ಸಾರಿಗೆ ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರವು ಮಾಡುತ್ತಿರುವ ಹಠ, ಸಾರ್ವಜನಿಕರಿಗೆ ಸಂಕಟ!!!

– ಚಾಂದ್ ಸಲ್ಮಾನ್

ಕರ್ನಾಟಕ ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಇಂದು ನಿನ್ನೆಯ ವಿಚಾರವಲ್ಲ, ಇದರ ವಿಚಾರವಾಗಿ ಹಲವು ಬಾರಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವ ಮುಖಾಂತರ ತಮ್ಮ ಬೇಡಿಕೆಗಳನ್ನು ನೌಕರರು ಸರ್ಕಾರದ ಮುಂದಿಟ್ಟಿದ್ದರು, ಸರ್ಕಾರವು ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಯನ್ನು ನೌಕರರು ಹಿಂಪಡೆದರು.

ಆದರೆ ಇಂದು 3 ತಿಂಗಳು ಕಳೆದರೂ ಸರ್ಕಾರ ಸಾರಿಗೆ ನೌಕರರ ಬೇಡಿಕೆಗೆ ಇನ್ನಷ್ಟೂ ಸ್ಪಂದಿಸದ ಕಾರಣ ಪುನಃ ಮುಷ್ಕರ ಪ್ರಾರಂಭಗೊಂಡಿದೆ, ಈ ಮುಷ್ಕರವನ್ನು ನೌಕರರು ಕೈಬಿಡಲು ಸರ್ಕಾರವು ಹಲವು ರೀತಿಯಾಗಿ ಪ್ರಯತ್ನಿಸುತ್ತಿದೆ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೆ ಹೋದಲ್ಲಿ ವೇತನ ಕಡಿತಗೊಳಿಸುತ್ತೇವೆ ಎಂದು ಹೇಳುತ್ತಾ, ಹಾಗೂ ಸಮಸ್ಯೆಯನ್ನು ಬಗೆಹರಿಸುವ ಬದಲು ಇನ್ಸೂರನ್ಸ್ ಇಲ್ಲದ ಖಾಸಗಿ ವಾಹನಗಳನ್ನು ಓಡಿಸುವ ಮುಖಾಂತರ ಸಾರಿಗೆ ನೌಕರರನ್ನು ಹೆದರಿಸುತ್ತಾ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ.

ಬಸ್ ಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ, ಸರ್ಕಾರವು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಪ್ರಯಾಣಕ್ಕಾಗಿ ಖಾಸಗಿ ಬಸ್ ಗಳನ್ನು ನಿಲ್ಲಿಸಿದೆ, ಇನ್ಸೂರನ್ಸ್ ಇಲ್ಲದೇ ಹಾಗೂ ಕೋವಿಡ್ ನಿಯಮ ಪಾಲಿಸದೇ ಹೆಚ್ಚು ಜನರನ್ನು ತುಂಬಿಕೊಂಡ ವಾಹನಗಳಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನೀಡಿ ಪ್ರಯಾಣಿಸಬೇಕಾಗಿದೆ.

ಇಂತಹ ಸಂದರ್ಭದಲ್ಲಿ ಸಾರಿಗೆ ಸಚಿವರದ ಲಕ್ಷ್ಮಣ್ ಸವದಿ ಸಮಸ್ಯೆಯನ್ನು ಆಲಿಸುವ ಬದಲು ಲಾಕ್ ಡೌನ್ ಸಂದರ್ಭದಲ್ಲಿ ನೀಡಿದ ವೇತನದ ಬಗ್ಗೆ ನೆನಪಿಸಿಕೊಳ್ಳಿ ಎಂದು ಸಾರಿಗೆ ನೌಕರರಿಗೆ ಹೇಳುತ್ತಿದ್ದಾರೆ. ಅಂದು ನೀವು ನೀಡಿದ ವೇತನ ಅದು ನಿಮ್ಮ ಕರ್ತವ್ಯ ಅವರು ಪಡೆದಿದ್ದು ಅವರ ಹಕ್ಕು, ಹೊರತು ನಿಮ್ಮ ಭಿಕ್ಷೆಯಲ್ಲ ಎಂದು ಸಾರಿಗೆ ಸಚಿವರು ನೆನಪಿಟ್ಟುಕೊಳ್ಳಬೇಕು,
ಇದೇ ಮುಖ್ಯಮಂತ್ರಿ ಯಡಿಯೂರಪ್ಪ ನವರು ಅಂದು 2016 ರ ಸಂದರ್ಭದಲ್ಲಿ ಹೇಳಿದ ಮಾತು ನೆನಪಿಸೋಣ
“ಸಾರಿಗೆ ನೌಕರರ ಮುಷ್ಕರವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬೇಡಿ ನೌಕರರನ್ನು ಮಾತುಕತೆಗೆ ಕರೆದು ಮುಷ್ಕರ ಅಂತ್ಯಗೊಳಿಸಿ ಎಸ್ಕಾ ಜಾರಿ ಮಾಡದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮುಷ್ಕರ ಮುಂದುವರಿದರೆ ಬಡವರ ಹೊಟ್ಟೆ ಮೇಲೆ ಸರ್ಕಾರವೇ ಹೊಡೆದಂತೆ”
ಈ ಮಾತನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಂದು ಬಿಜೆಪಿ ರಾಜ್ಯಾಧ್ಯಕ್ಷರಿದ್ದಾಗ ಹೇಳಿದ್ದು ಈಗ ತಮ್ಮದೇ ಅಧಿಕಾರವಿದೆ ತಾವೇ ಮುಖ್ಯಮಂತ್ರಿಯಾಗಿದ್ದಾರೆ ಸಾರಿಗೆ ನೌಕರರ ಬೇಡಿಕೆ ಈಡೇರಿಸಬಹುದಲ್ಲವೇ? ಅಂದು ಮಾತನಾಡಿದ್ದು ಕೇವಲ ಅಧಿಕಾರಕ್ಕಾಗಿಯೇ? ಸಾರಿಗೆ ನೌಕರರ ಬೇಡಿಕೆ ಈಡೇರಿಸದೇ ನೌಕರರೊಂದಿಗೆ ಸರ್ಕಾರವು ಮಾಡುತ್ತಿರುವ ಹಠ, ಸಾರ್ವಜನಿಕರಿಗೆ ಸಂಕಟವುಂಟು ಮಾಡುತ್ತಿದೆ.

Leave a comment