-ಬಿಹಾರ ಚುಣಾವಣಾ ಪ್ರಣಾಳಿಕೆಯ ವಿರುದ್ಧ ಎಲ್ಲೆಡೆ ಆಕ್ರೋಶ !!
-ರಾಜಕೀಯ ಪಕ್ಷಗಳ ಪಾಲಿಗೆ ಚುಣಾವಣಾ ಅಸ್ತ್ರವಾಯ್ತು ಇನ್ನೂ ತಯಾರಾಗದ ಕೊರೊನಾ ಲಸಿಕೆ !!
ಬರಹ : ಸಿದ್ದೀಕ್ ಜಾರಿಗೆಬೈಲ್
ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಪಕ್ಷ ಇದೀಗ ಬಿಹಾರದಲ್ಲೂ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ.
ಅಕ್ಟೋಬರ್ 28 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆಗೆ ಸಿದ್ಧಗೊಳ್ಳುತ್ತಿರುವ ಬಿಹಾರ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರ ಅನುಭವಿಸುತ್ತಿದೆ. ಆದರೆ, ಈ ಬಾರಿಯೂ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭದ ಮಾತಾಗಿಲ್ಲ. ಹೀಗಾಗಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಜನರಿಗೆ ಹೊಸ ಹೊಸ ಭರವಸೆ ನೀಡಲು ಮುಂದಾಗಿದೆ. ಇಂತಹ ಒಂದು ಭರವಸೆಗಳ ಪೈಕಿ ಉಚಿತ ಕೊರೋನಾ ಲಸಿಕೆಯೂ ಒಂದು. ಬಿಹಾರ ಚುನಾವಣೆ ಹಿನ್ನೆಲೆ ಎನ್ಡಿಎ ನಿನ್ನೆ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ “ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ” ನೀಡುವ ಭರವಸೆಯನ್ನು ನೀಡಲಾಗಿದೆ. ಆದರೆ, ಈ ಭರವಸೆ ಇದೀಗ ಭಾರಿ ಟೀಕೆಗೆ ಗುರಿಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾಟ್ನಾದಲ್ಲಿ ಬಿಜೆಪಿ ಚುಣಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ, ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಪೂರೈಸಲಾಗುವುದು ಹಾಗೂ ಮುಂದಿನ ಐದು ವರ್ಷದಲ್ಲಿ ಬಿಹಾರದ ಯುವಕರಿಗೆ 19 ಲಕ್ಷ ಉದ್ಯೋಗ ಪೂರೈಕೆ, 2022 ರ ವೇಳೆಗೆ ಬಡವರಿಗೆ 30 ಲಕ್ಷ ಮನೆ ನಿರ್ಮಾಣ, ಆರೋಗ್ಯ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಠಿ ಎಂಬಿತ್ಯಾದಿ ಭರವಸೆಯ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಗಳ ಪೈಕಿ ಇನ್ನೂ ತಯಾರಾಗದ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ವಿಚಾರವು ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ತಮಿಳುನಾಡಿನಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುಣಾವಣೆ ನಡೆಯಲಿದ್ದು, ಹೀಗಾಗಿ ತಮಿಳುನಾಡು ಮತ್ತು ಮಧ್ಯಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ.
ಬಿಹಾರದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದರೆ ಮಾತ್ರವಾ ಉಚಿತ ಲಸಿಕೆ ?, ಹಾಗಾದರೇ ಬಿಜೆಪಿ ಆಡಳಿತವಿಲ್ಲದ ರಾಜ್ಯದ ಜನರ ಗತಿ ಏನು ? ಎಂಬಿತ್ಯಾದಿ ಗೊಂದಲಗಳು ಸಾರ್ವಜನಿಕರಲ್ಲಿ ಸೃಷ್ಠಿಯಾಗಿವೆ.
ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿರುವ ಈ ಸಂಧಿಗ್ಧ ಸನ್ನಿವೇಶದಲ್ಲೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ರಾಜಕೀಯ ಸಾಧನವಾಗಿ ಬಳಸಿಕೊಳ್ಳಲು ಹೊರಟಿರುವುದು ಮಾತ್ರ ಖೇದಕರವಾದ ಸಂಗತಿ.
ಕೋವಿಡ್ ಲಸಿಕೆ ಯಾವಾಗ ದೊರೆಯುತ್ತದೆ ಎಂಬುವುದರ ಕುರಿತು ಸ್ಪಷ್ಟ ಮಾಹಿತಿಯೇ ನೀಡದ ಸರ್ಕಾರ, ಇನ್ನೂ ತಯಾರಾಗದ ಲಸಿಕೆಯನ್ನು ಉಚಿತವಾಗಿ ನೀಡಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿ.
ಇನ್ನು, ಲಸಿಕೆ ತಯಾರಾದರೂ ಅದನ್ನು ಎಲ್ಲಾ ರಾಜ್ಯದ ಜನರಿಗೆ ಸಾರ್ವತ್ರಿಕವಾಗಿ, ಉಚಿತವಾಗಿ ಮತ್ತು ಸಮಾನವಾಗಿ ಸಿಗುವಂತೆ ವ್ಯವಸ್ಥೆ ಕಲ್ಪಿಸುವುದು ಆಡಳಿತ ವರ್ಗದ/ ಸರ್ಕಾರದ ಮೂಲಭೂತ ಕರ್ತವ್ಯ. ಅದನ್ನು ಆಡಳಿತದ ಸಾಧನೆ ಎಂದು ಬಿಂಬಿಸುವುದು ರಾಜಕೀಯ ತಂತ್ರವಲ್ಲದೆ ಮತ್ತಿನ್ನೇನು..!
ಉತ್ತರಪ್ರದೇಶ ಮತ್ತು ಇತರೇ ರಾಜ್ಯದಲ್ಲಿ ಉಚಿತ ಲಸಿಕೆಯ ಘೋಷಣೆ ಮಾಡದೇ ಇರುವುದು, ಸರ್ಕಾರದ ಸಂಕುಚಿತ ಮತ್ತು ಅವಕಾಶವಾದಿ ರಾಜಕಾರಣಕ್ಕೆ ಕೈಗನ್ನಡಿಯಾಗಿದೆ.
ದೇಶದ ಪ್ರಸ್ತುತ ಆರ್ಥಿಕ ಸ್ಥಿತಿ ಬಾಂಗ್ಲಾದೇಶಕ್ಕಿಂತಲೂ ಕೆಳಮಟ್ಟದಲ್ಲಿದೆ. ಹೀಗಿರುವಾಗ ಕೊರೊನಾ ಲಸಿಕೆಯನ್ನು ಪ್ರಣಾಳಿಕೆಗೆ ಇಳಿಸಲಾಗಿದೆ. ರೋಗ ಮತ್ತು ಸಾವಿನ ಭೀತಿಯಲ್ಲಿರುವ ಜನತೆಯ ನಡುವೆ ಲಸಿಕೆಯ ಆಮಿಷವೊಡ್ಡಿ ರಾಜಕೀಯ ಲಾಭ ಪಡೆಯಲು ಮುಂದಾಗಿರುವುದು ದುರಂತದ ಸಂಗತಿ.
ಇತ್ತ, ನಮ್ಮ ರಾಜ್ಯದಲ್ಲೂ ರಾಜಕೀಯ ಪಕ್ಷಗಳು ಜನರ ಮನವೊಳಿಸಲು ಲಸಿಕೆಯನ್ನು ಮುಂದಿರಿಸಿ ರಾಜಕೀಯ ಲಡಾಯಿ ಶುರುವಿಟ್ಟಿದೆ.
ಆದರೆ, ಈ ಮೊದಲು ಸರ್ಕಾರ ನೀಡಿದ ಭರವಸೆಗಳನ್ನು ನೋಡಿದರೆ, ಇದು ಜಾರಿಯಾಗುವುದು ಸತ್ಯಕ್ಕೆ ದೂರವಾದ ಮಾತು.!!!
ಲಾಕ್‌ಡೌನ್ ವೇಳೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಯಾವ ಪ್ಯಾಕೇಜ್ ಕೂಡಾ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಯಾವ ಭರವಸೆ ಕೂಡಾ ಈಡೇರಿಲ್ಲ. ಬ್ಯಾಂಕ್ ಗಳ ಸಾಲ ವಸೂಲಾತಿ ಮಾಮೂಲಿಯಾಗಿಯೇ ನಡೆಯುತ್ತಿದೆ, ಯಾವ ತೆರಿಗೆಗಳೂ ಕಡಿಮೆಯಾಗಿಲ್ಲ, ಪ್ರವಾಹ ಪರಿಹಾರ ಯೋಜನೆ ಇನ್ನೂ ಜಾರಿಯಾಗಿಲ್ಲ, ಹೀಗೆ ಭರವಸೆ ನೀಡಿದ ಹತ್ತಲವಾರು ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಾರದಿರುವುದನ್ನು ಗಮನಿಸಿದರೆ, ಉಚಿತ ಲಸಿಕೆಯ ಭರವಸೆಯೂ ಕೂಡಾ ಚುಣಾವಣಾ ಅಸ್ತ್ರ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಭರವಸೆ ನೀಡಬೇಕು ನಿಜ, ಆದರೆ ಅದರಲ್ಲೂ ರಾಜಕೀಯ ಮಾಡುವುದು ಎಷ್ಟು ಸರಿ. !??
ಈಗಾಗಲೇ ಕೊರೊನಾ ಮಾರಕ ರೋಗದಿಂದ 11 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಿದೆ. ಕೊರೋನಾ ತಡೆಗಟ್ಟಲು ಲಸಿಕೆ ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಈ ಕೊರೊನಾ ಹಾವಳಿಯಿಂದ ಒಮ್ಮೆ ಪಾರಾದರೆ ಸಾಕು ಎಂದು ದೇಶದ ಬಡ ಜನತೆ ಪ್ರಾರ್ಥಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲೂ ಕೊರೊನಾ ನಿವಾರಣಾ ಲಸಿಕೆ ಭಾರತದ ರಾಜಕಾರಣದಲ್ಲಿ ಚುಣಾವಣೆ ಆಮಿಷ ವಸ್ತುವಾಗಿರುವುದನ್ನು ನೋಡಿದರೆ ನಮ್ಮ ದೇಶದ ರಾಜಕಾರಣದ ನೈತಿಕತೆಯ ಅಧಃಪತನ ಅರಿವಾಗುತ್ತಿದೆ.
ಕೊರೋನಾ ಹೋಗಲಾಡಿಸಲು ಸಮಸ್ತ ಜನತೆಗೂ ಲಸಿಕೆ ಒದಗಿಸುವುದು ದೇಶದ ಆಡಳಿತ ವರ್ಗದ ನೈತಿಕ ಮತ್ತು ಸಾಂವಿಧಾನಿಕ ಕರ್ತವ್ಯ ಎಂಬ ಪ್ರಾಥಮಿಕ ಪರಿಜ್ಞಾನವಾದರೂ ಇರಬೇಕಿತ್ತು.
ಕೊರೊನಾ ಲಸಿಕೆ ಮೂರನೇ ಹಂತದಲ್ಲಿ ‘ಸುರಕ್ಷಿತ ಲಸಿಕೆ’ ಎಂದು ದೃಢಪಟ್ಟರೂ, ಅದನ್ನು ದೇಶದ ಜನರಿಗೆ ಉಚಿತವಾಗಿ ನೀಡಲು ಸರ್ಕಾರದ ಖಜಾನೆ ಅಷ್ಟೊಂದು ಬಲಿಷ್ಠವಾಗಿದೆಯೇ ? ಎಂಬ ಪ್ರಶ್ನೆಗಳೂ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇನ್ನೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ, ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆಯನ್ನು ಸಂಗ್ರಹಿಸುವ ಸಿದ್ಧತೆಯನ್ನು ಮಾಡುವುದೇ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಬಹುದು.
ಕೊರೊನಾ ಲಸಿಕೆಯನ್ನು ರಾಷ್ಟ್ರೀಯ ಹೆಲ್ತ್ ಮಿಷನ್ ಅಡಿಯಲ್ಲಿ ಹಂಚಿಕೆ ಮಾಡಲು ಈ ಮೊದಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಎಲ್ಲಾ ರಾಜ್ಯಗಳಿಗೂ ಲಸಿಕೆ ಹಂಚಿಕೆಯ ವಿಚಾರವಾಗಿ ಒಂದೇ ನಿಯಮವನ್ನು ರೂಪಿಸುವುದು ಅನಿವಾರ್ಯ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಿಹಾರದಲ್ಲಿ, ಉಚಿತವಾಗಿ ಲಸಿಕೆ ವಿತರಿಸಿದರೆ, ಇಡೀ ದೇಶಕ್ಕೆ ಉಚಿತವಾಗಿಯೇ ಲಸಿಕೆ ನೀಡಬೇಕಾಗುತ್ತದೆ.
ಒಟ್ಟಿನಲ್ಲಿ, ಈ ಕುರಿತು ಸರ್ಕಾರ ಮುಂಬರುವ ದಿನಗಳಲ್ಲಿ ಯಾವ ತೆರನಾದ ನಿರ್ಧಾರ ಕೈಗೊಳ್ಳುತ್ತದೆ, ಎಂಬುವುದು ತಿಳಿಯಬೇಕಿದೆ.
ಅದೇನೇ ಇರಲಿ, ಜನರು ರಾಜಕೀಯ ಪಕ್ಷಗಳು ಚುಣಾವಣೆಯ ಸಮಯದಲ್ಲಿ ನೀಡುವ ಭರವಸೆ ಮತ್ತು ಆಶ್ವಾಸನೆಗಳ ಭ್ರಮಾಲೋಕದಿಂದ ಹೊರಬರುವುದಂತು ಅತೀ ಅಗತ್ಯವಾದ ಸಂಗತಿಯಾಗಿದೆ.


ಮರಣ ಮನೆಯಲ್ಲೂ ರಾಜಕೀಯ ಮಾಡುವ ಪುಂಡರಿಗೆ ಧಿಕ್ಕಾರವಿರಲಿ.
ಲೇಖಕರಿಗೆ ಧನ್ಯವಾದಗಳು.👌👍
LikeLike