ಸಾರಿಗೆ ನೌಕರರ ಮುಷ್ಕರಕ್ಕೆ ಕಾರಣವೇನು? ಏನಿದು 6 ನೇ ವೇತನ ಆಯೋಗ?

– ಉಮರ್ ಫಾರೂಕ್ ಬಾಗಲಕೋಟೆ

ಕಳೆದ ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ಇಡೀ ರಾಜ್ಯವನ್ನೇ ಸ್ತಬ್ಧಗೊಳಿಸಿದ್ದ ಸಾರಿಗೆ ನೌಕರರು, ಸರ್ಕಾರ ಕೊಟ್ಟ ಆಶ್ವಾಸನೆಯಿಂದ ಮುಷ್ಕರ ಹಿಂಪಡೆದಿದ್ದರು. ಸಾರಿಗೆ ನೌಕರರು ನೀಡಿದ್ದ ಗಡುವಿನೊಳಗೆ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಮತ್ತೊಮ್ಮೆ 6ನೇ ವೇತನ ಆಯೋಗದ ವರದಿಯನ್ವಯ ಶಿಫಾರಸು ಜಾರಿ ಮಾಡಬೇಕೆಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನಿರ್ಧರಿಸಿದೆ.

ಕಳೆದ ಡಿಸೆಂಬರ್ ವೇಳೆ ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ಕೂಟದೊಂದಿಗೆ ನಡೆದ ಸಂಧಾನ ಸಭೆಯಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರ ಹತ್ತು ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಈ ವೇಳೆ ಬೇಡಿಕೆ ಈಡೇರಿಕೆಗೆ 3 ತಿಂಗಳ ಗಡುವೂ ನೀಡಲಾಗಿತ್ತು. ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮಾರ್ಚ್ 15 ಕ್ಕೆ ಮುಕ್ತಾಯವಾಗಿತ್ತು. ಹೀಗಾಗಿ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಕಾರ್ಮಿಕ ಕಾಯ್ದೆಯನ್ವಯ ಸಾರಿಗೆ ನೌಕರರ ಕೂಟವು ಮಾರ್ಚ್ 16ರಂದು ಮತ್ತೊಮ್ಮೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆಯ ನೋಟೀಸ್ ಸಹ ನೀಡಿತ್ತು. ಈ ನೋಟೀಸ್ ಅನ್ವಯ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 22 ದಿನಗಳವರೆಗೆ ಕಾಲಾವಕಾಶ ಇತ್ತು. ಅಂತೆಯೇ ಈ ಕಾಲಾವಕಾಶ ಎಪ್ರಿಲ್ 6 ಕ್ಕೆ ಅಂತ್ಯವಾಗಿತ್ತು. ಆದರೆ ರಾಜ್ಯ ಸರ್ಕಾರದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಚುನಾವಣಾ ನೀತಿಸಂಹಿತೆಯ ನೆಪವೊಡ್ಡಿ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದರಿಂದ 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲೇಬೇಕೆಂದು ಹಠಹಿಡಿದ ಸಾರಿಗೆ ನೌಕರರು ಮತ್ತೊಮ್ಮೆ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವನ್ನೇ ಸ್ತಬ್ಧಗೊಳಿಸಿದ್ದಾರೆ.

ಹಾಗಾದರೆ ಸಾರಿಗೆ ನೌಕರರು ಆಗ್ರಹಿಸುತ್ತಿರುವ 6ನೇ ವೇತನ ಎಂದರೇನು? 6ನೇ ವೇತನ ಆಯೋಗದ ವರದಿಯಲ್ಲಿ ಏನಿದೆ?

ಸಿದ್ದರಾಮಯ್ಯ ನೇತೃತ್ವದ ಸರಕಾರ 2017ರ ಜೂನ್ 1 ರಂದು ರಚಿಸಲಾಗಿದ್ದ 6ನೇ ವೇತನ ಆಯೋಗ ತನ್ನ ವರದಿಯನ್ನು 2018ರ ಜನವರಿ 31ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 30ರಷ್ಟು ವೇತನ ಹೆಚ್ಚಿಸಬೇಕೆಂದು ಶಿಫಾರಸು ಮಾಡಲಾಗಿದೆ. ಶೇ. 30 ರಷ್ಟು ವೇತನ ಪರಿಷ್ಕರಣೆಯಾದರೆ ಡಿ ಗ್ರೂಪ್ ನೌಕರರ ಆರಂಭಿಕ ಮೂಲವೇತನ 9,600 ರಿಂದ 17 ಸಾವಿರ ರೂ ವರೆಗೆ ಹೆಚ್ಚಳವಾಗಲಿದೆ. ಅದೇ ರೀತಿ ಇತರೆ ಶ್ರೇಣಿಯ ನೌಕರರ ವೇತನದಲ್ಲಿಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ರಾಜ್ಯ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 5.20 ಲಕ್ಷ ನೌಕರರಿಗೆ, 5.73 ಲಕ್ಷ ಪಿಂಚಣಿದಾರರಿಗೆ, 70 ಸಾವಿರ ಅನುದಾನಿತ ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಸೇರಿ ಒಟ್ಟು 12 ಲಕ್ಷ ಮಂದಿಗೆ 6ನೇ ವೇತನ ಪರಿಷ್ಕರಣೆಯ ಲಾಭವಾಗಲಿದೆ. ವೇತನ ಆಯೋಗದ ವರದಿ ಜಾರಿಯಾದರೆ ಕನಿಷ್ಠ ವೇತನ 17 ಸಾವಿರ ರೂ ಗಳಾಗಿದ್ದು, ಕನಿಷ್ಠ ವೇತನ 1,50,600 ಮತ್ತು ಭತ್ಯೆ ಒಳಗೊಂಡಿರುತ್ತದೆ. ಕನಿಷ್ಠ ಪಿಂಚಣಿ ತಿಂಗಳಿಗೆ 8,500 ರೂ, ಗರಿಷ್ಠ 75,300 ರೂ ಮತ್ತು ತುಟ್ಟಿ ಭತ್ಯೆ ಒಳಗೊಂಡಿರುತ್ತದೆ. ಕುಟುಂಬ ಪಿಂಚಣಿ ಗರಿಷ್ಠ ಮಿತಿ ತಿಂಗಳಿಗೆ 45,180 ರೂ ಮತ್ತು ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ.

6ನೇ ವೇತನ ಆಯೋಗದ ಪ್ರಮುಖ ಶಿಫಾರಸುಗಳು:

  • ಹಾಲಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಮುಂದುವರೆಸಬೇಕು. ಸ್ವಯಂ ನಿವೃತ್ತಿಗೆ ಕನಿಷ್ಠ ಸೇವಾ ಅರ್ಹತೆ ಮಿತಿ 15 ರಿಂದ 10 ವರ್ಷಕ್ಕೆ ಇಳಿಕೆ ಮಾಡಬೇಕು.
  • ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕೃತ ಮೂಲವೇತನ ಆಧರಿಸಿ 24%, 16% ಮತ್ತು 8% ನಂತೆ ಪರಿಷ್ಕರಿಸಬೇಕು. 80 ರಿಂದ 85 ವರ್ಷದ ಪಿಂಚಣಿದಾರರಿಗೆ 20%, 85ರಿಂದ 90 ವರ್ಷದವರಿಗೆ 30%, 95 ವರ್ಷದೊಳಗಿನವರಿಗೆ 40%, 95 ರಿಂದ 100 ವರ್ಷದೊಳಗಿನವರಿಗೆ 50%, 100 ವರ್ಷ ಮೇಲ್ಪಟ್ಟವರಿಗೆ 100 % ನಷ್ಟು ಹೆಚ್ಚುವರಿ ಪಿಂಚಣಿಯನ್ನು ನೀಡಬೇಕು.
  • ನಗರ ಪರಿಹಾರ ಭತ್ಯೆ, ಪ್ರಯಾಣ ಭತ್ಯೆ, ಸಮವಸ್ತ್ರ ಭತ್ಯೆ ಮತ್ತು ವಿಶೇಷ ಭತ್ಯೆಯ ದರಗಳಲ್ಲಿ ಹೆಚ್ಚಳ ಮಾಡಬೇಕು. ವಿಕಲಚೇತನ ನೌಕರರು ಯಾಂತ್ರಿಕೃತ ಮತ್ತು ಮೋಟಾರು ಚಾಲಿತ ವಾಹನ ಖರೀದಿಸಲು ಪ್ರಸ್ತುತ ಇರುವ ಧನಸಹಾಯವನ್ನು 25,000 ದಿಂದ 45,000 ರೂ ವರೆಗೆ ಹೆಚ್ಚಿಸಬೇಕು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 6ನೇ ವೇತನ ಆಯೋಗದ ವರದಿ ಜಾರಿ ಮತ್ತು ಇನ್ನಿತರ ಬೇಡಿಕೆಗಳನ್ನಿಟ್ಟು ಡಿಸೆಂಬರ್ ನಲ್ಲಿ ಸಾರಿಗೆ ನೌಕರರ ಕೂಟ ನಡೆಸಿದ್ದ ಸಾರಿಗೆ ಮುಷ್ಕರಕ್ಕೆ ಬಗ್ಗಿದ್ದ ರಾಜ್ಯ ಸರ್ಕಾರ ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ಕೊಟ್ಟಿದ್ದರು. ಈ ಬೇಡಿಕೆಗಳಲ್ಲಿ ವೇತನ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸುವುದಾಗಿಯೂ ಭರವಸೆ ಕೊಟ್ಟಿದ್ದರು.

ಇದೀಗ ಕೊಟ್ಟ ಮಾತು ತಪ್ಪಿದ ಭಂಡ ಬಿಜೆಪಿ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲವೆನ್ನುತ್ತಿದೆ. ಅನಗತ್ಯ ಅವೈಜ್ಞಾನಿಕ ಗೋಶಾಲೆ, ಜಾತಿಗನುಗುಣವಾಗಿ ಅನುದಾನ ನೀಡಿ ಸರ್ಕಾರದ ಬೊಕ್ಕಸವನ್ನು ಬರಿದಾಗಿಸಿದ ಬಿಜೆಪಿ ಸರ್ಕಾರ ಸಾರಿಗೆ ನೌಕರರಿಗೆ ವೇತನ ನೀಡಲು ಖಜಾನೆ ಬರಿದಾಗಿದೆ ಎನ್ನುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ, ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಕಂಟಕವಾಗಿ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಕೊಳ್ಳಿ ಇಡುತ್ತಿದೆ ಅಲ್ಲದೆ ಸಾರಿಗೆ ಸಂಸ್ಥೆಯ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುತ್ತಿದೆ.

Leave a comment