ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ!

ಬರಹ : ಮಹಮ್ಮದ್ ರಿಯಾಝ್
(ವಿದ್ಯಾರ್ಥಿ- ಮಂಗಳೂರು ವಿಶ್ವವಿದ್ಯಾನಿಲಯ)

ಅಸ್ತಿತ್ವಕ್ಕಾಗಿ ನಡೆದ ಹೋರಾಟಗಳೆಷ್ಟೋ, ಕ್ರಾಂತಿಗಳೆಷ್ಟೋ. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗಿ ಹೆಚ್ಚಿನ ಹೋರಾಟಗಳೂ, ಕ್ರಾಂತಿಗಳೂ ಅಸ್ತಿತ್ವಕ್ಕಾಗಿಯೇ ನಡೆದಿದೆ ಎನ್ನಬಹುದು. ಒಂದು ಸಮುದಾಯದ ಅಥವಾ ಒಬ್ಬ ವ್ಯಕ್ತಿಯ ಅಸ್ತಿತ್ವದ ಪ್ರಶ್ನೆ ಬಂದಾಗ ಪರಸ್ಪರ ನಮ್ಮ ಭಿನ್ನಾಭಿಪ್ರಾಯಗಳನ್ನು, ಅಡ್ಡಲಾಗಿರುವ ಗೋಡೆಗಳನ್ನು, ಸವಾಲುಗಳನ್ನು ಎದುರಿಸಿ ಐಕ್ಯ ಸಾಧಿಸುವುದು ಅನಿವಾರ್ಯ. ಇಲ್ಲದಿದ್ದರೆ ಯಾವ ರೀತಿ ಚರಿತ್ರೆಯ ಪುಟಗಳಲ್ಲಿ ಕರಾಳ ಹತ್ಯಾಕಾಂಡ, ನರಮೇಧಗಳು ನಡೆಯಿತೋ, ಅದು ಮತ್ತೆ ಪುನರಾವರ್ತನೆಗೊಳ್ಳಬಹುದು.

ಇಂದಿನ ಸಮಾಜವನ್ನು ಸ್ಪಷ್ಟವಾಗಿ ಗಮನಿಸಿದಾಗ ಕೆಲವೊಂದು ಅಪಾಯಕಾರಿ ಬದಲಾವಣೆಗಳು ನಮ್ಮ ಕಣ್ಣ ಮುಂದಿದೆ. ಇಂದು ಸಮಾಜದಲ್ಲಿ ಬೆಳೆಯುತ್ತಿರುವ ದ್ವೇಷದ ಚಿಂತನೆಗಳು, ಅಮಾನವೀಯ ಘಟನೆಗಳು, ಭಯದ ವಾತಾವರಣ, ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು ಮತ್ತು ಕೋಮು ಧ್ರುವೀಕರಣಗಳನ್ನು ಗಮಸಿದಾಗ ಇತಿಹಾಸದ ಪುಟಗಳಲ್ಲಿ ನಡೆದ ಬೀಭತ್ಸ ಘಟನೆಗಳು ಎಲ್ಲಿ ಮತ್ತೆ ಹುಟ್ಟಿ ಬರಬಹುದೋ ಎನ್ನುವ ಪ್ರಶ್ನೆಗಳು ಮೂಡುತ್ತದೆ. ಅದಕ್ಕಾಗಿ “ಅಸ್ತಿತ್ವದ ಪ್ರಶ್ನೆಗೆ ಸನ್ನದ್ಧತೆಯೇ ಉತ್ತರ” ಎನ್ನುವ ಶೀರ್ಷಿಕೆಯನ್ನು ನೀಡಿದ್ದೇನೆ.

ನಾನು ಈ ಬರವಣಿಗೆಯನ್ನು ಬರೆಯಲು ಕಾರಣ ನೇಮಿಚಂದ್ರ ರವರ “ಯಾದ್ ವಶೇಮ್” ಎನ್ನವ ಪುಸ್ತಕ. ಈ ಪುಸ್ತಕ ಇತಿಹಾಸದ ಕರಾಳ ಮುಖಗಳನ್ನು ನನ್ನ ಮುಂದೆ ಬಿಚ್ಚಿಟ್ಟಿತು. ಹಿಟ್ಲರ್ ಎಂಬ ಸರ್ವಾಧಿಕಾರಿ 60 ಲಕ್ಷ ಯಹೂದಿಯರನ್ನು ಕೊಂದು ಮುಗಿಸಿದ ಇತಿಹಾಸದ ಆ ಕರಾಳ ಚರಿತ್ರೆ. ಅಂದು ಹೊತ್ತಿ ಉರಿದಿತ್ತು ಜರ್ಮನ್. ನಿಂತು ನೋಡಿತ್ತು ಜಗತ್ತು.ಜನರನ್ನು ಜೀವಂತವಾಗಿ ಸುಡುವ, ಪ್ರಾಣಿಗಳಿಗಿಂತಲೂ ಕೀಳಾಗಿ ದುಡಿಸಿ ಹತ್ಯೆ ಮಾಡುತ್ತಿದ್ದ ಆ ಕರಾಳತೆಯನ್ನು ನಾಗರಿಕ ಸಮಾಜ ನಿಂತು ನೋಡಿತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೇರಿಕಾದಲ್ಲಿ, ಜರ್ಮನಿಯಲ್ಲಿ, ಇಸ್ರೆಲ್ ನಲ್ಲಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಭಾರತದಲ್ಲೂ ಕೂಡ.ನಮ್ಮ ನಡುವೆ ಎಲ್ಲಿ ಬೇಕಾದರೂ ಹುಟ್ಟಿ ಬಿಡಬಲ್ಲ. ನಮ್ಮೊಳಗೇ ಜನಿಸಬಲ್ಲ ಹಿಟ್ಲರ್ ನನ್ನು ತಡೆಹಿಡಿಯುವ ಹೊಣೆ ನಮ್ಮದು.

ನಾವು ಇತಿಹಾಸದ ಪುಟಗಳಿಂದ ಪಾಠ ಕಲಿಯಬೇಕಾಗಿದೆ. ಇಲ್ಲದೇ ಹೋದಲ್ಲಿ ಅಂತಹಾ ಕರಾಳ ದಿನಗಳು ಮತ್ತೆ ಮರುಕಳಿಸಬಹುದು. ಇಡೀ ಮನುಕುಲದಲ್ಲಿ ಆರ್ಯ ಜನಾಂಗವೇ ಶ್ರೇಷ್ಟವಾದುದೆಂದು ಸಾರಿದ್ದ ಹಿಟ್ಲರ್ ನ ಹಿಂಬಾಲಕರು ಮತ್ತೆ ಹುಟ್ಟಿ ಬರಬಹುದು ಅಥವಾ ಈಗಾಗಲೇ ಬಂದಿರಲೂಬಹುದು. ಆದ್ದರಿಂದ ಹಿಟ್ಲರ್ ನ ಚಿಂತನೆಗಳನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ.

ಈ ಲೇಖನವು ಮುಂದಕ್ಕೆ ಹಲವು ಭಾಗಗಳಾಗಿ ಮುಂದುವರೆಯಲಿದ್ದು, ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇನೆ.

Leave a comment