ಮುಂದುವರೆಯುತ್ತಿರುವ ಕೊರೋನಾ ತಾಂಡವ : ಜನರ ಪಾಡಿಗೆ ಎಷ್ಟು ಒಳಿತು? ಎಷ್ಟು ಕೆಡುಕು?

– ಹರ್ಶದ್ ಸುನ್ನತ್ ಕೆರೆ

ಜನರಲ್ಲಿ ಭಯ ಭೀತಿ ಹುಟ್ಟಿಸುತ್ತಿರುವ ಕೊರೊನಾ ಎಂಬ ಸಾಂಕ್ರಾಮಿಕ ರೋಗ ಪ್ರಪಂಚದ 188 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂದ ಬಾಹುವನ್ನು ಚಾಚಿ ಲಕ್ಷಾಂತರ ಜನರ ಪ್ರಾಣ ಹೀರಿದೆ. ತನ್ನ ಅಸ್ತಿತ್ವವನ್ನು ಎಲ್ಲೆಡೆ ಹರಡಿಸುತ್ತಿದೆ. ಲಾಕ್ ಡೌನ್,ಕರ್ಫ್ಯೂ, ಸೀಲ್ ಡೌನ್ ನಂತಹ ಎಷ್ಟೇ ಜಾಗರೂಕತೆಯ ಕ್ರಮ ಕೈಗೊಂಡರೂ ಎಲ್ಲವನ್ನು ಮೀರಿ ಪಸರಿಸುತ್ತಿದೆ. ಜನರ ಜೀವ, ಜೀವನ, ಪ್ರಪಂಚದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸಾವು ನೋವಿನ ಕೂಪಕ್ಕೆ ತಳ್ಳಿಬಿಟ್ಟಿದೆ. ಎಷ್ಟೋ ಜನರು ತಿನ್ನಲು ಅಸಾಧ್ಯವಾದ ಪರಿಸ್ಥಿತಿಗೆ ನೂಕಿಬಿಟ್ಟಿದೆ.

ದೇಶವು ಕೊರೊನಾ ಎಂಬ ಮಹಾಮಾರಿಯ ಇಕ್ಕಟ್ಟಿನ ಸ್ಥಿತಿಯಿಂದ ಹೊರಬಂದು ಸಹಜ ಜೀವನಕ್ಕೆ ಮರಳಲು ಹಂಬಲಿಸುತ್ತಿದೆ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರು ಮುಂದಿನ ಬದುಕು ಕಟ್ಟಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಮುರಿದು ಬಿದ್ದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲು ಹಲವು ದಿನಗಳು ಬೇಕಾಗಿದೆ. ಅಷ್ಟರೊಳಗೆ ಎದುರಾಗುವ ಮಳೆಗಾಲ ತಂದೊಡ್ಡುವ ಸವಾಲುಗಳನ್ನೂ ಎದುರಿಸಬೇಕಿದೆ.

ಬೀದಿಗೆ ಬಿದ್ದವರ ಪಾಡೇನು?

ಲಾಕ್‌ಡೌನ್‌ನಿಂದ ತಕ್ಷಣಕ್ಕೆ ಮತ್ತು ಭವಿಷ್ಯದಲ್ಲಿ ಅತೀ ಹೆಚ್ಚು ಸಮಸ್ಯೆಗಳಿಗೆ ಒಳಗಾಗುವವರು ಮಧ್ಯಮ ವರ್ಗದ ಜನ. ಆದರೆ ಲಾಕ್‌ಡೌನ್‌ ಸಮಯದಲ್ಲಿ ಭಾರತದ ಬಡತನದ ನೈಜ ಮುಖ ಅನಾವರಣಗೊಂಡಿದೆ. ಹೊಟ್ಟೆಪಾಡಿಗೆ ಎಲ್ಲೆಲ್ಲೋ ದುಡಿಯುತ್ತಿದ್ದ ವಲಸೆ ಕಾರ್ಮಿಕರು, ನಿರ್ಗತಿಕರು, ಕಡುಬಡ ಕುಟುಂಬಗಳ ಚಿಂತಾಜನಕ ಸ್ಥಿತಿ ತೆರೆದುಕೊಂಡಿದೆ. ಲಾಕ್‌ಡೌನ್‌ ಸಮಯದಲ್ಲಿ ಇಂತಹವರು ಹಸಿವಿನಿಂದ ಬಳಲದಂತೆ ಕೆಲವು ಸಂಘ ಸಂಸ್ಥೆಗಳು, ದಾನಿಗಳು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಿದ್ದಾರೆ. ಆದರೆ, ಚಿಂತಿಸುವ ವಿಚಾರವೇನೆಂದರೆ ಲಾಕ್‌ಡೌನ್‌ ತೆರವಿನ ನಂತರ ಈ ಜೀವಗಳ ಭವಿಷ್ಯವೇನು? ದುಡಿಮೆಯ ಮಾರ್ಗ ಯಾವುದು? ಹೊಸ ಬದುಕು ಕಟ್ಟಿಕೊಳ್ಳುವುದು ಎಲ್ಲಿ ಮತ್ತು ಹೇಗೆ ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಧಿಡೀರ್ ಬಂದೆರಗಿದ ಸವಾಲೊಂದಕ್ಕೆ ಎದೆಯೊಡ್ಡಿ ನಿಲ್ಲಲಾಗದೆ ಜಗತ್ತೇ ತತ್ತರಿಸುತ್ತಿರುವಾಗ ಬೀದಿಗೆ ಬಿದ್ದ ಜೀವಗಳನ್ನು ರಕ್ಷಿಸುವವರು ಯಾರು? ಕಾಲವೇ ಉತ್ತರ ಹೇಳಬೇಕಿದೆ.

ಬದುಕಲು ಕಲಿಸಿದ ಕೊರೊನಾ

ಕೊರೊನಾ ಜೀವಜಗತ್ತಿಗೆ ಸವಾಲೊಡ್ಡುವ ಜತೆಗೆ ಬದುಕುವ ಪಾಠವನ್ನೂ ಹೇಳಿಕೊಟ್ಟಿದೆ. ಮನುಷ್ಯ ಸಾಗುತ್ತಿರುವ ಅತಿ ವೇಗದ ಸ್ವಾರ್ಥ ಬದುಕಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಇಂತಹ ಆಪತ್ತುಗಳು ಇದೇ ಕೊನೆಯಲ್ಲ ಎಂಬ ಕಟು ಸತ್ಯವನ್ನು ಬಹಿರಂಗಪಡಿಸಿದೆ. ಕನಿಷ್ಠ ಅವಶ್ಯಕತೆಗಳನ್ನಷ್ಟೇ ಪೂರೈಸಿಕೊಂಡು ಪ್ರಕೃತಿಯೊಂದಿಗೆ ಬದುಕುವ ಅಗತ್ಯವನ್ನು ಕೊರೊನಾ ಹೇಳಿಕೊಟ್ಟಿದೆ.

ದುರಾಸೆ, ದುರಾಕ್ರಮಣಕ್ಕೆ ಮನುಷ್ಯ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಈ ದುರಿತ ಕಾಲದಲ್ಲಿ ಅರಿವಿಗೆ ಬಂದಿದೆ. ಮಿತಿ ಇಲ್ಲದ ವೇಗದಲ್ಲಿ ಸಾಗುತ್ತಿರುವ ನಗರಗಳು ತತ್ತರಿಸುತ್ತಿರುವಾಗ ಆರೋಗ್ಯ ಕಾಪಾಡಿಕೊಂಡ ಗ್ರಾಮೀಣ ಭಾರತ ಹಳ್ಳಿಯ ಬದುಕೇ ಶ್ರೇಷ್ಠ ಬದುಕು ಎಂಬುದನ್ನೂ ತೋರಿಸಿಕೊಟ್ಟಿದೆ. ಬದುಕು ಕಟ್ಟಿಕೊಳ್ಳಲು ಪಟ್ಟಣ, ನಗರ ಸೇರಿದವರು, ವಿದೇಶದಲ್ಲಿ ಕುಳಿತು ಭಾರತದಲ್ಲೇನಿದೆ ಮಣ್ಣು? ಎಂದು ಹಿಯಾಳಿಸುತ್ತಿದ್ದವರಿಗೆ ತಾಯ್ನೆಲವೇ ಕೊನೆಯ ತಾಣ ಎಂಬ ಮಹತ್ವದ ಅರಿವಾಗಿದೆ. ಆದರೆ, ಇವೆಲ್ಲವೂ ಕ್ಷಣಿಕವಾದರೆ, ಕೊರೊನಾ ಕಲಿಸಿದ ಪಾಠ ಮರೆತು ಬದುಕಿನ ವೇಗ ಹೆಚ್ಚಿಸಿಕೊಂಡರೆ ಕಾಪಾಡುವ ಕೈಗಳು ಎಲ್ಲಿವೆ?

ಇಂಗು ತಿಂದ ಮಂಗನಂತಿರುವ ಸರಕಾರ

ದೇಶವನ್ನೇ ಕೊರೊನಾ ಮಹಾಮಾರಿ ಬಲಿಪಡೆಯುತ್ತಿರುವಾಗ ಸರಕಾರವು ಇಂಗು ತಿಂದ ಮಂಗನಂತಿರುವುದು ಜನರ ಕೋಪಕ್ಕೆ ಕಾರಣವಾಗಿದೆ.
ಮೊದಲು ಜೀವ ಮುಖ್ಯ ನಂತರ ಜೀವನ ಎಂದು ಹೇಳಿ ಕಠಿಣ ಕಾನೂನುಗಳನ್ನು ಮಾಡಿದ ಸರ್ಕಾರ ನಂತರದ ದಿನಗಳಲ್ಲಿ ಮನುಷ್ಯರ ಜೀವಕ್ಕಿಂತ ದೇಶದ ಆರ್ಥಿಕತೆ ಮುಖ್ಯ ಎಂದು ಮಾಸ್ಕ್, ಟೆಸ್ಟಿಂಗ್, ಸ್ಯಾನಿಟೈಸರ್ ನ ಹಗರಣದಲ್ಲಿ ಮೈಮರೆತ ರಾಜ್ಯ ಸರ್ಕಾರವು ಕೊವಿಡ್ 19 ನಿಯಂತ್ರಿಸುವಲ್ಲಿ ಪೂರ್ತಿಯಾಗಿ ವಿಫಲವಾಗಿದೆ.

ನಿಮ್ಮ ಜೀವ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಅನ್ನೋ ಸಂದೇಶ ಕೊಟ್ಟು ಎಲ್ಲಾ ನಿಯಮಗಳನ್ನು ಸಡಿಲಗೊಳಿಸಿದ್ದೆ ಕೊರೊನ ಹೆಚ್ಚಾಗಲು ಕಾರಣ. ಆರಂಭದಲ್ಲಿ 1, 5, 9, ಎಂದು ಒಂದಂಕಿಯಲ್ಲಿ ಜನರ ಸಾವಿಗೆ ಕಾರಣ ಆಗ್ತಿದ್ದ ಈ ಕೊವಿಡ್ 19 ಈಗ ನಾಲ್ಕoಕಿ ದಾಟಿ ಮುಂದೆ ಹೋಗ್ತಿರೋದು ಸರ್ಕಾರದ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನವೇ ಆಗಿದೆ. ಇಂತಹ ಸಾವು ನೋವುಗಳಲ್ಲೂ ಒಂದಾಗಿ ಎಲ್ಲರ ಹಿತಾಸಕ್ತಿಯ ಕಡೆ ಅಷ್ಟಾಗಿ ಗಮನಿಸದೆ ಪಕ್ಷದ ಹಿಂದೆ ಹೋದದ್ದು ಕೂಡ ಸರ್ಕಾರದ ತಪ್ಪಾಗಿದೆ. ಕೊರೊನದ ಸಮಯದಿ ಜನರೊಂದಿಗೆ ಸ್ಪಂದಿಸಬೇಕಾದ ಸರಕಾರ ಆಕ್ಸಿಜನ್ ಕೇಳಿದವರ ವಿರುದ್ಧವೇ ಕೇಸ್ ದಾಖಲಿಸಲ್ಪಡುವುದು ಅಚ್ಚರಿಯ ವಿಚಾರ.
ಕೊರೊನದೊಂದಿಗೆ ನಮ್ಮ ಪಯಣ ಇನ್ನು ಅದೆಷ್ಟು ದಿನ. ಏನೆ ಆಗಲಿ ಸರಕಾರ ಮತ್ತು ಜನರು ಎರಡೂ ವರ್ಗ ಕೂಡ ಮ ಸುರಕ್ಷತೆಯ ಬಗ್ಗೆ ಕಾಳಜಿಗಳನ್ನು ಹೆಚ್ಚು ಹೆಚ್ಚಾಗಿ ವಹಿಸಿದರೆ ಅಲ್ಪ ಮಟ್ಟದ ಏಳಿಗೆಗೆ ಹೋಗಲು ಸಾಧ್ಯ.

Leave a comment