ಅಸ್ತಿತ್ವದಲ್ಲಿ ಇಲ್ಲದ ಲವ್ ಜಿಹಾದ್ ನ ಹಿಂದೆ ಬಿದ್ದಿರುವುದ್ಯಾಕೆ ಸರ್ಕಾರಗಳು?

– ಉಮರ್ ಫಾರೂಕ್ ಬಾಗಲಕೋಟೆ

ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತಾಡಿದ ಸಚಿವ ಆರ್ ಅಶೋಕ್ ‘ಲವ್ ಜಿಹಾದ್’ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಹೇಳಿದ್ದಾರೆ! ಈ ಮೂಲಕ ತಮ್ಮ ಸಂಗಾತಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ನಾಗರಿಕರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಬಿಜೆಪಿ ಹೊರಟಿದೆ.ಅಸಲಿಗೆ ಇವತ್ತಿಗೂ ಭಾರತದ ಮುಸ್ಲಿಮೇತರ ಬಹುಜನರಲ್ಲಿ ಬ್ರಾಹ್ಮಣರು ಸೃಷ್ಟಿಸಿದ ಜಾತಿಯ ಪಿಡುಗು, ಶ್ರೇಷ್ಠತೆಯ ವ್ಯಸನ ಆಳವಾಗಿ ಬೇರು ಬಿಟ್ಟಿದೆ. ಅದೆಷ್ಟರ ಮಟ್ಟಿಗೆ ಎಂದರೆ ಜಾತಿಯಿಲ್ಲದೇ ಬದುಕಿಲ್ಲ. ಜಾತಿಯೇ ಎಲ್ಲಾ ಎನ್ನುವಷ್ಟರ ಮಟ್ಟಿಗೆ.

ಅದಕ್ಕಾಗಿಯೇ ಅಂತರ್ಜಾತಿ ವಿವಾಹಗಳು ಆಗುತ್ತಿಲ್ಲ. ಅಲ್ಲಲ್ಲಿ ಆದರೂ ಪ್ರೀತಿಸಿ ಮದ್ವೆಯಾದ ಆ ಅಂತರ್ಜಾತಿ ಪ್ರೇಮಿಗಳನ್ನು ಕೊಲ್ಲಲಾಗುತ್ತದೆ. ಇಲ್ಲದಿದ್ರೆ ಮದ್ವೆಯಾಗುವ ಮುಂಚೆಯೇ ಆ ಪ್ರೀತಿಯನ್ನು ಹೊಸಕಿ ಹಾಕಲಾಗುತ್ತದೆ. ಕಡೆಗೆ ಪ್ರೀತಿಸಿದರು, ಮದುವೆಯೂ ಮಾಡಿಕೊಂಡರೂ, ಇನ್ನೇನೂ ನಮ್ಮ ಮರ್ಯಾದೆ ಬೀದಿಪಾಲಾಯಿತೆಂದು ಹೆತ್ತವರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ.

ಇಂತಹ ಘಟನೆಗಳನ್ನು ದಿನಕ್ಕೆ ಒಂದೆರಡನ್ನಾದರೂ ನಾವೂ ಕಾಣಬಹುದು. ಹಿಂದೂಗಳಲ್ಲಿರುವ ಈ ಅನಿಷ್ಟತೆಯನ್ನು ಮರೆಮಾಚಲೆಂದೇ ಬ್ರಾಹ್ಮಣರ ನೇತೃತ್ವದ ಸಂಘಪರಿವಾರ ಮತ್ತು ಅದರ ಅಂಗಪಕ್ಷವಾದ ಬಿಜೆಪಿ ಆಗಾಗ ಲವ್’ಗೂ ಜಿಹಾದ್’ಗೂ ಸಂಬಂಧವಿಲ್ಲದ “ಲವ್ ಜಿಹಾದ್” ಎಂಬ ಕಪೋಲಕಲ್ಪಿತ ಭೂತವನ್ನು ತೋರಿಸಿ ಅಂತರ್ಜಾತಿ ವಿವಾಹಗಳಿಂದಾಗುವ ಕಲಹಗಳು ಮತ್ತು ಮರ್ಯಾದಾ ಹತ್ಯೆಗಳನ್ನು ಮರೆಸುವ ಪ್ರಯತ್ನ ಮಾಡುತ್ತಿದೆ.

ಅಲ್ಲಲ್ಲಿ ಬೆರಳಣಿಕೆಯಷ್ಟು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿದ್ದು ಸತ್ಯ. ಅವರಲ್ಲಿ ಹಲವರು ಸುಖವಾಗಿರುವುದೂ ಸತ್ಯ. ಇನ್ನು ಕೆಲವರ ಸಂಸಾರದಲ್ಲಿ ಮದುವೆಯಾದ ನಂತರ ಕಲಹಗಳು ಬಂದಿರುವುದು ತೀರಾ ಕಡಿಮೆ. ಧಾರ್ಮಿಕ ದಾರಿ ತಪ್ಪಿ ಅಲ್ಲಿ ಸ್ವಲ್ಪ ಇಲ್ಲಿ ಅಲ್ಪ ಸಂಭವಿಸಿರಬಹುದು.ಅದರಲ್ಲಿ ಕೆಲವೊಂದು ಕಲಹಗಳನ್ನೇ ಮುನ್ನೆಲೆಗೆ ತಂದು ಲವ್ ಜಿಹಾದ್ ಎನ್ನುವುದು ಸೂಕ್ತವೇ? ಕೇವಲ ಹತ್ತಾರು ಲವ್ ಜಿಹಾದ್ ಪ್ರಕರಣಗಳಿಂದ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿ ಇದು ಇಸ್ಲಾಂ ರಾಷ್ಟ್ರವಾಗುತ್ತದೆಯೇ? ಅಥವಾ ಬೇರೆ ಯಾವ ದೇಶಗಳಲ್ಲೂ ಇಲ್ಲದ ಲವ್ ಜಿಹಾದ್ ಎಂಬ ಭೂತ ನಮ್ಮ ದೇಶದಲ್ಲಿ ಮಾತ್ರ ಸೃಷ್ಟಿಯಾಗಿದ್ದೇಗೆ.? ದೇಶದ ಆರ್ಥಿಕತೆ, ಕೊರೊನಾ ನಿಯಂತ್ರಿಸುವಲ್ಲಿ ವಿಫಲತೆ, ಬಡತನ ನಿವಾರಣೆ, ಯುವಕರಿಗೆ ಉದ್ಯೋಗ ಮುಂತಾದ ಅಭಿವೃದ್ಧಿ ವಿಷಯಗಳಲ್ಲಿ ದಯನೀಯ ವಿಫಲವಾಗಿ ಬಾಸುಂಡೆ ಬರೋ ಹಾಗೆ ಬಾರಿಸಿಕೊಂಡಿರುವ ಬಿಜೆಪಿಯವರು ಧರ್ಮಾಧಾರಿತ ರಾಜಕಾರಣ ಮಾಡಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ!

ಅಷ್ಟೇ ಪ್ರಮಾಣದಲ್ಲಿ ಹಿಂದೂ ಯುವಕರು ಮುಸ್ಲಿಮ್ ಯುವತಿಯರನ್ನು ಮದುವೆಯಾಗಿದ್ದಾರೆ. ಇದಕ್ಕೆ ನಾವೂ ಏನೆನ್ನಬೇಕು? ಕಾನೂನನ್ನು ತಮಗೆ ಇಷ್ಟ ಬಂದ ಹಾಗೆ ಯಾರಿಗೂ ತಿರುಚಲು ಸಾಧ್ಯವಿಲ್ಲ.ಇದಕ್ಕೆ ಇದರದ್ದೇ ಅದ ಮೌಲ್ಯ ಇದೆ ಗೌರವ ಇದೆ.

ದೇಶದಲ್ಲಿ ಯಾವತ್ತೂ ಅಂತರ್ಜಾತಿ ವಿವಾಹಗಳಿಗೆ ಅಡೆತಡೆ ಉಂಟಾಗುವುದಿಲ್ಲವೋ, ಮರ್ಯಾದಾ ಹತ್ಯೆಗಳು ನಡೆಯುದಿಲ್ಲವೋ, ಅವತ್ತೇ ದೇಶದಿಂದ ಇಲ್ಲದ ತಥಾಕಥಿತ ಲವ್ ಜಿಹಾದ್ ಪಲಾಯನವಾಗಿರುತ್ತದೆ. ಆದ್ದರಿಂದ ಮೊದಲು ಜಾತಿ ಪದ್ಧತಿಗಳನ್ನು ಇಲ್ಲವಾಗಿಸುವತ್ತ ಗಮನಹರಿಸಿ. ಸುಖಾಸುಮ್ಮನೆ ಮುಸ್ಲಿಮರಲ್ಲದ ತಪ್ಪಿಗೆ ಮುಸ್ಲಿಮರನ್ನು ಗುರಿಯಾಗಿಸುವುದನ್ನು ನಿಲ್ಲಿಸಿ.

Leave a comment