ಹ್ಯಾಪಿ ಬರ್ತ್ ಡೇ ಟೈಗರ್.

ಬರಹ : ರಾ ಚಿಂತನ್(ಯುವ ಪತ್ರಕರ್ತರು)

ಅವತ್ತು ಬ್ರಿಟೀಷರು ಬಿತ್ತಿಹೋದ ಅಸಹಿಷ್ಣುತೆಯ ಬೀಜ ಇವತ್ತು ಹೆಮ್ಮರವಾಗಿ ಬೆಳೆದಿದೆ. ಯಕಃಶ್ಚಿತ್ ಸರಿ ತಪ್ಪನ್ನು ವಿವೇಚಿಸುವ ವ್ಯವಧಾನ ನಮಗಿಲ್ಲ. ಹೀಗಾಗಿ ಹೆಮ್ಮೆಪಡಬೇಕಾದ ಭಾರತದ ಭವ್ಯ ಇತಿಹಾಸ ಪ್ರಶ್ನೆಗೀಡಾಗುತ್ತಿದೆ. ಬಿಜೆಪಿ ಮೆಂಟಲಿಸಂಗೆ ತಕ್ಕಂತೆ ಸೃಷ್ಟಿಯಾಗಿರುವ ಹಿಂದೂಯಿಸಂ ದೃಷ್ಟಿಯಲ್ಲಿ ಟಿಪ್ಪು ಮತಾಂಧ, ಕ್ರೂರಿ ಎಂದೆಲ್ಲಾ ಹೇಳಿಸಿಕೊಳ್ಳುವಂತಾಗಿದೆ. ಶೃಂಗೇರಿ ಮಠವನ್ನು ಲೂಟಿ ಹೊಡೆದ ಮರಾಠ ಪೇಶ್ವೆಗಳನ್ನು ಹಿಂದುತ್ವದ ನಾಯಕನೆಂದು ಕರೆಯುವವರು, ಅದೇ ಮಠವನ್ನು ರಕ್ಷಿಸಿದ ಟಿಪ್ಪುವನ್ನು ಮತಾಂಧ ಎಂದು ಕರೆಯುತ್ತಿದ್ದಾರೆ. ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕಷ್ಟೆ ಟಾರ್ಗೆಟ್ ಆಗುತ್ತಿದ್ದಾನೆ.

ಟಿಪ್ಪು ವಿಚಾರದಲ್ಲಿ ಬಿಜೆಪಿ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಅವರ ಪ್ರತಿರೋಧದಲ್ಲೇ ಹಲವು ನ್ಯೂನ್ಯತೆಗಳಿವೆ. ತಮಾಷೆಗಳು ಕಾಣಿಸುತ್ತಿವೆ. ಟಿಪ್ಪು ಜಯಂತಿಯನ್ನು ಆಚರಿಸಲು ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಹಾಕಬಾರದೆಂದು ಪ್ರೋಟೋಕಾಲ್ ಕಡೆಗಣಿಸಿರುವ ಬಿಜೆಪಿ ನಾಯಕರು, ಬ್ರಿಟೀಷರ ಕಾಲು ನೆಕ್ಕುತ್ತಿದ್ದವರು ತಿರುಚಿದ ಇತಿಹಾಸದ ಪುಟಗಳನ್ನು ಹಿಡಿದು ಘರ್ಜಿಸುತ್ತಿದ್ದಾರೆ. ಟಿಪ್ಪು ಬಗ್ಗೆ ಇರುವ ಸಾಕ್ಷ್ಯಾಧಾರದ ಹಲವು ಇತಿಹಾಸಗಳ ಪುಸ್ತಕಗಳನ್ನು ಓದಿ, ಅರಿತುಕೊಳ್ಳುವ ಉಸಾಬರಿ ಇವರಿಗೆ ಬೇಕಿಲ್ಲ. ಟಿಪ್ಪು ಮತಾಂಧನೋ, ಪರಾಕ್ರಮಿಯೋ.. ಇವರಿಗೆ ಬೇಕಿರೋದು ಮತಗಳಷ್ಟೆ. ಟಿಪ್ಪು ಜಯಂತಿಯನ್ನು ಆಚರಿಸಿ ಮುಸಲ್ಮಾನರ ಮತಗಳನ್ನು ಆಕರ್ಷಿಸಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ನಲ್ಲಿ ಹೇಗಿದೆಯೋ, ವಿರೋಧಿಸುವುದರಿಂದ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಸೆಳೆಯಬಹುದೆಂಬ ದುರುದ್ದೇಶ ಇವರಿಗೂ ಇದೆ.

ಕೆಜೆಪಿ ಅಂತ ಪಕ್ಷವನ್ನು ಕಟ್ಟಿದ್ದ ಯಡಿಯೂರಪ್ಪ, ಟಿಪ್ಪು ಸಮಾಧಿಗೆ ನಮಸ್ಕರಿಸಿ, ಟಿಪ್ಪುವಿನ ಟೋಪಿ ಧರಿಸಿ, ಖಡ್ಗ ಹಿಡಿದು ಪೋಸು ಕೊಟ್ಟಿದ್ದನ್ನು ಯಡಿಯೂರಪ್ಪ ಮಾತ್ರವಲ್ಲ, ಶೋಭ ಕರಂದ್ಲಾಜೆಯವರು ನೆನಪಿಸಿಕೊಳ್ಳಬೇಕಿದೆ. ( ಟಿಪ್ಪುವಿಗೆ ಸಂಬಂಧಿಸಿದ ಪುಸ್ತಕವೊಂದಕ್ಕೆ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ ಎಂಬ ಸುದ್ದಿಯೂ ಇದೆ. ಖಾತ್ರಿಯಿಲ್ಲ). ಈಗ ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಮತಾಂಧ, ಕ್ರೂರಿ, ಹಿಂದೂಗಳ ಹಂತಕ, ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದಾನೆ ಅಂತ, ಕಾಲ್ಪನಿಕ ಸ್ಕ್ರಿಪ್ಟ್ಗೆ ವಾಯ್ಸ್ಓವರ್ ಕೊಡುತ್ತಿರುವುದನ್ನು ನಂಬಲು ಜನರು ಮೂರ್ಖರಲ್ಲ. ಮೂರ್ಖ ಜನರಿಗೆ ಈ ಮಾತು ಅನ್ವಯಿಸಲ್ಲ.

ಬಿಜೆಪಿಯ ಇಂತಹ ತಮಾಷೆಗಳ ಜೊತೆಗೆ ಮುಜುಗರ ಅನುಭವಿಸಬೇಕಾದ ಸಂದರ್ಭವನ್ನು ಸೃಷ್ಟಿಸಿದ್ದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್. ಇತಿಹಾಸದ ಬಗ್ಗೆ ಅಗಾಧ ಪಾಂಡಿತ್ಯವಿರುವ ಕೋವಿಂದ್, ಬಿಜೆಪಿ ಬೆಂಬಲಿತ ರಾಷ್ಟ್ರಪತಿ. ಆದರೆ ಕರ್ನಾಟಕ ಸರ್ಕಾರದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅಪ್ರತಿಮ ವೀರ, ಫಿರಂಗಿ ಕಂಡು ಹಿಡಿದವನು ಎಂದು ಸತ್ಯ ನುಡಿದಿದ್ದು ಬಿಜೆಪಿಗೆ ಸಹ್ಯವಾಗಿಲ್ಲ. ಹಾಗಂತ ರಾಷ್ಟ್ರಪತಿಗೆ ಎದುರಾಡುವುದುಂಟೆ..?. ಕೆಲವರು, ಟಿಪ್ಪು ಅಪ್ರತಿಮ ವೀರ ಆಗಿದಿದ್ರೇ, ಫಿರಂಗಿ ಕಂಡು ಹಿಡಿದವನಾದರೇ ಮೂರು, ನಾಲ್ಕನೇ ಆಂಗ್ಲೋ ಯುದ್ಧದಲ್ಲಿ ಬ್ರಿಟೀಷರ ವಿರುದ್ಧ ಯಾಕೆ ಸೋಲುತ್ತಿದ್ದ ಎಂದು ಟ್ವೀಟ್ನಲ್ಲಿ ರಾಷ್ಟ್ರಪತಿಯವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯನ್ನು ಅವರು ಕೇಳಬೇಕಿದ್ದು ಟಿಪ್ಪು ಅಂತ್ಯಕ್ಕೆ ಷರಾ ಬರೆದ ದಿವಾನ್ ಪೂಣಯ್ಯನನ್ನು. ಅವನು ಬದುಕಿಲ್ಲ. ಇವರೂ ಬದುಕಿದ್ದಂತಿಲ್ಲ. ಇದರ ಜೊತೆಗೆ ರಾಷ್ಟ್ರಪತಿಗೆ ಭಾಷಣ ಬರೆದುಕೊಟ್ಟಿದ್ದು ಕಾಂಗ್ರೆಸ್ ಎಂದಿದೆ ಬಿಜೆಪಿ. ಆರೋಪಗಳಿಗೂ ಸ್ವಲ್ಪ ಮಾನ ಮರ್ಯಾದೆ ಬೇಡ್ವೆ..?

ಹಲವು ದಶಕಗಳಿಂದ ಟಿಪ್ಪು ಸುಲ್ತಾನ್ನನ್ನು ಮೈಸೂರಿನ ಹುಲಿ, ಬ್ರಿಟೀಷರ ವಿರುದ್ದ ಹೋರಾಡಿದ ಕಲಿಯೆಂದೇ ಓದಿಕೊಂಡು ಬಂದಿದ್ದೇವೆ. ಅವತ್ಯಾವತ್ತು ಟಿಪ್ಪು ಸುಲ್ತಾನ್ನನ್ನು ಮತಾಂಧ ಎಂದು ನೋಡಲಿಲ್ಲ. ಪಠ್ಯ ಪುಸ್ತಕದಿಂದಲೂ ಅವನ ಹೆಸರನ್ನು ಅಳಿಸಿ ಹಾಕಲಿಲ್ಲ. ಆದರೆ ಯಾವತ್ತು ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾಯ್ತೋ ಟಿಪ್ಪು ಮತಾಂಧ, ದೇವಸ್ತಾನವನ್ನು ಮಸೀದಿ ಮಾಡಿದ. ಮತಾಂತರ ನಡೆಸಿದ. ಕೊಡವರನ್ನ ಕೊಂದ ಎಂದೆಲ್ಲ ಬಡಬಡಿಸುತ್ತಿದ್ದೇವೆ. ಕೆಲವರು ಪ್ರತಿಭಟಿಸುತ್ತಿದ್ದಾರೆ. ಹೊಡೆದಾಟ ಶುರುವಾಗಿದೆ. ಹೆಣಬಿದ್ದಿದೆ.

ಟಿಪ್ಪು ಹೋದಲೆಲ್ಲಾ ಮಠ-ಮಂದಿರಗಳನ್ನು ಧ್ವಂಸಗೊಳಿಸಿ ಆ ಜಾಗಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದಲ್ಲದೆ, ಆ ಎಲ್ಲಾ ಊರುಗಳಲ್ಲಿ ಹಿಂದೂಗಳನ್ನು ಕಗ್ಗೊಲೆ ಮಾಡಿದ್ದ. ಕೊಡಗಿನ ಮೇಲೆ ಆಕ್ರಮಣವನ್ನು ನಡೆಸಿ ಅತ್ಯಾಚಾರ, ಕೊಲೆ, ಸುಲಿಗೆಗಳನ್ನು ನಡೆಸಿದ್ದಲ್ಲದೆ `ದೇವ ಪರಂಬು’ ಎನ್ನುವ ಜಾಗದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಹಿಂದೂಗಳನ್ನು ಕೊಲೆಗೈದು, ಸಾವಿರಾರು ಹಿಂದೂಗಳನ್ನು ಒತ್ತೆಯಾಳಾಗಿ ಹಿಡಿದು ಅವರನ್ನು ಶ್ರೀರಂಗಪಟ್ಟಣದಲ್ಲಿ ಬಲವಂತವಾಗಿ ಇಸ್ಲಾಮಿಗೆ ಮತಾಂತರಗೊಳಿಸಿದ್ದ. ಇದು ಆರೋಪ. ತಿರುಚಿದ ಐತಿಹ್ಯ.

ಆದರೆ ಹಲವು ಸಂಶೋಧನೆ, ನೀಟಾದ ಇತಿಹಾಸ ಹೇಳುವುದೇ ಬೇರೆ..?. ಟಿಪ್ಪು ಹುತಾತ್ಮನಾಗಿ ಎರಡು ಶತಮಾನಗಳೇ ಕಳೆದಿವೆ. ಅವನ ಬಗ್ಗೆ ಇತಿಹಾಸವನ್ನು ಮುಂದಿಟ್ಟುಕೊಂಡು ಹೇಳುವುದಾದರೇ, ಉಪಖಂಡ ಕಂಡ ಅತ್ಯಂತ ಜನಪರ ಮತ್ತು ಜಾತ್ಯತೀತ ಮನೋಭಾವದ ರಾಜ ಟಿಪ್ಪು. ಅವನ ಮೇಲೆ ಕೆಸರೆರಚುವ ಪ್ರವೃತ್ತಿ ಇದು ಮೊದಲೇನಲ್ಲ.

ಭಾರತದಲ್ಲಿ ತಮ್ಮ ಆಡಳಿತವನ್ನು ವಿಸ್ತರಿಸಲು ಬ್ರಿಟೀಷರಿಗೆ, ಟಿಪ್ಪು ಸುಲ್ತಾನ್ ಬಲವಾದ ತಡೆಯಾಗಿದ್ದ. ಟಿಪ್ಪುವಿನಂತಹ ಸಮರ್ಥ ರಾಜನನ್ನು ಕೊಲ್ಲುವುದು ಅಥವಾ ಸೋಲಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಹಾಗಾಗಿಯೇ ಟಿಪ್ಪು ಜೀವಂತವಿರುವಾಗ ಟಿಪ್ಪುವಿನ ಬಗ್ಗೆ ಜನರಲ್ಲಿ ಕೆಟ್ಟ ಭಾವನೆಗಳುಂಟಾಗುವಂತಹ ಎಲ್ಲಾ ವಿಧದ ಅಪಪ್ರಚಾರವನ್ನು ಬ್ರಿಟೀಷರು ವ್ಯವಸ್ಥಿತವಾಗಿ ನಡೆಸಿದ್ದರು. ಟಿಪ್ಪುವಿನ ಕಾಲಾನಂತರವೂ ಅವರು ಟಿಪ್ಪುವನ್ನು ಕೆಟ್ಟದಾಗಿ ಚಿತ್ರಿಸುತ್ತಲೇ ಇದ್ದರು. ಮುಖ್ಯವಾಗಿ ಅವರು ಟಿಪ್ಪುವನ್ನು ಮತಾಂಧನೆಂದೂ, ಹಿಂದೂ ವಿರೋಧಿಯೆಂದೂ, ಹಿಂದೂಗಳನ್ನು ಬಲವಂತದಿಂದ ಇಸ್ಲಾಂಗೆ ಮತಾಂತರಿಸಿದನೆಂದೂ, ಟಿಪ್ಪು ಪರಧರ್ಮದ ಬಗ್ಗೆ ಅಸಹಿಷ್ಣುವಾಗಿದ್ದಾನೆಂದೂ ಇತಿಹಾಸದಲ್ಲಿ ದಾಖಲಿಸಿದ್ದರು. ಅದನ್ನು ಈಗಿನ ಕೆಲವರು ನಂಬಿದ್ದಾರೆ. ಅಥವಾ ನಂಬಿದಂತೆ ನಾಟಕವಾಡುತ್ತಿದ್ದಾರೆ. ದೇಶವನ್ನು ಕಟ್ಟಿದವರಿಗಿಂತ ಒಡೆದವರ ಮಾತಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ.

ಭಾರತದ ಸ್ವಾತಂತ್ರ್ಯ ಹೋರಾಟವು ದಿನೇ ದಿನೇ ಬಲಿಷ್ಠಗೊಳ್ಳುವುದನ್ನು ಕಂಡು ಕಂಗಾಲಾಗಿದ್ದ ಬ್ರಿಟಿಷರು ಇಲ್ಲಿ ಬಹಳ ಅನ್ಯೋನ್ಯವಾಗಿದ್ದ ಹಿಂದೂ ಮುಸ್ಲಿಮರ ಮಧ್ಯೆ ಕಂದಕವನ್ನು ನಿರ್ಮಿಸಿದ್ದರು. ಮುಸ್ಲಿಂ ರಾಜರುಗಳನ್ನು ಧರ್ಮದ ಮೂಲಕವೇ ಕೆಟ್ಟವರಂತೆ ಚಿತ್ರಿಸುತ್ತ ಹೋದರು. ಈ ದೇಶದ ಸ್ವಾತಂತ್ರ ಸಂಗ್ರಾಮದ ಚರಿತ್ರೆಯನ್ನು ಸ್ವಲ್ಪವಾದರೂ ಬಲ್ಲವರಿಗೆ ಬ್ರಿಟೀಷರ ಒಡೆದು ಆಳುವ ನೀತಿಯ ಬಗ್ಗೆ ಗೊತ್ತಿರದೇ ಇರಲಾರದು. ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ವಸಾಹತನ್ನು ಮುಂದುವರಿಸಲು, ತಮ್ಮ ಆಳ್ವಿಕೆಯನ್ನು ಸಮರ್ಥಿಸಲು ಟಿಪ್ಪುವಿನ ವ್ಯಕ್ತಿತ್ವವನ್ನು ತಿರುಚುವುದು ಅನಿವಾರ್ಯವಾಗಿತ್ತು.

ಟಿಪ್ಪು ಸುಲ್ತಾನ್ ತನ್ನ ಬದುಕಿನುದ್ದಕ್ಕೂ ರಾಜಧರ್ಮ'ವನ್ನು ಪಾಲಿಸಿದ್ದ. ಮರಾಠರು ಸೇರಿದಂತೆ ಅನ್ಯರಿಂದ ಕನ್ನಡದ ಹಿಂದೂಗಳಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಧಾವಿಸಿದ್ದ. ತನ್ನ ಆಳ್ವಿಕೆಯಲ್ಲಿ ರೈತರಿಗೆ, ದಲಿತರಿಗೆ ನೆರವಾಗಿದ್ದ. ಟಿಪ್ಪು ಅಪ್ಪಟ ದೇಶಭಕ್ತ ಎನ್ನುವುದಕ್ಕೆ ಹಲವು ದಾಖಲೆಗಳು ಸಾಕ್ಷ್ಯ ಒದಗಿಸುತ್ತವೆ. ಹಾಗೆಯೇ ಟಿಪ್ಪುವಿನ ಕುರಿತಂತೆ ಹರಡಿರುವಮತಾಂತರ’ದ ಹಿಂದಿರುವುದು ಬ್ರಿಟೀಷರ ದುರುದ್ದೇಶ, ಅಸಹಿಷ್ಣುವಾದ ಎನ್ನುವುದನ್ನು ಬಿಡಿಸಿಹೇಳಬೇಕಿಲ್ಲ.

ಅವತ್ತು ರಾಜಕೀಯ ವಿರೋಧಿಗಳನ್ನು ಟಿಪ್ಪು ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯವಾಗಿತ್ತು. ಆದರೆ ಧರ್ಮದ ಹೆಸರಿನಲ್ಲಿ ಎಂದಿಗೂ ಟಿಪ್ಪು ಯಾರನ್ನೂ ಬೆದರಿಸಿರಲಿಲ್ಲ. ಜೊತೆಗೆ ಅವನು ಜಾತ್ಯಾತೀತನಾಗಿ ತನ್ನ ಕರ್ತವ್ಯವನ್ನು ಪಾಲಿಸಿದ್ದ ಎನ್ನುವುದಕ್ಕೆ ಹಲವು ಸಂಶೋಧನೆಗಳು ಕೃತಿಗಳು ಸಾಕ್ಷ್ಯ ಒದಗಿಸುತ್ತವೆ. ಹೀಗಿರುವಾಗ ನವೆಂಬರ್ ಹತ್ತರಂದು ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಆಚರಿಸುವುದರ ಬಗ್ಗೆ ಸರ್ಕಾರ ಘೋಷಣೆ ಮಾಡಿದ್ದೇ ಅದೆಲ್ಲಿದ್ದರೋ ಅಜ್ಞಾನಿಗಳು, ಅನಾರೋಗ್ಯ ಮನಸ್ಥಿತಿಯವರು, ಒಂದು ವರ್ಗಕ್ಕೆ ಪರಿಪೂರ್ಣವಾಗಿ ಸೀಮಿತರಾದ ರಾಜಕಾರಣಿಗಳು ಟಿಪ್ಪು ಮತಾಂಧ, ಕೊಲೆಗಾರ ಅಂತ ಹುಯಿಲೆಬ್ಬಿಸತೊಡಗಿದ್ದಾರೆ.

ಟಿಪ್ಪು ವಿರುದ್ಧ ಮಾತಾಡುವವರು ಬ್ರಿಟೀಶ್ ಮನಃಸ್ಥಿತಿಯವರೇ ಆಗಿದ್ದಾರೆ. ಆದರೆ ಟಿಪ್ಪು ಅಪ್ಪಟ ದೇಶಭಕ್ತ. ದೇಶಕ್ಕಾಗಿ ಪ್ರಾಣವನ್ನು ತೆತ್ತ ರಾಜ ಎಂದು ಅವರನ್ನು ಒಪ್ಪಿಕೊಳ್ಳುವವರು ಬಹಳಷ್ಟು ಮಂದಿಯಿದ್ದಾರೆ. ಯಾರೋ ಒಂದಿಷ್ಟು ಮಂದಿ ಟಿಪ್ಪು ಮತಾಂಧ, ದೇಶದ್ರೋಹಿ ಅಂದಕೂಡಲೇ ಅದು ನಿಜವಾಗಲ್ಲ. ಅರ್ಥವಾಗದ ಸಂಗತಿಯೆಂದರೇ ಬ್ರಿಟೀಷರ ವಿರುದ್ಧ ಹೋರಾಡಿ ಮಡಿದ ಸಂಗೊಳ್ಳಿ ರಾಯಣ್ಣನನ್ನು ಒಪ್ಪಿಕೊಳ್ಳುವ ಕೆಲವರಿಗೆ, ಟಿಪ್ಪು ಸುಲ್ತಾನ್ ಮುಸ್ಲಿಂ ಎಂಬ ಕಾರಣಕ್ಕೆ ದೇಶದ್ರೋಹಿ ಎನಿಸಿಕೊಳ್ಳುತ್ತಾನೆ. ಇಲ್ಲದ ಇತಿಹಾಸಗಳು ಸೃಷ್ಟಿಯಾಗುತ್ತವೆ. ಮಾರಣಹೋಮದ ಕಥೆಗಳು, ಕವನಗಳು, ಕಾದಂಬರಿಗಳು ಜನಿಸುತ್ತವೆ. ಇಡೀ ಜಗತ್ತೇ ಮೆಚ್ಚಿದ ಸಾಹಸಿಯನ್ನು, ನಮ್ಮ ದೇಶದ ಕೆಲ ಧಾರ್ಮಿಕ ಅಸಹಿಷ್ಣುಗಳು ಸಹಿಸುತ್ತಿಲ್ಲ. ಏನೇ ಹೇಳಿದರೂ ಹುಲಿ ಇಲಿ ಆಗುವುದಿಲ್ಲ. ಮೈಸೂರು ಹುಲಿಯ ಘನತೆ ಕುಗ್ಗುವುದಿಲ್ಲ. Happy Birthday dear TIGER

Leave a comment