ್ತಾರೆ. ಹೀಗೆಲ್ಲ ಇರಬೇಕಾದರೆ ಒಮ್ಮೆಲೆ ಬಂಗಾಳ ಚುನಾವಣೆಯ ನಂತರ ಧಾವಿಸಿದ ಸಂಸದ ತೇಜಸ್ವಿ ಸೂರ್ಯ ತಾನೇ ಇದರ ಮೂಲ ಎಂದು ಬೀಗುತ್ತಾ ಈ ರೀತಿಯ ವರ್ತನೆಗಳನ್ನು ವರ್ತಿಸುತ್ತಾರೆ.

ಇಲ್ಲಿ ಮುಖ್ಯ ರಂಗದಲ್ಲಿರುವ ಚರ್ಚೆ ಇದಲ್ಲ. ತೇಜಸ್ವಿ ಸೂರ್ಯ ಓದಿದ ಅಷ್ಟೂ ಹೆಸರುಗಳು ಕೇವಲ ಮುಸಲ್ಮಾನರದ್ದು ಮಾತ್ರ. ಬಿಬಿಎಂಪಿಯಲ್ಲಿ 180 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಿಸುತ್ತಿರಬೇಕಾದರೆ ಇವರಿಗೆ ಕಂಡಿದ್ದು ಒಂದು ಕೋಮಿನ ಲಿಸ್ಟ್ ಗಳು ಮಾತ್ರ.
ಅದಲ್ಲದೆ ಇವರು ಈ ದಂಧೆಯ ಒಬ್ಬರೇ ಒಬ್ಬ ಆರೋಪಿಗಳೂ ಅಲ್ಲ ಅಪರಾಧಿಗಳೂ ಅಲ್ಲ.
ಅಪರಾಧಿ ಮತ್ತು ಕೈವಾಡ ಯಾರದ್ದೆಂದು ನೀವು ಕೇಳಿದರೆ, ಬೇರೆಯೇ ಕೋಮಿನ ಮೂರ್ನಾಲ್ಕು ಮಂದಿ.
ಅಚ್ಚರಿಯ ಸಂಗತಿಯೇನೆಂದರೆ ಇಂದಿನ ಬೆಳಗ್ಗೆಯ ಪತ್ರಿಕೆಯಲ್ಲಿ ‘ನಿನ್ನೆ ತೇಜಸ್ವಿ ಜೊತೆಗಿದ್ದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಯ ಕೈವಾಡ ಇದೆ ‘ ಎಂಬ ಸುದ್ದಿ ನೋಡಿದಾಗ ಜನರು ನಿಬ್ಬೆರಗಾಗುತ್ತಾರೆ.

ಯಾಕೆಂದರೆ ನಿನ್ನೆ ಇದೇನು ಹಜ್ ಕಮಿಟಿ ಲಿಸ್ಟಾ ? ಎಂದು ಅಹಂ ನಲ್ಲಿ ಬೀಗಿದ ಸತೀಶ್ ರೆಡ್ಡಿಯೇ, ಮತ್ತು ತೇಜಸ್ವಿಯವರ ಪತ್ರಿಕಾಗೋಷ್ಟಿಯಲ್ಲಿ ಜೊತೆಯಿದ್ದ ಸತೀಶ್ ರೆಡ್ಡಿಯೇ ಇದರ ಮೂಲ ಆರೋಪಿ ಎಂಬುವುದು ನಿಜಕ್ಕೂ ಅವರ ಭ್ರಷ್ಟ ಅಧಿಕಾರದ ಪರಮಾವಧಿಯ ಸೂಚನೆಯಾಗಿದೆ.

ಅಷ್ಟಕ್ಕೂ ರಂಝಾನ್ ಉಪವಾಸವಿದ್ದರೂ ,ಬಿಬಿಎಂಪಿ ಸಿಬ್ಬಂದಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಕೇವಲ ಮುಸ್ಲಿಂ ಯುವಕರ ಹೆಸರು ಮಾತ್ರ ಹೇಳಿದ್ದು ಯಾಕೆ? ಎಂಬ ಕಾರಣಕ್ಕೆ ರಾಜ್ಯದ ಜನೆತೆಯೇ ಉತ್ತರ ಕಂಡುಕೊಂಡಿದ್ದಾರೆ.

ಈ ಸಂಕಷ್ಟ ಸಂಧಿಗ್ಧತೆಯಲ್ಲೂ ಕೋಮು ಬಣ್ಣ ಹಚ್ಚಿದ ತೇಜಸ್ವಿ ಸೂರ್ಯ ಮತ್ತು ಅಲ್ಲಿದ್ದ ಕೆಲ ಬಿಜೆಪಿ ಶಾಸಕರ ನಡೆಯನ್ನು ಶಕ್ತವಾಗಿ ವಿರೋಧಿಸಬೇಕಾಗಿದೆ. ಮುಸಲ್ಮಾನ ಸಂಘಟನೆಗಳು,ಯುವಕರು, ಮಹಿಳೆಯರು ಜಾತಿ-ಧರ್ಮವೆಂದು ನೋಡದೆ ಕೋವಿಡ್ ವಾರಿಯರ್ಸ್ ಗಳಾಗಿ,ಬರಿಯರ್ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸುವುದಾ ಇವರಿಗೆ ಕೆಂಗಣ್ಣಾಗಿ ಕಂಡದ್ದು.

ಈ ಸಂದಿಗ್ಧತೆಯಲ್ಲಾದರೂ ಧರ್ಮಾಂಧತೆಯೆಂಬ ಮಾನಸಿಕ ರೋಗದಿಂದ ಹೊರ ಬನ್ನಿ. ತೇಜಸ್ವಿ ಸೂರ್ಯ ಮತ್ತು ಅಲ್ಲಿದ್ದ ಬಿಜೆಪಿಯ ಶಾಸಕರಿಗೆ ‘ಕನ್ನಡಿ’ಯು ಪ್ರೀತಿಯ ಕಳಕಳಿ ವ್ಯಕ್ತಪಡಿಸುತ್ತಿದೆ.

ಎಲ್ಲಾ ಧರ್ಮದವರೂ ಅಣ್ಣ ತಮ್ಮಂದಿರಂತೆ ಇದ್ದು ಈ ರೋಗದ ವಿರುದ್ಧ ಹೋರಾಡುವ ಸಂದರ್ಭವಿದು.
ಈಗ ಅವನು ಹಾಕಿದ ಟೋಪಿ ಯಾವುದ?ಅವನ ಶಾಲು ಯಾವುದು?ಅವಳು ಬುರ್ಖಾ ಹಾಕಿದ್ದಾಳೆ?ಅವನ ಹೆಸರು ಹೀಗೆ? ಅವಳ ಹೆಸರು ಹೀಗೆ ಎಂಬ ದ್ವೇಷದ ದಂಡಲ್ಲೇ ತೇಲಾಡುತ್ತಿದ್ದರೆ ನಮ್ಮ ದೇಶಕ್ಕಿರುವ ನಾಳಿನ ದಿನಗಳನ್ನೇ ಮರೆತುಬಿಡಬಹುದು.ನೆನಪಿರಲಿ ನಮ್ಮ ದೇಶವನ್ನು ನಾವೇ ಕಾಪಾಡಬೇಕಾಗಿದೆ.

Leave a comment