ಅಳಿದ ಮೇಲೆ ಉಳಿವದೇನು?

-ಸಂಗ್ರಹ ಬರಹ (ಶಿವರಾಮ ಕಾರಂತರವರ ಕವನ ಸಂಕಲನದಿಂದ)

ವ್ಯಷ್ಟಿ-ಸಮಷ್ಟಿಯ ಈ ಬದುಕಿನಲ್ಲಿ , ಬದುಕಿನ ಬಗೆ ಬಗೆಯ ಸಂಪರ್ಕ ಸಂದರ್ಭಗಳಲ್ಲಿ ಉಂಟಾದ ಹಿತ- ಅಹಿತ ಪ್ರಭಾವಗಳನ್ನು ಮೇಳವಿಸಿ, ಸಮಗ್ರ ದೃಷ್ಟಿಯಿಂದ ನೋಡಿದಾಗ, ಮಾನವನ ಬಾಳಿನಲ್ಲಿ ಉಳಿಯುವುದು ಏನು ? ಇದನ್ನು ಹುಡುಕುವ ಪ್ರಯತ್ನವನ್ನು ನಿರಂತರ ನಡೆಸಿದ ಕಾರಂತರು ಕವನದ ಮೂಲಕ ಮುನ್ನುಡಿ ಹೇಳಿದ್ದಾರೆ.

‘ದೇಶದಾ ವಿಸ್ತಾರ ಹಿಗ್ಗಿಸಲು ಬೇಡ,
ನಿನ್ನ ಕಣ್ಣಿನ ಅಳತೆಯಲಿರಿಸಿ ನೋಡ… …
ಗೆದ್ದು ಬಾಳಲು ಬೇಕು, ದೃಷ್ಟಿ ಒಂದೇ ಇರಲಿ.
ಜಗವೆ ಸಿಗಬಹುದೈಯ್ಯ ನಿನ್ನ ಕೈಗೆ ಎಂದೆ.
ಊರು ಕೇರಿಗಳಲ್ಲ, ನಾಡು ಬೀಡುಗಳಲ್ಲ,
ದೇಶಪ್ರಾಂತಗಳೆಲ್ಲ ಮುಷ್ಟಿಯಲ್ಲಿರಲಿ;
ಜಗವ ಕುಗ್ಗಿಸಬೇಕು, ನೀನೆ ಹಿಗ್ಗಲು ಬೇಕು-
ಇರುವುದೊಂದೇ ದಾರಿ ಬಾರಿಸಲು ಜಯಭೇರಿ !’

ಊರ ಗೆದ್ದು ಮಾರ ಗೆಲ್ಲುವುದು ತಾನೇ ? ಜಗವನ್ನೇ ಗೆಲ್ಲುವ ಆಕಾಂಕ್ಷೆಯ, ಭೂಮ ದೃಷ್ಟಿಯ ಸಾಹಸಿಗೆ ಏನಾದರೂ ಹಿತವಚನಗಳುಂಟೆ ? ಇವೆ. ‘ವಿಶ್ವ ಮಾನವ’ ಕವನದ ವಸ್ತುವೇ ಅವು. ಇದೇ ಶಿವರಾಮ ಕಾರಂತರ ಕಾವ್ಯ ಸಂದೇಶ :

‘ವಿಶ್ವ ಮಾನವನಾಗೆ ಕಷ್ಟವೆನಿತಿಲ್ಲ,
ವಿಶ್ವವನು ಮುಷ್ಟಿಯಲಿ ಹಿಡಿವುದೊಂದೇ !….
ಕಾಲಮಾನದ ಬದುಕ ಬಲ್ಲೆಯೇನು ?
ಒಂಟಿ ಮಾನವ ತಲೆಯ ಕಿರಿ ಹೇನು ನೀನು !
ಆತ ಕಣ್ಮುಚ್ಚಿದೊಡೆ ಮಣ್ಣಾಪೆಯೇನು ?
ಲೋಕ ಎತ್ತಲು ಹೊರಟ ಆ ಮಹಿಮರಾರೇನೋ,
ತಮ್ಮ ಕಾಲವು ಸರಿದ ಮರು ಚಣಕೆ ನೆನಪಿಲ್ಲ.
ಬರುವ ಕಾಲದ ಚಿಂತೆ ಇಂದಿನವರಿಗಿಲ್ಲ.
ಲೋಕದ ಹಿತವನು ನೆನೆದು ಪೇಳ್ದರೇನೋ ಮಾತು,
ನಡೆಸಿದವರೆಷ್ಟು ಜನ ? ಅದರೆಣಿಕೆ ಹಾಕು;
ನಡೆಯಬೇಕೆಂದರವರ ಲೆಖ್ಖ ಹಾಕು,
ಅಂಥವರ ಬಾಳ್‌ ಹೊಲದಿ ಬೀಜ ಬಿತ್ತು.
ಚಿಗುರಿದ್ದು ಎಷ್ಟೆಂದು ಅರಸಿ ನೋಡು.
ಅಳಿದ ಊರಿಗೆ ನೀನು ಹಿರಿಯ ಗೌಡ;
ಉಳಿದವರು ಎಷ್ಟೆಂದು ಕಣ್ದೆರೆದು ನೋಡು.
ನಮ್ಮಳತೆಯನೆ ನಾವು ಹಿಗ್ಗಿಸಲು ಬಲಿತು
ಲೋಕವಾಪುದು ಆಗ ಸಾಸಿವೆಯ ಬಿತ್ತು !

Leave a comment