– ಜೈನುಲ್ ಅಕ್ಬರ್ ಕಡೇಶಿವಾಲಯ
“ಭಾರತವು ಕೋರೋನಾದ ಅಂತಿಮ ಆಟದಲ್ಲಿದೆ.ಮೋದಿಯ ನಾಯಕತ್ವವು ಅಂತರರಾಷ್ಟ್ರೀಯ ಸಹಕಾರಕ್ಕೆ ಒಂದು ಉತ್ತಮ ಉದಾಹರಣೆ” ಅಂಥ ಮಾರ್ಚ್ ಆರಂಭದಲ್ಲಿಯೇ ಆರೋಗ್ಯ ಸಚಿವ ಹರ್ಷವರ್ಧನ್ ಬಣ್ಣಿಸಿದ್ದರು.ಜನವರಿಯಿಂದಲೇ ಬೇರೆ ಬೇರೆ ರಾಷ್ಟ್ರಗಳಿಗೆ ಭಾರತ ಕೋರೋನಾ ಲಸಿಕೆಯನ್ನು ಕಳುಹಿಸಿದ್ಧನ್ನು ಸಚಿವರು ಆಧಾರವಾಗಿರಿಸಿ ಮೋದಿಯ ಗುಣಗಾನ ಮಾಡಿದ್ಧರು.
2020 ಸೆಪ್ಟಂಬರ್ ತಿಂಗಳಲ್ಲಿ ಪ್ರತಿ ದಿವಸಕ್ಕೆ ಸರಾಸರಿ 93,000 ಕೋರೋನಾ ಪಾಸಿಟಿವ್ ವರದಿಗಳು ಪತ್ತೆಯಾಗುತ್ತಿದ್ಧು 2021 ರ ಫೆಬ್ರವರಿ ವೇಳೆಗೆ ಇದು ಸರಾಸರಿ 11,000 ಕ್ಕೆ ಬಂದು ನಿಂತಿತ್ತು. ಇದನ್ನು ಮೋದಿ ಸಾಧನೆ ಅಂತ ಭಾವಿಸಿದ್ಧ ದೃಶ್ಯ ಮಾಧ್ಯಮಗಳು ಮೋದಿ ಬಗ್ಗೆ ಅತಿರಂಜಿತ ವರದಿಗಳನ್ನು ಪ್ರಸಾರ ಮಾಡಿದ್ಧವು.
2021 ಫೆಬ್ರವರಿ ಅಂತ್ಯದಲ್ಲಿ ಭಾರತೀಯ ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣೆಯನ್ನು ಘೋಷಿಸಿತು.824 ಕ್ಷೇತ್ರಗಳ ಈ ಚುನಾವಣೆಯಲ್ಲಿ 18.6 ಕೋಟಿ ಮತದಾರರು ಒಳಗೊಂಡಿದ್ಧರು.ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ 8 ಹಂತಗಳಲ್ಲಿ ಮಾಸ್ಕ್ ಧರಿಸದೆ,ಸಾಮಾಜಿಕ ಅಂತರ ಪಾಲಿಸದೆ ಕೋರೋನಾ ನಿಯಂತ್ರಣ ಶಿಷ್ಟಾಚಾರ ಕಡೆಗಣಿಸಿ ಭರ್ಜರಿ ಚುನಾವಣಾ ಪ್ರಚಾರ ನಡೆಯಿತು. ಮಾರ್ಚ್ ತಿಂಗಳಿನಲ್ಲಿಯೇ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ ಹಸಿರು ನಿಶಾನೆ ತೋರಿಸಿತು. ಇದರಲ್ಲಿ 1,30,000 ಅಭಿಮಾನಿಗಳು ಮಾಸ್ಕ್ ಧರಿಸದೆ ಪಂಧ್ಯ ವೀಕ್ಷಣೆ ಮಾಡಿದ್ಧರು.ನಂತರ ನಡೆದ ಕುಂಬಮೇಳದಲ್ಲಿಯೂ 60 ಲಕ್ಷದಷ್ಟು ಭಕ್ತಾದಿಗಳು ಕೋರೋನಾ ಸಾಂಕ್ರಾಮಿಕ ವೈರಸ್ ಮರೆತು ಒಂದುಗೂಡಿದ್ಧರು.
ಇವೆಲ್ಲಾ ನಡೆದು ಕೆಲವೇ ವಾರಗಳಲ್ಲಿ ಭಾರತದ ಚಿತ್ರಣ ಬದಲಾಗಿದೆ.ಇದೀಗ ಹೊಸದಾಗಿ ಒಂದೊಂದೇ ರಾಜ್ಯಗಳು ಲಾಕ್ ಡೌನ್ ಘೋಷಣೆ ಮಾಡುತ್ತಿವೆ. ಇತ್ತೀಚಿಗೆ ಎಪ್ರಿಲ್ ತಿಂಗಳ ದಿನವೊಂದರಲ್ಲಿ 2,70,000 ಕೋರೋನಾ ಪಾಸಿಟಿವ್ ಕೇಸ್ ಪತ್ತೆ ಆಗಿದ್ಧು ಸರಾಸರಿ 1600 ಅಧಿಕ ಮಂದಿ ಭಾರತದಲ್ಲಿ ಪ್ರತಿದಿನ ಮರಣ ಹೊಂದುತ್ತಿದ್ದಾರೆ. ಲಾನ್ಸೆಟ್ ಕೋವಿಡ್-19 ಆಯೋಗದ ಪ್ರಕಾರ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರತಿದಿನದ ಸಾವಿನ ಸಂಖ್ಯೆ 2,300 ಮೀರಬಹುದೆಂದು ಅಂದಾಜಿಸಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದವರ,ಆಮ್ಲಜನಕ ಸಿಗದವರ ಹಾಹಾಕಾರ ವಿಡೀಯೋಗಳು ವೈರಲ್ ಆಗುತ್ತಿವೆ. ಸತ್ತವರ ಹೆಣ ಸುಡಲು ಚಿತಾಗಾರದ ಸುತ್ತಲೂ ನೆರೆದಿರುವ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿವೆ. ಈ ತುರ್ತು ಪರಿಸ್ಥಿತಿಯಲ್ಲಿಯೂ ತಮ್ಮ ಲಾಭಿ ನಡೆಸುತ್ತಿರುವ ಖಾಸಗೀ ಆಸ್ಪತ್ರೆಗಳು ಒಂದೆಡೆಯಾಡೆದರೆ, ಸರ್ಕಾರದ ಕೋರೋನಾ ಲಸಿಕೆಗಳನ್ನು ಕಾಳ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ದಲ್ಲಾಳಿಗಳು ಇನ್ನೊಂದೆಡೆ ದೇಶವನ್ನು ಇನ್ನಷ್ಟು ಸಂಕಷ್ಟಗಳಿಗೆ ತಳ್ಳುತ್ತಿದ್ಧಾರೆ.
ದೇಶದ ನಾಗರೀಕರಿಗೆ ಕೋರೋನಾ ಲಸಿಕೆ ಹಾಕುವ ಮುನ್ನ ಬೇರೆ ದೇಶಗಳಿಗೆ ರಫ್ತು ಮಾಡಿದ ಸರ್ಕಾರದ ಕ್ರಮ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಲಸಿಕೆ ತಯಾರಿಸುತ್ತಿರುವ ಭಾರತೀಯ ಸೇರಂ ಸಂಸ್ಥೆಯ ಪ್ರಕಾರ ಸಧ್ಯಕ್ಕೆ ಲಸಿಕೆ ತಯಾರಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಂಸ್ಥೆಯು ಹಣಕಾಸು ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಎಲ್ಲಾ ಭಾರತೀಯರಿಗೆ ಲಸಿಕೆ ಪಡೆಯಲು ಇನ್ನಷ್ಟು ಸಮಯ ಬೇಕಾಗಬಹುದು. ಇದೇ ವೇಳೆ ಕೊರೋನಾ ಹೆಚ್ಚಳವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಧಾನಿಯವರು ಹೇಳಿದ 20ಸಾವಿರ ಕೋಟಿಯ ಪ್ಯಾಕೆಜ್ ಬರೀ ಕನ್ನಡಿಯ ಗಂಟೆಯಾಗಿಯೇ ಉಳಿದಿದೆ.
ಸರ್ಕಾರದ ಬಳಿ ಕೋರೋನಾ ನಿಯಂತ್ರಿಸಲು ಬೇಕಾದ ಸರಿಯಾದ ಮುಂಜಾಗ್ರತಾ ಕ್ರಮಗಳಾಗಲೀ,ದೂರದೃಷ್ಟಿಯ ಯೋಜನೆಗಳಾಗಲೀ ಇಲ್ಲದೇ ಇರುವುದರಿಂದ ಭಾರತೀಯರು ಪ್ರಸ್ತುತ ಇರುವುದಕ್ಕಿಂತಲೂ ದುಪ್ಪಟ್ಟು ಪಾಲು ಸಂಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಜ್ಜಾಗಬೇಕು.