ಕೊರೋನಾ 2 ನೇ ಅಲೆಯ ಆರ್ಭಟಕ್ಕೆ ತುತ್ತಾದ ಜನಸಾಮಾನ್ಯ : ಸರಕಾರದ ನಿರ್ಲಕ್ಷ್ಯತನವೂ ಒಂದು ಕಾರಣ

ಇಂದು ಕೊರೊನಾ ವೈರಾಣುವಿನ ಎರಡನೇ ಅಲೆಯಲ್ಲಿ ಭಾರತ ತೇಲಾಡುತ್ತಿದೆ. ಕಳೆದ ಒಂದು ವರ್ಷದ ಅವಧಿಯ ಸಮಯದಲ್ಲಿ ಕೋವಿಡ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ತಗೆದುಕೊಂಡಂತಹ ನಿರ್ಧಾರಗಳು ಬಹುತೇಕವಾಗಿ ಅವೈಜ್ಞಾನಿಕವಾಗಿದ್ದವು. ಮತ್ತು ಪೂರ್ವನಿಯೋಜಿತವಲ್ಲದ ಮುತುವರ್ಜಿಗಳಾಗಿದ್ದವು. ಇದರ ಪರಿಣಾಮ ಸಫಲತೆಗಿಂತ ಹೆಚ್ಚು ವಿಫಲತೆಯನ್ನು ಸರಕಾರ ಎದುರಿಸಬೇಕಾಯಿತು.

ಸದ್ಯದ ದೇಶದ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಅಸಹಾಯಕತೆಯ ಲಕ್ಷಣಗಳು ತೋರುತ್ತಿದೆ. ಪ್ರಸ್ತುತ, ದೇಶದ ಪರಿಸ್ಥಿತಿಯನ್ನು ಗಮನಿಸುವಾಗ ಬಹಳ ಸಂಕಟವಾಗುತ್ತಿದೆ. ಎಲ್ಲಿ ನೋಡಿದರೂ ಸಾವು ನೋವಿನ ಸಂಗತಿ. ಬಹಳ ದುಃಖಿತ ಸನ್ನಿವೇಶದಲ್ಲಿ ನಾವಿದ್ದೇವೆಂಬುದು ಸುಳ್ಳಲ್ಲ. ಸಂಪೂರ್ಣವಾಗಿ ಕೊರೊನಾ ವೈರಾಣುವಿನ ಕಬಂದ ಬಾಹುಗಳಲ್ಲಿ ದೇಶ ಸಿಲುಕಿಕೊಂಡಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಕಳೆದ ವರ್ಷವೇ ಕೊರೊನಾ ಹೆಚ್ಚಳದಿಂದ ಸಾಕಷ್ಟು ರೀತಿಯ ಬದಲಾವಣೆಗಳಿಗೆ ದೇಶ ಕಾರಣವಾಗಿತ್ತು. ಆದರೂ ಅಂದಿನಿಂದ ಇಂದಿನವರೆಗೂ ಕೊರೊನದ ವಿರುದ್ಧವಾಗಿ ಜನರ ಹಿತಕ್ಕಾಗಿ ತೆಗೆದುಕೊಳ್ಳಬೇಕಾದ ಸರಿಯಾದ ಪೂರ್ವನಿಯೋಜಿತ ನಿರ್ಧಾರಗಳು ಕೈಗೊಳ್ಳದೇ ಪ್ರಧಾನ ಮಂತ್ರಿಗಳು ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲೇ ಮಗ್ನರಾಗಿ ದೇಶದ ಪ್ರಜೆಗಳ ಬಗ್ಗೆ ಕಾಳಜಿ ಇಲ್ಲದೇ ಸಮಯ ವ್ಯರ್ಥ ಮಾಡುತ್ತಲೇ ಹಂತ ಹಂತವಾಗಿ ಸರಕಾರದ ನಿರ್ಲಕ್ಷ್ಯತನವನ್ನು ಬಯಲುಗೊಳಿಸುತ್ತಿದ್ದಾರೆ.

ಕಳೆದ ಬಾರಿ ಏಕಾಏಕಿಯಾಗಿ ಘೋಷಿಸಿದ್ದ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು, ಬಡವರು, ದಿನಗೂಲಿ ಕಾರ್ಮಿಕರ ಜೀವನವೇ ಅಸ್ತವ್ಯಸ್ತಗೊಂಡಿತ್ತು. ಆದರೂ ಹಲವಾರು ತೊಂದರೆಗಳನ್ನು ಸಹಿಸಿಕೊಂಡ ದೇಶದ ಹೆಚ್ಚಿನ ಜನತೆಯು ಸರಕಾರದ ಕ್ರಮಗಳಿಗೆ ಪ್ರಾರಂಭದಿಂದಲೂ ಸಹಕಾರಿಯಾಗಿ ಪ್ರತಿಕ್ರಿಯಿಸಿದರು. ಆದರೂ ಸರಕಾರ ವೈಫಲ್ಯತೆಗಳ ಕಟ್ಟನ್ನೇ ದೇಶದ ಮುಂದೆ ಪ್ರದರ್ಶಿಸಿತು. ಆರೋಗ್ಯ ತಜ್ಞರ ಸಲಹೆ ಇದ್ದರೂ ಕೋವಿಡ್ ಎರಡನೆಯ ಅಲೆಯನ್ನು ತಡೆಗಟ್ಟುವುದರಲ್ಲಿ ಸರಕಾರ ಎಡವಿದ್ದೆಲ್ಲಿ ?ಎಂಬುದನ್ನು ನಾವು ಅರಿಯಬೇಕಾಗಿದೆ.

2021ರ ಮಾರ್ಚ್ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೋವಿಡ್ -19 ಸಾಂಕ್ರಾಮಿಕ ರೋಗವು ಅಂತಿಮ ಘಟ್ಟದಲ್ಲಿದೆ. ಶೀಘ್ರವಾಗಿ ಭಾರತ ದೇಶವು ಕೋವಿಡ್ ಸೋಂಕಿನಿಂದ ಮುಕ್ತವಾಗಲಿದೆ. ಮತ್ತು ಯಾರು ಕೂಡ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಘಂಟಾಘೋಷವಾಗಿ ಹೇಳಿದರು.
ಕೊರೊನಾ ತಡೆಗಟ್ಟುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು “ಅಂತರರಾಷ್ಟ್ರೀಯ ಸಹಕಾರದಲ್ಲಿ ಜಗತ್ತಿಗೆ ಉದಾಹರಣೆ” ಎಂದು ಹರ್ಶವರ್ಧನ್ ಶ್ಲಾಘಿಸಿದ್ದರು. ಸೋಂಕಿಗೆ ಮದ್ದಾಗಿರುವ ಲಸಿಕೆಯನ್ನು ತಮ್ಮ ದೇಶದ ಜನತೆಗೆ ಸರಿಯಾಗಿ ತಲುಪಿಸದೆ ಇದ್ದರೂ
ಜನವರಿಯಿಂದ “ಲಸಿಕೆ ರಾಜತಾಂತ್ರಿಕತೆಯ” ಭಾಗವಾಗಿ ವಿದೇಶಗಳಿಗೆ ಲಸಿಕೆ ಸಾಗಿಸಲು ಕೇಂದ್ರ ಸರಕಾರ ಮುಂದಾಯಿತು.

ದಿನನಿತ್ಯ ಸೋಂಕಿತರ ಸಂಖ್ಯೆಯ ಪ್ರಮಾಣವು ಕುಸಿಯುತ್ತಿದ್ದಂತೆ ಆರೋಗ್ಯ ಸಚಿವರ ನಿಯಂತ್ರಣವಿಲ್ಲದ ಸ್ವಯಂ ಆಶಾವಾದವು ಮುಗಿಲು ಮುಟ್ಟಿತು.
ಇದಕ್ಕೆ ಕಾರಣ, ತರುವಾಯ 2020 ರ ಸೆಪ್ಟೆಂಬರ್ ಮಧ್ಯದಲ್ಲಿ ಸರಾಸರಿಯಾಗಿ ದಿನಕ್ಕೆ 93,000 ತನಕ ಏರುತ್ತಿದ್ದ ಸಂಖ್ಯೆಯು 2021 ರ ಫೆಬ್ರವರಿಯ ತಿಂಗಳಲ್ಲಿ ಸರಸರಿಯಾಗಿ 11,000 ಕ್ಕೆ ಇಳಿಕೆಯಾಯಿತು. ಸೋಂಕಿತರ ಸಂಖ್ಯೆಯು ಸ್ಥಿರವಾಗಿ ಕಡಿಮೆಯಾಗಿರುವ ಕಾರಣದಿಂದಾಗಿ
ಮಿತಿ ಮೀರಿದ ಆತ್ಮವಿಶ್ವಾಸವು ಸಚಿವರನ್ನೇ ಅಹಂಕಾರಿಯನ್ನಾಗಿಸಿತೇ ? ಎಂಬ ಪ್ರಶ್ನೆ ಇಂದು ಜನರಲ್ಲಿ ಮೂಡುತ್ತಿದೆ.

ಕಳೆದೊಂದು ವರ್ಷದಿಂದಲೇ ಕೊರೊನಾ ವಿರುದ್ಧ ಸಾರಿದ ಯುದ್ಧದಲ್ಲಿ ಗೆಲ್ಲುತ್ತಿದ್ದೇವೆಂಬ ಉತ್ಸಾಹ ಸಾರ್ವಜನಿಕರಲ್ಲಿ ಮೂಡತೊಡಗಿತು.

ಆದರೆ ಇತ್ತೀಚಿನ ಎರಡನೇ ಕೋವಿಡ್ ಅಲೆಯನ್ನು ತಡೆಗಟ್ಟುವಲ್ಲಿ ಸರಕಾರ ಬಹುತೇಕ ವಿಫಲಗೊಂಡಿದೆ.ಅದು ರಾಜ್ಯ ಸರಕಾರವೇ ಆಗಿರಲಿ ಅಥವಾ ಕೇಂದ್ರ ಸರಕಾರವೇ ಅಗಿರಲಿ.
ಇಷ್ಟೊಂದು ರೀತಿಯ ಭೀತಿಯ ಅಲೆಯೆಬ್ಬಿಸಲು ಒಂದು ಕಾರಣ ಜನರ ನಿರ್ಲಕ್ಷ್ಯತನವಾದರೆ ಇನ್ನೊಂದು ಕಾರಣ ಸರಕಾರದ ನಿರ್ಲಕ್ಷ್ಯತನ.
ಸರಿಯಾದ ಪೂರ್ವನಿಯೋಜಿತ ಕಾರ್ಯಸೂಚಿಗಳನ್ನು ಮೊದಲೇ ಪಾಲಿಸಿದ್ದರೆ ಇತ್ತೀಚೆಗೆ ಜನತೆ ಅನುಭವಿಸುತ್ತಿರುವ ಆಂಬುಲೆನ್ಸ್ ಕೊರತೆ,ವೆಂಟಿಲೇಟರ್ ಕೊರತೆ,ಬೆಡ್ ಗಳ ಕೊರತೆ, ವ್ಯಾಕ್ಸಿನ್ ಕೊರತೆ,ಆಕ್ಸಿಜನ್ ಕೊರತೆ ಮತ್ತು ಇನ್ನಿತರ ಕೊರತೆಗಳನ್ನು ಎದುರಿಸಬಹುದಿತ್ತು. ಎಷ್ಟೇ ದೊಡ್ಡ ಮಂತ್ರಿ- ಗುರತಿಸಲ್ಪಟ್ಟ ವ್ಯಕ್ತಿಗೂ ಕೂಡ ಈ ಕೊರತೆಗಳು ಎದುರಿಸುತ್ತಿದೆ.
ಇದಕ್ಕೆಲ್ಲಾ ಮುಖ್ಯ ಕಾರಣ ಸರಕಾರದ ನಿರ್ಲಕ್ಷ್ಯತನ ಮತ್ತು ಪೂರ್ವನಿಯೋಜನೆಯ ಸಮಸ್ಯೆ.

ಇನ್ನು ಸರಕಾರ ಮುಂದಿನ ದಿನಗಳಲ್ಲಿ ಇಂತಹ ಹಲವು ಕೊರತೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಅದು ಯಾವ ಬಗೆಯ ನಿಯೋಜನೆಯಾದರೂ ಸರಿ.
ದೇಶ ಮತ್ತು ರಾಜ್ಯವನ್ನು ಈ ಎರಡನೇ ಅಲೆಯನ್ನು ಎದುರಿಸಿ,ದೇಶವನ್ನು ರಕ್ಷಿಸಬೇಕಾದ ಜವಾಬ್ದಾರಿ ಸರಕಾರ ಮತ್ತು ಜನತೆಯ ಮೇಲಿದೆ.

Leave a comment