‘ಒನ್ ನೇಷನ್ ಒನ್ ಎಲೆಕ್ಷನ್’ ಯಾಕಾಗಿ ಈ ವರ್ಣರಂಜಿತ ಘೋಷಣೆ?

ಬರಹ : ಎಮ್ಮೆಸ್ಸೆ ಸವಣೂರು

ಒಂದು ದೇಶ- ಒಂದು ಚುನಾವಣೆ ಎಂಬ ವರ್ಣರಂಜಿತ ಘೋಷಣೆಯು ಚಾಲ್ತಿಯಲ್ಲಿರುವುದು ಇದೇ ಮೊದಲೇನಲ್ಲ. ಕಳೆದ ಲೋಕಸಭಾ ಚುನಾವಣೆಯ ಮುಂಚೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ಒಂದು ದೇಶ- ಒಂದು ಚುನಾವಣೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು. ಅಷ್ಟಕ್ಕೂ ಬಿಜೆಪಿ ಮಹತ್ವ ಕೊಡುವ ಈ ಅಜೆಂಡಾ ಏನು? ಇದರ ಹಿಂದಿರುವ ಷಡ್ಯಂತ್ರಗಳೇನು?

ಹಿಂದೂರಾಷ್ಟ್ರದ ಪರಿಕಲ್ಪನೆಯೊಂದಿಗೆ ಅಧಿಕಾರಕ್ಕೆ ಏರಿದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಸದಾ ಸಂವಿಧಾನದ ಮೂಲ ಆಶಯಕ್ಕೆ ತಿದ್ದುಪಡಿ ತರಲು ಶ್ರಮಿಸುತ್ತಿದೆ. ಆರ್ಟಿಕಲ್ 370 ತಿದ್ದುಪಡಿ, ಏಕರೂಪ ನಾಗರಿಕ ಸಂಹಿತೆ ಈ ರೀತಿಯ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ತನ್ನ ಅಜೆಂಡಾ ಕಾರ್ಯಸಾಧನೆಗೆ ಮುನ್ನುಡಿ ಬರೆಯುತ್ತಿದೆ.

ಇದರ ಮುಂದುವರಿದ ಮತ್ತು ಬಹಳ ಬಹುಮುಖ್ಯ ಭಾಗವೇ ‘ಒಂದು ದೇಶ; ಒಂದು ಚುನಾವಣೆ’ ಎನ್ನುವ ಪರಿಕಲ್ಪನೆ.

ಇದರ ವ್ಯಾಖ್ಯಾನವಾಗಿ ಬಹಳ ವರ್ಣರಂಜಿತವಾಗಿ ಜನರನ್ನು ಹತ್ತು ಹಲವು ಅಪ್ರಸ್ತುತ ಕೆಲವು ಲಾಭಗಳನ್ನು ಹೇಳಿ ಸ್ವತಃ ಪ್ರಧಾನಿಯವರೇ ಜನರನ್ನು ಮರುಳು ಮಾಡಲು ಹೊರಟಿದ್ದಾರೆ.

ಈ ಸಂದರ್ಭದಲ್ಲಿ ಈ ಹಿಂದೆ ನೋಟ್‌ ಬ್ಯಾನ್ ಹೆಸರಿನಲ್ಲಿ ದೇಶದ ಬಹುಸಂಖ್ಯಾತ ಮಧ್ಯಮವರ್ಗದ ಶ್ರಮಿಕ ಜನರನ್ನು ಬೀದಿಗಿಳಿಸಿ ಬ್ಯಾಂಕ್ ಮುಂದೆ ಸಾಲು ನಿಲ್ಲಿಸಿದಾಗಲೂ ಇದೇ ಪ್ರಧಾನಿ ಮೋದಿಯವರು ಬಹಳ ವರ್ಣರಂಜಿತ ವ್ಯಾಖ್ಯಾನ ನೀಡಿದ್ದರು.

ಪ್ರಯೋಜನವಿಲ್ಲದ ಕೆಲವು ಪ್ರತಿಮೆಗಳು, ಸ್ಮಾರಕಗಳಿಗೆ ಮತ್ತು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಹಿತ ಹಲವು ಬಿಜೆಪಿಯೇತರ ಪಕ್ಷದ ಶಾಸಕರನ್ನು ಖರೀದಿಸಲು ಕೋಟ್ಯಂತರ ರೂಪಾಯಿ ಸುರಿಯುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಚುನಾವಣೆ ನಡೆಸಲು ಮಾತ್ರ ಹಣದ ಕೊರತೆ ಕಂಡಿದೆ.

ಜನರನ್ನು ಭಾವನೆಗಳ ಮೂಲಕ ಕೆರಳಿಸಿ ತನ್ನ ಮತಬ್ಯಾಂಕ್ ಭದ್ರಪಡಿಸುವುದು ಬಿಜೆಪಿ ಹಿಂದಿನಿಂದಲೂ ನಡೆದುಕೊಂಡು ಬಂದ ರೀತಿ. ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯು ಅಧ್ಯಕ್ಷೀಯ ಚುನಾವಣಾ ವ್ಯವಸ್ಥೆಯಲ್ಲ. ಅದು ಸಂವಿಧಾನದ ಮೂಲ ಆಶಯಕ್ಕೂ ವಿರುದ್ಧವಾಗಿರುತ್ತದೆ. ಅದಾಗ್ಯೂ ಅದೇ ಮಾದರಿಯಲ್ಲಿ ಬಿಜೆಪಿ ಮೋದಿಯನ್ನು ತೋರಿಸಿ ಎರಡು ಬಾರಿ ಲೋಕಸಭೆಯಲ್ಲಿ ಬಹುಮತವನ್ನು ಪಡೆಯಿತು.

ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವಾಗಲೂ ರಾಷ್ಟ್ರೀಯ ಮಟ್ಟದ ವಿಚಾರಗಳ ಚರ್ಚೆಗಳ ಮೇಲೆಯೇ ನಡೆಯುತ್ತದೆ. ಮತ್ತು ವಿಧಾನಸಭಾ ಚುನಾವಣೆಗಳು ಆಯಾ ರಾಜ್ಯಗಳ ಆಗುಹೋಗುಗಳ ಚರ್ಚೆಗಳ ಆಧಾರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಏರುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿತು. ಅದರ ಬೆನ್ನಲ್ಲೇ ನಡೆದ ಕೆಲವು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷ ಬಹುಮತ ಪಡೆಯಿತು.

ಈ ಎಲ್ಲಾ ಲೆಕ್ಕಾಚಾರ ಒಂದೆಡೆಯಾದರೆ ಇನ್ನೊಂದೆಡೆ ರಾಜ್ಯ ಸರ್ಕಾರಗಳ ಹಕ್ಕನ್ನು ಕಸಿದು ಎಲ್ಲಾ ಅಧಿಕಾರವನ್ನು ಕೇಂದ್ರ ಸರ್ಕಾರದೆಡೆಗೆ ಕೆಂದ್ರೀಕರಿಸುವ ಒಂದು ಪ್ರಯತ್ನ ಮತ್ತು ಇದು ಕೇಂದ್ರದ ಆಳ್ವಿಕೆಯಲ್ಲಿ ಕಣ್ಣಿಟ್ಟಿರುವ ಬಿಜೆಪಿಗೆ ಅನಿವಾರ್ಯವೂ ಹೌದು. ಯಾಕೆಂದರೆ ಪಶ್ಚಿಮ ಬಂಗಾಳ, ದೆಹಲಿ, ಕೇರಳ, ತಮಿಳುನಾಡು ಇಂತಹ ಕೆಲವು ರಾಜ್ಯಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ತನ್ನ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಅಲ್ಲಿನ ರಾಜ್ಯ ಸರ್ಕಾರಗಳು ತಡೆಯನ್ನೊಡ್ಡುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಎನ್‌ಆರ್‌ಸಿ, ಸಿಎಎ, ರೈತ ಮಸೂದೆ ಇತ್ಯಾದಿಗಳನ್ನು ನೇರವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ಒಂದು ದೇಶ; ಒಂದು ಚುನಾವಣೆ ಎಂಬ ವರ್ಣರಂಜಿತ ಘೋಷಣೆಯಡಿ ರಾಜ್ಯ ಸರ್ಕಾರದ ಹಕ್ಕು ಕಸಿದು ದೇಶದ ಸಂವಿಧಾನದ ಮೂಲ ಆಶಯವಾದ ಒಕ್ಕೂಟ ವ್ಯವಸ್ಥೆಗೆ ಕೊಡಲಿಯೇಟು ನೀಡಿ ಬಿಜೆಪಿಯು ತನ್ನ ಅಜೆಂಡಾವನ್ನು ಕಾರ್ಯರೂಪಕ್ಕಿಳಿಸುವ ಒಂದು ದೊಡ್ಡ ದುರಾಲೋಚನೆ ಕೂಡ ಇದರಲ್ಲಿ ಅಡಗಿದೆ ಎಂಬುದನ್ನು ಇಲ್ಲಿ ನಾವು ಅರಿಯಬೇಕಿದೆ.

Leave a comment