
– ಹಲೀಮಾ ಸಹ್ಲಾ
ಭಾರತವು ಸುದೀರ್ಘವಾದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಂದಿದೆ. 15ನೇ ಶತಮಾನದಲ್ಲಿ ಭಾರತಕ್ಕೆಆಗಮಿಸಿದ ಪೋರ್ಚುಗೀಸ್ ವಸಾಹತುಶಾಹಿತ್ವ ವಿರೋಧಿ ಹೋರಾಟದಿಂದ ಪ್ರಾರಂಭಗೊಂಡು, ಬ್ರಿಟಿಷರಿಂದ ಇಂಡಿಯಾವು ಸ್ವಾತಂತ್ರ್ಯ ಪಡೆದ ಇತಿಹಾಸದುದ್ದಕ್ಕೂ ಹೊಸ ಸ್ವಾತಂತ್ರ್ಯ ವೀರರ ಹೆಸರುಗಳು ಕೇಳಿಬರುತ್ತವೆ.ಅವರೆಲ್ಲರೂ ತಮ್ಮದೇ ಆದ ಶೈಲಿಗಳಲ್ಲಿ ಹೋರಾಟರಂಗದ ಮುಂಚೂಣಿಯಲ್ಲಿರುತ್ತಾರೆ. ಆದರೆ ಅವರಲ್ಲಿ ಹೆಚ್ಚಿನ ವೀರರ ಹೆಸರುಗಳು ಇತಿಹಾಸದ ಪುಟಗಳಿಗಷ್ಟೇ ಸೀಮಿತಗೊಂಡಿದೆ. ಇಂತಹ ವೀರರ ಪಟ್ಟಿಯಲ್ಲಿ ಕೇರಳದ ಮುಹಮ್ಮದ್ ಅಬ್ದುರ್ರಹ್ಮಾನ್ ರ ಹೆಸರೂ ಸೇರಿದೆ.
ಕ್ರಿ.ಶ 1898ರಲ್ಲಿ ಮುಹಮ್ಮದ್ ಅಬ್ದುರ್ರಹ್ಮಾನ್ ರು ಕೇರಳದ ಕೂಡುಂಗಲ್ಲೂರಿನಲ್ಲಿ ಜನಿಸುತ್ತಾರೆ.ಕ್ಯಾಲಿಕಟ್ ನಲ್ಲಿ ತನ್ನ ಪ್ರೌಢ ಶಿಕ್ಷಣ ಹಾಗೂ ಮಡ್ರಾಸಿನಲ್ಲಿ(ಚೆನ್ನೈ)ಯಲ್ಲಿ ಪದವಿ ಶಿಕ್ಷಣ ಪಡೆದ ಇವರು, ಅಲಿಘರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಬ್ರಿಟಿಷ್ ಆಡಳಿತವನ್ನು ವಿರೋಧಿಸುತ್ತಾ ತನ್ನ ಕಾಲೆಜು ಶಿಕ್ಷಣವನ್ನು ಮೊಟಕುಗೊಳಿಸಿ ಅಸಹಕಾರ ಹಾಗೂ ಖಿಲಾಫತ್ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ. 1921 ರಲ್ಲಿ ಮಲಬಾರಿನಲ್ಲಿ ನಡೆದ ದಂಗೆಯ ನಂತರ ದಂಗೆಪೀಡಿತ ಪ್ರದೇಶಗಳಿಗೆ ಭೇಟಿನೀಡುತ್ತಾರೆ.ಈ ಕಾರಣದಿಂದಾಗಿ ಅವರು 2 ವರ್ಷಗಳ ಕಾಲ ಸೆರೆಮನೆ ಸೇರುತ್ತಾರೆ.
ಜೈಲಿನಿಂದ ಬಿಡುಗಡೆಗೊಂಡ ನಂತರ ಅಂದರೆ 1924 ರಲ್ಲಿ ಅಲ್-ಅಮೀನ್ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಈ ಮೂಲಕ ಮಲಬಾರಿನ ಮುಸಲ್ಮಾನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸುತ್ತಾರೆ. ಇವರ ಚಿಂತನೆಗಳಿಂದ ಪ್ರಭಾವಿತರಾದ ಅದೆಷ್ಟೋ ಮಲಬಾರಿಗಳು ಬ್ರಿಟಿಷ್ ವಸಾಹತುಶಾಹಿತ್ವವನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಇದರಿಂದ ನಿದ್ದೆಗೆಟ್ಟ ಬ್ರಿಟಿಷ್ ಆಡಳಿತವು 1939 ರಲ್ಲಿ ಈ ಪತ್ರಿಕೆಗೆ ನಿಷೇಧ ಹೇರುತ್ತದೆ.
1930ರಲ್ಲಿ ಅಸಹಕಾರ ಚಳುವಳಿಯ ಭಾಗವಾಗಿ ಮಲಬಾರಿನಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮತ್ತೊಮ್ಮೆ ಜೈಲು ಸೇರುತ್ತಾರೆ. ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಇವರು ಮದ್ರಾಸಿನ ಆಡಳಿತ ಸಮಿತಿಯ ಸದಸ್ಯರಾಗಿ ನಂತರ 1939 ರಲ್ಲಿ ಕೇರಳ ಪ್ರಾದೇಶಿಕ ಕಾಂಗ್ರೆಸಿನ ಅಧ್ಯಕ್ಷರಾಗಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ಸೇವೆಸಲ್ಲಿಸುತ್ತಾರೆ.
ಭಾರತ ವಿಭಜನೆಯನ್ನು ಶಕ್ತವಾಗಿ ವಿರೋಧಿಸಿದ ಇವರು ತನ್ನ ಕೊನೆಯುಸಿರು ಇರುವವರೆಗೂ ಇದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1945 ನವೆಂಬರ್ 23 ರಂದು ಕೋಯಿಕ್ಕೋಡಿನ ಕೊಡಿಯತ್ತೂರ್ ಎಂಬಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಭಾಷಣ ಮುಗಿದ ತಕ್ಷಣ ಮರಣಹೊಂದುತ್ತಾರೆ.ಇವರನ್ನು ವಿಷಪ್ರಾಷಣದ ಮೂಲಕ ಕೊಲ್ಲಲಾಯಿತೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಂಡಿಯಾದ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ರಾಜಕೀಯದಲ್ಲಿ ಮುಹಮ್ಮದ್ ಅಬ್ದುರ್ರಹ್ಮಾನ್ ಸಾಹೆಬ್ ಅವರ ಕೊಡುಗೆಯನ್ನು ಮಾತ್ರ ಹೆಚ್ಚಿನ ಜನರು ಗುರುತಿಸದೇ ಇರುವುದು ನಿಜಕ್ಕೂ ಆಶ್ಚರ್ಯಕರ.