– ಜಯಕುಮಾರ್ ಹಾದಿಗೆ
ಕೆಲವು ದಿನಗಳ ಹಿಂದೆ ಆಂದ್ರಪ್ರದೇಶದಲ್ಲಿ ದಲಿತ ಹುಡುಗನೊಬ್ಬ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ ಎಂಬ ಕಾರಣಕ್ಕಾಗಿ ಹುಡುಗನ ತಾಯಿಯನ್ನು ಅರೆ ಬೆತ್ತಲೆ ಗೊಳಿಸಿ ಹಗ್ಗದಿಂದ ಕೈಯನ್ನು ಹಿಂಬದಿಗೆ ಕಟ್ಟಿ ಮನಬಂದಂತೆ ಹೊಡೆದು ವಿಕೃತ ಆನಂದಿಸಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟಿರುವ ಘಟನೆಯ ಫೋಟೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಲಿತ ಹುಡುಗ ಸವರ್ಣೀಯ ಹುಡುಗಿಯನ್ನು ಪ್ರೀತಿಸಿದ್ದು ಬಹುಶಃ ಸಾಂಪ್ರದಾಯವಾದಿಗಳಿಗೆ ಜಾತಿ ಜಿಹಾದ್ (ಜಾತಿಯ ಹೋರಾಟ) ಆಗಿ ಕಂಡಿರಬಹುದು.
ಬಿಜೆಪಿ ಮತ್ತು ಸಂಘಪರಿವಾರದವರು ಲವ್ ಜಿಹಾದ್ ನಿಷೇಧ ಮಾಡಬೇಕು ಎಂದು ಗಂಟೆಗಟ್ಟಲೆ ಕೇಸರಿ ಬಣ್ಣದ ಭಾಷಣ ಮಾಡಿ ತಮ್ಮ ಅಭಿಮಾನಿಗಳಿಂದ ಒಂದಷ್ಟು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.
ಮತ್ತು ಇವತ್ತು ಈ ಲವ್ ಜಿಹಾದ್ ವಿರುದ್ಧ ಹೆಚ್ಚು ಮಾತನಾಡುವವರು ಶೂದ್ರರು ಮತ್ತು ದಲಿತರೇ ಆಗಿದ್ದಾರೆ,
ಅಸಲಿಗೆ ಈ ಲವ್ ಜಿಹಾದ್ ಮರ್ಮ ಬೇರೆಯೇ ಇದೆ.
ಮನುಸ್ಮೃತಿ ಕಾನೂನಿನಲ್ಲಿ ಆಯಾ ಜಾತಿಯ ಜನರು ಅವರವರ ಜಾತಿಯಲ್ಲಿ ಸಂಬಂಧ ಬೆಳೆಸಿ ಜಾತಿಯನ್ನು ಹಾಗೆ ಮುಂದುವರೆಸಿಕೊಂಡು ಹೋಗುತಿದ್ದರು.
ಆದರೆ ಸಂವಿಧಾನ ಜಾರಿಯಾದ ನಂತರ ಎಲ್ಲಾ ಜಾತಿಯ ಜನರು ತಮಗೆ ಇಷ್ಟ ಬಂದ ಜಾತಿಯ ಜನರನ್ನು ಪ್ರೀತಿಸಿ ಮದುವೆಯಾಗುವ ಅವಕಾಶ ಮಾಡಿಕೊಟ್ಟಿತ್ತು.
ಇದು ಸನಾತನ ಸಂಪ್ರದಾಯ ವಾದಿಗಳಿಗೆ ನುಂಗಲಾರದ ತುತ್ತಾಯಿತು.
ಇದನ್ನು ತಡೆಯಲೆಂದು ಸನಾತನ ಸಂಪ್ರದಾಯವಾದಿಗಳು ಇಟ್ಟುಕೊಂಡ ಹೆಸರೇ ಲವ್ ಜಿಹಾದ್.
ಜಿಹಾದ್ ಎಂದರೆ ಹೋರಾಟ ಎಂಬ ಅರ್ಥವನ್ನು ಕೊಡುತ್ತದೆ ಆದರೆ ಇದಕ್ಕೆ ಸನಾತನ ವಾದಿಗಳು ಬೇರೆ ಬೇರೆ ಅರ್ಥ ಕಲ್ಪಿಸಿ ಹಿಂದೂ ಯುವತಿಯರು ಮುಸ್ಲಿಂ ಹುಡುಗರನ್ನು ಮದುವೆಯಾಗಬಾರದು ಎಂದು ಮೊದಲಿಗೆ ಈ ಪ್ರಯೋಗವನ್ನು ಮುಸ್ಲಿಮರ ಮೇಲೆ ನಡೆಸಿ ನಂತರ ಇದನ್ನು ದಲಿತರ ಮತ್ತು ಶೂದ್ರ ಸಮುದಾಯದ ಮೇಲೆ ಏರಿಸುವ ಸಲುವಾಗಿ ಲವ್ ಜಿಹಾದ್ ನಿಷೇದ ಎಂಬ ಹೆಸರನ್ನು ಬಳಕೆ ಮಾಡಿಕೊಳ್ಳುತಿದ್ದಾರೆ.
(ಅಂದರೆ ಅವರವರ ಜಾತಿಯವರು ಅವರವರ ಜಾತಿಯವರನ್ನೆ ಮದುವೆಯಾಗಬೇಕು ಎಂದು)
ಕೇಸರಿ ಬಣ್ಣದ ಮಾತುಗಳನ್ನಾಡುವ ಬಿಜೆಪಿಯವರಿಗೆ ಈ ಘಟನೆಗಳು ಕಾಣಿಸುವುದಿಲ್ಲ .ಕಂಡರೂ ಅದನ್ನು ಸಮರ್ಥನೆ ಮಾಡಿಕೊಳ್ಳುವ ಒಂದು ತಂಡ ಕೂಡ ಅವರ ಜೊತೆಗಿದೆ.
ಉದಾಹರಣೆಗೆ ದಲಿತರು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಯಾರಾದರೂ ಅವರನ್ನು ತಡೆದು ಹೊಡೆದು ಕಳಿಸಿದರೆ ನಾಳೆ ಈ ಸಮರ್ಥನವಾದಿಗಳು ಹೇಳುವ ಮಾತು ಹೀಗಿರುತ್ತದೆ,
“ಅಲ್ಲ ನೀವ್ಯಾಕೆ ಅವರ ದೇವಸ್ಥಾನಕ್ಕೆ ಹೋಗುತ್ತಿರ ನೀವೇ ಒಂದು ದೇವಸ್ಥಾನ ಕಟ್ಟಿಕೊಳ್ಳಿ” ಅಂತ ಜೊತೆಗೆ ಅವರಿಗೊಂದು ದೇವಸ್ಥಾನ ಕಟ್ಟಿಕೊಡುವ ಮೂಲಕ ಅಸ್ಪೃಶ್ಯರನ್ನು ಸ್ಪೃಶ್ಯರೊಡನೆ ಸೇರದಂತೆ ನೋಡಿಕೊಳ್ಳುತ್ತಾರೆ,
ಇಲ್ಲಿ ದಲಿತರು ದೇವರನ್ನು ಬಿಡದಂತೆ ಮತ್ತು ಶೋಷಣೆಯಿಂದ ದೂರ ಉಳಿಯದಂತೆ ಜಾಣ್ಮೆಯಿಂದ ಅವರ ಕೆಲಸ ಮುಗಿಸುತಿದ್ದಾರೆ,
ಯಾಕೆಂದರೆ ಸನಾತನವಾದಿಗಳಿಗೆ ನಿತ್ಯ ನಿರಂತರವಾಗಿ ಶೋಷಣೆ ಮಾಡಲು ಒಂದು ಸಮುದಾಯ ಬೇಕು.
ಧರ್ಮದ ಹೆಸರಿನಲ್ಲಿ ಜನರನ್ನು ಒಂದು ಮಾಡುತ್ತಿರುವ ಸಂಘಪರಿವಾರದವರು ದಲಿತರ ಮೇಲೆ ಶೋಷಣೆ ನಡೆದಾಗ ಮಾತ್ರ ಜಾತಿ ನೋಡಿ ಸುಮ್ಮನಾಗುತ್ತಾರೆ.
ಅದೇ ಜಾಗದಲ್ಲಿ ಮುಸ್ಲಿಂ ಹೆಸರು ಸಿಕ್ಕಿದರೆ ಮಾತ್ರ ಆ ದಲಿತ ಹಿಂದೂವಾಗುತ್ತಾನೆ.
ಈ ಚಿತ್ರದಲ್ಲಿ ಸವರ್ಣೀಯ ಹಿಂದೂವನ್ನು ಅವರ್ಣೀಯ ಪ್ರೀತಿಸಿದ ಎಂದ ಮಾತ್ರಕ್ಕೆ ಇಷ್ಟು ಕ್ರೌರ್ಯ ನಡೆಸುವುದಾದರೂ ಏನಿತ್ತು..??
ಹಾಗಾದರೆ ದಲಿತರು ಹಿಂದೂಗಳಲ್ಲವಾ..??
