ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಸಕ್ತ ರಾಜಕೀಯ ವ್ಯವಸ್ಥೆ

– ಅತಾವುಲ್ಲಾ ಪುಂಜಾಲಕಟ್ಟೆ

ಇಡೀ ಪ್ರಪಂಚವನ್ನೇ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಕಾಡುತಿದ್ದರೆ, ಭಾರತ ದೇಶದ ರಾಜಕೀಯ ಚಿತ್ರಣವು ತನ್ನದೇ ಆದ ರೀತಿಯಲ್ಲಿ ದ್ವೇಷ ರಾಜಕೀಯದ ಕೂಪದಲ್ಲಿ ರೋಗಗ್ರಸ್ತವಾದಂತಿದೆ. ಕೇಂದ್ರದಲ್ಲಿ ಆರ್.ಎಸ್.ಎಸ್ ಪ್ರೇರಿತ ಬಿಜೆಪಿ ಸರಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಇಂದಿನ ವರೆಗೆ ಒಂದಲ್ಲ ಒಂದು ವಿಧದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿ ದೇಶದ ಪ್ರಜೆಗಳನ್ನು ಗುರಿಯಾಗಿಸುತ್ತಿರುವುದು ಕಾಣಬಹುದಾಗಿದೆ. ಅದು ಒಂದಾ ಪ್ರಬಲ ಕೋಮುಭಾವದಿಂದಾಗಿರಬಹುದು, ಇಲ್ಲವೇ ಬಂಡವಾಳಶಾಹಿಗಳ ಹಿತ ಕಾಪಾಡುವ ಸಲುವಾಗಿರಬಹುದು. ಇನ್ನೂ ಸರಕಾರದ ಜನವಿರೋಧಿ ನೀತಿಗಳ ಮತ್ತು ಆಡಳಿತದ ವಿರುದ್ಧ ಮಾತನಾಡಲು ಪ್ರತಿಪಕ್ಷಗಳೇ ಇಲ್ಲದಂತಿದೆ. ಯಾರೆಲ್ಲಾ ಸರಕಾರದ ಜನವಿರೋಧಿ ನಡೆಯ ವಿರುದ್ಧ ಮಾತನಾಡುತ್ತಾರೋ ಅವರೆಲ್ಲರನ್ನು UAPA ಯಂತಹ ಕರಾಳ ಕಾನೂನಿನಡಿ ಬಂಧಿಸುವುದು ಇಲ್ಲವೇ ಸರಕಾರಿ ಪ್ರಯೋಜಿತವಾಗಿ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ಅಸಮ್ಮತಿಯ ಧ್ವನಿಗಳನ್ನು ಇಲ್ಲವಾಗಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಕರ್ನಾಟಕದ ರಾಜಕೀಯ ಚಿತ್ರಣ ಗಮನಿಸುವುದಾದರೆ, ಆಪರೇಷನ್ ಕಮಲ ಎಂಬ ಆಯುಧವನ್ನು ಬಳಸಿ ಸರಕಾರ ರಚಿಸಿದಾಗಲೇ ಸರಕಾರದ ಭವಿಷ್ಯದ ಬಗ್ಗೆ ಸಂಶಯ ಎದ್ದಿತ್ತು. ಈಗ ಊಹಿಸಿದ್ದಕ್ಕಿಂತ ಹೆಚ್ಚೇ ಆಪರೇಷನ್ ಕಮಲದ ಪರಿಣಾಮ ರಾಜ್ಯವನ್ನು ಕಾಡುತ್ತಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸರಕಾರವನ್ನು ನಿಯಂತ್ರಿಸುತ್ತಿದ್ದದ್ದು ಮದ್ಯದ ಲಾಬಿ, ಟಿಂಬರ್ ಲಾಬಿ, ಕ್ಯಾಫಿಟೇಷನ್ ಲಾಬಿ ಎಂಬುವುದನ್ನು ಕೇಳಲ್ಪಟ್ಟಿದ್ದೆವು. ಆದರೆ ಈಗ ಆ ಲಾಬಿಗಳೆಲ್ಲಾ ಹಳೆಯ ಕಥೆಗಳಾಗಿ ಹೋಗಿದೆ. ಈಗ ಏನಿದ್ದರೂ ಆಯಕಟ್ಟಿನ ಜಾಗದಲ್ಲಿ ಒಂದು ಕ್ಯಾಮರಾ ಇಟ್ಟು, ಒಂದು ಸಿ.ಡಿ ಸೃಷ್ಟಿಸಿಬಿಟ್ಟರೆ ಆರು ಕೋಟಿ ಜನ ಚುನಾಯಿಸಿದ ಸರಕಾರವನ್ನು ಅಲುಗಾಡಿಸಿಬಿಡಬಹುದು. ಪ್ರಬಲ ಹೋರಾಟದ ಮುಖಾಂತರ ಬಂದ ರಾಜಕೀಯ ಹುಲಿಗಳನ್ನು ಕ್ಷಣಾರ್ಧದಲ್ಲಿ ಇಲಿಗಳನ್ನಾಗಿ ಮಾಡಿಬಿಡಬಹುದು. ಸರಕಾರ ಉರುಳಿಸಿದವರನ್ನು ಮರುದಿನ ಪೊಲೀಸರ ಮುಂದೆ ಮಂಡಿಯೂರುವಂತೆ ಮಾಡಬಹುದು.

ಈ ರಾಜ್ಯದ ಕ್ಯಾಬಿನೆಟ್ ಗಳಿಗೆ ಯಾರು ಸೇರಬೇಕು ಯಾರು ಸೇರಬಾರದು ಎಂಬುವುದು ನಿರ್ಣಯಿಸುವುದು ಇಟ್ಟುಕೊಂಡಿರುವ ಸಿ.ಡಿ. ಗಳ ಆಧಾರದಲ್ಲಿ. ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆಯಾಗುವುದು ಸಿ.ಡಿ. ಗಳ ವಿಚಾರದಲ್ಲಿ. ಪತ್ರಿಕೆಗಳ ಮುಖಪುಟಗಳಲ್ಲಿ ಮತ್ತು ಇಲೆಕ್ಟ್ರಾನಿಕ್ ಸುದ್ದಿ ವಾಹಿನಿಗಳಲ್ಲಿ ಚರ್ಚಾ ವಿಷಯ ಸಿ.ಡಿ. ಯ ಹಿಂದಿನ ಕಾಣದ ಕೈಗಳ ವಿಚಾರ ಮತ್ತು ವರ್ಣರಚಿತ ದೃಶ್ಯಾವಳಿಗಳು. ಲಕ್ಷಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ ರಾಜ್ಯದ ಪೊಲೀಸ್ ಇಲಾಖೆಯು ಸಿ.ಡಿ. ಯ ಸೂತ್ರಧಾರಿಗಳ, ಪಾತ್ರದಾರಿಗಳ ಅಸಲಿಯತ್ತನ್ನು ಹುಡುಕುವುದರಲ್ಲಿ ತಲ್ಲೀನರಾಗಿದ್ದಾರೆ. ವಿರೋಧ ಪಕ್ಷಗಳ ಹೋರಾಟವೂ ಈ ಸಿ ಡಿ ಮುಂತಾದ ಅನೈತಿಕ ಚಟುವಟಿಕೆಗಳ ಆದ್ಯತೆಯ ಮೇಲೆ ಹೋರಾಟ ನಡೆಯುತ್ತಿದೆ. ಅದರೊಟ್ಟಿಗೆ ರಾಜ್ಯದ ಸಾಮಾಜಿಕ ಕಾರ್ಯಕರ್ತರೂ ಕೂಡ ಕಂಡುಕೊಂಡ ಹೊಸಹೋರಾಟ ಸಿ.ಡಿ. ಸಂಗ್ರಹಣೆ ಮತ್ತು ಪ್ರದರ್ಶನ.

ಈ ರೀತಿ ಅನೈತಿಕತೆಗಳ ಬಂಡವಾಳಗಳಿಂದ ಮೌಲ್ಯ ಕಳೆದುಕೊಳ್ಳುತ್ತಿರುವ ರಾಜಕೀಯ ಚಿತ್ರಣದ ಮಧ್ಯೆ ಒಂದಷ್ಟು ಇತಿಹಾಸವನ್ನು ಮೆಲುಕು ಹಾಕುವಾಗ ಹಲವಾರು ವ್ಯಕ್ತಿತ್ವ ಕಾಣಸಿಗುತ್ತದೆ. ಭಾರತದ 2ನೇ ಪ್ರಧಾನಿಯಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ, ಬಡತನದ ಜೀವನದಲ್ಲಿ ಜೀವಿಸಿ, ಕೊನೆಗೆ ಮರಣ ಹೊಂದಿದ ಬಳಿಕ ರೇಷನ್ ಅಂಗಡಿಯಲ್ಲಿದ್ದ ಇವರ ಸಾಲವನ್ನು ತೀರಿಸಿದ್ದು ಅಂದಿನ ಕಾಂಗ್ರೆಸ್ ವರ್ಕಿಂಗ್ ಕಮಿಟಿ.
ನಮ್ಮ ಕರ್ನಾಟಕದ ಲಕ್ಷಾಂತರ ಗ್ರಾಮೀಣರ ಪ್ರೀತಿಯ ನೀರ್ ಸಾಬ್ ಎಂದು ಕರೆಯಲ್ಪಡುವ ಅಬ್ದುಲ್ ನಝೀರ್ ಸಾಬ್, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ನಿನಗೆ ಯಾವ ಖಾತೆ ಬೇಕೆಂದು? ಆಯ್ಕೆ ಮಾಡಲು ಮುಕ್ತ ಅವಕಾಶ ಕೊಟ್ಟಾಗ ಪ್ರಬಲ ಖಾತೆಗಳಿದ್ದರೂ ಮಂತ್ರಿಮಂಡಲದಲ್ಲಿ ಹಳ್ಳಿ ಜನತೆಯ ಸೇವೆ ಮಾಡಲೆಂದೇ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಆಯ್ಕೆ ಮಾಡಿದ ಮಹಾನ್ ವ್ಯಕ್ತಿಯಾದ ಇವರು 26000 ಗ್ರಾಮಗಳಿಗೆ ಕಣ್ಮಣಿಯಾಗಿ ನೀರು ಪೂರೈಸಿದ ವ್ಯಕ್ತಿ. ಜನತಾ ಮನೆ ಎಂಬ ಯೋಜನೆ ಮುಖಾಂತರ ಕರ್ನಾಟಕದಲ್ಲಿ ಯಾರು ಸೂರು ಇಲ್ಲದೆ ಜೀವಿಸಕೂಡದು ಮತ್ತು ಹಳ್ಳಿಯಲ್ಲಿ ರಸ್ತೆ ನಿರ್ಮಾಣ, ಚರಂಡಿ ಕಾಲುವೆಗಳು ಹೇಗಿರಬೇಕೆಂದು ಯೋಜನೆ ರೂಪಿಸಿದವರೂ ಆಗಿದ್ದಾರೆ ಇವರು. ಮಾಜಿ ರಾಷ್ಟ್ರಪತಿಗಳಾದ ಕೆ.ಆರ್.ನಾರಾಯಣ ಹಿಂದುಳಿದ ವರ್ಗದಿಂದ ಬಂದು ರಾಷ್ಟ್ರಪತಿಯಾಗಿ ಸಾಮಾನ್ಯ ಜನರಂತೆ ಜೀವಿಸಿದ ಮೇರು ವ್ಯಕ್ತಿ. ಮಾಜಿ ಲೋಕಸಭಾ ಸದಸ್ಯರಾದ ಸಿದ್ದಿ ಸಾಹೇಬ್ ಒಂದು ದಿನ ತನ್ನ ಸ್ನೇಹಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ, ಪಾವತಿಸಲು ತನ್ನಲ್ಲಿ ಹಣ ಇಲ್ಲದಾಗ ತಲೆಯಲ್ಲಿ ಇದ್ದ ಟೋಪಿ ತೆಗೆದು ಆಸ್ಪತ್ರೆಯ ಅಂಗಳದಲ್ಲಿ ಭಿಕ್ಷೆ ಬೇಡಿ ಕೊಟ್ಟ ಮತ್ತು ಸ್ವಂತ ಮನೆ ಕಾರು ಇಲ್ಲದೆ ಸಾಮಾನ್ಯವಾಗಿ ಜೀವಿಸಿದ ವ್ಯಕ್ತಿ. ಇ.ಎಂ.ಎಸ್.ನಂಬುದ್ರಿ ಕೇರಳದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿ. ಜಾತಿ ವಿರೋಧಿಸಿ ಕುಟುಂಬ ತೊರೆದು ಪಕ್ಷದ ಕಛೇರಿಯಲ್ಲಿ ಇದ್ದು ಜನರಿಗಾಗಿ ಪಕ್ಷಕ್ಕಾಗಿ ಸದಾ ಜೀವನ ಕಳೆದ ವ್ಯಕ್ತಿ. ವೈ.ಎಸ್.ರಾಜಶೇಖರ್ ರೆಡ್ಡಿ ಸದಾ ಜನತೆಗೋಸ್ಕರ ರಾಜಕೀಯ ಮಾಡಿ ಹುತಾತ್ಮರಾದ ವ್ಯಕ್ತಿ. ಇಂತಹ
ಹಲವು ಮೌಲ್ಯಯುತವಾದ ಮತ್ತು ಸ್ವಾರ್ಥರಹಿತವಾದ ರಾಜಕಾರಣ ಮಾಡಿದ ದೇಶದ ಮತ್ತು ರಾಜ್ಯದ ಒಂದಷ್ಟು ರಾಜಕಾರಣಿಗಳನ್ನು ನೆನಪಿಸಬೇಕಾಗಿದೆ.

ಒಟ್ಟಾರೆ ರಾಜಕಾರಣ ಅಥವಾ ರಾಜಕೀಯ ಎಂದರೆ ಜನರ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತಹ ವ್ಯಕ್ತಿಯ ಕೆಲಸಕಾರ್ಯಗಳಿಗೆ ಹೇಳುವ ಹೆಸರಾಗಿದೆ. ಇಂದು ಉದ್ಯಮಿಗಳು ಇಲ್ಲವೇ ಉದ್ಯಮಿಗಳ ಬಂಡವಾಳದಿಂದ ಚುನಾವಣೆಗೆ ಸ್ಪರ್ಧಿಸುವ ಜನರೇ ಅಧಿಕವಾಗಿರುವ ಕಾರಣಕ್ಕಾಗಿ ರಾಜಕೀಯವು ಈ ಮಟ್ಟಕ್ಕೆ ಕಲುಷಿತಗೊಂಡಿರುವಂತದ್ದು. ಇದನ್ನು ಬದಲಾಯಿಸಬೇಕಾದರೆ ಸಮಾಜದ ಬಗ್ಗೆ ಕಾಳಜಿ ಇರುವ ಸಾಮಾನ್ಯ ವಿದ್ಯಾವಂತ ಯುವ ಜನತೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಬೇಕಾಗಿದೆ. ಅದಕ್ಕಾಗಿ ಶಾಲಾ/ಕಾಲೇಜು ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಡೆಮೋಕ್ರಸಿ ಮುಖಾಂತರ ಚುನಾವಣಾ ರಾಜಕೀಯವನ್ನು ಕಡ್ಡಾಯಗೊಳಿಸಿ ಮೌಲ್ಯಯುತ, ಸದೃಢ ನಾಯಕರನ್ನಾಗಿಸಿದರೆ ಮಾತ್ರ ಬದಲಾವಣೆಯನ್ನು ಕಂಡುಕೊಳ್ಳಲು ಸಾಧ್ಯ.

Leave a comment