ಆ ದೇಶದಲ್ಲೂ…

ಆ ದೇಶದಲ್ಲೂ
ಮುಂಜಾನೆ ಸೂರ್ಯ ಉದಯಿಸುತ್ತಾನೆ
ಸಂಜೆ ಕತ್ತಲಾದ ನಂತರ
ನೀಲಿಭಾನಿನಲ್ಲಿ ಚಂದ್ರ ಉದಯಿಸುತ್ತಾನೆ

ಆ ದೇಶದಲ್ಲೂ
ಗಾಳಿಬೀಸುತ್ತದೆ ಒಮ್ಮೊಮ್ಮೆ
ಬಿಸಿ ಒಮ್ಮೊಮ್ಮೆ ತಂಗಾಳಿ
ಒಮ್ಮೊಮ್ಮೆ ಬಿರುಗಾಳಿಯೂ ಸಹ
ಹಿಗ್ಗಾಳಿ ಮುಗ್ಗಾಳಿ ಬೀಸುತ್ತದೆ
ದೇವರುಗಳು ಘಟ್ಟಕ್ಕೆ ಕುಂತಾಗ

ಆ ದೇಶದಲ್ಲೂ
ಮುಂಗಾರಿನಲ್ಲಿ ಮಳೆ
ಹಿಂಗಾರಿನಲ್ಲಿ ಛಳಿ
ಭೀಕರ ಬೇಸಿಗೆಯ ತಾಪಮಾನ
ಪಾಪ ಜನರಿಗೋ ಭೀಷಣ ತಾಪತ್ರಯ
ಕ್ಯಾಲೆಂಡರ್ ಬದಲಾಗುತ್ತಲೇ ಇರುತ್ತದೆ

ಆ ದೇಶದಲ್ಲೂ
ನಮ್ಮ ಹಾಗೆಯೇ ಇರುವ
ಮನುಷ್ಯರಿದ್ದಾರೆ ಆಮ್ ಆದ್ಮಿಗಳು
ಅವರಿಗೆ ನಮಗಿರುವಂತೆ
ಕೈಕಾಲು ಕಣ್ಣು ಮೂಗು ತುಟಿ
ಹಣೆ ತಲೆ ತಲೆಯಮೇಲೆ ಕೂದಲು
ಥೇಟ್ ನಮ್ಮಂತೆಯೇ
ಅವರ ಮೈಯಲ್ಲಿರುವ ರಕ್ತವೂ ಕೆಂಪೇ

ಆ ದೇಶದಲ್ಲೂ
ಬರಗಾಲದಲ್ಲಿ ರಂಜಾನ್ ಮೊಹರಂ
ಅತೀವೃಷ್ಟಿ ಅನಾವೃಷ್ಟಿಯಲ್ಲಿ ದೀಪಾವಳಿ
ರಣಬೇಸಿಗೆಯ ಕೇಕೆಯಲ್ಲಿ ಉಗಾದಿ
ಮನಸ್ಸಿನ ಕ್ಲೇಶ ಕಳೆಯಲು ಬರುತ್ತಲೇ ಇರುತ್ತವೆ
ಜನ ಕಾಳುಕಡಿ ಸಕ್ಕರೆ ಖರ್ಜೂರ
ತುಟ್ಟಿಯಾದರೂ ಬೈಶಾಖಿಯ ಸುಗ್ಗಿ ಸಂಭ್ರಮ

ಆ ದೇಶದಲ್ಲೂ
ಗಂಡು ಹೆಣ್ಣನ್ನೇ ಮದುವೆಯಾಗುವುದು
ಹಿಜಾಬೋ ಬುರ್ಖಾನೋ ಏನು ಧರಿಸಿದರೇನು?
ಹೆಣ್ಣೇ ಮಕ್ಕಳನ್ನು ಹಡೆಯುವುದು

ಆ ದೇಶದೊಳಗೂ ಗುಬ್ಬಿ
ಈ ದೇಶದೊಳಗಿನ ಮನೆಮಾಡಿನಲ್ಲಿ
ಗೂಡು ಕಟ್ಟುವಂತೆ ಥೇಟ್ ಗೂಡುಕಟ್ಟುತ್ತದೆ
ಕಾಗೆ ಕ್ರಾ ಕ್ರಾ ಎಂದೇ ಒದರುತ್ತದೆ

ಮಾಲಕನೆಸೆಯುವ ಮಾಂಸದ ಚೂರಿಗೆ
ಆ ದೇಶದ ಕಡೆ ಮುಖಮಾಡಿ
ಈ ದೇಶದ ವಾರ್ತಾನಾಯಿಗಳು
ಬೌ ಬೌ ಬೊಗಳುತ್ತಿರುತ್ತಲೇ ಇರುತ್ತವೆ

ಈ ದೇಶದಲ್ಲೂ
ಮುಂಜಾನೆ ಬೆಳಗುವ ಅದೇ ಸೂರ್ಯ
ಸಂಜೆ ಮೂಡುವ ಅದೇ ಚಂದ್ರ
ಅದೇ ಆಕಾಶ ಅದೇ ಮಿನುಗುವ ನಕ್ಷತ್ರ
ಬಡವರು ಮಾತ್ರ ಗಡಿಯ ಬೇಲಿ ದಾಟದಂತೆ
ಪ್ರಭುತ್ವದ ಕಣ್ಗಾವಲಿನಲ್ಲಿ ರಣಹದ್ದಿನಂತೆ
ದುಡಿಯುವ ಜನರೆದೆಗೆ ಬಂದೂಕಿನ ಪಹರೆ

ನೆರೆಮನಿಯವನ ಉಸಾಬರಿ
ನಮಗ್ಯಾಕೋ ನಮ್ದೇ ಸಾವಿರ
ಹೊಲಕೊಂಡಷ್ಟೂ ಹರಿದದ್ದು ಮುಗಿವಾಲ್ದು
ಈ ದೇಶದಲ್ಲೂ
ಇರುವವರ ಹಣೆಬರಹವೇ ಹ್ಯಾಂಗ್ ಆಗಿದೆ
ಹಿಂದೂಸ್ಥಾನವೂ ಪಾಪಿಸ್ಥಾನವಾಗಿದೆ

ಮಿತ್ರೋಂ
ಮೆರೆ ಪ್ಯಾರೆ ಭಾರತ ವಾಸಿಯೋಂ
ಈ ದೇಶದೊಳಗೂ…
ಮುಂಜಾನೆ ಮೂಡುವುದು
ಅದೇ ಸೂರ್ಯ
ಅದೇ ಚಂದ್ರ
ಅದೇ ಆಕಾಶ
ಅದೇ ಮಿನುಗುವ ನಕ್ಷತ್ರ
ಅದೇ ಉದ್ಯೋಗವಿಲ್ಲದೆ
ಕಂಗಾಲಾದ ಹಸಿದ ಜನ

ಬರಹ:ಪ್ರಕಾಶ ಕೋನಾಪುರ

Leave a comment