12 ನವೆಂಬರ್ 1896 ರಂದು ಮುಂಬಯಿಯಲ್ಲಿ ಜನಿಸಿದ ಸಲೀಂ 9 ಜನ ಒಡಹುಟ್ಟಿದವರಲ್ಲಿ ಕಿರಿಯರು. ಹುಟ್ಟಿ 1 ವರ್ಷದಲ್ಲೆ ತಂದೆ ಹಾಗು 3 ವರ್ಷದಲ್ಲೆ ತಾಯಿ ಅಸುನೀಗಿದ್ದರಿಂದ ಬಾಲ್ಯ ಇವರ ಪಾಲಿಗೆ ಕಷ್ಟದಾಯಕವಾಗಿತ್ತು. ನಂತರ ಚಿಕ್ಕಪ್ಪನ ಜೊತೆ ಇವರ ಜೀವನ ಸಾಗುತ್ತದೆ.
10 ವರ್ಷ ವಯಸ್ಸಿನಲ್ಲಿ ಬೇಟೆಗಾರರ ಬಂದೂಕಿಗೆ ಬಲಿಯಾದ ವಿಶೇಷ ತಳಿಯ ಪಾರಿವಾಳದ ಬಗ್ಗೆ ಹುಟ್ಟಿದ ಆಸಕ್ತಿ ಇವರು ಪಕ್ಷಿ ವಿಜ್ಞಾನಿಯಾಗುವುದಕ್ಕೆ ಪ್ರೇರಣೆಯಾಯಿತು.ನಂತರ ಅದಿರು ಮತ್ತು ಟಿಂಬರ್ ವ್ವವಹಾರದಲ್ಲಿ ತೊಡಗಿಕೊಂಡಿದ್ದ ಸಹೋದರನ ಜೊತೆ ಬರ್ಮಾ ಹೋದ ಸಲೀಂ ಅಲ್ಲಿ ಪಕ್ಷಿಗಳ ಬಗ್ಗೆ ಅಧ್ಯಯನ ಆರಂಭಿಸಿದರು.ಮುಂಬಯಿಗೆ ಹಿಂತಿರುಗಿದೊಡನೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಜೂಲಾಜಿಯಲ್ಲಿ ಪದವಿ ಪೂರ್ಣಗೊಳಿಸಿದರು.1918 ರಲ್ಲೆ ತೆಹ್ಮಿನಾ ಜೊತೆ ವಿವಾಹವಾಗಿತ್ತು.
ಮುಂಬಯಿಯ ಮ್ಯೂಸಿಯಂ ನಲ್ಲಿ ಗೈಡ್ ಆಗಿ ಕೆಲಸಕ್ಕೆ ಸೇರಿದ ಸಲೀಂ ಅಲಿ ಪ್ರವಾಸಿಗರಿಗೆ ಪಕ್ಷಿಗಳ ಬಗ್ಗೆ ವಿವರಿಸುತ್ತ ಅಧ್ಯಯನ ಮುಂದುವರಿಸಿದರು. ಈ ಸಂದರ್ಭದಲ್ಲಿ ಜರ್ಮನಿಗೆ ಭೆಟಿ ನೀಡಿ ಪ್ರಸಿದ್ಧ ಪಕ್ಷಿ ವಿಜ್ಞಾನಿ ಡಾ.ಇರ್ವಿನ್ ಸ್ಟ್ರಾಸ್ ಮ್ಯಾನ್ ಭೇಟಿಯಾದರು. 1930 ರಲ್ಲಿ ಭಾರತಕ್ಕೆ ಹಿಂತಿರುಗಿದಾಗ ಇವರ ಕೆಲಸವನ್ನು ಆರ್ಥಿಕ ಕಾರಣಗಳಿಗಾಗಿ ತೆಗೆದು ಹಾಕಲಾಗಿತ್ತು.ಮತ್ತೆ ಅದೇ ಮ್ಯೂಸಿಯಂ ನಲ್ಲಿ ಗುಮಾಸ್ತ ರಾಗಿ ಸೇರಿದ ಸಲೀಂರಿಗೆ ಸಂಶೋಧನೆ ಮುಂದುವರಿಸಲು ಅನುಕೂಲವಾಯಿತು.
1930ರಲ್ಲಿ ಪರಿಸರ ಮತ್ತು ಗೀಜಗ ಹಕ್ಕಿಯ ಬಗ್ಗೆ ಪ್ರಕಟಿಸಿದ ಸಂಶೋಧನಾ ಗ್ರಂಥ ಅಪಾರ ಹೆಸರನ್ನು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರಿಗೊಂದು ಸ್ಥಾನ ತಂದು ಕೊಟ್ಟಿತು. ದೇಶವಿಡೀ ತಿರುಗಿದ ಸಲೀಂ ಅಲಿ ಪಕ್ಷಿ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದರು. ಪಕ್ಷಿಗಳ ಬಗ್ಗೆ ಅಧ್ಯಯನ ಮಾತ್ರವಲ್ಲದೆ ಪರಿಸರದ ಉಳಿವಿಗಾಗಿಯು ಅವರು ಶ್ರಮಿಸಿದರು.ಭರತಪುರ ಪಕ್ಷಿದಾಮ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ತಮಿಳುನಾಡಿನ ಕೋತಗಿರಿ ಮತ್ತು ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದಲ್ಲಿ ಕೆಲ ಕಾಲ ವಾಸವಿದ್ದು ಸಂಶೋಧನೆ ನಡೆಸಿದ್ದರು. ಹೈದರಾಬಾದ್-ಕೊಚ್ಚಿ- ತಿರುವಾಂಕೂರ್-ಗ್ವಾಲಿಯರ್-ಇಂದೋರ್- ಭೂಪಾಲ್ ಗಳಲ್ಲಿ ಅಲ್ಲಿನ ಸರ್ಕಾರಗಳ ನೆರವಿನೊಂದಿಗೆ ಪಕ್ಷಿಗಳ ಅಧ್ಯಯನ ನಡೆಸಿದರು.
“The Books Of Indian Birds” ಅವರ ಪ್ರಸಿದ್ಧ ಪುಸ್ತಕ. ಇನ್ನೊಬ್ಬ ವಿಶ್ವ ಪ್ರಸಿದ್ಧ ಪಕ್ಷಿ ಶಾಸ್ತ್ರಜ್ಞ ಎಸ್.ದಿಲ್ಲೊನ್ ರಿಪ್ಲೆ ಜೊತೆ ಸೇರಿ 10 ಸರಣಿಯ “Handbook Of Birds Of India And Pakistan” ಮತ್ತು 1967 ರಲ್ಲಿ “Command Bird’s”, 1985ರಲ್ಲಿ “The Fall Of Sparrow” ಇವರು ಬರೆದ ಪ್ರಸಿದ್ಧ ಗ್ರಂಥಗಳು.
20 ಜೂನ್ 1987 ರಂದು ಅಗಲಿದ ,ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ಪಕ್ಷಿಗಳ ಸಂಶೋಧನೆಯಲ್ಲಿ ಕಳೆದ ಸಲೀಂ ಅಲಿಯವರನ್ನು ಪ್ರಶಸ್ತಿ ಗಳು ಅರಸಿಕೊಂಡು ಬಂದವು.
1953ರಲ್ಲಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ನೀಡಿದ “ಜಯ್ ಗೋವಿಂದ ಲಾ ಗೋಲ್ಡ್ ಮೆಡಲ್”,1970 ರಲ್ಲಿ ಇಂಡಿಯನ್ ನ್ಯಾಷನಲ್ ಸಯನ್ಸ್ ಅಕಾಡೆಮಿ ನೀಡಿದ “ಸುಂದರ್ ಲಾಲ್ ಹೋರಾ ಮೆಮೋರಿಯಲ್ ಮೆಡಲ್” ಇವರಿಗೆ ಲಭಿಸಿವೆ.
ಆಲಿಗರ್ ಮುಸ್ಲಿಂ ಯುನಿವರ್ಸಿಟಿ 1958ರಲ್ಲಿ,ದೆಹಲಿ ಯುನಿವರ್ಸಿಟಿ 1973ರಲ್ಲಿ,ಆಂಧ್ರ ಯುನಿವರ್ಸಿಟಿ 1978ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು.
ಸಲೀಂ ಅಲಿ 1967 ರಲ್ಲಿ ಬ್ರಿಟಿಷ್ ಪಕ್ಷಿ ವಿಜ್ಞಾನಿಗಳ ಸಂಘ ನೀಡಿದ ಚಿನ್ನದ ಪದಕ ಪಡೆದ ಪ್ರಥಮ ವಿದೇಶಿಗರೆನಿಸಿದರು.1973ರಲ್ಲಿ ಯುಎಸ್ಎಸ್ಆರ್ ಮೆಡಿಕಲ್ ಸಯನ್ಸ್ ಅಕಾಡೆಮಿ ನೀಡಿದ ಪಾವೋಸ್ಕಿ ಸೆಂಟಿನರಿ ಮೆಮೋರಿಯಲ್ ಮೆಡಲ್ ,1969ರಲ್ಲಿ ವಿಶ್ವ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಗಳ ಸಂರಕ್ಷಣಾ ಒಕ್ಕೂಟದ ಜಾನ್ ಸಿ.ಫಿಲಿಪ್ ಮೆಮೋರಿಯಲ್ ಮೆಡಲ್ ಇವರ ಸಾಧನೆಗೆ ಸಂದಿತು.
ವನ್ಯಜೀವಿ ಸಂರಕ್ಷಣೆ ಗಾಗಿ ಇವರಿಗೆ ಲಭಿಸಿದ ಜೆ.ಫೌಲ್ ಗೆಟ್ಟಿ ಪ್ರಶಸ್ತಿಯ ನಗದು ರೂ 5 ಲಕ್ಷವನ್ನು ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ಸಂಶೋಧನೆಗಾಗಿ ನೀಡಿದರು. ಇವರ ಮರಣಾನಂತರ 1990ರಲ್ಲಿ ಭಾರತ ಸರ್ಕಾರ ಕೊಯಮತ್ತೂರಿನಲ್ಲಿ “ಸಲೀಂ ಅಲಿ ಆರ್ನಿತಾಲಜಿ ಮತ್ತು ನ್ಯಾಚುರಲ್ ಸೊಸೈಟಿ” ಯನ್ನು ಪಾಂಡಿಚೇರಿ ವಿಶ್ವವಿದ್ಯಾಲಯ “ಸಲೀಂ ಅಲಿ ಸ್ಕೂಲ್ ಆಫ್ ಇಕಾಲಜಿ ಮತ್ತು ನೇಚರ್ ಸಯನ್ಸ್” ನ್ನು ಸ್ಥಾಪಿಸಿತು.ಗೋವಾ ಮತ್ತು ಕೇರಳ ಸರ್ಕಾರ ಸಲೀಂ ಅಲಿ ಹೆಸರಿನಲ್ಲಿ ಪಕ್ಷಿಧಾಮ ಗಳನ್ನು ಆರಂಭಿಸಿದವು.
1958ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಭೂಷಣ ಮತ್ತು 1976ರಲ್ಲಿ ಪದ್ಮವಿಭೂಷಣ ಸಮ್ಮಾನಕ್ಕೆ ಪಾತ್ರರಾದ ಡಾ.ಸಲೀಂ ಅಲಿ ನಡೆಸಿದ ಸಂಶೋಧನೆ-ಕೆಲಸಗಳು ಪಕ್ಷಿ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಯನ-ಸಂಶೋಧನೆಗೆ ಸ್ಫೂರ್ತಿ ಯನ್ನು ನೀಡಿದವು.
– ತೇಜಸ್ವಿ ಕಡಪಳ ಅವರ ಲೇಖನದಿಂದ ಸಂಗ್ರಹ ಬರಹ